ಖಂಡಿತವಾಗಿಯೂ (ಭವಿಷ್ಯದಲ್ಲಿ) ಸುಳ್ಳು ಹೇಳುವ ಮತ್ತು ಅನ್ಯಾಯ ಮಾಡುವ ಆಡಳಿತಗಾರರು ಬರುವರು. ಯಾರು ಅವರ ಸುಳ್ಳುಗಳನ್ನು ಸತ್ಯವೆಂದು…

ಖಂಡಿತವಾಗಿಯೂ (ಭವಿಷ್ಯದಲ್ಲಿ) ಸುಳ್ಳು ಹೇಳುವ ಮತ್ತು ಅನ್ಯಾಯ ಮಾಡುವ ಆಡಳಿತಗಾರರು ಬರುವರು. ಯಾರು ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುತ್ತಾರೋ ಮತ್ತು ಅವರ ಅನ್ಯಾಯಕ್ಕೆ ಸಹಾಯ ಮಾಡುತ್ತಾರೋ, ಅವನು ನನ್ನವನಲ್ಲ ಮತ್ತು ನಾನು ಅವನವನಲ್ಲ

ಹುದೈಫಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ (ಭವಿಷ್ಯದಲ್ಲಿ) ಸುಳ್ಳು ಹೇಳುವ ಮತ್ತು ಅನ್ಯಾಯ ಮಾಡುವ ಆಡಳಿತಗಾರರು ಬರುವರು. ಯಾರು ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುತ್ತಾರೋ ಮತ್ತು ಅವರ ಅನ್ಯಾಯಕ್ಕೆ ಸಹಾಯ ಮಾಡುತ್ತಾರೋ, ಅವನು ನನ್ನವನಲ್ಲ ಮತ್ತು ನಾನು ಅವನವನಲ್ಲ. ಅವನು ನನ್ನ 'ಹೌದ್' (ಕೌಸರ್ ಸರೋವರ) ಬಳಿ ಬರುವುದಿಲ್ಲ. ಯಾರು ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುವುದಿಲ್ಲವೋ ಮತ್ತು ಅವರ ಅನ್ಯಾಯಕ್ಕೆ ಸಹಾಯ ಮಾಡುವುದಿಲ್ಲವೋ, ಅವನು ನನ್ನವನು ಮತ್ತು ನಾನು ಅವನವನು. ಅವನು ನನ್ನ 'ಹೌದ್' ಬಳಿ ಬರುವನು".

[صحيح] [رواه أحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅವರ ಮರಣದ ನಂತರ ಜನರ ಮೇಲೆ ಅಮೀರರು (ಆಡಳಿತಗಾರರು) ಅಧಿಕಾರಕ್ಕೆ ಬರುವರು. ಅವರು ಮಾತಿನಲ್ಲಿ ಸುಳ್ಳು ಹೇಳುತ್ತಾರೆ – ಅಂದರೆ ತಾವು ಮಾಡದನ್ನು ಹೇಳುತ್ತಾರೆ – ಮತ್ತು ಆಡಳಿತದಲ್ಲಿ ಅನ್ಯಾಯ ಮಾಡುತ್ತಾರೆ. ಯಾರು ಅವರ ಬಳಿಗೆ ಹೋಗಿ ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುತ್ತಾರೋ, ಅಥವಾ ಅನ್ಯಾಯದ ಕೃತ್ಯದಲ್ಲಿ ಅಥವಾ ಮಾತಿನಲ್ಲಿ – ಉದಾಹರಣೆಗೆ ಅವರ ಸಾಮೀಪ್ಯವನ್ನು ಬಯಸಿ ಮತ್ತು ಅವರ ಬಳಿ ಇರುವುದನ್ನು ಆಶಿಸಿ ಅವರಿಗಾಗಿ ಫತ್ವಾ ನೀಡುವುದು – ಅವರಿಗೆ ಸಹಾಯ ಮಾಡುತ್ತಾನೋ, ನಾನು ಅವರಿಂದ ಮುಕ್ತನಾಗಿದ್ದೇನೆ. ಅವನು ನನ್ನವನಲ್ಲ, ಮತ್ತು ನಾನು ಅವನವನಲ್ಲ. ಅವನು (ಪುನರುತ್ಥಾನ) ದಿನದಂದು ನನ್ನ ಕೌಸರ್ ಸರೋವರದ ಬಳಿ ಬರುವುದಿಲ್ಲ. ಯಾರು ಅವರ ಬಳಿಗೆ ಹೋಗುವುದಿಲ್ಲವೋ, ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುವುದಿಲ್ಲವೋ ಮತ್ತು ಅವರ ಅನ್ಯಾಯಕ್ಕೆ ಸಹಾಯ ಮಾಡುವುದಿಲ್ಲವೋ, ಅವನು ನನ್ನವನು, ಮತ್ತು ನಾನು ಅವನವನು. ಅವನು (ಪುನರುತ್ಥಾನ) ದಿನದಂದು ನನ್ನ ಹೌದ್ ಬಳಿ ಬರುವನು.

