“ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ.…

“ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ

ಅಬೂ ಮಾಲಿಕ್ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ. ನಮಾಝ್ ಬೆಳಕಾಗಿದೆ, ದಾನವು ಪುರಾವೆಯಾಗಿದೆ, ತಾಳ್ಮೆಯು ಪ್ರಕಾಶವಾಗಿದೆ, ಮತ್ತು ಕುರ್‌ಆನ್ ನಿನ್ನ ಪರವಾಗಿ ಅಥವಾ ನಿನಗೆ ವಿರುದ್ಧವಾಗಿರುವ ಪುರಾವೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಬೆಳಗಾಗುತ್ತಲೇ ತನ್ನ ಆತ್ಮವನ್ನು ಮಾರಾಟ ಮಾಡುತ್ತಾನೆ. ನಂತರ ಅವನು ಅದನ್ನು ಸ್ವತಂತ್ರಗೊಳಿಸುತ್ತಾನೆ ಅಥವಾ ನಾಶಗೊಳಿಸುತ್ತಾನೆ."

[صحيح] [رواه مسلم]

الشرح

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ: ವುದೂ (ಅಂಗಸ್ನಾನ) ಮತ್ತು ಸ್ನಾನದಿಂದ ಬಾಹ್ಯ ಶುದ್ಧೀಕರಣ ಉಂಟಾಗುತ್ತದೆ. ಇದು ನಮಾಝ್ ಸಿಂಧುವಾಗಲು ಷರತ್ತಾಗಿದೆ. 'ಅಲ್-ಹಮ್ದುಲಿಲ್ಲಾಹ್' ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. 'ಅಲ್-ಹಮ್ದುಲಿಲ್ಲಾಹ್' ಅಲ್ಲಾಹನ ಪ್ರಶಂಸೆ ಮತ್ತು ಅವನ ಸಂಪೂರ್ಣ ಗುಣಲಕ್ಷಣಗಳ ವರ್ಣನೆಯಾಗಿದೆ. ಪರಲೋಕದಲ್ಲಿ ಅದನ್ನು ತೂಗುವಾಗ ಅದು ಕರ್ಮಗಳ ತಕ್ಕಡಿಯನ್ನು ತುಂಬುತ್ತದೆ. 'ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್' ಎಂಬ ವಚನವು ಅಲ್ಲಾಹನನ್ನು ಯಾವುದೇ ಕುಂದು ಕೊರತೆಗಳಿಲ್ಲದ ಪರಿಶುದ್ಧನೆಂದು ಪ್ರಶಂಸಿಸುವುದು ಮತ್ತು ಅವನಲ್ಲಿರುವ ಪ್ರೀತಿ ಗೌರವಗಳ ಸಹಿತ, ಅವನಿಗೆ ಹೊಂದಿಕೆಯಾಗುವಂತೆ ಸಂಪೂರ್ಣತೆಯ ಗುಣಲಕ್ಷಣಗಳಿಂದ ಅವನನ್ನು ವರ್ಣಿಸುವುದಾಗಿದೆ. ಇದು ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತದೆ. ನಮಾಝ್ ಮನುಷ್ಯನ ಹೃದಯದಲ್ಲಿ, ಮುಖದಲ್ಲಿ ಮತ್ತು ಸಮಾಧಿಯಲ್ಲಿ ಹಾಗೆಯೇ ಪರಲೋಕದಲ್ಲಿ ಅವನನ್ನು ಒಟ್ಟುಗೂಡಿಸುವಾಗ ಅವನಲ್ಲುಂಟಾಗುವ ಬೆಳಕಾಗಿದೆ. ದಾನವು ಪುರಾವೆಯಾಗಿದೆ. ಅದು