ನಿಮ್ಮಲ್ಲೊಬ್ಬನು ಒಂಟಿಯಾಗಿ ಮಾಡುವ ನಮಾಝ್‌ಗಿಂತ ಜಮಾಅತ್ (ಸಂಘಟಿತ) ನಮಾಝ್ ಇಪ್ಪತ್ತೈದು ಪಟ್ಟು ಶ್ರೇಷ್ಠವಾಗಿದೆ. ರಾತ್ರಿಯ…

ನಿಮ್ಮಲ್ಲೊಬ್ಬನು ಒಂಟಿಯಾಗಿ ಮಾಡುವ ನಮಾಝ್‌ಗಿಂತ ಜಮಾಅತ್ (ಸಂಘಟಿತ) ನಮಾಝ್ ಇಪ್ಪತ್ತೈದು ಪಟ್ಟು ಶ್ರೇಷ್ಠವಾಗಿದೆ. ರಾತ್ರಿಯ ಮಲಕ್‌ಗಳು (ದೇವದೂತರು) ಮತ್ತು ಹಗಲಿನ ಮಲಕ್‌ಗಳು ಫಜ್ರ್ ನಮಾಝ್‌ನಲ್ಲಿ ಒಟ್ಟುಗೂಡುತ್ತಾರೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮಲ್ಲೊಬ್ಬನು ಒಂಟಿಯಾಗಿ ಮಾಡುವ ನಮಾಝ್‌ಗಿಂತ ಜಮಾಅತ್ (ಸಂಘಟಿತ) ನಮಾಝ್ ಇಪ್ಪತ್ತೈದು ಪಟ್ಟು ಶ್ರೇಷ್ಠವಾಗಿದೆ. ರಾತ್ರಿಯ ಮಲಕ್‌ಗಳು (ದೇವದೂತರು) ಮತ್ತು ಹಗಲಿನ ಮಲಕ್‌ಗಳು ಫಜ್ರ್ ನಮಾಝ್‌ನಲ್ಲಿ ಒಟ್ಟುಗೂಡುತ್ತಾರೆ". ನಂತರ ಅಬೂ ಹುರೈರಾ ಹೇಳುತ್ತಿದ್ದರು: "ನೀವು ಇಚ್ಛಿಸಿದರೆ (ಇದಕ್ಕೆ ಪುರಾವೆಯಾಗಿ ಈ ವಚನವನ್ನು) ಓದಿರಿ: "ಖಂಡಿತವಾಗಿಯೂ ಫಜ್ರ್‌ನ ಪಾರಾಯಣವು (ಕುರ್‌ಆನ್) ಸಾಕ್ಷಿವಹಿಸಲ್ಪಡುತ್ತದೆ." [ಸೂರಃ ಅಲ್-ಇಸ್ರಾ: 78].

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಒಬ್ಬ ವ್ಯಕ್ತಿಯು ಇಮಾಮರೊಂದಿಗೆ ಜಮಾಅತ್‌ನಲ್ಲಿ ಮಾಡುವ ನಮಾಝ್‌ನ ಪುಣ್ಯ ಮತ್ತು ಪ್ರತಿಫಲವು, ಅವನು ತನ್ನ ಮನೆಯಲ್ಲಿ ಅಥವಾ ಮಾರುಕಟ್ಟೆಯಲ್ಲಿ ಒಂಟಿಯಾಗಿ ಮಾಡುವ ಇಪ್ಪತ್ತೈದು ನಮಾಝ್‌ಗಳಿಗಿಂತ ಶ್ರೇಷ್ಠವಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿಯ ಮತ್ತು ಹಗಲಿನ ಮಲಕ್‌ಗಳು (ದೇವದೂತರು) ಫಜ್ರ್ ನಮಾಝ್‌ನಲ್ಲಿ ಒಟ್ಟುಗೂಡುತ್ತಾರೆ ಎಂದು ಹೇಳಿದರು. ನಂತರ ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅದಕ್ಕೆ ಸಾಕ್ಷಿಯಾಗಿ ಹೇಳುತ್ತಾರೆ: ನೀವು ಇಚ್ಛಿಸಿದರೆ ಓದಿರಿ: "ಖಂಡಿತವಾಗಿಯೂ ಫಜ್ರ್‌ನ ಪಾರಾಯಣವು (ಕುರ್‌ಆನ್) ಸಾಕ್ಷಿವಹಿಸಲ್ಪಡುತ್ತದೆ." [ಸೂರಃ ಅಲ್-ಇಸ್ರಾ: 78]. ಅಂದರೆ: ಖಂಡಿತವಾಗಿಯೂ ಫಜ್ರ್ ನಮಾಝ್‌ಗೆ ರಾತ್ರಿಯ ಮಲಕ್‌ಗಳು ಮತ್ತು ಹಗಲಿನ ಮಲಕ್‌ಗಳು ಸಾಕ್ಷಿಯಾಗುತ್ತಾರೆ.

فوائد الحديث

ಇಬ್ನ್ ಹಜರ್ ಹೇಳುತ್ತಾರೆ: "ಮಸೀದಿಯಲ್ಲಿ ಜಮಾಅತ್‌ನೊಂದಿಗೆ ಮಾಡುವ ನಮಾಝ್, ಮನೆಯಲ್ಲಿ ಮತ್ತು ಮಾರುಕಟ್ಟೆಯಲ್ಲಿ ಜಮಾಅತ್‌ನೊಂದಿಗೆ ಅಥವಾ ಒಂಟಿಯಾಗಿ ಮಾಡುವ ನಮಾಝ್‌ಗಿಂತ ಶ್ರೇಷ್ಠವಾಗಿದೆ. ಇದು ಇಬ್ನ್ ದಖೀಖುಲ್-ಈದ್‌ರ ಅಭಿಪ್ರಾಯವಾಗಿದೆ."

