ನಾನು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದ್ದೇನೆ; ಅವರು ಮೂತ್ರವಿಸರ್ಜನೆ ಮಾಡಿ, ನಂತರ…

ನಾನು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದ್ದೇನೆ; ಅವರು ಮೂತ್ರವಿಸರ್ಜನೆ ಮಾಡಿ, ನಂತರ ವುಧೂ ಮಾಡಿದರು ಮತ್ತು ತಮ್ಮ ಚರ್ಮದ ಪಾದರಕ್ಷೆಗಳ ಮೇಲೆ ಸವರಿದರು'

ಇಬ್ರಾಹೀಮ್ ಅನ್ನಖಈ ರಿಂದ, ಅವರು ಹಮ್ಮಾಮ್ ಇಬ್ನುಲ್-ಹಾರಿಸ್ ರಿಂದ ವರದಿ: ಅವರು ಹೇಳಿದರು: "ಜರೀರ್ ರವರು ಮೂತ್ರವಿಸರ್ಜನೆ ಮಾಡಿದರು. ನಂತರ ವುಧೂ ಮಾಡಿದರು ಮತ್ತು ತಮ್ಮ ಚರ್ಮದ ಪಾದರಕ್ಷೆಗಳ (ಖುಫ್ಫ್) ಮೇಲೆ (ಒದ್ದೆ ಕೈಯಿಂದ) ಸವರಿದರು. ಆಗ (ಅವರಲ್ಲಿ) ಕೇಳಲಾಯಿತು: 'ನೀವು ಹೀಗೆ ಮಾಡುತ್ತೀರಾ?' ಅವರು ಹೇಳಿದರು: 'ಹೌದು, ನಾನು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದ್ದೇನೆ; ಅವರು ಮೂತ್ರವಿಸರ್ಜನೆ ಮಾಡಿ, ನಂತರ ವುಧೂ ಮಾಡಿದರು ಮತ್ತು ತಮ್ಮ ಚರ್ಮದ ಪಾದರಕ್ಷೆಗಳ ಮೇಲೆ ಸವರಿದರು'." ಅಲ್-ಅಅಮಶ್ ಹೇಳುತ್ತಾರೆ: ಇಬ್ರಾಹೀಮ್ ಹೇಳಿದರು: "ಅವರಿಗೆ (ವಿದ್ವಾಂಸರಿಗೆ) ಈ ಹದೀಸ್ ಬಹಳ ಇಷ್ಟವಾಗುತ್ತಿತ್ತು. ಏಕೆಂದರೆ ಜರೀರ್ ಅವರ ಇಸ್ಲಾಂ ಸ್ವೀಕಾರವು 'ಅಲ್-ಮಾಯಿದ' (ಅಧ್ಯಾಯವು) ಅವತೀರ್ಣವಾದ ನಂತರವಾಗಿತ್ತು".

[صحيح] [متفق عليه]

الشرح

ಜರೀರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮೂತ್ರವಿಸರ್ಜನೆ ಮಾಡಿದರು, ನಂತರ ವುಧೂ ಮಾಡಿದರು. ಅವರು ತಮ್ಮ ಚರ್ಮದ ಪಾದರಕ್ಷೆಗಳ (ಖುಫ್ಫ್) ಮೇಲೆ ಸವರುವುದಕ್ಕೆ ಸಾಕು ಮಾಡಿದರು ಮತ್ತು ತಮ್ಮ ಕಾಲುಗಳನ್ನು ತೊಳೆಯಲಿಲ್ಲ. ಆಗ ಅವರ ಸುತ್ತಲಿದ್ದವರು ಅವರಿಗೆ, "ನೀವು ಹೀಗೆ ಮಾಡುತ್ತೀರಾ?!" ಎಂದು (ಆಶ್ಚರ್ಯದಿಂದ) ಕೇಳಿದರು. ಅವರು ಹೇಳಿದರು: "ಹೌದು, ನಾನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂತ್ರವಿಸರ್ಜನೆ ಮಾಡುವುದನ್ನು, ನಂತರ ವುಧೂ ಮಾಡಿ ತಮ್ಮ ಚರ್ಮದ ಪಾದರಕ್ಷೆಗಳ ಮೇಲೆ ಸವರುವುದನ್ನು ನೋಡಿದ್ದೇನೆ." ಜರೀರ್ ಅವರು ತಡವಾಗಿ, ಅಂದರೆ ವುಧೂವಿನ ವಚನ ಇರುವ 'ಸೂರ ಅಲ್-ಮಾಯಿದಃ' ಅವತೀರ್ಣವಾದ ನಂತರ ಇಸ್ಲಾಂ ಸ್ವೀಕರಿಸಿದ್ದರು. (ಇದನ್ನು ಹೇಳುವ ಮೂಲಕ) ಚರ್ಮದ ಪಾದರಕ್ಷೆಗಳ ಮೇಲೆ ಸವರುವ ವಿಧಿಯು ಆ ವಚನದಿಂದ ರದ್ದುಗೊಂಡಿಲ್ಲ ಎಂಬುದನ್ನು ಅವರು ಸೂಚಿಸಿದರು.

