“ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನ ಮತ್ತು ಪರಲೋಕದ ಮೇಲೆ…

“ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿಟ್ಟವರ (ಕಾರ್ಯಕ್ಕೆ) ನೀವು ಸಮಾನವಾಗಿಸಿದಿರೇನು?…” [ತೌಬಾ: 19] ವಚನದ ಕೊನೆಯವರೆಗೆ

ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ಬಳಿ ಇದ್ದೆ. ಆಗ ಒಬ್ಬ ವ್ಯಕ್ತಿ ಹೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಹಾಜಿಗಳಿಗೆ (ಹಜ್ ಯಾತ್ರಿಕರಿಗೆ) ನೀರು ಕುಡಿಸುವ ಸೇವೆಯನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡದಿದ್ದರೂ ನನಗೇನೂ ಚಿಂತೆಯಿಲ್ಲ (ಅದೇ ಸಾಕು)." ಇನ್ನೊಬ್ಬರು ಹೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಮಸ್ಜಿದುಲ್ ಹರಾಮ್‌ನ (ಕಅಬಾ ಮಸೀದಿಯ) ನಿರ್ವಹಣೆ ಮಾಡುವುದನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡದಿದ್ದರೂ ನನಗೇನೂ ಚಿಂತೆಯಿಲ್ಲ." ಇನ್ನೊಬ್ಬರು ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಜಿಹಾದ್ (ಹೋರಾಟ) ಮಾಡುವುದು ನೀವು ಹೇಳಿದ್ದಕ್ಕಿಂತ ಶ್ರೇಷ್ಠವಾಗಿದೆ." ಆಗ ಉಮರ್ ರವರು ಅವರನ್ನು ಗದರಿಸಿ ಹೇಳಿದರು: "ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ ಬಳಿ ನಿಮ್ಮ ಧ್ವನಿಯನ್ನು ಏರಿಸಬೇಡಿ, ಅದಲ್ಲದೆ ಇದು ಶುಕ್ರವಾರ. ಆದರೂ, ನಾನು ಜುಮುಅ ನಮಾಝ್ ನಿರ್ವಹಿಸಿದ ನಂತರ, ಒಳಗೆ ಹೋಗಿ ನೀವು ಭಿನ್ನಾಭಿಪ್ರಾಯ ಹೊಂದಿದ ವಿಷಯದ ಬಗ್ಗೆ ಅವರಲ್ಲಿ (ಪ್ರವಾದಿಯವರಲ್ಲಿ) ತೀರ್ಪು ಕೇಳುತ್ತೇನೆ." ಆಗ ಸರ್ವಶಕ್ತನಾದ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು: “ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿಟ್ಟವರ (ಕಾರ್ಯಕ್ಕೆ) ನೀವು ಸಮಾನವಾಗಿಸಿದಿರೇನು?…” [ತೌಬಾ: 19] ವಚನದ ಕೊನೆಯವರೆಗೆ.

[صحيح] [رواه مسلم]

