ಯಾವುದೇ ಗುಂಪು ಜನರು ಒಂದು ಸಭೆಯಿಂದ ಎದ್ದು ಹೋಗುವಾಗ, ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ಕತ್ತೆಯ ಹೆಣದಂತಿರುವ…

ಯಾವುದೇ ಗುಂಪು ಜನರು ಒಂದು ಸಭೆಯಿಂದ ಎದ್ದು ಹೋಗುವಾಗ, ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ಕತ್ತೆಯ ಹೆಣದಂತಿರುವ (ಸ್ಥಳದಿಂದ) ಎದ್ದು ಹೋದಂತೆ ಆಗುತ್ತದೆ, ಮತ್ತು ಅದು ಅವರಿಗೆ ವಿಷಾದಕ್ಕೆ ಕಾರಣವಾಗುತ್ತದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ಗುಂಪು ಜನರು ಒಂದು ಸಭೆಯಿಂದ ಎದ್ದು ಹೋಗುವಾಗ, ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ಕತ್ತೆಯ ಹೆಣದಂತಿರುವ (ಸ್ಥಳದಿಂದ) ಎದ್ದು ಹೋದಂತೆ ಆಗುತ್ತದೆ, ಮತ್ತು ಅದು ಅವರಿಗೆ ವಿಷಾದಕ್ಕೆ ಕಾರಣವಾಗುತ್ತದೆ."

[صحيح] [رواه أبو داود]

الشرح

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾವುದೇ ಗುಂಪು ಜನರು ಒಂದು ಸಭೆಯಲ್ಲಿ ಕುಳಿತು, ನಂತರ ಅದರಿಂದ ಎದ್ದು ಹೋಗುವಾಗ ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ದುರ್ನಾತ ಬೀರುವ ಮತ್ತು ಹೊಲಸಾದ ಕತ್ತೆಯ ಹೆಣದ ಸುತ್ತ ಸೇರಿಕೊಂಡು ಅಲ್ಲಿಂದ ಎದ್ದು ಹೋದಂತೆ ಆಗುತ್ತದೆ. ಏಕೆಂದರೆ ಅವರು ಅಲ್ಲಾಹನ ಸ್ಮರಣೆಯನ್ನು ಬಿಟ್ಟು ಬೇರೆ ಮಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಭೆಯು ಅವರಿಗೆ ಪುನರುತ್ಥಾನ ದಿನದಂದು ವಿಷಾದ, ನಷ್ಟ ಮತ್ತು ಶಾಶ್ವತ ದುಃಖಕ್ಕೆ ಕಾರಣವಾಗುತ್ತದೆ.

فوائد الحديث

ಅಲ್ಲಾಹನ ಸ್ಮರಣೆಯಿಂದ ಅಲಕ್ಷ್ಯರಾಗುವುದರ ಬಗ್ಗೆ ಎಚ್ಚರಿಕೆ ನೀಡಿರುವುದು ಕೇವಲ ಸಭೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇತರ ಸಂದರ್ಭಗಳಿಗೂ ಅನ್ವಯಿಸುತ್ತದೆ. ನವವಿ ಹೇಳಿದರು: "ಯಾವುದೇ ಸ್ಥಳದಲ್ಲಿ ಕುಳಿತಿರುವವರು ಅಲ್ಲಾಹನನ್ನು ಸ್ಮರಿಸುವ ಮೊದಲು ಅದನ್ನು ಬಿಟ್ಟು ಹೋಗುವುದು ಮಕ್ರೂಹ್ (ಅನಪೇಕ್ಷಿತ) ಆಗಿದೆ."

ಪುನರುತ್ಥಾನ ದಿನದಂದು ಅವರಿಗೆ ಉಂಟಾಗುವ ವಿಷಾದವೇನೆಂದರೆ: ಸಮಯವನ್ನು ಅಲ್ಲಾಹನ ಅನುಸರಣೆಯಲ್ಲಿ ಸದುಪಯೋಗಪಡಿಸಿಕೊಳ್ಳದ ಕಾರಣ ಅವರಿಗೆ ಪ್ರತಿಫಲ ಮತ್ತು ಪುಣ್ಯಗಳು ನಷ್ಟವಾಗಬಹುದು. ಅಥವಾ ಅಲ್ಲಾಹನಿಗೆ ಅವಿಧೇಯತೆ ತೋರುವ ವಿಧದಲ್ಲಿ ಸಮಯವನ್ನು ಕಳೆದುದರಿಂದ ಅವರಿಗೆ ಪಾಪ ಮತ್ತು ಶಿಕ್ಷೆಯಾಗಬಹುದು.

ಈ ಎಚ್ಚರಿಕೆಯಿರುವುದು ಅನುಮತಿಸಲಾದ ವಿಷಯಗಳಲ್ಲಿ ಅಲಕ್ಷ್ಯತೆ ತೋರುವುದಕ್ಕಾಗಿದೆ. ಹೀಗಿರುವಾಗ, ಪರದೂಷಣೆ, ಚಾಡಿ ಮುಂತಾದವುಗಳಿರುವ ನಿಷಿದ್ಧ ಸಭೆಗಳ ಸ್ಥಿತಿ ಏನಾಗಿರಬಹುದು?

التصنيفات

Merits of Remembering Allah