إعدادات العرض
. .
. .
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾಲ್ಕು ಲಕ್ಷಣಗಳು—ಇವು ಯಾರಲ್ಲಿವೆಯೋ ಅವನು ಶುದ್ಧ ಕಪಟವಿಶ್ವಾಸಿಯಾಗಿದ್ದಾನೆ. ಇವುಗಳಲ್ಲೊಂದು ಅಂಶ ಯಾರಲ್ಲಿದೆಯೋ ಅವನು ಅದನ್ನು ತೊರೆಯುವ ತನಕ ಕಾಪಟ್ಯದ ಒಂದಂಶವನ್ನು ಹೊಂದಿರುತ್ತಾನೆ. ಮಾತನಾಡಿದರೆ ಸುಳ್ಳು ಹೇಳುವುದು, ಕರಾರು ಮಾಡಿದರೆ ದ್ರೋಹವೆಸಗುವುದು, ಮಾತು ಕೊಟ್ಟರೆ ಉಲ್ಲಂಘಿಸುವುದು ಮತ್ತು ತರ್ಕಿಸಿದರೆ ಕೆಟ್ಟದಾಗಿ ವರ್ತಿಸುವುದು."
الترجمة
العربية অসমীয়া Bahasa Indonesia Kiswahili Tagalog Tiếng Việt ગુજરાતી Nederlands සිංහල Hausa پښتو नेपाली اردو Кыргызча മലയാളം English Svenska Română Kurdî Bosanski فارسی తెలుగు ქართული Moore Српски Magyar Português Македонски Čeština Русский Українська አማርኛ Malagasy Kinyarwanda Wolof ไทยالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಾಲ್ಕು ಲಕ್ಷಣಗಳ ಬಗ್ಗೆ ಎಚ್ಚರಿಸಿದ್ದಾರೆ. ಇವು ಒಬ್ಬ ಮುಸಲ್ಮಾನನಲ್ಲಿ ಒಟ್ಟುಗೂಡಿದರೆ ಅವನು ಈ ಲಕ್ಷಣಗಳಿಂದಾಗಿ ಕಪಟವಿಶ್ವಾಸಿಗಳನ್ನು ತೀವ್ರವಾಗಿ ಹೋಲುತ್ತಾನೆ. ಯಾರಲ್ಲಿ ಈ ಲಕ್ಷಣಗಳು ಹೆಚ್ಚಾಗಿ ಕಾಣುತ್ತವೆಯೋ ಅವರು ಇದರಲ್ಲಿ ಸೇರುತ್ತಾರೆ. ಆದರೆ, ಯಾರಲ್ಲಿ ಈ ಲಕ್ಷಣಗಳು ಅಪರೂಪವಾಗಿ ಕಾಣುತ್ತವೆಯೋ ಅವರು ಇದರಲ್ಲಿ ಸೇರುವುದಿಲ್ಲ. ಆ ಲಕ್ಷಣಗಳು ಯಾವುದೆಂದರೆ: ಒಂದು: ಮಾತನಾಡುವಾಗ ಉದ್ದೇಶಪೂರ್ವಕ ಸುಳ್ಳು ಹೇಳುವುದು ಮತ್ತು ಮಾತಿನಲ್ಲಿ ಪ್ರಾಮಾಣಿಕತೆಯನ್ನು ಪಾಲಿಸದಿರುವುದು. ಎರಡು: ಯಾವುದಾದರೂ ಕರಾರು ಮಾಡಿಕೊಂಡರೆ ಅದನ್ನು ನೆರವೇರಿಸದಿರುವುದು ಮತ್ತು ಕರಾರು ಮಾಡಿಕೊಂಡವನಿಗೆ ದ್ರೋಹವೆಸಗುವುದು. ಮೂರು: ಭರವಸೆ ನೀಡಿದರೆ ಅದನ್ನು ಪೂರ್ತಿ ಮಾಡದೆ ಮೋಸ ಮಾಡುವುದು. ನಾಲ್ಕು: ಯಾರಾದರೂ ಒಬ್ಬರೊಂದಿಗೆ ತರ್ಕ ಮಾಡಿದರೆ ಅಥವಾ ಜಗಳವಾಡಿದರೆ, ತೀವ್ರ ಸ್ವರೂಪದಲ್ಲಿ ತರ್ಕಿಸುತ್ತಾ ಸತ್ಯದಿಂದ ದೂರ ಸರಿಯುವುದು, ವಾದದಲ್ಲಿ ಕುತರ್ಕಗಳನ್ನು ಬಳಸುವುದು ಮತ್ತು ಸುಳ್ಳುಗಳನ್ನು ಹೇಳುವುದು. ಕಾಪಟ್ಯ ಎಂದರೆ ಒಳಗಿರುವುದಕ್ಕೆ ವಿರುದ್ಧವಾಗಿರುವುದನ್ನು ಹೊರಗಡೆ ತೋರಿಸುವುದಾಗಿದೆ. ಈ ಲಕ್ಷಣಗಳನ್ನು ಹೊಂದಿರುವವರಲ್ಲಿ ಇದು ಕಂಡುಬರುತ್ತದೆ. ಅವರು ಯಾರೊಡನೆ ಮಾತನಾಡುತ್ತಾರೋ, ಯಾರಿಗೆ ಭರವಸೆ ನೀಡುತ್ತಾರೋ, ಯಾರು ಅವರ ಮೇಲೆ ವಿಶ್ವಾಸವಿಡುತ್ತಾರೋ, ಯಾರೊಂದಿಗೆ ಅವರು ತರ್ಕ ಮಾಡುತ್ತಾರೋ, ಯಾರಿಗೆ ಅವರು ಮಾತು ಕೊಡುತ್ತಾರೋ ಅವರೊಂದಿಗೆ ಇವರ ಕಾಪಟ್ಯವು ಇರುತ್ತದೆಯೇ ಹೊರತು ಇವರು ಹೊರಗೆ ಮುಸ್ಲಿಮರಂತೆ ವರ್ತಿಸುತ್ತಾ ಒಳಗೆ ಸತ್ಯನಿಷೇಧವನ್ನು ಹೊಂದಿರುವ ಇಸ್ಲಾಂನಲ್ಲಿರುವ ಕಪಟವಿಶ್ವಾಸಿಗಳಲ್ಲ. ಯಾರಲ್ಲಿ ಈ ಲಕ್ಷಣಗಳಲ್ಲೊಂದು ಇರುತ್ತದೆಯೋ ಅವರು ಅದನ್ನು ತೊರೆಯುವ ತನಕ ಅವರಲ್ಲಿ ಕಾಪಟ್ಯದ ಒಂದು ಅಂಶವಿರುತ್ತದೆ.فوائد الحديث
ಭಯಪಡಿಸುವುದಕ್ಕಾಗಿ ಮತ್ತು ಕಾಪಟ್ಯದಲ್ಲಿ ಒಳಪಡದಂತೆ ಎಚ್ಚರ ವಹಿಸುವುದಕ್ಕಾಗಿ ಕಪಟವಿಶ್ವಾಸಿಗಳ ಕೆಲವು ಚಿಹ್ನೆಗಳನ್ನು ವಿವರಿಸಲಾಗಿದೆ.
ಹದೀಸಿನ ಸಾರಾಂಶವೇನೆಂದರೆ, ಈ ಲಕ್ಷಣಗಳು ಕಪಟವಿಶ್ವಾಸಿಯ ಲಕ್ಷಣಗಳಾಗಿವೆ. ಇವುಗಳನ್ನು ಹೊಂದಿರುವವನು ಈ ಲಕ್ಷಣಗಳಲ್ಲಿ ಕಪಟವಿಶ್ವಾಸಿಯನ್ನು ಹೋಲುತ್ತಾನೆ ಮತ್ತು ಅವರ ಸ್ವಭಾವಗಳನ್ನು ಹೊಂದಿದವನಾಗಿದ್ದಾನೆ. ಅಂದರೆ, ಅವನು ಆಂತರ್ಯದಲ್ಲಿ ಕಾಪಟ್ಯವನ್ನು ಬಚ್ಚಿಟ್ಟು ಹೊರಗೆ ಇಸ್ಲಾಮನ್ನು ಪ್ರಕಟಗೊಳಿಸುವ ಕಪಟವಿಶ್ವಾಸಿಯಲ್ಲ. ಇಲ್ಲಿ ಹೇಳಿರುವುದು ಯಾರಲ್ಲಿ ಈ ಲಕ್ಷಣಗಳು ಪ್ರಬಲವಾಗಿರುತ್ತವೋ ಮತ್ತು ಯಾರು ಇವುಗಳನ್ನು ಲಘುವಾಗಿ ಪರಿಗಣಿಸಿ ಇವುಗಳ ಬಗ್ಗೆ ಎಚ್ಚರಿಕೆ ವಹಿಸುವುದಿಲ್ಲವೋ ಅವರ ಬಗ್ಗೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಯಾರ ಸ್ಥಿತಿಯು ಹೀಗಿರುತ್ತದೋ ಅವನು ಹೆಚ್ಚಿನ ಸಂದರ್ಭಗಳಲ್ಲೂ ಭ್ರಷ್ಟ ವಿಶ್ವಾಸವನ್ನು ಹೊಂದಿರುತ್ತಾನೆ.
