ಆರಾಧಕನ ಮೇಲೆ ವಿದ್ವಾಂಸನ ಶ್ರೇಷ್ಠತೆಯು ನಿಮ್ಮಲ್ಲಿ ಅತ್ಯಂತ ಕೆಳಗಿನ ಸ್ಥಾನಮಾನವಿರುವವನ ಮೇಲೆ ನನ್ನ ಶ್ರೇಷ್ಠತೆಯಷ್ಟಿದೆ

ಆರಾಧಕನ ಮೇಲೆ ವಿದ್ವಾಂಸನ ಶ್ರೇಷ್ಠತೆಯು ನಿಮ್ಮಲ್ಲಿ ಅತ್ಯಂತ ಕೆಳಗಿನ ಸ್ಥಾನಮಾನವಿರುವವನ ಮೇಲೆ ನನ್ನ ಶ್ರೇಷ್ಠತೆಯಷ್ಟಿದೆ

ಅಬೂ ಉಮಾಮಾ ಅಲ್-ಬಾಹಿಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇಬ್ಬರು ವ್ಯಕ್ತಿಗಳ ಬಗ್ಗೆ ಉಲ್ಲೇಖಿಸಲಾಯಿತು. ಅವರಲ್ಲೊಬ್ಬನು 'ಆಬಿದ್' (ಆರಾಧಕ) ಮತ್ತು ಇನ್ನೊಬ್ಬನು 'ಆಲಿಮ್' (ವಿದ್ವಾಂಸ) ಆಗಿದ್ದನು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಆರಾಧಕನ ಮೇಲೆ ವಿದ್ವಾಂಸನ ಶ್ರೇಷ್ಠತೆಯು ನಿಮ್ಮಲ್ಲಿ ಅತ್ಯಂತ ಕೆಳಗಿನ ಸ್ಥಾನಮಾನವಿರುವವನ ಮೇಲೆ ನನ್ನ ಶ್ರೇಷ್ಠತೆಯಷ್ಟಿದೆ". ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು, ಅವನ ದೇವದೂತರು, ಆಕಾಶಗಳು ಮತ್ತು ಭೂಮಿಗಳ ನಿವಾಸಿಗಳು, ತನ್ನ ಬಿಲದಲ್ಲಿರುವ ಇರುವೆಯೂ ಸಹ ಮತ್ತು ಮೀನುಗಳೂ ಸಹ, ಜನರಿಗೆ ಒಳಿತನ್ನು ಕಲಿಸುವವನಿಗಾಗಿ ಪ್ರಾರ್ಥಿಸುತ್ತಾರೆ".

[حسن لغيره] [رواه الترمذي]