ಸತ್ಯವಿಶ್ವಾಸಿಯ ವಿಶ್ವಾಸವು ಸತ್ಯವೆಂಬುದಕ್ಕೆ ಪುರಾವೆಯಾಗಿದೆ. ಅದು ಸತ್ಯವಿಶ್ವಾಸಿಯನ್ನು ಕಪಟ ವಿಶ್ವಾಸಿಯಿಂದ ಬೇರ್ಪಡಿಸುತ್ತದೆ. ಏಕೆಂದರೆ ಕಪಟವಿಶ್ವಾಸಿ ದಾನ ಮಾಡುವುದಿಲ್ಲ ಮತ್ತು ಅದರ ಪ್ರತಿಫಲದಲ್ಲಿ ಅವನಿಗೆ ನಂಬಿಕೆಯಿರುವುದಿಲ್ಲ. ತಾಳ್ಮೆಯು ಪ್ರಕಾಶವಾಗಿದೆ. ತಾಳ್ಮೆ ಎಂದರೆ ಮನಸ್ಸನ್ನು ಕೆದಡದಂತೆ ಮತ್ತು ಕೋಪಗೊಳ್ಳದಂತೆ ನಿಯಂತ್ರಿಸುವುದು. ತಾಳ್ಮೆಯು ಸೂರ್ಯ ಪ್ರಕಾಶದಂತೆ ಶಾಖ ಮತ್ತು ಸುಡುವ ಗುಣವನ್ನು ಹೊಂದಿದೆ. ತಾಳ್ಮೆಯಿಂದಿರುವುದು ಬಹಳ ಕಷ್ಟ. ಅದಕ್ಕೆ ಆತ್ಮಪರಿಶ್ರಮ ಮತ್ತು ಆತ್ಮವನ್ನು ಮೋಹಗಳಿಂದ ನಿಯಂತ್ರಿಸಬೇಕಾದ ಅಗತ್ಯವಿದೆ. ತಾಳ್ಮೆಯನ್ನು ಮೈಗೂಡಿಸಿಕೊಂಡ ವ್ಯಕ್ತಿಯಲ್ಲಿ ಪ್ರಭೆಯಿರುತ್ತದೆ, ಅವನು ಸನ್ಮಾರ್ಗದಲ್ಲಿ ಮತ್ತು ಸರಿಯಾದ ಮಾರ್ಗದಲ್ಲಿರುತ್ತಾನೆ. ತಾಳ್ಮೆಯಲ್ಲಿ ಮೂರು ವಿಧಗಳಿವೆ: ಅಲ್ಲಾಹನ ಆಜ್ಞೆಗಳನ್ನು ಪಾಲಿಸುವಾಗ ತಾಳ್ಮೆ ವಹಿಸುವುದು, ಅವನು ವಿರೋಧಿಸಿದ ಕಾರ್ಯಗಳಿಂದ ದೂರವಾಗುವಾಗ ತಾಳ್ಮೆ ವಹಿಸುವುದು, ಮತ್ತು ಇಹಲೋಕದಲ್ಲಿ ಕಷ್ಟಗಳು ಮತ್ತು ವಿಪತ್ತುಗಳು ಎದುರಾಗುವಾಗ ತಾಳ್ಮೆ ವಹಿಸುವುದು. ನೀನು ಕುರ್‌ಆನನ್ನು ಪಠಿಸಿ, ಅದರಂತೆ ನಡೆದರೆ ಅದು ನಿನ್ನ ಪರವಾಗಿ ಸಾಕ್ಷಿ ಹೇಳುತ್ತದೆ. ಆದರೆ, ನೀನು ಅದನ್ನು ಪಠಿಸದೆ, ಅದರಂತೆ ನಡೆಯದಿದ್ದರೆ ಅದು ನಿನಗೆ ವಿರುದ್ಧವಾಗಿ ಸಾಕ್ಷಿ ಹೇಳುತ್ತದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದೇನೆಂದರೆ, ಮನುಷ್ಯರೆಲ್ಲರೂ ಬೆಳಗ್ಗೆ ಹಾಸಿಗೆಯಿಂದ ಎದ್ದು ತಮ್ಮ ಜೀವನೋಪಾಯವನ್ನು ಹುಡುಕುತ್ತಾ ವಿವಿಧ ಕೆಲಸ ಮತ್ತು ಉದ್ಯೋಗಗಳಿಗಾಗಿ ಮನೆಯಿಂದ ಹೊರಟು ಹೋಗುತ್ತಾರೆ. ಅವರಲ್ಲಿ ಅಲ್ಲಾಹನ ಆಜ್ಞಾಪಾಲನೆ ಮಾಡುತ್ತಾ ನೇರ ಮಾರ್ಗದಲ್ಲಿದ್ದು ತಮ್ಮ ಆತ್ಮವನ್ನು ನರಕದಿಂದ ಮುಕ್ತಿಗೊಳಿಸುವವರಿದ್ದಾರೆ. ಹಾಗೆಯೇ ಸನ್ಮಾರ್ಗದಿಂದ ತಪ್ಪಿ ಅಲ್ಲಾಹನ ಆಜ್ಞೆಗಳನ್ನು ಉಲ್ಲಂಘಿಸುತ್ತಾ ತಮ್ಮ ಆತ್ಮವನ್ನು ನಾಶಗೊಳಿಸಿ ನರಕ ಸೇರುವವರೂ ಇದ್ದಾರೆ.