الشرح

ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು, ತಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ ಬಳಿ ಕುಳಿತಿದ್ದಾಗ ನಡೆದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಅವರು ಒಬ್ಬ ವ್ಯಕ್ತಿ ಹೀಗೆ ಹೇಳುವುದನ್ನು ಕೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಹಾಜಿಗಳಿಗೆ ನೀರು ಕುಡಿಸುವ ಸೇವೆಯನ್ನು ಹೊರತುಪಡಿಸಿ ಬೇರೆ ಯಾವ ಕೆಲಸ ಮಾಡದಿದ್ದರೂ ನಾನು ಚಿಂತಿಸುವುದಿಲ್ಲ." ಮತ್ತೊಬ್ಬರು ಹೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು (ಅದರ ಸೇವೆ ಮಾಡುವುದನ್ನು) ಹೊರತುಪಡಿಸಿ ಬೇರೆ ಯಾವ ಕೆಲಸ ಮಾಡದಿದ್ದರೂ ನಾನು ಚಿಂತಿಸುವುದಿಲ್ಲ." ಮತ್ತೊಬ್ಬರು ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು ನೀವು ಹೇಳಿದ್ದಕ್ಕಿಂತ ಶ್ರೇಷ್ಠವಾಗಿದೆ." ಆಗ ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ ಬಳಿ ದ್ವನಿ ಏರಿಸಿದ್ದಕ್ಕಾಗಿ ಅವರನ್ನು ಗದರಿಸಿದರು. ಅದು ಶುಕ್ರವಾರದ ಮುಂಜಾನೆಯ ಸಮಯವಾಗಿತ್ತು. ಅವರು ಹೇಳಿದರು: "ಆದರೂ, ನಾನು ಜುಮುಅ ನಮಾಝ್ ನಿರ್ವಹಿಸಿದ ನಂತರ, ಒಳಗೆ ಹೋಗಿ ನೀವು ಭಿನ್ನಾಭಿಪ್ರಾಯ ಹೊಂದಿದ ವಿಷಯದ ಬಗ್ಗೆ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೀರ್ಪು ಕೇಳುತ್ತೇನೆ." ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು: “ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡಿದವರಿಗೆ ನೀವು ಸಮಾನವಾಗಿಸಿದಿರೇನು? ಅಲ್ಲಾಹನ ಬಳಿ ಅವರು ಸಮಾನರಲ್ಲ. ಮತ್ತು ಅಲ್ಲಾಹು ಅಕ್ರಮಿಗಳಾದ ಜನರಿಗೆ ಸರಿದಾರಿ ತೋರಿಸುವುದಿಲ್ಲ” [ತೌಬಾ: 19].

فوائد الحديث

ಪ್ರತಿಫಲ ಮತ್ತು ಪುಣ್ಯದಲ್ಲಿ ಕರ್ಮಗಳು ವ್ಯತ್ಯಾಸ ಮತ್ತು ಶ್ರೇಷ್ಠತೆಯನ್ನು ಹೊಂದಿವೆ.

ಕರ್ಮಗಳ ಶ್ರೇಷ್ಠತೆಯು ಶರೀಅತ್ ತಂದಿರುವುದರ ಆಧಾರದ ಮೇಲಿದೆಯೇ ಹೊರತು, ಜನರ ಸ್ವಂತ ಅಭಿಪ್ರಾಯಗಳ ಆಧಾರದ ಮೇಲಲ್ಲ.

ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್‌ನ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಆದರೆ ಅದಕ್ಕೆ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡುವುದು ಷರತ್ತಾಗಿದೆ.

ನವವಿ ಹೇಳುತ್ತಾರೆ: ಮಸೀದಿಗಳಲ್ಲಿ, ಅದರಲ್ಲೂ ಶುಕ್ರವಾರದಂದು ದ್ವನಿ ಏರಿಸುವುದು 'ಮಕ್ರೂಹ್' (ಅನಪೇಕ್ಷಿತ) ಎಂಬುದಕ್ಕೆ ಇದರಲ್ಲಿ ಪಾಠವಿದೆ. ಜನರು ನಮಾಝಿಗಾಗಿ ಸೇರಿದಾಗ, ಜ್ಞಾನದ (ಇಲ್ಮ್) ಚರ್ಚೆಯಾಗಲಿ ಅಥವಾ ಬೇರೆ ಯಾವುದೇ ವಿಷಯವಾಗಲಿ, ಜೋರಾಗಿ ಮಾತನಾಡುವುದು ಸರಿಯಲ್ಲ. ಏಕೆಂದರೆ ಅದು ನಮಾಝ್ ಮಾಡುವವರಿಗೆ ಮತ್ತು ಝಿಕ್ರ್ (ಅಲ್ಲಾಹನ ಸ್ಮರಣೆ) ಮಾಡುವವರಿಗೆ ಗೊಂದಲವನ್ನು ಉಂಟುಮಾಡುತ್ತದೆ.

التصنيفات

Occasions of Revelation, Rulings of Jumu‘ah Sermon