ರಮದಾನ್ ತಿಂಗಳು ಬಂದರೆ, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಶೈತಾನರನ್ನು…

ರಮದಾನ್ ತಿಂಗಳು ಬಂದರೆ, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ರಮದಾನ್ ತಿಂಗಳು ಬಂದರೆ, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ರಮದಾನ್ ತಿಂಗಳು ಬಂದರೆ ಮೂರು ವಿಷಯಗಳು ಸಂಭವಿಸುತ್ತವೆ: ಮೊದಲನೆಯದು: ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ. ಅವುಗಳಲ್ಲಿ ಯಾವುದೇ ಬಾಗಿಲು ಮುಚ್ಚಿರುವುದಿಲ್ಲ. ಎರಡನೆಯದು: ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಅವುಗಳಲ್ಲಿ ಯಾವುದೇ ಬಾಗಿಲು ತೆರೆದಿರುವುದಿಲ್ಲ. ಮೂರನೆಯದು: ಶೈತಾನರನ್ನು ಮತ್ತು ಬಂಡುಕೋರ ಜಿನ್ನ್‌ಗಳನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ. ಆದ್ದರಿಂದ ಅವರು ರಮದಾನ್ ಅಲ್ಲದ ಇತರ ತಿಂಗಳುಗಳಲ್ಲಿ ಮಾಡುತ್ತಿದ್ದಂತಹ ಕೆಡುಕನ್ನು ಈ ತಿಂಗಳಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಇವೆಲ್ಲವೂ ಈ ತಿಂಗಳ ಮಹತ್ವವನ್ನು ಹೆಚ್ಚಿಸುವುದಕ್ಕಾಗಿದೆ. ಹಾಗೆಯೇ ಪ್ರಾರ್ಥನೆ, ದಾನ, ಧಿಕ್ರ್ (ಅಲ್ಲಾಹುವಿನ ಸ್ಮರಣೆ), ಕುರ್‌ಆನ್ ಪಠಣ ಮತ್ತು ಇತರ ಸತ್ಕರ್ಮಗಳನ್ನು ಹೆಚ್ಚು ಹೆಚ್ಚಾಗಿ ನಿರ್ವಹಿಸಲು ಹಾಗೂ ಪಾಪಗಳು ಮತ್ತು ದುಷ್ಕೃತ್ಯಗಳಿಂದ ದೂರವಿರಲು ಪ್ರೋತ್ಸಾಹವಾಗಿದೆ.

فوائد الحديث

ರಮದಾನ್ ತಿಂಗಳ ಶ್ರೇಷ್ಠತೆಯನ್ನು ತಿಳಿಸಲಾಗಿರವುದು.

ಈ ತಿಂಗಳಲ್ಲಿ ಉಪವಾಸ ಮಾಡುವವರಿಗೆ, ಈ ಅನುಗ್ರಹಿತ ತಿಂಗಳು ಆರಾಧನೆ ಮತ್ತು ಸತ್ಕರ್ಮಗಳ ಋತುವಾಗಿದೆ ಎಂಬ ಶುಭಸುದ್ದಿಯನ್ನು ತಿಳಿಸಲಾಗಿರುವುದು.

ರಮದಾನ್‌ ತಿಂಗಳಲ್ಲಿ ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ ಎಂಬ ವಚನವು ಶೈತಾನರನ್ನು ನೆಪವಾಗಿ ಮಾಡಿಕೊಳ್ಳುವವರಿಗೆ ಹಾಗೆ ಮಾಡಬಾರದೆಂಬ ಸೂಚನೆಯಾಗಿದೆ. ಇದರ ಅರ್ಥವು ಅವರೊಡನೆ ಬಹುಶಃ ಹೀಗೆ ಹೇಳಿದಂತೆ: "ಶೈತಾನರನ್ನು ನಿಮ್ಮಿಂದ ದೂರವಿಡಲಾಗಿದೆ. ಆದ್ದರಿಂದ ಸತ್ಕರ್ಮವನ್ನು ತೊರೆಯಲು ಅಥವಾ ಪಾಪವನ್ನು ಮಾಡಲು ಅವರನ್ನು ನೆಪವಾಗಿ ಬಳಸಬೇಡಿರಿ."

