ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ…

ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ ಗುದ್ದುತ್ತಾ, "ರಾತ್ರಿ ಇನ್ನೂ ದೀರ್ಘವಾಗಿದೆ; ಮಲಗು" ಎನ್ನುತ್ತಿರುವನು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ ಗುದ್ದುತ್ತಾ, "ರಾತ್ರಿ ಇನ್ನೂ ದೀರ್ಘವಾಗಿದೆ; ಮಲಗು" ಎನ್ನುತ್ತಿರುವನು. ಅವನೇನಾದರೂ ಎದ್ದು ಅಲ್ಲಾಹನನ್ನು ಸ್ಮರಿಸಿದರೆ, ಒಂದು ಗಂಟು ಬಿಚ್ಚಿಹೋಗುತ್ತದೆ. ಅವನು ವುದೂ ನಿರ್ವಹಿಸಿದರೆ ಇನ್ನೊಂದು ಗಂಟು ಬಿಚ್ಚಿಹೋಗುತ್ತದೆ. ಅವನು ನಮಾಝ್ ಮಾಡಿದರೆ ಮೂರನೆಯ ಗಂಟು ಬಿಚ್ಚಿಹೋಗುತ್ತದೆ. ಆಗ ಅವನು ಉಲ್ಲಾಸದಿಂದ ಶುದ್ಧ ಮನಸ್ಸಿನೊಂದಿಗೆ ಬೆಳಗನ್ನು ಪ್ರವೇಶಿಸುತ್ತಾನೆ. ಇಲ್ಲದಿದ್ದರೆ ಅವನು ಕೆಟ್ಟ ಮನಸ್ಸಿನೊಂದಿಗೆ ಆಲಸ್ಯದಿಂದ ಬೆಳಗನ್ನು ಪ್ರವೇಶಿಸುತ್ತಾನೆ."

[صحيح] [متفق عليه]

الشرح

ರಾತ್ರಿ ನಮಾಝ್ ಅಥವಾ ಫಜ್ರ್ ನಮಾಝ್ ನಿರ್ವಹಿಸಲು ಬಯಸುವ ವ್ಯಕ್ತಿಯೊಂದಿಗೆ ಶೈತಾನನು ನಡೆಸುವ ಗುದ್ದಾಟವನ್ನು ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆ. ಸತ್ಯವಿಶ್ವಾಸಿಯು ಮಲಗಲು ಹೋಗುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕುತ್ತಾನೆ. ಸತ್ಯವಿಶ್ವಾಸಿಯು ಎದ್ದು ಅಲ್ಲಾಹನನ್ನು ಸ್ಮರಿಸಿದರೆ ಮತ್ತು ಶೈತಾನನ ಗೊಣಗಾಟಕ್ಕೆ ಕಿವಿಗೊಡದಿದ್ದರೆ, ಅವನ ಒಂದು ಗಂಟು ಬಿಚ್ಚಿಹೋಗುತ್ತದೆ. ಅವನು ವುದೂ ನಿರ್ವಹಿಸಿದರೆ ಇನ್ನೊಂದು ಗಂಟು ಬಿಚ್ಚಿಹೋಗುತ್ತದೆ. . ಅವನು ಎದ್ದು ನಮಾಝ್ ನಿರ್ವಹಿಸಿದರೆ ಮೂರನೆಯ ಗಂಟು ಬಿಚ್ಚಿಹೋಗುತ್ತದೆ. ಆಗ ಅವನು, ಅಲ್ಲಾಹು ಅವನಿಗೆ ಸತ್ಕರ್ಮವನ್ನು ನಿರ್ವಹಿಸುವ ಭಾಗ್ಯ ನೀಡಿದ್ದಕ್ಕಾಗಿ ಸಂತೋಷಪಡುತ್ತಾ, ಅದಕ್ಕಾಗಿ ಅಲ್ಲಾಹು ವಾಗ್ದಾನ ಮಾಡಿದ ಪ್ರತಿಫಲವನ್ನು ನೆನೆಸಿ, ಮತ್ತು ಅದರೊಂದಿಗೆ ಶೈತಾನನ ಗಂಟುಗಳು ಮತ್ತು ಗೊಣಗಾಟಗಳು ನಿವಾರಣೆಯಾದುದಕ್ಕಾಗಿ ಆಹ್ಲಾದಿಸುತ್ತಾ, ಶುದ್ಧ ಮನಸ್ಸಿನೊಂದಿಗೆ ಬೆಳಗನ್ನು ಪ್ರವೇಶಿಸುತ್ತಾನೆ.ಇಲ್ಲದಿದ್ದರೆ ಅವನು ಕೆಟ್ಟ ಮನಸ್ಸಿನೊಂದಿಗೆ, ಒಳಿತು ಮತ್ತು ಸತ್ಕರ್ಮಗಳನ್ನು ಮಾಡಲು ಆಲಸ್ಯಪಡುತ್ತಾ ಬೆಳಗನ್ನು ಪ್ರವೇಶಿಸುತ್ತಾನೆ. ಏಕೆಂದರೆ, ಅವನು ಶೈತಾನನ ಬಂಧನದಲ್ಲಿ ಬಂಧಿತನಾಗಿದ್ದಾನೆ ಮತ್ತು ಅಲ್ಲಾಹನಿಂದ ದೂರವಾಗಿದ್ದಾನೆ.