فوائد الحديث

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ತನ್ನು ಅನುಸರಿಸುವಲ್ಲಿ ಸಹಾಬಾಗಳು ಮತ್ತು ತಾಬಿಈಗಳಿಗೆ ಇದ್ದ ಆಸಕ್ತಿಯನ್ನು ತಿಳಿಸಲಾಗಿದೆ.

ನವವಿ ಹೇಳುತ್ತಾರೆ: ಚರ್ಮದ ಕಾಲುಚೀಲಗಳ ಮೇಲೆ ಸವರುವುದು, ಪ್ರಯಾಣದಲ್ಲಿರಲಿ ಅಥವಾ ಊರಿನಲ್ಲಿರಲಿ, ಅಗತ್ಯವಿರಲಿ ಅಥವಾ ಇಲ್ಲದಿರಲಿ, ಸಮ್ಮತಾರ್ಹವಾಗಿದೆ ಎಂಬುದರಲ್ಲಿ ಗಣ್ಯರಾದ ಎಲ್ಲ ವಿದ್ವಾಂಸರು ಒಮ್ಮತಾಭಿಪ್ರಾಯ (ಇಜ್ಮಾಅ್) ಹೊಂದಿದ್ದಾರೆ. ಎಷ್ಟರಮಟ್ಟಿಗೆಂದರೆ, ಮನೆಯಲ್ಲೇ ಇರುವ ಮಹಿಳೆಗೂ ಮತ್ತು ನಡೆಯಲಾಗದವನಿಗೂ ಇದು ಸಮ್ಮತಾರ್ಹವಾಗಿದೆ.

ಜರೀರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಅವರು ವಿಶಾಲ ಹೃದಯದವರಾಗಿದ್ದರು. ತಮ್ಮ ವಿದ್ಯಾರ್ಥಿಗಳು ತಮ್ಮನ್ನು ಆಕ್ಷೇಪಿಸಿದಾಗ (ಪ್ರಶ್ನಿಸಿದಾಗ), ಅವರು (ವಿದ್ಯಾರ್ಥಿಗಳು) ತಪ್ಪಾಗಿದ್ದರೂ ಸಹ, ಜರೀರ್ ಅವರು ಅದನ್ನು ಸಹಿಸಿಕೊಂಡರು.

ಚರ್ಮದ ಕಾಲುಚೀಲಗಳ ಮೇಲೆ ಸವರುವುದನ್ನು ನಿರಾಕರಿಸುವವರಿಗೆ ಮತ್ತು ಅದು ರದ್ದುಗೊಂಡಿದೆ ಎಂದು ವಾದಿಸುವವರಿಗೆ ಇದರಲ್ಲಿ ಉತ್ತರವಿದೆ. ಏಕೆಂದರೆ ಜರೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸ್, ವುಧೂವಿನ ವಚನವು ಅವತೀರ್ಣವಾದ ನಂತರದ ಘಟನೆಯಾಗಿದೆ.

ಒಬ್ಬ ವ್ಯಕ್ತಿಯು ತಾನು ಸರಿಯಾಗಿದ್ದೇನೆ ಎಂದು ನಂಬಿರುವಾಗ, ಯಾರಾದರೂ ಅವನನ್ನು ಆಕ್ಷೇಪಿಸಿದರೆ, ಆಕ್ಷೇಪಿಸಿದವನ ಮೇಲೆ ಅವನು ಕೋಪಗೊಳ್ಳಬಾರದು ಮತ್ತು ಕೆಟ್ಟ ಉದ್ದೇಶವಿಟ್ಟು ತರ್ಕಿಸಬಾರದು. ಬದಲಾಗಿ, ತಾನು ಹೊಂದಿರುವ ಆಧಾರವನ್ನು (ಪುರಾವೆಯನ್ನು) ಅತ್ಯುತ್ತಮ ರೀತಿಯಲ್ಲಿ ವಿವರಿಸಬೇಕು.

ಅಗತ್ಯಬಿದ್ದಾಗ ಇತಿಹಾಸವನ್ನು ಪುರಾವೆಯಾಗಿ ಬಳಸುವುದು.

التصنيفات

Wiping over leather socks and the like