'ನಿಮ್ಮಲ್ಲೊಬ್ಬನು ಮೂರಕ್ಕಿಂತ ಕಡಿಮೆ ಕಲ್ಲುಗಳಿಂದ 'ಇಸ್ತಿಂಜಾ' ಮಾಡಬಾರದು'

'ನಿಮ್ಮಲ್ಲೊಬ್ಬನು ಮೂರಕ್ಕಿಂತ ಕಡಿಮೆ ಕಲ್ಲುಗಳಿಂದ 'ಇಸ್ತಿಂಜಾ' ಮಾಡಬಾರದು'

ಸಲ್ಮಾನ್ ಅಲ್-ಫಾರಿಸೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಮುಶ್ರಿಕ್‌ಗಳು (ಬಹುದೇವಾರಾಧಕರು) ನಮಗೆ ಹೇಳಿದರು: "ನಿಮ್ಮ ಸಂಗಾತಿಯು (ಪ್ರವಾದಿ) ನಿಮಗೆ ಎಲ್ಲವನ್ನೂ ಕಲಿಸುತ್ತಾರೆ, (ಮಲ ವಿಸರ್ಜನೆ ಮಾಡುವ) ಶೌಚಾಚಾರವನ್ನೂ ಸಹ ಕಲಿಸುತ್ತಾರೆ ಎಂದು ನಾನು ಕಾಣುತ್ತಿದ್ದೇನೆ!" ಅದಕ್ಕೆ (ಸಲ್ಮಾನ್) ಹೇಳಿದರು: "ಹೌದು. ಖಂಡಿತವಾಗಿಯೂ ನಮ್ಮಲ್ಲೊಬ್ಬನು ತನ್ನ ಬಲಗೈಯಿಂದ 'ಇಸ್ತಿಂಜಾ' (ಶುದ್ಧೀಕರಣ) ಮಾಡುವುದನ್ನು, ಅಥವಾ (ಮಲಮೂತ್ರ ವಿಸರ್ಜಿಸುವಾಗ) ಖಿಬ್ಲಾದ ಕಡೆಗೆ ಮುಖ ಮಾಡುವುದನ್ನು ಅವರು (ಪ್ರವಾದಿ) ನಿಷೇಧಿಸಿದ್ದಾರೆ. ಅವರು ಸಗಣಿ ಮತ್ತು ಮೂಳೆಗಳಿಂದ (ಶುದ್ಧೀಕರಿಸುವುದನ್ನು) ನಿಷೇಧಿಸಿದ್ದಾರೆ ಮತ್ತು ಅವರು ಹೇಳಿದರು: 'ನಿಮ್ಮಲ್ಲೊಬ್ಬನು ಮೂರಕ್ಕಿಂತ ಕಡಿಮೆ ಕಲ್ಲುಗಳಿಂದ 'ಇಸ್ತಿಂಜಾ' ಮಾಡಬಾರದು' ".

[صحيح] [رواه مسلم]

الشرح

ಸಲ್ಮಾನ್ ಅಲ್-ಫಾರಿಸೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಮುಶ್ರಿಕ್‌ಗಳು ನಮಗೆ ಗೇಲಿ ಮಾಡುತ್ತಾ ಹೇಳಿದರು: ಖಂಡಿತವಾಗಿಯೂ ನಿಮ್ಮ ಪ್ರವಾದಿಯು ನಿಮಗೆ ಪ್ರತಿಯೊಂದು ವಿಷಯವನ್ನೂ ಕಲಿಸುತ್ತಾರೆ. ಮೂತ್ರ ಅಥವಾ ಮಲದಿಂದ ನಿಮ್ಮ ಅಗತ್ಯವನ್ನು ಹೇಗೆ ಪೂರೈಸುವುದು ಎಂಬುದನ್ನು ಸಹ ಕಲಿಸುತ್ತಾರೆ! ಆಗ ಸಲ್ಮಾನ್ ಹೇಳಿದರು: ಹೌದು, ಅವರು ನಮಗೆ (ಮಲಮೂತ್ರದ) ಅಗತ್ಯ ಪೂರೈಸುವ ಶಿಷ್ಟಾಚಾರಗಳನ್ನು ಕಲಿಸಿದ್ದಾರೆ. ಅವುಗಳಲ್ಲಿ ಒಂದು ಏನೆಂದರೆ, ಅಗತ್ಯ ಪೂರೈಸಿದ ನಂತರ ಬಲಗೈಯಿಂದ 'ಇಸ್ತಿಂಜಾ' ಮಾಡುವುದನ್ನು ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಅದೇಕೆಂದರೆ, ಬಲಗೈಯನ್ನು ಅಶುದ್ಧಿಯಿಂದ ರಕ್ಷಿಸುವುದಕ್ಕಾಗಿ ಮತ್ತು ಗೌರವಿಸುವುದಕ್ಕಾಗಿ. ಅಥವಾ ಮೂತ್ರ ಅಥವಾ ಮಲ ವಿಸರ್ಜಿಸುವಾಗ ಕಅಬಾದ ಕಡೆಗೆ ಮುಖ ಮಾಡುವುದನ್ನು (ನಿಷೇಧಿಸಿದ್ದಾರೆ). ಹಾಗೆಯೇ ಪ್ರಾಣಿಗಳ ಲದ್ದಿ, ಹಿಕ್ಕೆಗಳು ಮತ್ತು ಮೂಳೆಗಳಿಂದ 'ಇಸ್ತಿಜ್ಮಾರ್' (ಕಲ್ಲು ಇತ್ಯಾದಿಗಳಿಂದ ಒಣ ಶುದ್ಧೀಕರಣ) ಮಾಡುವುದನ್ನು ನಿಷೇಧಿಸಿದ್ದಾರೆ. ಅದಲ್ಲದೆ, (ಮಲಮೂತ್ರ ವಿಸರ್ಜಿಸಿದ) ವ್ಯಕ್ತಿಯು ಮೂರಕ್ಕಿಂತ ಕಡಿಮೆ ಕಲ್ಲುಗಳಿಂದ 'ಇಸ್ತಿಜ್ಮಾರ್' ಮಾಡಬಾರದು (ಎಂದೂ ಹೇಳಿದ್ದಾರೆ).

فوائد الحديث

ಜನರು ತಮ್ಮ ಜೀವನದಲ್ಲಿ ಅಗತ್ಯವಿರುವ ಪ್ರತಿಯೊಂದು ವಿಷಯದಲ್ಲೂ ಇಸ್ಲಾಮೀ ಶರೀಅತ್ ಸಮಗ್ರ ಮತ್ತು ಪರಿಪೂರ್ಣವಾಗಿದೆ ಎಂಬುದನ್ನು ವಿವರಿಸಲಾಗಿದೆ.

ಶೌಚಾಲಯ ಮತ್ತು 'ಇಸ್ತಿಂಜಾ'ದ ಕೆಲವು ಶಿಷ್ಟಾಚಾರಗಳನ್ನು ವಿವರಿಸಲಾಗಿದೆ.

ಮೂತ್ರ ಅಥವಾ ಮಲ ವಿಸರ್ಜಿಸುವಾಗ ಖಿಬ್ಲಾದ ಕಡೆಗೆ ಮುಖ ಮಾಡುವುದು ಹರಾಮ್ ಆಗಿದೆ. ಏಕೆಂದರೆ "ನಮ್ಮನ್ನು ನಿಷೇಧಿಸಿದರು" ಎಂದು ಅವರು ಹೇಳಿದ್ದಾರೆ. ನಿಷೇಧದ ಮೂಲ ನಿಯಮವು ಹರಾಮ್ ಆಗಿದೆ.

ಬಲಗೈಯಿಂದ 'ಇಸ್ತಿಂಜಾ' ಅಥವಾ 'ಇಸ್ತಿಜ್ಮಾರ್' ಮಾಡುವುದನ್ನು ನಿಷೇಧಿಸಲಾಗಿದೆ. ಇದು ಬಲಗೈಯನ್ನು ಗೌರವಿಸುವುದಕ್ಕಾಗಿ.

