ಮಹಾಪಾಪಗಳು ಎಂದರೆ: ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು, ಮಾತಾಪಿತರಿಗೆ ಅವಿಧೇಯತೆ ತೋರುವುದು, ನರಹತ್ಯೆ ಮಾಡುವುದು…

ಮಹಾಪಾಪಗಳು ಎಂದರೆ: ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು, ಮಾತಾಪಿತರಿಗೆ ಅವಿಧೇಯತೆ ತೋರುವುದು, ನರಹತ್ಯೆ ಮಾಡುವುದು ಮತ್ತು ಸುಳ್ಳು ಪ್ರಮಾಣ ಮಾಡುವುದು

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಹಾಪಾಪಗಳು ಎಂದರೆ: ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು, ಮಾತಾಪಿತರಿಗೆ ಅವಿಧೇಯತೆ ತೋರುವುದು, ನರಹತ್ಯೆ ಮಾಡುವುದು ಮತ್ತು ಸುಳ್ಳು ಪ್ರಮಾಣ ಮಾಡುವುದು."

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮಹಾಪಾಪಗಳನ್ನು ವಿವರಿಸುತ್ತಿದ್ದಾರೆ. ಇಹಲೋಕದಲ್ಲಿ ಅಥವಾ ಪರಲೋಕದಲ್ಲಿ ಕಠೋರ ಶಿಕ್ಷೆಯ ಎಚ್ಚರಿಕೆಯನ್ನು ನೀಡಲಾದ ಪಾಪಗಳೆಲ್ಲವೂ ಮಹಾಪಾಪಗಳಾಗಿವೆ. ಅವುಗಳಲ್ಲಿ ಮೊದಲನೆಯದು ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು: ಅಂದರೆ ಆರಾಧನೆಗಳಲ್ಲಿ ಸೇರಿದ ಯಾವುದಾದರೂ ಒಂದನ್ನು ಅಲ್ಲಾಹನ ಹೊರತಾದವರಿಗೆ ಅರ್ಪಿಸುವುದು, ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುವ ಅವನ ಪ್ರಭುತ್ವದಲ್ಲಿ, ದೈವಿಕತೆಯಲ್ಲಿ ಮತ್ತು ಅವನ ಹೆಸರು ಹಾಗೂ ಗುಣಲಕ್ಷಣಗಳಲ್ಲಿ ಅವನ ಹೊರತಾದವರನ್ನು ಅವನಿಗೆ ಸರಿಸಾಟಿಯಾಗಿ ಮಾಡುವುದು. ಎರಡನೆಯದು ಮಾತಾಪಿತರಿಗೆ ಅವಿಧೇಯತೆ ತೋರುವುದು: ಮಾತಾಪಿತರನ್ನು ನೋಯಿಸುವುದು, ಅದು ಮಾತಿನ ಮೂಲಕ ಅಥವಾ ವರ್ತನೆಯ ಮೂಲಕವಾದರೂ ಸಹ, ಮತ್ತು ಅವರೊಡನೆ ಉತ್ತಮ ರೀತಿಯಲ್ಲಿ ವರ್ತಿಸದಿರುವುದು ಅವಿಧೇಯತೆಗಳಾಗಿವೆ. ಮೂರನೇಯದು ನರಹತ್ಯೆ ಮಾಡುವುದು: ಅಂದರೆ ಅನ್ಯಾಯವಾಗಿ ಅಥವಾ ದ್ವೇಷದಿಂದ ಯಾರನ್ನಾದರೂ ಕೊಲ್ಲುವುದು. ನಾಲ್ಕನೆಯದು ಸುಳ್ಳು ಪ್ರಮಾಣ ಮಾಡುವುದು: ಅಂದರೆ ಸುಳ್ಳೆಂದು ತಿಳಿದೂ ಸಹ ಸುಳ್ಳು ಪ್ರಮಾಣ ಮಾಡುವುದು. ಇದನ್ನು ಅರಬ್ಬಿ ಭಾಷೆಯಲ್ಲಿ ಗಮೂಸ್ ಎಂದು ಕರೆಯಲು ಕಾರಣವೇನೆಂದರೆ ಇದು ಅದನ್ನು ಮಾಡುವವರನ್ನು ಪಾಪದಲ್ಲಿ ಅಥವಾ ನರಕದಲ್ಲಿ ಮುಳುಗಿಸುತ್ತದೆ.

فوائد الحديث

ಸುಳ್ಳು ಪ್ರಮಾಣವು ಅತ್ಯಂತ ಅಪಾಯಕಾರಿ ಮತ್ತು ಮಹಾ ಅಪರಾಧವಾಗಿರುವುದರಿಂದ ಅದಕ್ಕೆ ಪ್ರಾಯಶ್ಚಿತ್ತವಿಲ್ಲ. ಅದಕ್ಕಿರುವುದು ಪಶ್ಚಾತ್ತಾಪ ಮಾತ್ರ.

ಇಲ್ಲಿ ನಾಲ್ಕು ಮಹಾಪಾಪಗಳ ಬಗ್ಗೆ ಮಾತ್ರ ಉಲ್ಲೇಖಿಸಿದ್ದು ಆ ಪಾಪಗಳ ಭಯಾನಕತೆಯನ್ನು ವಿವರಿಸುವುದಕ್ಕಾಗಿದೆಯೇ ಹೊರತು ಅವುಗಳ ಸಂಖ್ಯೆಯನ್ನು ನಾಲ್ಕಕ್ಕೆ ಸೀಮಿತಗೊಳಿಸುವುದಕ್ಕಲ್ಲ.

ಪಾಪಗಳಲ್ಲಿ ಮಹಾಪಾಪಗಳು ಮತ್ತು ಸಣ್ಣ ಪಾಪಗಳಿವೆ. ಮಹಾಪಾಪ ಎಂದರೆ ಇಹಲೋಕದಲ್ಲೇ ಶಿಕ್ಷೆಯನ್ನು ನಿಶ್ಚಯಿಸಲಾದ ಪಾಪಗಳು. ಉದಾಹರಣೆಗೆ, ಕಾನೂನಿನಲ್ಲಿ ನಿಗದಿಪಡಿಸಲಾದ ಶಿಕ್ಷೆಗಳಿರುವ, ಅಥವಾ ಶಾಪವಿದೆಯೆಂದು ಹೇಳಲಾದ ಇಹಲೋಕದಲ್ಲೇ ಶಿಕ್ಷೆ ನೀಡಲಾಗುವ ಪಾಪಗಳು. ಅಥವಾ ಪರಲೋಕದಲ್ಲಿ ನರಕ ಶಿಕ್ಷೆಯಿದೆಯೆಂದು ಎಚ್ಚರಿಕೆ ನೀಡಲಾದ ಪಾಪಗಳು. ಮಹಾಪಾಪಗಳಲ್ಲಿ ವಿಭಿನ್ನ ದರ್ಜೆಗಳಿವೆ. ನಿಷೇಧದಲ್ಲಿ ಕೆಲವು ಪಾಪಗಳು ಇತರ ಪಾಪಗಳಿಗಿಂತಲೂ ಕಠೋರವಾಗಿದೆ. ಮಹಾಪಾಪಗಳಿಗೆ ಹೊರತಾದ ಪಾಪಗಳೆಲ್ಲವೂ ಸಣ್ಣ ಪಾಪಗಳಾಗಿವೆ.

التصنيفات

Condemning Sins