'ನೀನು ಇಚ್ಛಿಸಿದರೆ ತಾಳ್ಮೆಯಿಂದಿರು. ನಿನಗೆ ಸ್ವರ್ಗವಿದೆ. ಇನ್ನು ನೀನು ಇಚ್ಛಿಸಿದರೆ ಅಲ್ಲಾಹು ನಿನ್ನನ್ನು ಗುಣಪಡಿಸುವಂತೆ ನಾನು…

'ನೀನು ಇಚ್ಛಿಸಿದರೆ ತಾಳ್ಮೆಯಿಂದಿರು. ನಿನಗೆ ಸ್ವರ್ಗವಿದೆ. ಇನ್ನು ನೀನು ಇಚ್ಛಿಸಿದರೆ ಅಲ್ಲಾಹು ನಿನ್ನನ್ನು ಗುಣಪಡಿಸುವಂತೆ ನಾನು ಪ್ರಾರ್ಥಿಸುವೆನು'

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು (ಇಬ್ನ್ ಅಬ್ಬಾಸ್) ಅತಾಅ್ ಇಬ್ನ್ ಅಬೀ ರಬಾಹ್ ರಿಗೆ ಹೇಳಿದರು: "ನಾನು ನಿನಗೆ ಸ್ವರ್ಗವಾಸಿಗಳಲ್ಲಿ ಸೇರಿದ ಒಬ್ಬ ಮಹಿಳೆಯನ್ನು ತೋರಿಸಲೇ?" ನಾನು ಹೇಳಿದೆನು: "ಖಂಡಿತವಾಗಿ (ತೋರಿಸಿ)". ಅವರು ಹೇಳಿದರು: "ಈ ಕಪ್ಪು ಮಹಿಳೆ. ಆಕೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: 'ನಾನು ಮೂರ್ಛೆ ರೋಗದಿಂದ (ಅಥವಾ ಅಪಸ್ಮಾರದಿಂದ) ಬಳಲುತ್ತಿದ್ದೇನೆ ಮತ್ತು (ಆಗ) ನನ್ನ ದೇಹವು ಅನಾವರಣಗೊಳ್ಳುತ್ತದೆ. ಆದ್ದರಿಂದ, ನನಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿರಿ'. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ನೀನು ಇಚ್ಛಿಸಿದರೆ ತಾಳ್ಮೆಯಿಂದಿರು. ನಿನಗೆ ಸ್ವರ್ಗವಿದೆ. ಇನ್ನು ನೀನು ಇಚ್ಛಿಸಿದರೆ ಅಲ್ಲಾಹು ನಿನ್ನನ್ನು ಗುಣಪಡಿಸುವಂತೆ ನಾನು ಪ್ರಾರ್ಥಿಸುವೆನು'. ಆಕೆ ಹೇಳಿದರು: 'ನಾನು ತಾಳ್ಮೆಯಿಂದಿರುತ್ತೇನೆ'. ನಂತರ ಆಕೆ ಹೇಳಿದರು: 'ಆದರೆ ನಾನು (ಮೂರ್ಛೆ ಹೋದಾಗ) ಅನಾವರಣಗೊಳ್ಳುತ್ತೇನೆ, ಆದ್ದರಿಂದ ನಾನು ಅನಾವರಣಗೊಳ್ಳದಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ'. ಆಗ ಅವರು ಆಕೆಗಾಗಿ ಪ್ರಾರ್ಥಿಸಿದರು".

