ಯಾರು ಪುನರುತ್ಥಾನ ದಿನದ ಕಷ್ಟಗಳಿಂದ ಅಲ್ಲಾಹು ತನ್ನನ್ನು ರಕ್ಷಿಸಬೇಕೆಂದು ಬಯಸುತ್ತಾನೋ, ಅವನು ಕಷ್ಟದಲ್ಲಿರುವವನಿಗೆ ಸಹಾಯ ಮಾಡಲಿ…

ಯಾರು ಪುನರುತ್ಥಾನ ದಿನದ ಕಷ್ಟಗಳಿಂದ ಅಲ್ಲಾಹು ತನ್ನನ್ನು ರಕ್ಷಿಸಬೇಕೆಂದು ಬಯಸುತ್ತಾನೋ, ಅವನು ಕಷ್ಟದಲ್ಲಿರುವವನಿಗೆ ಸಹಾಯ ಮಾಡಲಿ ಅಥವಾ ಅವನ ಸಾಲವನ್ನು ಮನ್ನಾ ಮಾಡಲಿ

ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಒಂದು ಸಲ ತಮ್ಮ ಸಾಲಗಾರನನ್ನು ಹುಡುಕುತ್ತಾ ಹೋದರು. ಆದರೆ ಆತ ತಪ್ಪಿಸಿಕೊಳ್ಳುತ್ತಿದ್ದ. ನಂತರ ಆತ ಇವರ ಕಣ್ಣಿಗೆ ಬಿದ್ದ. ಆತ ಹೇಳಿದ: "ನಾನು ಕಷ್ಟದಲ್ಲಿದ್ದೇನೆ." ಅಬೂ ಕತಾದ ಕೇಳಿದರು: "ಅಲ್ಲಾಹನಾಣೆಗೂ?" ಆತ ಉತ್ತರಿಸಿದ: "ಅಲ್ಲಾಹನಾಣೆಗೂ." ಅಬೂ ಕತಾದ ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಪುನರುತ್ಥಾನ ದಿನದ ಕಷ್ಟಗಳಿಂದ ಅಲ್ಲಾಹು ತನ್ನನ್ನು ರಕ್ಷಿಸಬೇಕೆಂದು ಬಯಸುತ್ತಾನೋ, ಅವನು ಕಷ್ಟದಲ್ಲಿರುವವನಿಗೆ ಸಹಾಯ ಮಾಡಲಿ ಅಥವಾ ಅವನ ಸಾಲವನ್ನು ಮನ್ನಾ ಮಾಡಲಿ."

[صحيح] [رواه مسلم]

الشرح

ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಸಾಲಗಾರನನ್ನು ಹುಡುಕುತ್ತಿದ್ದರು. ಆದರೆ ಆತ ಅವರಿಗೆ ಸಿಗದಂತೆ ಅಡಗಿಕೊಳ್ಳುತ್ತಿದ್ದ. ಒಮ್ಮೆ ಅವರು ಆತನನ್ನು ಕಂಡುಹಿಡಿದರು. ಆಗ ಸಾಲಗಾರ ಹೇಳಿದ: ನಾನು ಕಷ್ಟದಲ್ಲಿದ್ದೇನೆ. ನಿಮ್ಮ ಸಾಲವನ್ನು ಮರುಪಾವತಿಸಲು ನನ್ನ ಬಳಿ ಹಣವಿಲ್ಲ. ಆಗ ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವನ ಬಳಿ ನಿಜವಾಗಿಯೂ ಹಣವಿಲ್ಲ ಎಂದು ಅಲ್ಲಾಹನ ಹೆಸರಿನಲ್ಲಿ ಪ್ರಮಾಣ ಮಾಡಿಸಿದರು. ಆಗ ಅವನು ತಾನು ಹೇಳುತ್ತಿರುವುದು ಸತ್ಯವೆಂದು ಅಲ್ಲಾಹನ ಮೇಲೆ ಪ್ರಮಾಣ ಮಾಡಿದನು. ಆಗ ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಯಾರು ಪುನರುತ್ಥಾನ ದಿನದ ಸಂಕಟಗಳು, ತೊಂದರೆಗಳು ಮತ್ತು ಭಯಾನಕತೆಗಳಿಂದ ಅಲ್ಲಾಹು ತನ್ನನ್ನು ರಕ್ಷಿಸಬೇಕೆಂದು ಬಯಸುತ್ತಾನೋ, ಅವನು ಕಷ್ಟದಲ್ಲಿರುವವನಿಗೆ ಸಹಾಯ ಮಾಡಲಿ. ಅಂದರೆ ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಲಿ ಅಥವಾ ವಿಳಂಬ ಮಾಡಲಿ. ಅಥವಾ ಸಾಲದ ಒಂದಂಶವನ್ನು ಅಥವಾ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಿ.