ಕುರ್ತುಬಿ ಹೇಳುತ್ತಾರೆ: "ರಮದಾನ್‌ ತಿಂಗಳಲ್ಲಿ ನಾವು ಅನೇಕ ದುಷ್ಕೃತ್ಯಗಳು ಮತ್ತು ಪಾಪಗಳು ಸಂಭವಿಸುವುದನ್ನು ನೋಡುತ್ತೇವೆ. ಶೈತಾನರನ್ನು ಬಂಧಿಸಲಾಗುವುದಾದರೆ ಇವು ಸಂಭವಿಸಬಾರದಲ್ಲವೇ ಎಂದು ಯಾರಾದರೂ ಕೇಳಿದರೆ, ಅದಕ್ಕೆ ಉತ್ತರ: ಷರತ್ತುಗಳನ್ನು ಪಾಲಿಸಿಕೊಂಡು ಮತ್ತು ಶಿಷ್ಟಾಚಾರವನ್ನು ಗಮನಿಸಿಕೊಂಡು ಉಪವಾಸ ಆಚರಿಸುವವರಿಗೆ ಶೈತಾನರ ಉಪಟಳ ಕಡಿಮೆಯಾಗಿರುತ್ತವೆ. ಅಥವಾ ಇದರ ಅರ್ಥ ಬಂಡುಕೋರರಾದ ಕೆಲವು ಶೈತಾನರನ್ನು ಮಾತ್ರ ಬಂಧಿಸುವುದಾಗಿರಬಹುದು, ಎಲ್ಲರನ್ನಲ್ಲ. ಕೆಲವು ವರದಿಗಳಲ್ಲಿ ಇದನ್ನು ತಿಳಿಸಲಾಗಿದೆ. ಅಥವಾ ಇದರ ಉದ್ದೇಶವು ರಮದಾನ್ ತಿಂಗಳಲ್ಲಿ ದುಷ್ಕೃತ್ಯಗಳ ಪ್ರಮಾಣವು ಕಡಿಮೆಯಾಗಿರುತ್ತದೆ ಎಂದಾಗಿರಬಹುದು. ಇದು ಎಲ್ಲರೂ ಅನುಭವಿಸಿ ತಿಳಿದ ವಿಚಾರವಾಗಿದೆ. ಅಂದರೆ, ಇತರ ತಿಂಗಳುಗಳಿಗೆ ಹೋಲಿಸಿದರೆ ರಮದಾನ್‌ ತಿಂಗಳಲ್ಲಿ ದುಷ್ಕೃತ್ಯಗಳು ಕಡಿಮೆ ಇರುತ್ತವೆ. ಎಲ್ಲಾ ಶೈತಾನರನ್ನು ಬಂಧಿಸಲಾಗುತ್ತದೆ ಎಂದರೆ ಅದರ ಅರ್ಥ ಯಾವುದೇ ದುಷ್ಕೃತ್ಯ ಅಥವಾ ಪಾಪ ಸಂಭವಿಸುವುದಿಲ್ಲ ಎಂದಲ್ಲ. ಏಕೆಂದರೆ, ಅವು ಸಂಭವಿಸುವುದಕ್ಕೆ ಶೈತಾನಲ್ಲದ ಬೇರೆ ಕಾರಣಗಳೂ ಇವೆ. ಉದಾಹರಣೆಗೆ, ಕೆಟ್ಟ ಮನಸ್ಸುಗಳು, ಕೆಟ್ಟ ಅಭ್ಯಾಸಗಳು ಮತ್ತು ಮನುಷ್ಯರಲ್ಲಿರುವ ಶೈತಾನರು (ದುರುಳರು) ಇತ್ಯಾದಿ."

التصنيفات

Virtue of Fasting