ಯಾರು ಅಝಾನ್ ಕೇಳಿದಾಗ, 'ಓ ಅಲ್ಲಾಹ್, ಈ ಪರಿಪೂರ್ಣ ಕರೆಯ ಮತ್ತು ಸಂಸ್ಥಾಪಿಸಲಾದ ನಮಾಝ್‌ನ ಪರಿಪಾಲಕನೇ, ಮುಹಮ್ಮದ್‌ರಿಗೆ ವಸೀಲ…

ಯಾರು ಅಝಾನ್ ಕೇಳಿದಾಗ, 'ಓ ಅಲ್ಲಾಹ್, ಈ ಪರಿಪೂರ್ಣ ಕರೆಯ ಮತ್ತು ಸಂಸ್ಥಾಪಿಸಲಾದ ನಮಾಝ್‌ನ ಪರಿಪಾಲಕನೇ, ಮುಹಮ್ಮದ್‌ರಿಗೆ ವಸೀಲ (ಸ್ವರ್ಗದಲ್ಲಿ ಒಂದು ಉನ್ನತ ಸ್ಥಾನ) ಮತ್ತು ಫಝೀಲ (ಘನತೆ) ವನ್ನು ನೀಡು. ನೀನು ಅವರಿಗೆ ಭರವಸೆ ನೀಡಿದ ಸ್ತುತ್ಯರ್ಹ ಸ್ಥಾನಕ್ಕೆ (ಮಕಾಮೆ ಮಹ್ಮೂದ್) ಅವರನ್ನು ಕಳುಹಿಸು' ಎಂದು ಪ್ರಾರ್ಥಿಸುತ್ತಾರೋ, ಅವರಿಗೆ ಪುನರುತ್ಥಾನ ದಿನದಂದು ನನ್ನ ಶಿಫಾರಸ್ಸು (ಶಫಾಅತ್) ಖಚಿತವಾಗಿ ದೊರೆಯುತ್ತದೆ

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಝಾನ್ ಕೇಳಿದಾಗ, 'ಓ ಅಲ್ಲಾಹ್, ಈ ಪರಿಪೂರ್ಣ ಕರೆಯ ಮತ್ತು ಸಂಸ್ಥಾಪಿಸಲಾದ ನಮಾಝ್‌ನ ಪರಿಪಾಲಕನೇ, ಮುಹಮ್ಮದ್‌ರಿಗೆ ವಸೀಲ (ಸ್ವರ್ಗದಲ್ಲಿ ಒಂದು ಉನ್ನತ ಸ್ಥಾನ) ಮತ್ತು ಫಝೀಲ (ಘನತೆ) ವನ್ನು ನೀಡು. ನೀನು ಅವರಿಗೆ ಭರವಸೆ ನೀಡಿದ ಸ್ತುತ್ಯರ್ಹ ಸ್ಥಾನಕ್ಕೆ (ಮಕಾಮೆ ಮಹ್ಮೂದ್) ಅವರನ್ನು ಕಳುಹಿಸು' ಎಂದು ಪ್ರಾರ್ಥಿಸುತ್ತಾರೋ, ಅವರಿಗೆ ಪುನರುತ್ಥಾನ ದಿನದಂದು ನನ್ನ ಶಿಫಾರಸ್ಸು (ಶಫಾಅತ್) ಖಚಿತವಾಗಿ ದೊರೆಯುತ್ತದೆ."