فوائد الحديث

ಕಷ್ಟದಲ್ಲಿರುವವರಿಗೆ ನಿರಾಳವಾಗುವ ತನಕ ಸಮಯಾವಕಾಶ ನೀಡುವುದು ಅಥವಾ ಸಂಪೂರ್ಣ ಸಾಲವನ್ನು ಅಥವಾ ಅದರ ಒಂದಂಶವನ್ನು ಮನ್ನಾ ಮಾಡುವುದು ಅಪೇಕ್ಷಣೀಯವಾಗಿದೆ.

ಒಬ್ಬ ಸತ್ಯವಿಶ್ವಾಸಿಯ ಐಹಿಕ ತೊಂದರೆಗಳಲ್ಲಿ ಒಂದು ತೊಂದರೆಯನ್ನು ಯಾರಾದರೂ ದೂರೀಕರಿಸಿದರೆ ಅವನ ತೊಂದರೆಗಳಲ್ಲಿ ಒಂದು ತೊಂದರೆಯನ್ನು ಅಲ್ಲಾಹು ದೂರೀಕರಿಸುವನು. ಪ್ರತಿಫಲವು ಕರ್ಮಕ್ಕೆ ಅನುಗುಣವಾಗಿರುತ್ತದೆ.

ಮೂಲತತ್ವ: ಐಚ್ಛಿಕ ಕರ್ಮಗಳಿಗಿಂತ ಕಡ್ಡಾಯ ಕರ್ಮಗಳು ಶ್ರೇಷ್ಠವಾಗಿವೆ. ಆದರೆ ಕೆಲವೊಮ್ಮೆ ಐಚ್ಛಿಕ ಕರ್ಮಗಳು ಕಡ್ಡಾಯ ಕರ್ಮಗಳಿಗಿಂತ ಶ್ರೇಷ್ಠವಾಗುತ್ತವೆ. ಕಷ್ಟದಲ್ಲಿರುವವರ ಸಾಲವನ್ನು ಮನ್ನಾ ಮಾಡುವುದು ಐಚ್ಛಿಕ ಕರ್ಮವಾಗಿದೆ. ಸಾಲ ಮರುಪಾವತಿಯಾಗುವ ತನಕ ತಾಳ್ಮೆ ವಹಿಸುವುದು, ಕಾಯುವುದು ಮತ್ತು ಸಾಲವನ್ನು ಮರುಪಾವತಿಸಲು ಒತ್ತಾಯಿಸದಿರುವುದು ಕಡ್ಡಾಯ ಕರ್ಮಗಳಾಗಿವೆ. ಇಲ್ಲಿ ಐಚ್ಛಿಕ ಕರ್ಮವು ಕಡ್ಡಾಯ ಕರ್ಮಕ್ಕಿಂತ ಶ್ರೇಷ್ಠವಾಗಿದೆ.

ಈ ಹದೀಸ್ ಕಷ್ಟದಲ್ಲಿರುವವರ ಪರವಾಗಿದೆ. ಏಕೆಂದರೆ ಅವರಿಗೆ ಕ್ಷಮೆಯಿದೆ. ಆದರೆ ಹಣವಿದ್ದೂ ವಿಳಂಬ ಮಾಡುವವರ ಬಗ್ಗೆ ಹೇಳುವುದಾದರೆ, ಅವರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳಿದ್ದಾರೆ: "ಸಂಪನ್ನನ ವಿಳಂಬವು ಅಕ್ರಮವಾಗಿದೆ."

التصنيفات

Loan