ಇಸ್ರಾಯೇಲ್ ಮಕ್ಕಳನ್ನು ಪ್ರವಾದಿಗಳು ಆಳುತ್ತಿದ್ದರು. ಒಬ್ಬ ಪ್ರವಾದಿ ಮರಣಹೊಂದಿದಾಗಲೆಲ್ಲಾ, ಇನ್ನೊಬ್ಬರು ಅವರ…

ಇಸ್ರಾಯೇಲ್ ಮಕ್ಕಳನ್ನು ಪ್ರವಾದಿಗಳು ಆಳುತ್ತಿದ್ದರು. ಒಬ್ಬ ಪ್ರವಾದಿ ಮರಣಹೊಂದಿದಾಗಲೆಲ್ಲಾ, ಇನ್ನೊಬ್ಬರು ಅವರ ಉತ್ತರಾಧಿಕಾರಿಯಾಗಿ ಬರುತ್ತಿದ್ದರು. ಖಂಡಿತವಾಗಿಯೂ, ನನ್ನ ನಂತರ ಯಾವುದೇ ಪ್ರವಾದಿ ಬರುವುದಿಲ್ಲ. ಆದರೆ ಅನೇಕ ಖಲೀಫರು ಬರುತ್ತಾರೆ

ಅಬೂ ಹಾಝಿಮ್ ರಿಂದ ವರದಿ. ಅವರು ಹೇಳಿದರು: ನಾನು ಐದು ವರ್ಷಗಳ ಕಾಲ ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಜೊತೆ ಇದ್ದೆ. ಆಗ ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರು ಹೀಗೆ ಹೇಳಿದ್ದರೆಂದು ಹದೀಸ್ ವರದಿ ಮಾಡುವುದನ್ನು ಕೇಳಿದ್ದೇನೆ: "ಇಸ್ರಾಯೇಲ್ ಮಕ್ಕಳನ್ನು ಪ್ರವಾದಿಗಳು ಆಳುತ್ತಿದ್ದರು. ಒಬ್ಬ ಪ್ರವಾದಿ ಮರಣಹೊಂದಿದಾಗಲೆಲ್ಲಾ, ಇನ್ನೊಬ್ಬರು ಅವರ ಉತ್ತರಾಧಿಕಾರಿಯಾಗಿ ಬರುತ್ತಿದ್ದರು. ಖಂಡಿತವಾಗಿಯೂ, ನನ್ನ ನಂತರ ಯಾವುದೇ ಪ್ರವಾದಿ ಬರುವುದಿಲ್ಲ. ಆದರೆ ಅನೇಕ ಖಲೀಫರು ಬರುತ್ತಾರೆ." ಸಹಾಬಿಗಳು ಕೇಳಿದರು: "ನೀವು ನಮಗೆ ಏನು ಮಾಡಲು ಆಜ್ಞಾಪಿಸುತ್ತೀರಿ?" ಅವರು ಉತ್ತರಿಸಿದರು: "ಮೊದಲನೆಯವರಿಗೆ ನಿಷ್ಠೆಯ ಪ್ರತಿಜ್ಞೆಯನ್ನು ಪೂರೈಸಿರಿ. ನಂತರ ನಂತರದವರಿಗೆ. ಅವರಿಗೆ ಸಲ್ಲತಕ್ಕ ಹಕ್ಕುಗಳನ್ನು ಅವರಿಗೆ ನೀಡಿರಿ. ಏಕೆಂದರೆ, ಅಲ್ಲಾಹು ಅವರಿಗೆ ವಹಿಸಿಕೊಟ್ಟಿರುವುದರ ಬಗ್ಗೆ ಅವರನ್ನು ಪ್ರಶ್ನಿಸುತ್ತಾನೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಸ್ರಾಯೇಲ್ ಮಕ್ಕಳನ್ನು ಪ್ರವಾದಿಗಳು ಆಳುತ್ತಿದ್ದರು. ಸರದಾರರು ಮತ್ತು ಆಡಳಿತಗಾರರು ತಮ್ಮ ಪ್ರಜೆಗಳೊಂದಿಗೆ ಮಾಡುವಂತೆ ಅವರು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು. ಅವರಲ್ಲಿ ಭ್ರಷ್ಟಾಚಾರ ಕಾಣಿಸಿಕೊಂಡಾಗಲೆಲ್ಲಾ, ಅಲ್ಲಾಹು ಅವರ ವಿಷಯಗಳನ್ನು ಸರಿಪಡಿಸಲು ಮತ್ತು ನಿಯಮಗಳಲ್ಲಿ ಅವರು ಮಾಡಿದ ಬದಲಾವಣೆಗಳನ್ನು ತೆಗೆದುಹಾಕಲು ಅವರಿಗೆ ಒಬ್ಬ ಪ್ರವಾದಿಯನ್ನು ಕಳುಹಿಸುತ್ತಿದ್ದನು. ಅವರು ಮಾಡುತ್ತಿದ್ದ ಕೆಲಸವನ್ನು ಮಾಡಲು ನನ್ನ ನಂತರ ಯಾವುದೇ ಪ್ರವಾದಿ ಬರುವುದಿಲ್ಲ. ಆದರೆ, ನನ್ನ ನಂತರ ಖಲೀಫರು ಬರುತ್ತಾರೆ. ಅವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ, ಮತ್ತು ಅವರ ನಡುವೆ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಆಗ ಸಹಚರರು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ನೀವು ಏನು ಮಾಡಲು ನಮಗೆ ಆಜ್ಞಾಪಿಸುತ್ತೀರಿ? ಅವರು ಉತ್ತರಿಸಿದರು: ಒಬ್ಬ ಖಲೀಫನ ನಂತರ ಇನ್ನೊಬ್ಬ ಖಲೀಫನಿಗೆ ನಿಷ್ಠೆಯ ಪ್ರತಿಜ್ಞೆಯನ್ನು ಮಾಡಿದರೆ, ಮೊದಲನೆಯವನಿಗೆ ಮಾಡಿದ ಪ್ರತಿಜ್ಞೆಯು ಸಿಂಧುವಾಗಿರುತ್ತದೆ ಮತ್ತು ಅದನ್ನು ಪೂರೈಸಬೇಕಾಗಿದೆ. ಎರಡನೆಯವನಿಗೆ ಮಾಡಿದ ಪ್ರತಿಜ್ಞೆಯು ಅಸಿಂಧುವಾಗಿದೆ, ಮತ್ತು ಅದನ್ನು ಪಡೆಯಲು ಅವನು ಪ್ರಯತ್ನಿಸುವುದು ನಿಷಿದ್ಧವಾಗಿದೆ. ಖಲೀಫರುಗಳಿಗೆ ಅವರಿಗೆ ಸಲ್ಲತಕ್ಕ ಹಕ್ಕುಗಳನ್ನು ನೀಡಿರಿ. ಅಲ್ಲಾಹನಿಗೆ ಅವಿಧೇಯತೆ ತೋರುವ ವಿಷಯಗಳಲ್ಲಿ ಹೊರತುಪಡಿಸಿ, ಅವರ ಆಜ್ಞೆಗಳಿಗೆ ವಿಧೇಯರಾಗಿರಿ ಮತ್ತು ಅವರ ಮಾತನ್ನು ಕೇಳುತ್ತಲೂ ಅನುಸರಿಸುತ್ತಲೂ ಅವರೊಂದಿಗೆ ಜೀವಿಸಿರಿ. ಏಕೆಂದರೆ ಅವರು ನಿಮಗೆ ಏನು ಮಾಡುತ್ತಾರೋ ಅದರ ಬಗ್ಗೆ ಅಲ್ಲಾಹು ಅವರನ್ನು ಪ್ರಶ್ನಿಸುತ್ತಾನೆ ಮತ್ತು ವಿಚಾರಣೆ ಮಾಡುತ್ತಾನೆ.

فوائد الحديث

ಪ್ರಜೆಗಳಿಗೆ ತಮ್ಮ ವಿಷಯಗಳನ್ನು ನಿರ್ವಹಿಸುವ ಮತ್ತು ನೇರ ಮಾರ್ಗದಲ್ಲಿ ಒಯ್ಯುವ ಒಬ್ಬ ಪ್ರವಾದಿ ಅಥವಾ ಖಲೀಫನ ಅಗತ್ಯವಿದೆ.

