ನೀವು ನಮಾಝ್ ಮಾಡುವಾಗ ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ನಂತರ ನಿಮ್ಮಲ್ಲೊಬ್ಬರು ನಮಾಝ್‌ಗೆ ಇಮಾಮತ್ (ಮುಂದಾಳುತ್ವ) ವಹಿಸಲಿ. ಅವರು…

ನೀವು ನಮಾಝ್ ಮಾಡುವಾಗ ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ನಂತರ ನಿಮ್ಮಲ್ಲೊಬ್ಬರು ನಮಾಝ್‌ಗೆ ಇಮಾಮತ್ (ಮುಂದಾಳುತ್ವ) ವಹಿಸಲಿ. ಅವರು ತಕ್ಬೀರ್ ಹೇಳಿದರೆ ನೀವು ಕೂಡ ತಕ್ಬೀರ್ ಹೇಳಿರಿ

ಹಿತ್ತಾನ್ ಬಿನ್ ಅಬ್ದುಲ್ಲಾ ರಕಾಶಿ ಹೇಳುತ್ತಾರೆ: ನಾನು ಅಬೂ ಮೂಸಾ ಅಶ್‌ಅರಿ ಯವರೊಂದಿಗೆ ನಮಾಝ್ ನಿರ್ವಹಿಸಿದೆ. ನಾವು ಕೊನೆಯ ಕೂರುವಿಕೆಗೆ ತಲುಪಿದಾಗ, ಹಿಂದಿನ ಸಾಲಿನಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದರು: "ನಮಾಝನ್ನು ಒಳಿತು ಮತ್ತು ಝಕಾತ್‌ಗಳ ಜೊತೆಗೆ ಕಡ್ಡಾಯಗೊಳಿಸಲಾಗಿದೆ." ಅಬೂ ಮೂಸಾರವರು ನಮಾಝ್ ಮುಗಿಸಿದ ನಂತರ ಹಿಂದೆ ತಿರುಗಿ ಕೇಳಿದರು: "ಇಂತಿಂತಹ ಮಾತನ್ನು ಹೇಳಿದ್ದು ಯಾರು?" ಜನರು ಮೌನವಾಗಿದ್ದರು. ಅವರು ಪುನಃ ಕೇಳಿದರು: "ಇಂತಿಂತಹ ಮಾತನ್ನು ಹೇಳಿದ್ದು ಯಾರು?" ಜನರು ಮೌನವಾಗಿದ್ದರು. ಅವರು ಕೇಳಿದರು: "ಹಿತ್ತಾನ್! ಬಹುಶಃ ನೀನೇ ಇದನ್ನು ಹೇಳಿರಬಹುದು." ಹಿತ್ತಾನ್ ಹೇಳಿದರು: "ನಾನು ಹೇಳಿಲ್ಲ. ನೀವು ಅದಕ್ಕಾಗಿ ನನ್ನನ್ನು ಗದರಿಸುವಿರೆಂದು ನನಗೆ ಭಯವಿತ್ತು." ಆಗ ಜನರ ನಡುವಿನಿಂದ ಒಬ್ಬ ವ್ಯಕ್ತಿ ಹೇಳಿದರು: "ನಾನೇ ಅದನ್ನು ಹೇಳಿದ್ದು. ಆದರೆ ನನ್ನ ಉದ್ದೇಶ ಒಳ್ಳೆಯದಾಗಿತ್ತು." ಆಗ ಅಬೂ ಮೂಸಾ ಹೇಳಿದರು: "ನೀವು ನಮಾಝಿನಲ್ಲಿ ಹೇಗೆ ಮಾತನಾಡಬೇಕೆಂದು ನಿಮಗೆ ತಿಳಿದಿದೆಯೇ? ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಮ್ಮೆ ಪ್ರವಚನ ಮಾಡುತ್ತಾ, ನಮಗೆ ಚರ್ಯೆಗಳನ್ನು ವಿವರಿಸಿದರು ಮತ್ತು ನಮಾಝನ್ನು ಕಲಿಸಿದರು. ನಂತರ ಅವರು ಹೇಳಿದರು: "ನೀವು ನಮಾಝ್ ಮಾಡುವಾಗ ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ನಂತರ ನಿಮ್ಮಲ್ಲೊಬ್ಬರು ನಮಾಝ್‌ಗೆ ಇಮಾಮತ್ (ಮುಂದಾಳುತ್ವ) ವಹಿಸಲಿ. ಅವರು ತಕ್ಬೀರ್ ಹೇಳಿದರೆ ನೀವು ಕೂಡ ತಕ್ಬೀರ್ ಹೇಳಿರಿ. ಅವರು, "ಗೈರಿಲ್ ಮಗ್‌ದೂಬಿ ಅಲೈಹಿಂ ವಲದ್ದಾಲ್ಲೀನ್" ಎಂದು ಹೇಳಿದರೆ, ನೀವು "ಆಮೀನ್" ಎಂದು ಹೇಳಿರಿ. ಆಗ ಅಲ್ಲಾಹು ನಿಮಗೆ ಉತ್ತರಿಸುವನು. ಇಮಾಂ ತಕ್ಬೀರ್ ಹೇಳಿದರೆ ನೀವು ಕೂಡ ತಕ್ಬೀರ್ ಹೇಳಿರಿ. ಅವರು ರುಕೂ ಮಾಡಿದರೆ ನೀವೂ ರುಕೂ ಮಾಡಿರಿ. ಇಮಾಂ ನಿಮಗಿಂತ ಮೊದಲು ರುಕೂ ಮಾಡುತ್ತಾರೆ ಮತ್ತು ನಿಮಗಿಂತ ಮೊದಲು ತಲೆ ಎತ್ತುತ್ತಾರೆ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದು ಅದಕ್ಕೆ ಸಮವಾಗಿದೆ. ನಂತರ ಇಮಾಂ "ಸಮಿಅಲ್ಲಾಹು ಲಿಮನ್ ಹಮಿದ" ಎಂದು ಹೇಳಿದರೆ, ನೀವು "ಅಲ್ಲಾಹುಮ್ಮ ರಬ್ಬನಾ ವಲಕಲ್ ಹಮ್ದ್" ಎಂದು ಹೇಳಿರಿ. ಅಲ್ಲಾಹು ನಿಮ್ಮ ಪ್ರಾರ್ಥನೆಗೆ ಉತ್ತರಿಸುವನು. ಅಲ್ಲಾಹು ಅವನ ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಲಗೆಯ ಮೂಲಕ ಹೇಳಿದನು: "ಅಲ್ಲಾಹು ಅವನನ್ನು ಪ್ರಶಂಸಿಸುವವರ ಮಾತನ್ನು ಕೇಳುತ್ತಾನೆ." ಇಮಾಂ ಅಲ್ಲಾಹು ಅಕ್ಬರ್ ಎಂದು ಹೇಳಿ, ಸುಜೂದ್ ಮಾಡಿದರೆ, ನೀವು ಕೂಡ ಅಲ್ಲಾಹು ಅಕ್ಬರ್ ಎಂದು ಹೇಳಿ ಸುಜೂದ್ ಮಾಡಿರಿ. ಇಮಾಂ ನಿಮಗಿಂತ ಮೊದಲು ಸುಜೂದ್ ಮಾಡುತ್ತಾರೆ ಮತ್ತು ನಿಮಗಿಂತ ಮೊದಲು ತಲೆ ಎತ್ತುತ್ತಾರೆ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದು ಅದಕ್ಕೆ ಸಮವಾಗಿದೆ. ನೀವು ಕೂರುವ ಸ್ಥಿತಿಗೆ ತಲುಪಿದಾಗ ನಿಮ್ಮ ಪ್ರಪ್ರಥಮ ಮಾತು ಇದಾಗಿರಲಿ: "ಅತ್ತಹಿಯ್ಯಾತು ಅತ್ತಯ್ಯಿಬಾತು ಅಸ್ಸಲವಾತು ಲಿಲ್ಲಾಹಿ, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು."