ಎಡಗೈಗಿಂತ ಬಲಗೈಯು ಶ್ರೇಷ್ಠವಾಗಿದೆಯೆಂದು ತಿಳಿಸಲಾಗಿದೆ. ಏಕೆಂದರೆ ಎಡಗೈಯನ್ನು ಅಶುದ್ಧ ಮತ್ತು ಹೊಲಸನ್ನು ನಿವಾರಿಸಲು ಬಳಸಲಾಗುತ್ತದೆ, ಮತ್ತು ಬಲಗೈಯನ್ನು ಉಳಿದ ಕೆಲಸಗಳಿಗೆ ಬಳಸಲಾಗುತ್ತದೆ.

ನೀರು ಅಥವಾ ಕಲ್ಲುಗಳಿಂದ ಅಶುದ್ಧಿಯನ್ನು ನಿವಾರಿಸುವುದು ಕಡ್ಡಾಯವಾಗಿದೆ, ಅಶುದ್ಧಿಯು ಕಡಿಮೆಯಿರಲಿ ಅಥವಾ ಹೆಚ್ಚಿರಲಿ.

ಮೂರಕ್ಕಿಂದ ಕಡಿಮೆ ಕಲ್ಲುಗಳಿಂದ 'ಇಸ್ತಿಜ್ಮಾರ್' ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಮೂರಕ್ಕಿಂತ ಕಡಿಮೆ ಕಲ್ಲುಗಳು ಸಾಮಾನ್ಯವಾಗಿ ಶುದ್ಧ ಮಾಡುವುದಿಲ್ಲ.

ಶುದ್ಧೀಕರಣ ಮತ್ತು ಸ್ವಚ್ಛಗೊಳಿಸುವ ಉದ್ದೇಶವನ್ನು ಪೂರೈಸುವ ಯಾವುದೇ ವಸ್ತುವೂ (ಕಲ್ಲುಗಳ ಬದಲಿಗೆ) ಸಾಕಾಗುತ್ತದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಲ್ಲುಗಳನ್ನು ಉಲ್ಲೇಖಿಸಿದ್ದಾರೆ. ಏಕೆಂದರೆ ಅದು ಸಾಮಾನ್ಯವಾಗಿ (ಲಭ್ಯವಿದ್ದ ವಸ್ತುವಾಗಿತ್ತು). ಯಾವುದು ಹೀಗಿದೆಯೋ ಅದಕ್ಕೆ ಬೇರೆ ನಿರ್ಬಂಧಿತ ಅರ್ಥವಿರುವುದಿಲ್ಲ.

'ಇಸ್ತಿಜ್ಮಾರ್' ಅನ್ನು ಬೆಸ ಸಂಖ್ಯೆಯಲ್ಲಿ ಮುಗಿಸುವುದು ಅಪೇಕ್ಷಣೀಯವಾಗಿದೆ. ಒಂದು ವೇಳೆ ನಾಲ್ಕು ಕಲ್ಲುಗಳಿಂದ ಶುದ್ಧೀಕರಣವಾದರೆ, ಐದನೆಯದನ್ನು ಹೆಚ್ಚಿಸುವುದು ಅಪೇಕ್ಷಣೀಯವಾಗಿದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು 'ಇಸ್ತಿಜ್ಮಾರ್' ಮಾಡುತ್ತಾರೋ, ಅವರು ಬೆಸ ಸಂಖ್ಯೆಯಲ್ಲಿ ಮಾಡಲಿ".

ಲದ್ದಿಯಿಂದ 'ಇಸ್ತಿಜ್ಮಾರ್' ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ: ಅದು ಒಂದೋ ಅಶುದ್ಧವಾಗಿದೆ (ನಜಿಸ್), ಅಥವಾ ಅದು ಜಿನ್ನ್‌ ಪ್ರಾಣಿಗಳ ಮೇವಾಗಿರುತ್ತದೆ.

ಮೂಳೆಯಿಂದ 'ಇಸ್ತಿಜ್ಮಾರ್' ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ: ಅದು ಒಂದೋ ಅಶುದ್ಧವಾಗಿದೆ (ನಜಿಸ್), ಅಥವಾ ಅದು ಜಿನ್ನ್‌ಗಳ ಆಹಾರವಾಗಿರುತ್ತದೆ.

التصنيفات

Toilet Manners