ಒಬ್ಬ ಪುರುಷನು ಇನ್ನೊಬ್ಬ ಪುರುಷನ ಖಾಸಗಿ ಭಾಗಗಳನ್ನು ಮತ್ತು ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಖಾಸಗಿ ಭಾಗಗಳನ್ನು ನೋಡಬಾರದು

ಒಬ್ಬ ಪುರುಷನು ಇನ್ನೊಬ್ಬ ಪುರುಷನ ಖಾಸಗಿ ಭಾಗಗಳನ್ನು ಮತ್ತು ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಖಾಸಗಿ ಭಾಗಗಳನ್ನು ನೋಡಬಾರದು

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಪುರುಷನು ಇನ್ನೊಬ್ಬ ಪುರುಷನ ಖಾಸಗಿ ಭಾಗಗಳನ್ನು ಮತ್ತು ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಖಾಸಗಿ ಭಾಗಗಳನ್ನು ನೋಡಬಾರದು. ಒಬ್ಬ ಪುರುಷನು ಇನ್ನೊಬ್ಬ ಪುರುಷನ ಜೊತೆಗೆ ಒಂದೇ ಬಟ್ಟೆಯಲ್ಲಿ ಮಲಗಬಾರದು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಜೊತೆಗೆ ಒಂದೇ ಬಟ್ಟೆಯಲ್ಲಿ ಮಲಗಬಾರದು."

[صحيح] [رواه مسلم]

الشرح

ಒಬ್ಬ ಪುರುಷನು ಇನ್ನೊಬ್ಬ ಪುರುಷನ ಖಾಸಗಿ ಭಾಗಗಳನ್ನು ಮತ್ತು ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಖಾಸಗಿ ಭಾಗಗಳನ್ನು ನೋಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಖಾಸಗಿ ಭಾಗಗಳು ಎಂದರೆ, ಬಹಿರಂಗಗೊಳಿಸಲು ನಾಚಿಕೆಪಡುವ ದೇಹದ ಭಾಗಗಳು. ಪುರುಷನ ಖಾಸಗಿ ಭಾಗಗಳು ಎಂದರೆ ಹೊಕ್ಕುಳ ಮತ್ತು ಮೊಣಕಾಲುಗಳ ನಡುವಿನ ಭಾಗ. ಅನ್ಯ ಪುರುಷರ ಮುಂಭಾಗದಲ್ಲಿ ಮಹಿಳೆಯ ಸಂಪೂರ್ಣ ದೇಹವು ಖಾಸಗಿ ಭಾಗವಾಗಿದೆ. ಆದರೆ ವಿವಾಹ ನಿಷಿದ್ಧರಾದ ಪುರುಷರ (ಮಹ್ರಮ್‌ಗಳ) ಮುಂದೆ ಅವರು ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡುವಾಗ ಬಹಿರಂಗವಾಗುವ ಭಾಗಗಳನ್ನು ಬಹಿರಂಗಪಡಿಸಬಹುದು. ಒಬ್ಬ ಪುರುಷ ಇನ್ನೊಬ್ಬ ಪುರುಷನೊಂದಿಗೆ ಒಂದೇ ಬಟ್ಟೆಯಲ್ಲಿ ಅಥವಾ ಒಂದೇ ಕಂಬಳಿಯೊಳಗೆ ನಗ್ನರಾಗಿ ಮಲಗುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಅದೇ ರೀತಿ, ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯೊಂದಿಗೆ ಒಂದೇ ಬಟ್ಟೆಯಲ್ಲಿ ಅಥವಾ ಒಂದೇ ಕಂಬಳಿಯೊಳಗೆ ನಗ್ನರಾಗಿ ಮಲಗುವುದನ್ನೂ ನಿಷೇಧಿಸಿದ್ದಾರೆ. ಏಕೆಂದರೆ, ಇದರಿಂದ ಒಬ್ಬರು ಇನ್ನೊಬ್ಬರ ಖಾಸಗಿ ಭಾಗವನ್ನು ಸ್ಪರ್ಶಿಸಲು ಕಾರಣವಾಗಬಹುದು. ಖಾಸಗಿ ಭಾಗಗಳನ್ನು ನೋಡಬಾರದು ಎಂಬಂತೆ ಸ್ಪರ್ಶಿಸುವುದೂ ನಿಷಿದ್ಧವಾಗಿದೆ. ಮಾತ್ರವಲ್ಲ, ನಿಷೇಧದಲ್ಲಿ ಇದು ಅದಕ್ಕಿಂತಲೂ ತೀವ್ರವಾಗಿದೆ. ಏಕೆಂದರೆ, ಇದು ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಯಿದೆ.

فوائد الحديث

ಇತರರ ಖಾಸಗಿ ಭಾಗಗಳನ್ನು ನೋಡುವುದು ನಿಷಿದ್ಧವಾಗಿದೆ. ಆದರೆ ಪತಿ-ಪತ್ನಿಯರು ಇದಕ್ಕೆ ಹೊರತಾಗಿದ್ದಾರೆ.

ಸಮಾಜವು ಶುದ್ಧವಾಗಿರಲು ಮತ್ತು ಅಶ್ಲೀಲತೆಗೆ ಕಾರಣವಾಗುವ ಮಾರ್ಗಗಳನ್ನು ಮುಚ್ಚಿಬಿಡಲು ಇಸ್ಲಾಂ ಧರ್ಮವು ಅತೀವ ಆಸಕ್ತಿ ತೋರಿದೆ.

ವೈದ್ಯಕೀಯ ಚಿಕಿತ್ಸೆ ಮುಂತಾದ ಅಗತ್ಯ ಸಂದರ್ಭಗಳಲ್ಲಿ ಇನ್ನೊಬ್ಬರ ಖಾಸಗಿ ಭಾಗಗಳನ್ನು ನೋಡಲು ಅನುಮತಿಯಿದೆ. ಆದರೆ, ನೋಡುವುದು ಕಾಮಾಸಕ್ತಿಯಿಂದಾಗಿರಬಾರದು.

ತನ್ನ ಖಾಸಗಿ ಭಾಗಗಳನ್ನು ಮುಚ್ಚಬೇಕು ಮತ್ತು ಇತರರ ಖಾಸಗಿ ಭಾಗಗಳನ್ನು ನೋಡದೆ ದೃಷ್ಟಿಯನ್ನು ತಗ್ಗಿಸಬೇಕು ಎಂದು ಮುಸಲ್ಮಾನನಿಗೆ ಆದೇಶಿಸಲಾಗಿದೆ.

ಪುರುಷರಿಗೆ ಪುರುಷರ ವಿಷಯದಲ್ಲಿ ಮತ್ತು ಮಹಿಳೆಯರಿಗೆ ಮಹಿಳೆಯರ ವಿಷಯದಲ್ಲಿ ನಿಷೇಧ ಹೇರಲಾಗಿರುವುದು ಏಕೆಂದರೆ, ಅದು ನೋಡುವಂತಾಗಲು ಮತ್ತು ಖಾಸಗಿ ಭಾಗಗಳು ಬಹಿರಂಗವಾಗಲು ಹೆಚ್ಚು ಸಾಧ್ಯತೆಯಿರುವ ಕಾರಣದಿಂದಾಗಿದೆ.

التصنيفات

Blameworthy Morals, Manners of Dressing