[صحيح] [رواه مسلم]

الشرح

ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮಾಝ್ ಮಾಡಿದರು. ಅವರು ತಶಹ್ಹುದ್‌ಗಾಗಿ ಕೂರುವ ಹಂತಕ್ಕೆ ತಲುಪಿದಾಗ, ಹಿಂದಿನಿಂದ ಒಬ್ಬ ವ್ಯಕ್ತಿ, "ಕುರ್‌ಆನಿನಲ್ಲಿ ನಮಾಝನ್ನು ಒಳಿತು ಮತ್ತು ಝಕಾತ್‌ನೊಂದಿಗೆ ಪ್ರಸ್ತಾಪಿಸಲಾಗಿದೆ" ಎಂದು ಹೇಳಿದರು. ನಮಾಝ್ ಮುಗಿದಾಗ ಅಬೂ ಮೂಸಾ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಹಿಂದಿರುವವರ ಕಡೆಗೆ ತಿರುಗಿ ಕೇಳಿದರು: "ಕುರ್‌ಆನಿನಲ್ಲಿ ನಮಾಝನ್ನು ಒಳಿತು ಮತ್ತು ಝಕಾತ್‌ನೊಂದಿಗೆ ಪ್ರಸ್ತಾಪಿಸಲಾಗಿದೆ ಎಂದು ಹೇಳಿದ್ದು ಯಾರು?" ಎಲ್ಲರೂ ಮೌನವಾಗಿದ್ದರು. ಯಾರೂ ಮಾತನಾಡಲಿಲ್ಲ. ಆಗ ಅವರು ಪ್ರಶ್ನೆಯನ್ನು ಪುನರುಚ್ಛರಿಸಿದರು. ಯಾರೂ ಅದಕ್ಕೆ ಉತ್ತರ ನೀಡದಿದ್ದಾಗ, ಅಬೂ ಮೂಸಾ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಹೇಳಿದರು: "ಓ ಹಿತ್ತಾನ್! ಬಹುಶಃ ನೀನೇ ಇದನ್ನು ಹೇಳಿರಬಹುದು." ಹಿತ್ತಾನ್ ಧೈರ್ಯವಂತರಾಗಿದ್ದರು ಮತ್ತು ಅಬೂ ಮೂಸಾರ ಹತ್ತಿರದ ಸಂಬಂಧಿಯಾಗಿದ್ದರು. ಆದ್ದರಿಂದ ಈ ಆರೋಪದಿಂದ ಅವರಿಗೆ ನೋವಾಗಲಿಲ್ಲ. ನಿಜವಾಗಿ ಆ ಮಾತನ್ನು ಹೇಳಿದ್ದು ಯಾರೆಂದು ಪರೀಕ್ಷಿಸುವುದಕ್ಕಾಗಿ ಅಬೂ ಮೂಸಾ ಹೀಗೆ ಕೇಳಿದ್ದರು. ಹಿತ್ತಾನ್ ನಿರಾಕರಿಸುತ್ತಾ ಹೇಳಿದರು: "ನಾನೇ ಅದನ್ನು ಹೇಳಿದ್ದೇನೆಂದು ಭಾವಿಸಿ ನೀವು ನನ್ನನ್ನು ಗದರಿಸುವಿರಿ ಎಂದು ನನಗೆ ಭಯವಿತ್ತು." ಆಗ ಜನರ ನಡುವಿನಿಂದ ಒಬ್ಬ ವ್ಯಕ್ತಿ ಎದ್ದು ನಿಂತು ಹೇಳಿದರು: "ನಾನೇ ಅದನ್ನು ಹೇಳಿದ್ದು. ಆದರೆ ನಾನು ಒಳಿತಲ್ಲದೆ ಬೇರೇನೂ ಉದ್ದೇಶಿಸಿಲ್ಲ." ಆಗ ಅಬೂ ಮೂಸಾ ಆ ವ್ಯಕ್ತಿಗೆ ಕಲಿಸಿಕೊಡುತ್ತಾ ಹೇಳಿದರು: "ನೀವು ನಮಾಝಿನಲ್ಲಿ ಹೇಗೆ ಮಾತನಾಡಬೇಕೆಂದು