[صحيح] [متفق عليه]

الشرح

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು ಅತಾಅ್ ಇಬ್ನ್ ಅಬೀ ರಬಾಹ್ ರಿಗೆ ಹೇಳಿದರು: ನಾನು ನಿನಗೆ ಸ್ವರ್ಗವಾಸಿಗಳಲ್ಲಿ ಸೇರಿದ ಒಬ್ಬ ಮಹಿಳೆಯನ್ನು ತೋರಿಸಲೇ? ಅತಾಅ್ ಹೇಳಿದರು: ಖಂಡಿತವಾಗಿ. ಇಬ್ನ್ ಅಬ್ಬಾಸ್ ಹೇಳಿದರು: ಈ ಹಬಶೀ (ಅಬಿಸೀನಿಯನ್) ಕಪ್ಪು ಮಹಿಳೆ. ಈಕೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: ನನ್ನಲ್ಲಿ ಒಂದು ರೋಗವಿದೆ. ಅದರಿಂದ ನಾನು ಮೂರ್ಛೆ ಹೋಗುತ್ತೇನೆ ಮತ್ತು ನನಗೆ ತಿಳಿಯದಂತೆಯೇ ನನ್ನ ದೇಹದ ಕೆಲವು ಭಾಗಗಳು ಅನಾವರಣಗೊಳ್ಳುತ್ತವೆ. ಅಲ್ಲಾಹು ನನ್ನನ್ನು ಗುಣಪಡಿಸುವಂತೆ ಪ್ರಾರ್ಥಿಸಿರಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನೀನು ಇಚ್ಛಿಸಿದರೆ ತಾಳ್ಮೆಯಿಂದಿರು. ನಿನಗೆ ಸ್ವರ್ಗವಿದೆ. ಇನ್ನು ನೀನು ಇಚ್ಛಿಸಿದರೆ ಅಲ್ಲಾಹು ನಿನ್ನನ್ನು ಗುಣಪಡಿಸುವಂತೆ ನಾನು ಪ್ರಾರ್ಥಿಸುತ್ತೇನೆ. ಆಕೆ ಹೇಳಿದರು: ಹಾಗಾದರೆ ನಾನು ತಾಳ್ಮೆಯಿಂದಿರುತ್ತೇನೆ. ನಂತರ ಆಕೆ ಹೇಳಿದರು: ನಾನು ಮೂರ್ಛೆ ಹೋದಾಗ ಅನಾವರಣಗೊಳ್ಳದಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕೆಗಾಗಿ ಪ್ರಾರ್ಥಿಸಿದರು.

فوائد الحديث

ಇಹಲೋಕದ ಕಷ್ಟಸಂಕಟಗಳಿಗಾಗಿ ತಾಳ್ಮೆ ವಹಿಸುವುದು ಸ್ವರ್ಗಪ್ರವೇಶಕ್ಕೆ ಕಾರಣವಾಗುತ್ತದೆ.

ಇಮಾಮ್ ನವವಿ ಹೇಳುತ್ತಾರೆ: ಮೂರ್ಛೆ ರೋಗಕ್ಕೆ ಪರಿಪೂರ್ಣವಾದ ಪ್ರತಿಫಲ ನೀಡಲಾಗುತ್ತದೆ ಎಂಬುದಕ್ಕೆ ಈ ಹದೀಸಿನಲ್ಲಿ ಪುರಾವೆಯಿದೆ.

ಸಹಾಬಿ ಮಹಿಳೆಯರು ಪಾವಿತ್ರ್ಯ ಮತ್ತು ಸಂಕೋಚಕ್ಕೆ ನೀಡುತ್ತಿದ್ದ ಪರಿಗಣನೆಯನ್ನು, ಮತ್ತು ದೇಹವನ್ನು ಮುಚ್ಚಿಕೊಳ್ಳುವುದರ ಬಗ್ಗೆ ಅವರಿಗಿದ್ದ ಕಾಳಜಿಯನ್ನು ತಿಳಿಸಲಾಗಿದೆ. ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ. ಈ ಮಹಿಳೆ ತನ್ನ ರೋಗಕ್ಕಿಂತ ಹೆಚ್ಚಾಗಿ ತನ್ನ ದೇಹದ ಯಾವುದೇ ಭಾಗವು ಅನಾವರಣಗೊಳ್ಳಬಹುದೆಂದು ಹೆಚ್ಚು ಭಯಪಡುತ್ತಿದ್ದರು.