فوائد الحديث

ಆಡಳಿತಗಾರರ ಬಳಿಗೆ ಮಾರ್ಗದರ್ಶನ ನೀಡಲು, ಉಪದೇಶಿಸಲು ಮತ್ತು ಕೆಡುಕನ್ನು ಕಡಿಮೆ ಮಾಡಲು ಹೋಗುವುದಾದರೆ ಅದು ಅಪೇಕ್ಷಣೀಯವಾಗಿದೆ. ಆದರೆ, ಅವರ ಅನ್ಯಾಯಕ್ಕೆ ಸಹಾಯ ಮಾಡಲು ಮತ್ತು ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸಲು ಅವರ ಬಳಿಗೆ ಹೋಗುವುದಾದರೆ, ಅದು ಖಂಡನಾರ್ಹವಾಗಿದೆ.

ಒಬ್ಬ ಆಡಳಿತಗಾರನಿಗೆ ಅವನ ಅನ್ಯಾಯದಲ್ಲಿ ಸಹಾಯ ಮಾಡುವವನಿಗೆ ನೀಡಲಾದ ಎಚ್ಚರಿಕೆಯನ್ನು ವಿವರಿಸಲಾಗಿದೆ.

ಹದೀಸ್‌ನಲ್ಲಿರುವ ಈ ಎಚ್ಚರಿಕೆಯು ಈ ಕೃತ್ಯವು ಹರಾಮ್ (ನಿಷಿದ್ಧ) ಮತ್ತು ಮಹಾಪಾಪಗಳಲ್ಲಿ (ಕಬಾಇರ್) ಒಂದು ಎಂಬುದನ್ನು ಸೂಚಿಸುತ್ತದೆ.

ಒಳಿತು ಮತ್ತು ದೇವಭಯದಲ್ಲಿ ಪರಸ್ಪರ ಸಹಕರಿಸಲು ಪ್ರೋತ್ಸಾಹಿಸಲಾಗಿದೆ, ಮತ್ತು ಪಾಪ ಹಾಗೂ ದಬ್ಬಾಳಿಕೆಯಲ್ಲಿ ಸಹಕರಿಸದಿರಲು ಆದೇಶಿಸಲಾಗಿದೆ.

ನಮ್ಮ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ 'ಹೌದ್' (ಸರೋವರ) ಇದೆ ಎಂದು, ಮತ್ತು ಅವರ ಉಮ್ಮತ್ ಅದರ ಬಳಿ ಬರುತ್ತದೆ ಎಂಬುದನ್ನು ದೃಢೀಕರಿಸಲಾಗಿದೆ.

التصنيفات

Manners of Enjoining Good and Forbidding Evil, Imam's Rights over the Subjects