ನಿಮಗೆ ತಿಳಿದಿಲ್ಲವೇ?" ಅವರು ಅಸಮ್ಮತಿ ಸೂಚಿಸುವ ರೂಪದಲ್ಲಿ ಹೇಳಿದ್ದರು. ನಂತರ ಅಬೂ ಮೂಸಾ ಹೇಳಿದರು: ಒಂದು ದಿನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ನಮಗೆ ಇಸ್ಲಾಮೀ ಕಾನೂನನ್ನು ವಿವರಿಸಿದರು ಮತ್ತು ನಮಾಝ್ ನಿರ್ವಹಿಸುವ ರೂಪವನ್ನು ಕಲಿಸಿದರು. ನಂತರ ಹೇಳಿದರು: ನೀವು ನಮಾಝ್ ನಿರ್ವಹಿಸುವಾಗ ಸಾಲನ್ನು ನೇರಗೊಳಿಸಿರಿ ಮತ್ತು ಸಾಲಿನಲ್ಲಿ ನೇರವಾಗಿ ನಿಲ್ಲಿರಿ. ನಂತರ ಜನರಲ್ಲೊಬ್ಬರು ನಮಾಝಿಗೆ ಮುಂದಾಳುತ್ವ (ಇಮಾಮ್) ವಹಿಸಲಿ. ಇಮಾಂ ಅಲ್ಲಾಹು ಅಕ್ಬರ್ ಎಂದು ತಕ್ಬೀರ್ ಹೇಳುವಾಗ ನೀವು ಕೂಡ ತಕ್ಬೀರ್ ಹೇಳಿರಿ. ಇಮಾಂ ಸೂರ ಫಾತಿಹ ಪಠಿಸುತ್ತಾ "ಗೈರಿಲ್ ಮಗ್‌ದೂಬಿ ಅಲೈಹಿಂ ವಲದ್ದಾಲ್ಲೀನ್" ಎಂದು ಹೇಳಿದರೆ, ನೀವು "ಆಮೀನ್" ಎಂದು ಹೇಳಿರಿ. ನೀವು ಹೀಗೆ ಮಾಡಿದರೆ ಅಲ್ಲಾಹು ನಿಮ್ಮ ಪ್ರಾರ್ಥನೆಗೆ ಉತ್ತರಿಸುತ್ತಾನೆ. ಇಮಾಂ ತಕ್ಬೀರ್ ಹೇಳಿ ರುಕೂ ಮಾಡಿದರೆ ನೀವು ಕೂಡ ತಕ್ಬೀರ್ ಹೇಳಿ ರುಕೂ ಮಾಡಿರಿ. ಇಮಾಂ ನಿಮಗಿಂತ ಮೊದಲು ರುಕೂ ಮಾಡುತ್ತಾರೆ ಮತ್ತು ನಿಮಗಿಂತ ಮೊದಲು ತಲೆಯೆತ್ತುತ್ತಾರೆ. ನೀವು ಅವರಿಗಿಂತ ಮುಂದೆ ಹೋಗಬಾರದು. ಇಮಾಂ ನಿಮಗಿಂತ ಮೊದಲು ರುಕೂ ಮಾಡಿದ ಆ ಕ್ಷಣಗಳು ಅವರು ರುಕೂನಿಂದ ತಲೆಯೆತ್ತಿದ ಬಳಿಕ ನೀವು ರುಕೂನಲ್ಲಿ ಉಳಿಯುವ ಮೂಲಕ ನಿಮಗೆ ಸರಿಹೊಂದಿಸಲಾಗುತ್ತದೆ. ಆ ಕ್ಷಣಗಳಿಗೆ ಈ ಕ್ಷಣಗಳು ಸರಿಹೊಂದುತ್ತವೆ. ಆಗ ನೀವು ರುಕೂನಲ್ಲಿ ಉಳಿಯುವ ಸಮಯವು ಇಮಾಂ ರುಕೂನಲ್ಲಿ ಉಳಿಯುವ ಸಮಯಕ್ಕೆ ಸರಿಸಮವಾಗುತ್ತದೆ. ಇಮಾಂ "ಸಮಿಅಲ್ಲಾಹು ಲಿಮನ್ ಹಮಿದ" ಎಂದು ಹೇಳಿದರೆ, ನೀವು "ಅಲ್ಲಾಹುಮ್ಮ ರಬ್ಬನಾ ವಲಕಲ್ ಹಮ್ದ್" ಎಂದು ಹೇಳಿರಿ. ನೀವು ಹಾಗೆ ಹೇಳಿದರೆ, ಅಲ್ಲಾಹು ನಿಮ್ಮ ಪ್ರಾರ್ಥನೆ ಮತ್ತು ಮಾತುಗಳನ್ನು ಕೇಳುತ್ತಾನೆ. ಏಕೆಂದರೆ, ಅಲ್ಲಾಹು ಅವನ ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಲಗೆಯ ಮೂಲಕ, "ಅಲ್ಲಾಹು ಅವನನ್ನು ಪ್ರಶಂಸಿಸುವವರ ಮಾತನ್ನು ಕೇಳುತ್ತಾನೆ" ಎಂದು ಹೇಳಿದ್ದಾನೆ.