فوائد الحديث

ಶೈತಾನನು ಎಲ್ಲಾ ಸಮಯಗಳಲ್ಲೂ ಮತ್ತು ಎಲ್ಲಾ ದಾರಿಗಳಲ್ಲೂ ಮನುಷ್ಯನು ಅಲ್ಲಾಹನ ಅನುಸರಣೆ ಮಾಡದಂತೆ ತಡೆಯಲು ಪ್ರಯತ್ನಿಸುತ್ತಲೇ ಇರುತ್ತಾನೆ. ಅಲ್ಲಾಹನಿಂದ ಸಹಾಯ ಬೇಡುವುದು ಮತ್ತು ಶೈತಾನನಿಂದ ಪಾರಾಗುವ ಮಾರ್ಗೋಪಾಯಗಳನ್ನು ಸ್ವೀಕರಿಸುವುದರ ಹೊರತು ಶೈತಾನನಿಂದ ತಪ್ಪಿಸಿಕೊಳ್ಳಲು ಮನುಷ್ಯನಿಗೆ ಸಾಧ್ಯವೇ ಇಲ್ಲ.

ಅಲ್ಲಾಹನ ಸ್ಮರಣೆ ಮತ್ತು ಆರಾಧನೆಯು ಮನಸ್ಸಿಗೆ ಉಲ್ಲಾಸ ಮತ್ತು ಹೃದಯಕ್ಕೆ ವೈಶಾಲ್ಯತೆಯನ್ನು ನೀಡುತ್ತದೆ. ಅದು ಸೋಮಾರಿತನ ಮತ್ತು ಆಲಸ್ಯವನ್ನು ಹೋಗಲಾಡಿಸುತ್ತದೆ ಮತ್ತು ದುಃಖ ಹಾಗೂ ಕೋಪವನ್ನು ನಿವಾರಿಸುತ್ತದೆ. ಏಕೆಂದರೆ, ಇದು ಶೈತಾನನನ್ನು ದೂರವಿಡುತ್ತದೆ. ಇವೆಲ್ಲವೂ ಶೈತಾನನ ಗುಣುಗುಟ್ಟುವಿಕೆಯಿಂದ ಉಂಟಾಗುವ ದುರ್ವಿಚಾರಗಳಾಗಿವೆ.

ಅಲ್ಲಾಹನ ಅನುಸರಣೆ ಮಾಡುವ ಭಾಗ್ಯವನ್ನು ಅಲ್ಲಾಹು ನೀಡಿದಾಗ ಸತ್ಯವಿಶ್ವಾಸಿಯು ಸಂತೋಷಪಡುತ್ತಾನೆ. ಶ್ರೇಷ್ಠತೆ ಮತ್ತು ಪರಿಪೂರ್ಣತೆಯ ಮಟ್ಟವನ್ನು ತಲುಪಲು ವಿಫಲವಾದಾಗ ದುಃಖ ಪಡುತ್ತಾನೆ.

ನಿರ್ಲಕ್ಷಿಸುವುದು ಮತ್ತು ಅನುಸರಣೆ ಮಾಡುವ ಆಸಕ್ತಿಯಿಲ್ಲದಿರುವುದು ಶೈತಾನನ ಕಾರಣದಿಂದ ಮತ್ತು ಅವನು ಕೆಡುಕುಗಳನ್ನು ಅಂದಗೊಳಿಸಿ ತೋರಿಸಿಕೊಡುವ ಕಾರಣದಿಂದಾಗಿದೆ.

ಈ ಮೂರು ವಿಷಯಗಳು: ಅಲ್ಲಾಹನ ಸ್ಮರಣೆ, ವುದೂ ಮತ್ತು ನಮಾಝ್ ಶೈತಾನನನ್ನು ದೂರವಿಡುತ್ತದೆ.

