ನಿಮ್ಮಲ್ಲೊಬ್ಬರಿಗೆ ನಮಾಝ್‌ನಲ್ಲಿ ಸಂಶಯವುಂಟಾಗಿ ತಾನು ಮೂರು ರಕಅತ್ ನಿರ್ವಹಿಸಿದ್ದೇನೋ ಅಥವಾ ನಾಲ್ಕು ರಕಅತ್ ನಿರ್ವಹಿಸಿದ್ದೇನೋ…

ನಿಮ್ಮಲ್ಲೊಬ್ಬರಿಗೆ ನಮಾಝ್‌ನಲ್ಲಿ ಸಂಶಯವುಂಟಾಗಿ ತಾನು ಮೂರು ರಕಅತ್ ನಿರ್ವಹಿಸಿದ್ದೇನೋ ಅಥವಾ ನಾಲ್ಕು ರಕಅತ್ ನಿರ್ವಹಿಸಿದ್ದೇನೋ ಎಂದು ತಿಳಿಯಲಾಗದಿದ್ದರೆ, ಅವನು ಆ ಸಂಶಯವನ್ನು ಉಪೇಕ್ಷಿಸಿ ತನಗೆ ಖಾತ್ರಿಯಿರುವುದರ ಆಧಾರದಲ್ಲಿ ಮುಂದುವರಿಯಲಿ. ನಂತರ, ಸಲಾಂ ಹೇಳುವುದಕ್ಕೆ ಮೊದಲು ಎರಡು ಸುಜೂದ್‌ಗಳನ್ನು ನಿರ್ವಹಿಸಲಿ

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರಿಗೆ ನಮಾಝ್‌ನಲ್ಲಿ ಸಂಶಯವುಂಟಾಗಿ ತಾನು ಮೂರು ರಕಅತ್ ನಿರ್ವಹಿಸಿದ್ದೇನೋ ಅಥವಾ ನಾಲ್ಕು ರಕಅತ್ ನಿರ್ವಹಿಸಿದ್ದೇನೋ ಎಂದು ತಿಳಿಯಲಾಗದಿದ್ದರೆ, ಅವನು ಆ ಸಂಶಯವನ್ನು ಉಪೇಕ್ಷಿಸಿ ತನಗೆ ಖಾತ್ರಿಯಿರುವುದರ ಆಧಾರದಲ್ಲಿ ಮುಂದುವರಿಯಲಿ. ನಂತರ, ಸಲಾಂ ಹೇಳುವುದಕ್ಕೆ ಮೊದಲು ಎರಡು ಸುಜೂದ್‌ಗಳನ್ನು ನಿರ್ವಹಿಸಲಿ. ಅವನು ಐದು ರಕಅತ್ ನಿರ್ವಹಿಸಿದ್ದರೆ, ಅವು ಅವನ ನಮಾಝನ್ನು ಸಮ ಸಂಖ್ಯೆಯಲ್ಲಿಡುತ್ತವೆ. ಇನ್ನು ಅವನು ಪೂರ್ಣವಾಗಿ ನಾಲ್ಕು ರಕಅತ್ ನಿರ್ವಹಿಸಿದ್ದರೆ, ಅವು ಶೈತಾನನಿಗೆ ಅವಮಾನವಾಗುತ್ತವೆ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ನಮಾಝ್ ಮಾಡುವವನಿಗೆ ತನ್ನ ನಮಾಝಿನಲ್ಲಿ ಸಂಶಯವಾಗಿ, ತಾನು ಎಷ್ಟು ರಕಅತ್ ನಿರ್ವಹಿಸಿದ್ದೇನೆ, ಮೂರೋ ಅಥವಾ ನಾಲ್ಕೋ ಎಂದು ತಿಳಿಯಲಾಗದಿದ್ದರೆ, ಸಂಶಯವಿರುವ ಆ ಹೆಚ್ಚಿನ ರಕಅತ್ತನ್ನು ಬಿಟ್ಟುಬಿಡಲಿ ಮತ್ತು ಅದನ್ನು ಗಣನೆಗೆ ತೆಗೆದುಕೊಳ್ಳದಿರಲಿ. ನಂತರ ಮೂರು ರಕಅತ್‌ಗಳನ್ನು ಖಾತ್ರಿ ಮಾಡಿಕೊಂಡು ನಾಲ್ಕನೇ ರಕಅತ್ತನ್ನು ನಿರ್ವಹಿಸಲಿ. ನಂತರ, ಸಲಾಂ ಹೇಳುವುದಕ್ಕೆ ಮೊದಲು ಎರಡು ಸುಜೂದ್‌ಗಳನ್ನು ನಿರ್ವಹಿಸಲಿ. ವಾಸ್ತವವಾಗಿ, ಅವನು ನಾಲ್ಕು ರಕಅತ್ ನಿರ್ವಹಿಸಿದ್ದರೆ, ಒಂದು ರಕಅತ್ ಸೇರಿಸುವ ಮೂಲಕ ಅದು ಐದು ರಕಅತ್ ಆಗುತ್ತದೆ. ಆಗ ಮರೆವಿನ ಎರಡು ಸುಜೂದ್‌ಗಳು ಒಂದು ರಕಅತ್‌ನ ಸ್ಥಾನದಲ್ಲಿ ನಿಲ್ಲುವುದರಿಂದ ರಕಅತ್‌ಗಳು ಸಮ ಸಂಖ್ಯೆಯಲ್ಲಾಗುತ್ತವೆ, ಬೆಸ ಸಂಖ್ಯೆಯಾಗುವುದಿಲ್ಲ. ಇನ್ನು ಅವನು ನಿರ್ವಹಿಸಿದ ಹೆಚ್ಚಿನ ಒಂದು ರಕಅತ್ ನಾಲ್ಕನೇ ರಕಅತ್ ಆಗಿದ್ದರೆ, ಅವನು ಯಾವುದೇ ಸೇರ್ಪಡೆ ಅಥವಾ ಕಡಿತವಿಲ್ಲದೆ ನಮಾಝ್ ನಿರ್ವಹಿಸಿದವನಾಗುತ್ತಾನೆ. ಆಗ ಮರೆವಿನ ಎರಡು ಸುಜೂದ್‌ಗಳು ಶೈತಾನನನ್ನು ಅವಮಾನಿಸುವ, ಅವನನ್ನು ಓಡಿಸುವ ಮತ್ತು ಅವನ ಉದ್ದೇಶದಿಂದ ಅವನನ್ನು ಹಿಮ್ಮೆಟ್ಟಿಸುವ ಹಾಗೂ ನಿಂದ್ಯನನ್ನಾಗಿಸುವ ಸುಜೂದ್‌ಗಳಾಗುತ್ತವೆ. ಏಕೆಂದರೆ, ಅವನು ನಮಾಝಿನಲ್ಲಿ ಗೊಂದಲ ಉಂಟುಮಾಡಿದನು ಮತ್ತು ಅದನ್ನು ಹಾಳು ಮಾಡಲು ಪ್ರಯತ್ನಿಸಿದ್ದನು. ಆದ್ದರಿಂದ, ಅಲ್ಲಾಹನ ಆಜ್ಞೆಯನ್ನು ಪಾಲಿಸಿ ಸುಜೂದನ್ನು ನಿರ್ವಹಿಸುವ ಮೂಲಕ ಆದಮರ ಪುತ್ರನ (ಮನುಷ್ಯನ) ನಮಾಝ್ ಪೂರ್ಣವಾಯಿತು. ಅಲ್ಲಾಹನಿಗೆ ಸುಜೂದ್ ಮಾಡಬೇಕೆಂಬ ಅಲ್ಲಾಹನ ಆಜ್ಞೆಯನ್ನು ಅನುಸರಿಸಲು ಶೈತಾನನು ನಿರಾಕರಿಸಿದ್ದನು.