ನಂತರ ಇಮಾಂ ತಕ್ಬೀರ್ ಎಂದು ಹೇಳಿ, ಸುಜೂದ್ ಮಾಡಿದರೆ, ನೀವು ಕೂಡ ತಕ್ಬೀರ್ ಹೇಳಿ ಸುಜೂದ್ ಮಾಡಿರಿ. ಇಮಾಂ ನಿಮಗಿಂತ ಮೊದಲು ಸುಜೂದ್ ಮಾಡುತ್ತಾರೆ ಮತ್ತು ನಿಮಗಿಂತ ಮೊದಲು ತಲೆ ಎತ್ತುತ್ತಾರೆ. ಆಗ ಆ ಕ್ಷಣಗಳು ಈ ಕ್ಷಣಗಳಿಗೆ ಸರಿಹೊಂದುತ್ತವೆ ಮತ್ತು ನೀವು ರುಕೂನಲ್ಲಿ ಉಳಿಯುವ ಸಮಯವು ಇಮಾಂ ರುಕೂನಲ್ಲಿ ಉಳಿಯುವ ಸಮಯಕ್ಕೆ ಸರಿಸಮವಾಗುತ್ತದೆ.ನಂತರ ತಶಹ್ಹುದ್‌ಗಾಗಿ ಕೂರುವ ಸ್ಥಿತಿಗೆ ತಲುಪಿದಾಗ ನೀವು ಪ್ರಪ್ರಥಮವಾಗಿ ಹೇಳುವ ಮಾತು ಇದಾಗಿರಲಿ: "ಅತ್ತಹಿಯ್ಯಾತು ಅತ್ತಯ್ಯಿಬಾತು ಅಸ್ಸಲವಾತು ಲಿಲ್ಲಾಹಿ." ಅಂದರೆ, ಸಾರ್ವಭೌಮತ್ವ, ಶಾಶ್ವತತೆ ಮತ್ತು ಪರಮೋಚ್ಛತೆ ಕೇವಲ ಅಲ್ಲಾಹನಿಗೆ ಮಾತ್ರ ಅರ್ಹವಾಗಿದೆ. ಅದೇ ರೀತಿ ಐದು ವೇಳೆಯ ನಮಾಝ್‌ಗಳು ಅಲ್ಲಾಹನಿಗಾಗಿವೆ. "ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್." ಅಂದರೆ, ನಾವು ಅಲ್ಲಾಹನಲ್ಲಿ ಎಲ್ಲಾ ರೀತಿಯ ಕುಂದು-ಕೊರತೆಗಳು, ಆಪತ್ತುಗಳು ಮತ್ತು ನ್ಯೂನತೆಗಳಿಂದ ರಕ್ಷೆಯನ್ನು ಬೇಡುತ್ತೇವೆ. ನಂತರ ನಾವು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶೇಷವಾಗಿ ಪ್ರಾರ್ಥಿಸುತ್ತೇವೆ. ನಂತರ ಸ್ವತಃ ನಮಗೂ, ಅಲ್ಲಾಹನ ಎಲ್ಲಾ ಹಕ್ಕುಗಳನ್ನು ಮತ್ತು ಮನುಷ್ಯರ ಎಲ್ಲಾ ಹಕ್ಕುಗಳನ್ನು ನೆರವೇರಿಸುವ ಅಲ್ಲಾಹನ ಎಲ್ಲಾ ನೀತಿವಂತ ದಾಸರಿಗೂ ಸಲಾಂ ಹೇಳುತ್ತೇವೆ. ನಂತರ ನಾವು, "ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು" ಎಂದು ಸಾಕ್ಷ್ಯವಹಿಸುತ್ತೇವೆ.