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಮುಅಝ್ಝಿನ್‌ನ ಅಝಾನ್ ಕೇಳಿ, ಆ ಅಝಾನ್ ಮುಗಿದ ಬಳಿಕ ಈ ರೀತಿ ಹೇಳುತ್ತಾನೋ: "ಓ ಅಲ್ಲಾಹ್! ಈ ಕರೆಯ ಮತ್ತು ಸಂಸ್ಥಾಪಿಸಲಾದ ನಮಾಝ್‌ನ ಪರಿಪಾಲಕನೇ!" ಕರೆ ಎಂದರೆ ಅಲ್ಲಾಹನ ಆರಾಧನೆಯ ಕಡೆಗೆ ಮತ್ತು ನಮಾಝ್‌ನ ಕಡೆಗೆ ಕರೆಯಲಾಗುವ ಅಝಾನ್‌ನ ಪದಗಳು. "ಪರಿಪೂರ್ಣವಾದ" ಅಂದರೆ ಏಕದೇವತ್ವ ಮತ್ತು ಪ್ರವಾದಿತ್ವದ ಕರೆ. "ಸಂಸ್ಥಾಪಿಸಲಾದ ನಮಾಝ್" ಅಂದರೆ ಈಗ ಸಂಸ್ಥಾಪಿಸಲ್ಪಡುವ ನಮಾಝ್. "ನೀಡು" ಅಂದರೆ ಕೊಡು. "ಮುಹಮ್ಮದ್‌ರಿಗೆ ವಸೀಲವನ್ನು" ಅಂದರೆ, ಸ್ವರ್ಗದ ಪರಮೋನ್ನತ ಸ್ಥಾನವನ್ನು. ಇದು ಪ್ರವಾದಿಯವರಿಗಲ್ಲದೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇನ್ನಾರಿಗೂ ಯೋಗ್ಯವಲ್ಲದ ಸ್ಥಾನವಾಗಿದೆ. "ಮತ್ತು ಫಝೀಲವನ್ನು" ಅಂದರೆ ಸೃಷ್ಟಿಗಳ ಸ್ಥಾನಮಾನಕ್ಕಿಂತ ಹೆಚ್ಚುವರಿ ಸ್ಥಾನಮಾನವನ್ನು. "ಅವರನ್ನು ಕಳುಹಿಸು" ಅಂದರೆ ಅವರಿಗೆ ದಯಪಾಲಿಸು. "ಸ್ತುತ್ಯರ್ಹ ಸ್ಥಾನಕ್ಕೆ" ಅಂದರೆ, ಆ ಸ್ಥಾನದಲ್ಲಿ ನಿಂತವರು ಪ್ರಶಂಸಿಸಲ್ಪಡುತ್ತಾರೆ. ಅದು ಪುನರುತ್ಥಾನ ದಿನದಂದು ದೊರೆಯುವ ಮಹಾ ಶಿಫಾರಸ್ಸು ಆಗಿದೆ. "ನೀನು ಅವರಿಗೆ ವಾಗ್ದಾನ ಮಾಡಿದ." ಅಂದರೆ ಈ ವಚನದ ಮೂಲಕ: "ನಿಮ್ಮ ಪರಿಪಾಲಕನು ನಿಮ್ಮನ್ನು ಸ್ತುತ್ಯರ್ಹ ಸ್ಥಾನಕ್ಕೆ ಕಳುಹಿಸಲೂ ಬಹುದು." ಇದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇರುವ ಸ್ಥಾನಮಾನವಾಗಿದೆ. ಯಾರು ಈ ಪ್ರಾರ್ಥನೆಯನ್ನು ಮಾಡುತ್ತಾರೋ ಅವರು ಪುನರುತ್ಥಾನ ದಿನದಂದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಿಫಾರಸ್ಸಿಗೆ ಅರ್ಹರಾಗುತ್ತಾರೆ ಮತ್ತು ಅದು ಅವರಿಗೆ ಕಡ್ಡಾಯವಾಗುತ್ತದೆ.

فوائد الحديث

ಮುಅಝ್ಝಿನ್‌ ಅಝಾನ್ ನೀಡುವಾಗ ಅದನ್ನು ಪುನರಾವರ್ತಿಸಿದ ಬಳಿಕ ಈ ಪ್ರಾರ್ಥನೆಯನ್ನು ಮಾಡಬೇಕೆಂದು ಶರಿಯತ್‌ನಲ್ಲಿ ನಿರ್ದೇಶನವಿದೆ. ಯಾರಿಗೆ ಅಝಾನ್ ಕೇಳಿಲ್ಲವೋ ಅವರು ಇದನ್ನು ಹೇಳಬೇಕಾಗಿಲ್ಲ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ, ಅವರಿಗೆ ವಸೀಲಾ, ಫಝೀಲಾ, ಮಕಾಮೆ ಮಹಮೂದ್ ಮತ್ತು ಸೃಷ್ಟಿಗಳ ನಡುವೆ ತೀರ್ಪು ನೀಡುವ ದಿನದಂದು ಮಹಾ ಶಿಫಾರಸ್ಸು ಮಾಡುವ ಅಧಿಕಾರವನ್ನು ನೀಡಲಾಗಿದೆ.

ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಿಫಾರಸ್ಸು ಮಾಡುವ ಅಧಿಕಾರವಿದೆಯೆಂದು ದೃಢೀಕರಿಸಲಾಗಿದೆ. ಏಕೆಂದರೆ ಅವರು ಹೇಳುತ್ತಾರೆ: "ಅವನಿಗೆ ಪುನರುತ್ಥಾನ ದಿನ ನನ್ನ ಶಿಫಾರಸ್ಸು ಖಚಿತವಾಗಿ ದೊರೆಯುತ್ತದೆ."

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಿಫಾರಸ್ಸು ಅವರ ಸಮುದಾಯದಲ್ಲಿ ಮಹಾಪಾಪ ಮಾಡಿದವರಿಗೆ ನರಕವನ್ನು ಪ್ರವೇಶಿಸದಿರಲು ಅಥವಾ ಪ್ರವೇಶಿಸಿದ್ದರೆ ಅದರಿಂದ ಹೊರತರಲು, ಅಥವಾ ಯಾವುದೇ ವಿಚಾರಣೆಯಿಲ್ಲದೆ ಸ್ವರ್ಗವನ್ನು ಪ್ರವೇಶಿಸಲು, ಅಥವಾ ಸ್ವರ್ಗವನ್ನು ಪ್ರವೇಶಿಸಿದವರಿಗೆ ಅವರ ಸ್ಥಾನಗಳನ್ನು ಹೆಚ್ಚಿಸಲು ಇರುವುದಾಗಿದೆ.

ತೀಬಿ ಹೇಳಿದರು: "ಅಝಾನ್‌ನ ಆರಂಭದಿಂದ 'ಮುಹಮ್ಮದುನ್ ರಸೂಲುಲ್ಲಾಹ್' ಎಂಬಲ್ಲಿಯ ತನಕ ಅದು ಪರಿಪೂರ್ಣ ಕರೆಯಾಗಿದೆ. 'ಹಯ್ಯ ಅಲಸ್ಸಲಾ' ಎಂಬುದು "ಅವರು ನಮಾಝ್ ಸಂಸ್ಥಾಪಿಸುತ್ತಾರೆ" ಎಂಬ ಅಲ್ಲಾಹನ ವಚನದಲ್ಲಿ ದೃಢೀಕರಣಗೊಂಡ ನಮಾಝ್ ಆಗಿದೆ. "ನಮಾಝ್" ಎಂದರೆ ಪ್ರಾರ್ಥನೆ ಮತ್ತು "ಸಂಸ್ಥಾಪಿಸಲಾದ" ಎಂದರೆ ಒಬ್ಬ ವ್ಯಕ್ತಿ ಯಾವುದನ್ನಾದರೂ ಶಾಶ್ವತವಾಗಿ ಮಾಡುವುದು ಎಂದು ಅರ್ಥಮಾಡಿಕೊಳ್ಳಬಹುದು. ಇದರ ಆಧಾರದ ಮೇಲೆ "ಮತ್ತು ಸಂಸ್ಥಾಪಿಸಲಾದ ನಮಾಝ್" ಎಂಬ ವಾಕ್ಯವು "ಪರಿಪೂರ್ಣವಾದ ಕರೆ"ಯ ವಿವರಣೆಯಾಗಿದೆ. ಅದೇ ರೀತಿ ಅದು ಆ ನಿರ್ದಿಷ್ಟವಾಗಿ ಕರೆಯಲಾಗುವ ನಮಾಝ್ ಎಂದು ಅರ್ಥಮಾಡಿಕೊಳ್ಳಬಹುದು. ಇದು ಹೆಚ್ಚು ಸ್ಪಷ್ಟವಾಗಿದೆ.

ಮುಹಲ್ಲಬ್ ಹೇಳಿದರು: "ನಮಾಝ್‌ನ ಸಮಯಗಳಲ್ಲಿ ಪ್ರಾರ್ಥನೆ ಮಾಡಲು ಈ ಹದೀಸಿನಲ್ಲಿ ಪ್ರೋತ್ಸಾಹವಿದೆ. ಏಕೆಂದರೆ ಅದು ಉತ್ತರದ ನಿರೀಕ್ಷೆಯಿರುವ ಸಮಯವಾಗಿದೆ."

التصنيفات

The Hereafter Life, The Azan and Iqaamah