ನಮ್ಮ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ನಂತರ ಯಾವುದೇ ಪ್ರವಾದಿ ಇಲ್ಲ.

ಕಾನೂನುಬದ್ಧ ವಿಧಾನಗಳ ಮೂಲಕ ಅಧಿಕಾರ ಸ್ಥಾಪಿತವಾದ ಆಡಳಿತಗಾರನ ವಿರುದ್ಧ ಬಂಡಾಯ ಏಳುವುದರ ಬಗ್ಗೆ ಎಚ್ಚರಿಸಲಾಗಿದೆ.

ಒಂದೇ ಸಮಯದಲ್ಲಿ ಇಬ್ಬರು ಖಲೀಫರಿಗೆ ನಿಷ್ಠೆಯ ಪ್ರತಿಜ್ಞೆ ಮಾಡುವುದು ಅನುಮತಿಸಲಾಗುವುದಿಲ್ಲ.

ಆಡಳಿತಗಾರನ ಜವಾಬ್ದಾರಿಯ ತೀಕ್ಷ್ಣತೆಯನ್ನು ವಿವರಿಸಲಾಗಿದೆ. ಏಕೆಂದರೆ ಅವನ ಪ್ರಜೆಗಳ ಬಗ್ಗೆ ಅಲ್ಲಾಹು ಅವನನ್ನು ಪ್ರಶ್ನಿಸುತ್ತಾನೆ.

ಇಬ್ನ್ ಹಜರ್ ಹೇಳಿದರು: "ಲೌಕಿಕ ವಿಷಯಗಳಿಗಿಂತ ಧಾರ್ಮಿಕ ವಿಷಯಗಳಿಗೆ ಆದ್ಯತೆ ನೀಡಬೇಕಾಗಿದೆ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಡಳಿತಗಾರನ ಹಕ್ಕನ್ನು ಪೂರೈಸಬೇಕು ಎಂದು ಆದೇಶಿಸಿದರು. ಏಕೆಂದರೆ ಅದು ಧರ್ಮದ ವಚನವನ್ನು ಎತ್ತಿಹಿಡಿಯುವುದು ಮತ್ತು ಗೊಂದಲ ಮತ್ತು ಕೆಡುಕನ್ನು ತಡೆಯುವುದನ್ನು ಒಳಗೊಂಡಿದೆ. ಒಬ್ಬರ ಸ್ವಂತ ಹಕ್ಕುಗಳ ಬೇಡಿಕೆಯು ಈಡೇರುವುದು ವಿಳಂಬವಾದರೂ ಅವು ರದ್ದಾಗುವುದಿಲ್ಲ. ಏಕೆಂದರೆ ಅಲ್ಲಾಹು ಪರಲೋಕದಲ್ಲಿಯಾದರೂ ಸಹ ಅವುಗಳನ್ನು ನೀಡುತ್ತೇನೆ ಮತ್ತು ಪೂರೈಸುತ್ತೇನೆ ಎಂದು ಭರವಸೆ ನೀಡಿದ್ದಾನೆ.

ಇದು ಪ್ರವಾದಿಯ ಪ್ರವಾದಿತ್ವದ ಚಿಹ್ನೆಗಳಲ್ಲಿ ಒಂದಾಗಿದೆ. ಏಕೆಂದರೆ ಅವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಂತರ ಅನೇಕ ಖಲೀಫರುಗಳು ಬಂದರು. ಮುಸ್ಲಿಂ ಸಮುದಾಯವನ್ನು ಆಳಲು ಅವರ ಪೈಕಿ ನೀತಿವಂತರು ಮತ್ತು ಭ್ರಷ್ಟ ಆಡಳಿತಗಾರರು ಒಬ್ಬರ ನಂತರ ಒಬ್ಬರು ಉತ್ತರಾಧಿಕಾರಿಯಾಗಿ ಬಂದರು.

التصنيفات

Stories and Conditions of Pre-Islamic Nations