ಖಂಡಿತವಾಗಿಯೂ ಸ್ವರ್ಗವನ್ನು ಪ್ರವೇಶಿಸುವ ಮೊದಲ ಗುಂಪು ಹುಣ್ಣಿಮೆಯ ರಾತ್ರಿಯ ಚಂದ್ರನ ರೂಪದಲ್ಲಿರುತ್ತಾರೆ (ಅಷ್ಟು…

ಖಂಡಿತವಾಗಿಯೂ ಸ್ವರ್ಗವನ್ನು ಪ್ರವೇಶಿಸುವ ಮೊದಲ ಗುಂಪು ಹುಣ್ಣಿಮೆಯ ರಾತ್ರಿಯ ಚಂದ್ರನ ರೂಪದಲ್ಲಿರುತ್ತಾರೆ (ಅಷ್ಟು ಪ್ರಕಾಶಮಾನವಾಗಿರುತ್ತಾರೆ). ನಂತರ, ಅವರ ನಂತರ ಬರುವವರು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರದಂತಿರುತ್ತಾರೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಸ್ವರ್ಗವನ್ನು ಪ್ರವೇಶಿಸುವ ಮೊದಲ ಗುಂಪು ಹುಣ್ಣಿಮೆಯ ರಾತ್ರಿಯ ಚಂದ್ರನ ರೂಪದಲ್ಲಿರುತ್ತಾರೆ (ಅಷ್ಟು ಪ್ರಕಾಶಮಾನವಾಗಿರುತ್ತಾರೆ). ನಂತರ, ಅವರ ನಂತರ ಬರುವವರು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರದಂತಿರುತ್ತಾರೆ. ಅವರು (ಸ್ವರ್ಗವಾಸಿಗಳು) ಮೂತ್ರ ವಿಸರ್ಜಿಸುವುದಿಲ್ಲ, ಮಲ ವಿಸರ್ಜಿಸುವುದಿಲ್ಲ, ಉಗುಳುವುದಿಲ್ಲ, ಮತ್ತು ಮೂಗಿನ ಸಿಂಬಳವನ್ನು ಹೊರಹಾಕುವುದಿಲ್ಲ. ಅವರ ಬಾಚಣಿಗೆಗಳು ಚಿನ್ನದ್ದಾಗಿರುತ್ತವೆ, ಅವರ ಬೆವರು ಕಸ್ತೂರಿಯ (ಸುವಾಸನೆಯಂತೆ) ಇರುತ್ತದೆ, ಅವರ ಧೂಪದಾನಿಗಳು ಊದ್ - ಸುವಾಸಿತ ಮರದಿಂದ ಕೂಡಿರುತ್ತವೆ. ಅವರ ಸಂಗಾತಿಗಳು 'ಹೂರ್' (ಅಪ್ಸರೆ) ಆಗಿರುತ್ತಾರೆ. ಅವರೆಲ್ಲರೂ ಒಂದೇ ಆಕೃತಿಯಲ್ಲಿ, ತಮ್ಮ ತಂದೆ ಆದಮ್ (ಅವರ ಮೇಲೆ ಶಾಂತಿಯಿರಲಿ) ರ ರೂಪದಲ್ಲಿ, ಅರವತ್ತು ಮೊಳ ಎತ್ತರವಾಗಿರುತ್ತಾರೆ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಗಳಲ್ಲಿ ಸ್ವರ್ಗವನ್ನು ಪ್ರವೇಶಿಸುವ ಮೊದಲ ಗುಂಪಿನ ಮುಖಗಳು ಪ್ರಕಾಶದಲ್ಲಿ ಹುಣ್ಣಿಮೆಯ ರಾತ್ರಿಯ ಚಂದ್ರನ ರೂಪದಲ್ಲಿರುತ್ತವೆ. ನಂತರ, ಅವರ ನಂತರ ಬರುವವರು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರದಂತಿರುತ್ತಾರೆ. ಅವರು ಪರಿಪೂರ್ಣತೆಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅಂದರೆ ಅವರು ಮೂತ್ರ ವಿಸರ್ಜಿಸುವುದಿಲ್ಲ, ಮಲ ವಿಸರ್ಜಿಸುವುದಿಲ್ಲ, ಉಗುಳುವುದಿಲ್ಲ, ಮತ್ತು ಮೂಗಿನ ಸಿಂಬಳವನ್ನು ಹೊರಹಾಕುವುದಿಲ್ಲ. ಅವರ ಬಾಚಣಿಗೆಗಳು ಚಿನ್ನದ್ದಾಗಿರುತ್ತವೆ, ಅವರ ಬೆವರು ಕಸ್ತೂರಿಯಂತಿರುತ್ತದೆ, ಅವರ ಧೂಪದಾನಿಗಳಿಂದ ಅತ್ಯುತ್ತಮ ಮತ್ತು ಪರಿಶುದ್ಧವಾದ ಸುವಾಸನೆ ಹಾಗೂ ಧೂಪವು ಹೊರಹೊಮ್ಮುತ್ತದೆ. ಅವರ ಸಂಗಾತಿಗಳು 'ಹೂರ್' (ಅಪ್ಸರೆ) ಆಗಿರುತ್ತಾರೆ. ಅವರ ಸೃಷ್ಟಿಯು ಎತ್ತರ ಮತ್ತು ಆಕಾರದಲ್ಲಿ ಒಂದೇ ವ್ಯಕ್ತಿಯಂತೆ, ತಮ್ಮ ತಂದೆ ಆದಮ್ ಅವರ ರೂಪದಲ್ಲಿರುತ್ತದೆ. ಅವರ ದೇಹದ ಎತ್ತರವು ಅರವತ್ತು ಮೊಳಗಳಾಗಿರುತ್ತದೆ.