فوائد الحديث

ಶುದ್ಧೀಕರಣದಲ್ಲಿ ಎರಡು ವಿಧಗಳಿವೆ: ಒಂದು, ಬಾಹ್ಯ ಶುದ್ಧೀಕರಣ. ಇದು ವುದೂ (ಅಂಗಸ್ನಾನ) ಮತ್ತು ಸ್ನಾನದಿಂದ ಉಂಟಾಗುತ್ತದೆ. ಇನ್ನೊಂದು ಆಂತರಿಕ ಶುದ್ಧೀಕರಣ. ಇದು ಏಕದೇವ ವಿಶ್ವಾಸ, ಸತ್ಯವಿಶ್ವಾಸ ಮತ್ತು ಸತ್ಕರ್ಮಗಳಿಂದ ಉಂಟಾಗುತ್ತದೆ.

ನಮಾಝನ್ನು ಸರಿಯಾಗಿ ನಿರ್ವಹಿಸಲು ಕಾಳಜಿ ವಹಿಸಬೇಕಾಗಿದೆ. ಏಕೆಂದರೆ ಅದು ಮನುಷ್ಯನಿಗೆ ಇಹಲೋಕದಲ್ಲಿ ಮತ್ತು ಪುನರುತ್ಥಾನ ದಿನದಲ್ಲಿ ಬೆಳಕಾಗಿ ಬರುತ್ತದೆ.

ದಾನವು ಸತ್ಯವಿಶ್ವಾಸದ ಸತ್ಯತೆಗೆ ಪುರಾವೆಯಾಗಿದೆ.

ಕುರ್‌ಆನ್ ನಮ್ಮ ಪರವಾಗಿ ಸಾಕ್ಷಿ ಹೇಳಲು ಮತ್ತು ನಮಗೆ ವಿರುದ್ಧವಾಗಿ ಸಾಕ್ಷಿ ಹೇಳದಿರಲು, ಅದರ ಪ್ರಕಾರ ನಡೆಯುವುದು ಮತ್ತು ಅದನ್ನು ಸತ್ಯವೆಂದು ನಂಬುವುದರ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ.

ಆತ್ಮವನ್ನು ಅಲ್ಲಾಹನ ಆಜ್ಞಾಪಾಲನೆಯಲ್ಲಿ ತೊಡಗಿಸದಿದ್ದರೆ ಅದು ಪಾಪಗಳಲ್ಲಿ ನಿರತವಾಗುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.

ಪ್ರತಿಯೊಬ್ಬರೂ ಅನಿವಾರ್ಯವಾಗಿ ಕರ್ಮವೆಸಗುತ್ತಾರೆ. ಕೆಲವರು ಅಜ್ಞಾಪಾಲನೆಯ ಕರ್ಮಗಳನ್ನು ಮಾಡುವ ಮೂಲಕ ತಮ್ಮ ಆತ್ಮವನ್ನು ಸ್ವತಂತ್ರಗೊಳಿಸಿದರೆ, ಇನ್ನು ಕೆಲವರು ಆಜ್ಞೋಂಲ್ಲಂಘನೆ ಮಾಡುತ್ತಾ ತಮ್ಮ ಆತ್ಮವನ್ನು ನಾಶಗೊಳಿಸುತ್ತಾರೆ.

ತಾಳ್ಮೆಯಿಂದಿರಲು ನಿರಂತರ ಪರಿಶ್ರಮಿಸಬೇಕಾದುದು ಮತ್ತು ಅಲ್ಲಾಹನ ಪ್ರತಿಫಲವನ್ನು ನಿರೀಕ್ಷಿಸಬೇಕಾದುದು ಅತ್ಯಗತ್ಯ. ಇದು ಬಹಳ ಪ್ರಯಾಸಕರ ಸಂಗತಿಯಾಗಿದೆ.

التصنيفات

Branches of Faith, Benefits of Remembering Allah, Purification of Souls, Excellence of Ablution, Virtue of Prayer