ಇದರಲ್ಲಿ ಫಜ್ರ್ ನಮಾಝ್‌ಗೆ ಶ್ರೇಷ್ಠತೆಯಿದೆಯೆಂದು ತಿಳಿಸಲಾಗಿದೆ. ಏಕೆಂದರೆ ಅದರಲ್ಲಿ ಮಲಕ್‌ಗಳು ಒಟ್ಟುಗೂಡುವ ವಿಶೇಷತೆಯಿದೆ.

ಇಬ್ನ್ ಬಾಝ್ ಹೇಳುತ್ತಾರೆ: "ಸತ್ಯವಿಶ್ವಾಸಿಯು ತನ್ನ ಮನೆಯು ದೂರವಿದ್ದರೂ ಸಹ, ಜಮಾಅತ್‌ನೊಂದಿಗೆ ನಮಾಝ್ ನಿರ್ವಹಿಸುವುದನ್ನು ರೂಢಿಸಿಕೊಳ್ಳಲು ಶ್ರಮಿಸಬೇಕು. ಇದರಿಂದ ಅವನು ಈ ಮಹಾನ್ ಒಳಿತನ್ನು ಪಡೆಯುತ್ತಾನೆ."

ಇಮಾಮ್ ನವವಿ, ಜಮಾಅತ್ ನಮಾಝ್ ಒಂಟಿ ನಮಾಝ್‌ಗಿಂತ ಇಪ್ಪತ್ತೈದು ದರ್ಜೆ ಶ್ರೇಷ್ಠ, ಮತ್ತು ಇನ್ನೊಂದು ವರದಿಯಲ್ಲಿ ಇಪ್ಪತ್ತೇಳು ದರ್ಜೆ ಶ್ರೇಷ್ಠ ಎಂದು ಬಂದಿರುವ ವರದಿಗಳನ್ನು ಹೊಂದಾಣಿಕೆ ಮಾಡುವ ಬಗ್ಗೆ ಹೇಳುತ್ತಾರೆ: "ಅವೆರಡರ ನಡುವೆ ಮೂರು ರೀತಿಯಲ್ಲಿ ಹೊಂದಾಣಿಕೆ ಮಾಡಬಹುದು: ಒಂದನೆಯದು: ಅವೆರಡರ ನಡುವೆ ಯಾವುದೇ ವಿರೋಧಾಭಾಸವಿಲ್ಲ, ಏಕೆಂದರೆ ಕಡಿಮೆ ಸಂಖ್ಯೆಯನ್ನು ಉಲ್ಲೇಖಿಸುವುದು ಹೆಚ್ಚಿನ ಸಂಖ್ಯೆಯನ್ನು ನಿರಾಕರಿಸುವುದಿಲ್ಲ. ಉಸೂಲುಲ್-ಫಿಕ್ಹ್‌ನ ವಿದ್ವಾಂಸರ ಪ್ರಕಾರ ಸಂಖ್ಯೆಯನ್ನು ನಿರ್ದಿಷ್ಟಗೊಳಿಸುವುದು ಅಸಿಂಧುವಾಗಿದೆ. ಎರಡನೆಯದು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕರುಣೆ ಮತ್ತು ಶಾಂತಿ ಇರಲಿ) ಮೊದಲು ಕಡಿಮೆ (ಪುಣ್ಯದ) ಬಗ್ಗೆ ತಿಳಿಸಿರಬಹುದು. ನಂತರ ಅಲ್ಲಾಹು ಅವರಿಗೆ ಶ್ರೇಷ್ಠತೆಯ ಹೆಚ್ಚಳದ ಬಗ್ಗೆ ತಿಳಿಸಿದಾಗ ಅವರು ಅದನ್ನು ತಿಳಿಸಿರಬಹುದು. ಮೂರನೆಯದು: ಇದು ನಮಾಝ್ ಮಾಡುವವರ ಸ್ಥಿತಿಗಳು ಮತ್ತು ನಮಾಝ್‌ನ (ಗುಣಮಟ್ಟದ) ಆಧಾರದ ಮೇಲೆ ಭಿನ್ನವಾಗಿರುತ್ತದೆ. ಕೆಲವರಿಗೆ ಇಪ್ಪತ್ತೈದು ಮತ್ತು ಕೆಲವರಿಗೆ ಇಪ್ಪತ್ತೇಳು ದರ್ಜೆಗಳು ದೊರೆಯಬಹುದು. ಇದು ನಮಾಝ್‌ನ ಪರಿಪೂರ್ಣತೆ, ಅದರ ನಿಯಮಗಳನ್ನು ಪಾಲಿಸುವುದು, ಅದರಲ್ಲಿನ ಏಕಾಗ್ರತೆ, ಜಮಾಅತ್‌ನ ಸಂಖ್ಯೆ ಮತ್ತು ಅವರ ಶ್ರೇಷ್ಠತೆ, ಸ್ಥಳದ ಪಾವಿತ್ರ್ಯತೆ ಮುಂತಾದವುಗಳನ್ನು ಅವಲಂಬಿಸಿರುತ್ತದೆ.

ಅಲ್ಲಾಹನೇ ಬಲ್ಲ.

التصنيفات

Virtue and Rulings of Congregational Prayer