ಶೈತಾನನು ವಿಶೇಷವಾಗಿ ತಲೆಯ ಹಿಂಭಾಗದಲ್ಲಿ ಗಂಟು ಹಾಕುವುದು ಏಕೆಂದರೆ, ಅದು ಶಕ್ತಿಯ ಕೇಂದ್ರ ಮತ್ತು ನಿಯಂತ್ರಣದ ಸ್ಥಳವಾಗಿದೆ.ಆ ಸ್ಥಳದಲ್ಲಿ ಬಿಗಿಯಾಗಿ ಕಟ್ಟಿದರೆ, ಮನುಷ್ಯನ ಆತ್ಮದ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಅವನನ್ನು ನಿದ್ರೆಗೆ ದೂಡಲು ಸಾಧ್ಯವಾಗುತ್ತದೆ.

ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ರಾತ್ರಿ ಇನ್ನೂ ದೀರ್ಘವಾಗಿದೆ" ಎಂಬ ಮಾತಿನ ಪ್ರಕಾರ ಇದು ವಿಶೇಷವಾಗಿ ರಾತ್ರಿಯ ನಿದ್ರೆಗೆ ಸೀಮಿತವಾಗಿದೆಯೆಂದು ತಿಳಿದುಬರುತ್ತದೆ.

ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ಇದನ್ನೇ ಹೇಳಬೇಕು, ಬೇರೆ ಹೇಳಬಾರದು ಎಂಬಂತಹ ಯಾವುದೇ ನಿರ್ದಿಷ್ಟ ಸ್ಮರಣೆ (ಝಿಕ್ರ್) ಗಳಿಲ್ಲ. ಬದಲಿಗೆ, ಅಲ್ಲಾಹನ ಸ್ಮರಣೆ ಎಂದು ಹೇಳಲಾಗುವ ಯಾವುದೇ ಸ್ಮರಣೆಯನ್ನು ಪಠಿಸಿದರೂ ಸಾಕಾಗುತ್ತದೆ. ಅದು ಕುರ್‌ಆನ್ ಪಠಣ, ಹದೀಸ್ ಪಠಣ ಅಥವಾ ಧಾರ್ಮಿಕವಾದ ಜ್ಞಾನವನ್ನು ಕಲಿಯುವುದು ಮುಂತಾದ ಯಾವುದೂ ಆಗಿರಬಹುದು. ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಲಿಸಿಕೊಟ್ಟ ಸ್ಮರಣೆಯನ್ನು (ಝಿಕ್ರ್) ಪಠಿಸುವುದು ಉತ್ತಮವಾಗಿದೆ. ಅವರು ಹೇಳಿದರು:"ಯಾರಾದರೂ ರಾತ್ರಿಯಲ್ಲಿ ಎದ್ದಾಗ ಇದನ್ನು ಪಠಿಸಿದರೆ: ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್, ಅಲ್-ಹಮ್ದುಲಿಲ್ಲಾಹ್, ವ ಸುಬ್‌ಹಾನಲ್ಲಾಹ್, ವ ಲಾಇಲಾಹ ಇಲ್ಲಲ್ಲಾಹು, ವಲ್ಲಾಹು ಅಕ್ಬರ್, ವಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್. (ಅರ್ಥ: ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು. ಆಧಿಪತ್ಯ ಅವನದ್ದು ಮತ್ತು ಸರ್ವಸ್ತುತಿ ಅವನಿಗೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು. ಅಲ್ಲಾಹನಿಗೆ ಸರ್ವಸ್ತುತಿ, ಅಲ್ಲಾಹು ಪರಮ ಪರಿಶುದ್ಧನು, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಅಲ್ಲಾಹು ಅತ್ಯಂತ ಮಹಾನನು. ಅಲ್ಲಾಹನ ಹೊರತು ಬೇರೆ ಶಕ್ತಿ ಅಥವಾ ಸಾಮರ್ಥ್ಯವಿಲ್ಲ. ನಂತರ: "ಅಲ್ಲಾಹುಮ್ಮ ಗ್ಫಿರ್ ಲೀ" (ಓ ಅಲ್ಲಾಹ್! ನನ್ನನ್ನು ಕ್ಷಮಿಸು) ಎಂದು ಹೇಳಿದರೆ, ಅಥವಾ ಬೇರೆ ಪ್ರಾರ್ಥನೆ ಪ್ರಾರ್ಥಿಸಿದರೆ, ಅವನ ಪ್ರಾರ್ಥನೆಗೆ ಉತ್ತರ ದೊರೆಯುತ್ತದೆ. ಅವನು ವುದೂ ನಿರ್ವಹಿಸಿ ನಮಾಝ್ ಮಾಡಿದರೆ ಅವನ ನಮಾಝ್ ಸ್ವೀಕೃತವಾಗುತ್ತದೆ." [ಬುಖಾರಿ].

التصنيفات

Excellence of Ablution, Benefits of Remembering Allah