الشرح

ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇಬ್ಬರು ವ್ಯಕ್ತಿಗಳ ಬಗ್ಗೆ ಉಲ್ಲೇಖಿಸಲಾಯಿತು. ಒಬ್ಬನು ಆರಾಧಕ, ಇನ್ನೊಬ್ಬನು ವಿದ್ವಾಂಸ. ಅವರಿಬ್ಬರಲ್ಲಿ ಯಾರು ಉತ್ತಮ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ತನಗೆ ಕಡ್ಡಾಯವಾದ ಜ್ಞಾನವನ್ನು ತಿಳಿದುಕೊಂಡು ಆರಾಧನೆಗಾಗಿ ತನ್ನನ್ನು ಮುಡಿಪಾಗಿಟ್ಟ ಆರಾಧಕನ ಮೇಲೆ ಶರೀಅತ್‌ನ (ಧಾರ್ಮಿಕ) ಜ್ಞಾನವನ್ನು ಪಡೆದು, ಅದರಂತೆ ಕಾರ್ಯನಿರ್ವಹಿಸಿ, ಅದನ್ನು ಇತರರಿಗೆ ಕಲಿಸುವ ವಿದ್ವಾಂಸನಿಗೆ ಇರುವ ಶ್ರೇಷ್ಠತೆಯು, ಸಹಾಬಿಗಳಲ್ಲಿ ಅತ್ಯಂತ ಕೆಳಗಿನ ಸ್ಥಾನಮಾನವಿರುವವನ ಮೇಲೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇರುವ ಶ್ರೇಷ್ಠತೆ ಮತ್ತು ಗೌರವದಷ್ಟಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಕಾರಣವನ್ನು ವಿವರಿಸುತ್ತಾ ಹೇಳಿದ್ದೇನೆಂದರೆ, ಅಲ್ಲಾಹು, ಅವನ ಅರ್ಶ್ (ಸಿಂಹಾಸನ) ವನ್ನು ಹೊತ್ತ ದೇವದೂತರುಗಳು, ಆಕಾಶಗಳ ನಿವಾಸಿಗಳಾದ ಇತರ ದೇವದೂತರುಗಳು, ಮತ್ತು ಭೂಮಿಯ ನಿವಾಸಿಗಳಾದ ಮಾನವರು, ಜಿನ್ನ್‌ಗಳು ಮತ್ತು ಇತರ ಎಲ್ಲಾ ಪ್ರಾಣಿಗಳು, ಎಲ್ಲಿಯವರೆಗೆಂದರೆ, ತನ್ನ ಬಿಲದಲ್ಲಿರುವ ಇರುವೆಯೂ ಸಹ, ಮತ್ತು ಸಮುದ್ರದಲ್ಲಿರುವ ಮೀನೂ ಸಹ – ಭೂಮಿ ಮತ್ತು ಸಮುದ್ರದ ಎಲ್ಲಾ ಜೀವಿಗಳನ್ನು ಒಳಗೊಳಿಸಲಾಗಿದೆ – ಇವರೆಲ್ಲರೂ, ಜನರಿಗೆ ಅವರ ಮೋಕ್ಷ ಮತ್ತು ಯಶಸ್ಸನ್ನು ಒಳಗೊಂಡಿರುವ ಧಾರ್ಮಿಕ ಜ್ಞಾನಗಳನ್ನು ಕಲಿಸುವ ವಿದ್ವಾಂಸನಿಗೆ ಅವನ ಒಳಿತಿಗಾಗಿ ಪ್ರಾರ್ಥಿಸುತ್ತಾರೆ.

فوائد الحديث

ಉತ್ತೇಜಿಸುವುದು ಮತ್ತು ಉದಾಹರಣೆಗಳನ್ನು ನೀಡುವುದು ಅಲ್ಲಾಹನ ಕಡೆಗೆ ಆಹ್ವಾನಿಸುವ ವಿಧಾನಗಳಲ್ಲಿ ಒಂದಾಗಿದೆ.

ಜ್ಞಾನವನ್ನು ಕಲಿತು, ಅದರಂತೆ ಕಾರ್ಯನಿರ್ವಹಿಸಿ ಮತ್ತು ಅದರ ಕಡೆಗೆ ಆಹ್ವಾನ ನೀಡುವ ಮೂಲಕ ಅದರ ಹಕ್ಕನ್ನು ಪೂರೈಸಿದ ವಿದ್ವಾಂಸರ ಮಹಾನ್ ಗೌರವವನ್ನು ತಿಳಿಸಲಾಗಿದೆ.

ವಿದ್ವಾಂಸರನ್ನು ಮತ್ತು ಜ್ಞಾನದ ವಿದ್ಯಾರ್ಥಿಗಳನ್ನು ಗೌರವಿಸಲು ಮತ್ತು ಅವರಿಗಾಗಿ ಪ್ರಾರ್ಥಿಸಲು ಪ್ರೋತ್ಸಾಹಿಸಲಾಗಿದೆ.

ಜನರಿಗೆ ಒಳಿತನ್ನು ಕಲಿಸಲು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಅದು ಅವರ ಮೋಕ್ಷ ಮತ್ತು ಸಂತೋಷಕ್ಕೆ ಕಾರಣವಾಗಿದೆ.

التصنيفات

Excellence of Knowledge