ಇಬ್ನ್ ಹಜರ್ ಹೇಳುತ್ತಾರೆ: ತನಗೆ ಶಕ್ತಿಯಿದೆ ಎಂದು ತಿಳಿದಿರುವ ಮತ್ತು ಕಷ್ಟವನ್ನು ಸಹಿಸಿಕೊಳ್ಳಲು ಸಾಧ್ಯವಿರುವ ವ್ಯಕ್ತಿಗೆ, ರಿಯಾಯಿತಿಯನ್ನು ಸ್ವೀಕರಿಸುವುದಕ್ಕಿಂತ ಕಷ್ಟಕರವಾದ ಮಾರ್ಗವನ್ನು (ತಾಳ್ಮೆಯನ್ನು) ಆರಿಸಿಕೊಳ್ಳುವುದು ಉತ್ತಮವಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: ಎಲ್ಲಾ ರೋಗಗಳಿಗೆ ಔಷಧಿಗಳ ಮೂಲಕ ಚಿಕಿತ್ಸೆ ಪಡೆಯುವುದಕ್ಕಿಂತ ಪ್ರಾರ್ಥನೆ (ದುಆ) ಮತ್ತು ಅಲ್ಲಾಹನ ಮೊರೆ ಹೋಗುವುದರ ಮೂಲಕ ಚಿಕಿತ್ಸೆ ಪಡೆಯುವುದು ಹೆಚ್ಚು ಪರಿಣಾಮಕಾರಿ ಮತ್ತು ಪ್ರಯೋಜನಕಾರಿಯಾಗಿದೆ ಎಂದು ಈ ಹದೀಸಿನಲ್ಲಿ ಸೂಚನೆಯಿದೆ. ಅದರ ಪರಿಣಾಮ ಹಾಗೂ ದೇಹವು ಅದಕ್ಕೆ ಸ್ಪಂದಿಸುವುದು ದೈಹಿಕ ಔಷಧಿಗಳ ಪರಿಣಾಮಕ್ಕಿಂತ ದೊಡ್ಡದಾಗಿದೆ. ಆದರೆ, ಇದು ಎರಡು ವಿಷಯಗಳಿಂದ ಮಾತ್ರ ಯಶಸ್ವಿಯಾಗುತ್ತದೆ: ಒಂದನೆಯದು ರೋಗಿಯ ಕಡೆಯಿಂದ – ಅಂದರೆ ಅವನ ಉದ್ದೇಶದ ಪ್ರಾಮಾಣಿಕತೆಯನ್ನು ಅವಲಂಬಿಸಿಕೊಂಡಿದೆ. ಎರಡನೆಯದು ಚಿಕಿತ್ಸೆ ನೀಡುವವನ ಕಡೆಯಿಂದ – ಅಂದರೆ, ಅವನ ಮನಸ್ಸಿನ ಏಕಾಗ್ರತೆಯ ಶಕ್ತಿಯನ್ನು ಮತ್ತು ದೇವಭಯ (ತಖ್ವಾ) ಹಾಗೂ ಅಲ್ಲಾಹನ ಮೇಲಿನ ಭರವಸೆಯಿಂದ (ತವಕ್ಕುಲ್) ಅವನ ಹೃದಯದ ಶಕ್ತಿಯನ್ನು ಅವಲಂಬಿಸಿಕೊಂಡಿದೆ. ಹೆಚ್ಚು ಬಲ್ಲವನು ಅಲ್ಲಾಹು.

ಇಬ್ನ್ ಹಜರ್ ಹೇಳುತ್ತಾರೆ: ವೈದ್ಯಕೀಯ ಚಿಕಿತ್ಸೆಯನ್ನು ತೊರೆಯಲು ಅನುಮತಿಯಿದೆ ಎಂಬುದಕ್ಕೆ ಈ ಹದೀಸಿನಲ್ಲಿ ಪುರಾವೆಯಿದೆ.

التصنيفات

Belief in the Divine Decree and Fate, Spiritual and Physical Therapy, Rulings of Women