ಗಝ್ಝಾಲಿ ಹೇಳಿದರು: "ಧರ್ಮದ ತಿರುಳು ಮೂರು ವಿಷಯಗಳಿಗೆ ಸೀಮಿತವಾಗಿದೆ. ಮಾತು, ಕರ್ಮ ಮತ್ತು ಉದ್ದೇಶ. ಸುಳ್ಳಿನಿಂದ ಮಾತು ಭ್ರಷ್ಟವಾಗುತ್ತದೆ, ವಂಚನೆಯಿಂದ ಕರ್ಮವು ಭ್ರಷ್ಟವಾಗುತ್ತದೆ ಮತ್ತು ಉಲ್ಲಂಘನೆಯಿಂದ ಉದ್ದೇಶವು ಭ್ರಷ್ಟವಾಗುತ್ತದೆ ಎಂದು ಇಲ್ಲಿ ಸೂಚಿಸಲಾಗಿದೆ. ಏಕೆಂದರೆ, ವಾಗ್ದಾನವನ್ನು ಮುರಿಯುವ ದೃಢಸಂಕಲ್ಪದೊಂದಿಗೆ ವಾಗ್ದಾನವನ್ನು ಮಾಡಿರುವ ಹೊರತು ಅದನ್ನು ಮುರಿಯುವುದು ಆಕ್ಷೇಪಾರ್ಹವಲ್ಲ. ಆದರೆ, ಅವನು ವಾಗ್ದಾನವನ್ನು ನೆರವೇರಿಸುವ ದೃಢಸಂಕಲ್ಪವನ್ನು ಹೊಂದಿದ್ದು, ನಂತರ ಯಾವುದೋ ಕಾರಣದಿಂದ ಅವನು ಅದನ್ನು ನೆರವೇರಿಸದಿದ್ದರೆ, ಅಥವಾ ಅವನು ತನ್ನ ಮನಸ್ಸನ್ನು ಬದಲಾಯಿಸಿದರೆ, ಅದನ್ನು ಕಾಪಟ್ಯವೆಂದು ಹೇಳಲಾಗುವುದಿಲ್ಲ."
ಕಾಪಟ್ಯದಲ್ಲಿ ಎರಡು ವಿಧಗಳಿವೆ. ವಿಶ್ವಾಸಕ್ಕೆ ಸಂಬಂಧಿಸಿದ ಕಾಪಟ್ಯ. ಇದರಿಂದ ಆ ವ್ಯಕ್ತಿ ಸತ್ಯವಿಶ್ವಾಸದಿಂದ ಹೊರಹೋಗುತ್ತಾನೆ. ಇದು ಹೊರಗೆ ಮುಸಲ್ಮಾನನೆಂದು ತೋರಿಸುತ್ತಾ ಒಳಗೆ ಸತ್ಯನಿಷೇಧವನ್ನು ಬಚ್ಚಿಡುವವರ ಸ್ಥಿತಿಯಾಗಿದೆ. ಇನ್ನೊಂದು ಕರ್ಮಕ್ಕೆ ಸಂಬಂಧಿಸಿದ ಕಾಪಟ್ಯ. ಇದು ಸ್ವಭಾವದಲ್ಲಿ ಕಪಟವಿಶ್ವಾಸಿಗಳನ್ನು ಹೋಲುವುದು. ಇದು ಆ ವ್ಯಕ್ತಿಯನ್ನು ಸತ್ಯವಿಶ್ವಾಸದಿಂದ ಹೊರಹಾಕುವುದಿಲ್ಲ. ಅವನು ಮಾಡುವ ಕರ್ಮವು ಮಹಾಪಾಪವಾಗಿರದಿದ್ದರೆ.
ಇಬ್ನ್ ಹಜರ್ ಹೇಳಿದರು: "ಯಾರು ತನ್ನ ಹೃದಯ ಮತ್ತು ನಾಲಗೆಯಲ್ಲಿ ಸತ್ಯವಂತನಾಗಿದ್ದು, ಈ ಲಕ್ಷಣಗಳಿರುವ ಕೆಲಸಗಳನ್ನು ಮಾಡಿದರೆ, ಅವನನ್ನು ಸತ್ಯನಿಷೇಧಿಯೆಂದು ವಿಧಿ ನೀಡಲಾಗುವುದಿಲ್ಲ. ಅವನು ನರಕದಲ್ಲಿ ಶಾಶ್ವತವಾಗಿ ವಾಸಿಸುವ ಕಪಟವಿಶ್ವಾಸಿಯಲ್ಲ."
ನವವಿ ಹೇಳಿದರು: "ಒಂದು ಗುಂಪು ವಿದ್ವಾಂಸರು ಹೇಳಿದರು: ಇಲ್ಲಿ ಹೇಳಿರುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿದ್ದ ಕಪಟವಿಶ್ವಾಸಿಗಳ ಬಗ್ಗೆಯಾಗಿದೆ. ಅವರು ತಮ್ಮ ವಿಶ್ವಾಸದ ಬಗ್ಗೆ ಸುಳ್ಳು ಹೇಳಿದರು, ಅವರ ಧರ್ಮದ ವಿಷಯದಲ್ಲಿ ಅವರ ಮೇಲೆ ನಂಬಿಕೆಯಿಟ್ಟಾಗ ನಂಬಿಕೆದ್ರೋಹ ಮಾಡಿದರು, ಧರ್ಮದ ಬಗ್ಗೆ ಮತ್ತು ಅದಕ್ಕೆ ಸಹಾಯ ಮಾಡುವ ಬಗ್ಗೆ ಭರವಸೆಯನ್ನು ನೀಡಿ ಉಲ್ಲಂಘಿಸಿದರು ಮತ್ತು ತಮ್ಮ ತರ್ಕಗಳಲ್ಲಿ ಅಸಭ್ಯವಾಗಿ ವರ್ತಿಸಿದರು."