فوائد الحديث

ತಶಹ್ಹುದ್‌ನ ರೂಪಗಳಲ್ಲಿ ಒಂದು ರೂಪವನ್ನು ವಿವರಿಸಲಾಗಿದೆ.

ನಮಾಝಿನಲ್ಲಿ ಮಾಡುವ ಕ್ರಿಯೆಗಳು ಮತ್ತು ಹೇಳುವ ಮಾತುಗಳು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಬೀತಾಗಿರಬೇಕು. ಪ್ರವಾದಿಚರ್ಯೆಯಲ್ಲಿ ಸಾಬೀತಾಗದ ಯಾವುದೇ ಮಾತು ಅಥವಾ ಕ್ರಿಯೆಯನ್ನು ಸ್ವಯಂ ನಿರ್ಮಿಸಲು ಯಾರಿಗೂ ಅನುಮತಿಯಿಲ್ಲ.

ಇಮಾಮರ ಹಿಂದೆ ನಮಾಝ್ ಮಾಡುವಾಗ ಅವರನ್ನು ದಾಟಿ ಮುಂದಕ್ಕೆ ಹೋಗಬಾರದು ಮತ್ತು ಬಹಳ ಹಿಂದೆಯೂ ಉಳಿಯಬಾರದು. ಇಮಾಮರ ಹಿಂದೆ ನಮಾಝ್ ಮಾಡುವವರು ಇಮಾಮರ ಎಲ್ಲಾ ಕ್ರಿಯೆಗಳನ್ನು ಹಿಂಬಾಲಿಸಬೇಕು.

ಸಂದೇಶವನ್ನು ತಲುಪಿಸುವುದಕ್ಕೆ ಮತ್ತು ಸಮುದಾಯಕ್ಕೆ ಧಾರ್ಮಿಕ ನಿಯಮಗಳನ್ನು ಕಲಿಸುವುದಕ್ಕೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡುತ್ತಿದ್ದ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.

ಇಮಾಂ ಅವರ ಹಿಂಬಾಲಕರಿಗೆ ಮಾದರಿಯಾಗಿದ್ದಾರೆ. ಆದ್ದರಿಂದ ನಮಾಝ್‌ನ ಯಾವುದೇ ಕ್ರಿಯೆಯನ್ನು ಇಮಾಮರಿಗಿಂತ ಮೊದಲು ನಿರ್ವಹಿಸಬಾರದು ಮತ್ತು ಇಮಾಮರ ಜೊತೆ ಜೊತೆಯಾಗಿಯೂ ನಿರ್ವಹಿಸಬಾರದು. ಇಮಾಮರಿಗಿಂತ ಬಹಳ ತಡವಾಗಿಯೂ ನಿರ್ವಹಿಸಬಾರದು. ಬದಲಿಗೆ, ಇಮಾಮರು ಒಂದು ಕ್ರಿಯೆಯಲ್ಲಿ ಪ್ರವೇಶಿಸಿದ್ದಾರೆಂದು ಖಾತ್ರಿಯಾದ ನಂತರ ಆ ಕ್ರಿಯೆಯನ್ನು ಮಾಡಬೇಕು.

ನಮಾಝ್ ಮಾಡುವಾಗ ಸಾಲುಗಳನ್ನು ಸರಿಪಡಿಸಬೇಕು.

التصنيفات

Method of Prayer, Rulings of the Imam and Followers in Prayer