فوائد الحديث

ನಮಾಝ್ ಮಾಡುವವನಿಗೆ ತನ್ನ ನಮಾಝ್‌ನಲ್ಲಿ ಸಂಶಯವುಂಟಾಗಿ ಎಷ್ಟು ರಕಅತ್ ಎಂದು ಅವನಿಗೆ ಖಚಿತವಾಗದಿದ್ದರೆ, ಸಂಶಯವನ್ನು ತೊರೆದು ಖಾತ್ರಿಯನ್ನು, ಅಂದರೆ ಕನಿಷ್ಠ ಸಂಖ್ಯೆಯನ್ನು ಅವಲಂಬಿಸಬೇಕಾಗಿದೆ. ನಂತರ, ನಮಾಝನ್ನು ಪೂರ್ಣಗೊಳಿಸಿ ಸಲಾಂ ಹೇಳುವುದಕ್ಕೆ ಮೊದಲು ಎರಡು ಸುಜೂದ್‌ಗಳನ್ನು ನಿರ್ವಹಿಸಿ, ನಂತರ ಸಲಾಂ ಹೇಳಬೇಕಾಗಿದೆ.

ಈ ಎರಡು ಸುಜೂದ್‌ಗಳು ನಮಾಝ್‌ಗೆ ತೇಪೆ ಹಚ್ಚುತ್ತವೆ ಮತ್ತು ಶೈತಾನನನ್ನು ಅವಮಾನಿತನಾಗಿ, ತಿರಸ್ಕೃತನಾಗಿ ಮತ್ತು ಬಹಿಷ್ಕೃತನಾಗಿ ಹಿಮ್ಮೆಟ್ಟಿಸುತ್ತದೆ.

ಹದೀಸಿನಲ್ಲಿ ಉಲ್ಲೇಖಿಸಲಾಗಿರುವುದು ಯಾವುದೇ ಖಚಿತತೆಯಿಲ್ಲದ ಸಂಶಯದ ಬಗ್ಗೆಯಾಗಿದೆ. ಆದರೆ ಖಚಿತತೆಯಿದ್ದರೆ ಅದರ ಪ್ರಕಾರ ಕಾರ್ಯ ನಿರ್ವಹಿಸಬೇಕಾಗಿದೆ.

ಭ್ರಾಂತಿಗಳ ವಿರುದ್ಧ ಹೋರಾಡಲು ಮತ್ತು ಧರ್ಮಶಾಸ್ತ್ರದ ಆಜ್ಞೆಯನ್ನು ಪಾಲಿಸುವ ಮೂಲಕ ಅವುಗಳನ್ನು ದೂರೀಕರಿಸಲು ಪ್ರೋತ್ಸಾಹಿಸಲಾಗಿದೆ.

التصنيفات

Prostration of Forgetfulness, Recitation, Gratitude