فوائد الحديث

ಸ್ವರ್ಗವಾಸಿಗಳ ಗುಣಲಕ್ಷಣಗಳನ್ನು ವಿವರಿಸಲಾಗಿದೆ ಮತ್ತು ಅವರು ತಮ್ಮ ದರ್ಜೆಗಳು ಮತ್ತು ಕರ್ಮಗಳಿಗನುಗುಣವಾಗಿ ಅಲ್ಲಿ ವ್ಯತ್ಯಾಸವನ್ನು ಹೊಂದಿರುತ್ತಾರೆಂದು ತಿಳಿಸಲಾಗಿದೆ.

ಅರ್ಥಗಳನ್ನು ಮನಮುಟ್ಟುವಂತೆ ವಿವರಿಸಲು ಉಪಮೆಗಳನ್ನು ಬಳಸಲಾಗಿದೆ.

ಇಮಾಮ್ ಖುರ್ತುಬಿ ಹೇಳುತ್ತಾರೆ: "ಹೀಗೆ ಕೇಳಬಹುದು: ಅವರು ಯುವಕರಾಗಿದ್ದು ಅವರ ಕೂದಲು ಕೊಳೆಯಾಗುವುದಿಲ್ಲ ಎಂದಾದರೆ, ಅವರಿಗೆ ಬಾಚಣಿಗೆಯ ಅಗತ್ಯವೇನಿದೆ? ಅವರ ಸುವಾಸನೆಯು ಕಸ್ತೂರಿಗಿಂತ ಉತ್ತಮವಾಗಿರುವಾಗ ಅವರಿಗೆ ಧೂಪದ ಅಗತ್ಯವೇನಿದೆ? ಅದಕ್ಕೆ ಉತ್ತರವಾಗಿ ಹೇಳಲಾಗುತ್ತದೆ: ಸ್ವರ್ಗವಾಸಿಗಳ ಅನುಗ್ರಹಗಳಾದ ಆಹಾರ, ಪಾನೀಯ, ಉಡುಪು ಮತ್ತು ಸುವಾಸನೆಗಳು ಹಸಿವು, ಬಾಯಾರಿಕೆ, ನಗ್ನತೆ ಅಥವಾ ದುರ್ವಾಸನೆಯ ನೋವಿನಿಂದಾಗಿ ದೊರೆಯುಂತದ್ದಲ್ಲ. ಬದಲಿಗೆ, ಅವು ನಿರಂತರವಾದ ಆನಂದಗಳು ಮತ್ತು ಕೊನೆಯಿಲ್ಲದ ಅನುಗ್ರಹಗಳಾಗಿವೆ. ಇದರ ಹಿಂದಿನ ತತ್ವವೆಂದರೆ, ಅವರು ಈ ಜಗತ್ತಿನಲ್ಲಿ ಯಾವ ರೀತಿಯ ಆನಂದಗಳನ್ನು ಅನುಭವಿಸುತ್ತಿದ್ದರೋ, ಅದೇ ರೀತಿಯ ಆನಂದಗಳನ್ನು (ಪರಿಪೂರ್ಣ ರೂಪದಲ್ಲಿ) ಅಲ್ಲಿಯೂ ಅನುಭವಿಸುತ್ತಾರೆ."

التصنيفات

ಅಂತ್ಯದಿನದಲ್ಲಿ ವಿಶ್ವಾಸವಿಡುವುದು, ಪಾರಾತ್ರಿಕ ಜೀವನ, ಸ್ವರ್ಗ ಮತ್ತು ನರಕದ ಗುಣಲಕ್ಷಣಗಳು