ಮರಳಿಹೋಗಿ ನಮಾಝ್ ಮಾಡಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ

ಮರಳಿಹೋಗಿ ನಮಾಝ್ ಮಾಡಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸಿದರು. ಆಗ ಒಬ್ಬ ವ್ಯಕ್ತಿ ಮಸೀದಿಯನ್ನು ಪ್ರವೇಶಿಸಿ ನಮಾಝ್ ಮಾಡಿದರು. ನಂತರ ಅವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಲಾಮ್ ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಲಾಮ್‌ಗೆ ಉತ್ತರಿಸಿ ಹೇಳಿದರು: "ಮರಳಿಹೋಗಿ ನಮಾಝ್ ಮಾಡಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ." ಆ ವ್ಯಕ್ತಿ ಮೊದಲಿನಂತೆ ನಮಾಝ್ ಮಾಡಿ ಮತ್ತೆ ಬಂದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಲಾಮ್ ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮರಳಿಹೋಗಿ ನಮಾಝ್ ಮಾಡಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ." ಹೀಗೆ ಮೂರು ಬಾರಿ ನಡೆಯಿತು. ಆಗ ಆ ವ್ಯಕ್ತಿ ಹೇಳಿದರು: "ನಿಮ್ಮನ್ನು ಸತ್ಯದೊಂದಿಗೆ ಕಳುಹಿಸಿದವನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನನಗೆ ಇದಕ್ಕಿಂತ ಉತ್ತಮವಾಗಿ ನಮಾಝ್ ಮಾಡಲು ಬರುವುದಿಲ್ಲ. ಆದ್ದರಿಂದ ನನಗೆ ಕಲಿಸಿಕೊಡಿರಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ನಮಾಝ್‌ಗೆ ನಿಂತಾಗ ತಕ್ಬೀರ್ (ಅಲ್ಲಾಹು ಅಕ್ಬರ್) ಹೇಳಿರಿ. ನಂತರ ಕುರ್‌ಆನ್‌ನಿಂದ ನಿಮಗೆ ಸುಲಭವಾದಷ್ಟನ್ನು ಪಠಿಸಿರಿ. ನಂತರ ನೀವು ರುಕೂಅ್‌ನಲ್ಲಿ ಸಂಪೂರ್ಣವಾಗಿ ಶಾಂತವಾಗುವವರೆಗೆ ರುಕೂಅ್ ಮಾಡಿರಿ. ನಂತರ ನೀವು ನೇರವಾಗಿ ನಿಲ್ಲುವವರೆಗೆ ಎದ್ದೇಳಿರಿ. ನಂತರ ನೀವು ಸುಜೂದ್‌ನಲ್ಲಿ ಸಂಪೂರ್ಣವಾಗಿ ಶಾಂತವಾಗುವವರೆಗೆ ಸುಜೂದ್ ಮಾಡಿರಿ. ನಂತರ ನೀವು ಸಂಪೂರ್ಣ ಶಾಂತಚಿತ್ತರಾಗಿ ಕೂರುವವರೆಗೆ ಕುಳಿತುಕೊಳ್ಳಿರಿ. ನಿಮ್ಮ ಎಲ್ಲಾ ನಮಾಝ್‌ಗಳಲ್ಲೂ ಹೀಗೆಯೇ ಮಾಡಿರಿ."

[صحيح] [متفق عليه]

الشرح

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸಿದರು. ಅವರ ನಂತರ ಒಬ್ಬ ವ್ಯಕ್ತಿ ಪ್ರವೇಶಿಸಿ ಆತುರದಿಂದ ಎರಡು ರಕ್ಅತ್ ನಮಾಝ್ ಮಾಡಿದರು. ಅವರು ಕಿಯಾಮ್, ರುಕೂಅ್ ಮತ್ತು ಸುಜೂದ್‌ನಲ್ಲಿ ಶಾಂತಚಿತ್ತರಾಗಿರಲಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಆ ವ್ಯಕ್ತಿಯ ನಮಾಝನ್ನು ಗಮನಿಸುತ್ತಿದ್ದರು. ನಂತರ ಆತ ಮಸೀದಿಯ ಒಂದು ಬದಿಯಲ್ಲಿ ಕುಳಿತಿದ್ದ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರಿಗೆ ಸಲಾಮ್ ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರ ಸಲಾಮ್‌ಗೆ ಉತ್ತರಿಸಿ ಹೇಳಿದರು: "ಮರಳಿ ಹೋಗಿ, ಪುನಃ ನಮಾಝ್ ನಿರ್ವಹಿಸಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ." ಆ ವ್ಯಕ್ತಿ ಮೊದಲಿನಂತೆ ಆತುರದಿಂದ ನಮಾಝ್ ನಿರ್ವಹಿಸಿ ಮತ್ತೆ ಬಂದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಲಾಮ್ ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು: "ಮರಳಿ ಹೋಗಿರಿ, ಪುನಃ ನಮಾಝ್ ನಿರ್ವಹಿಸಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ." ಹೀಗೆ ಮೂರು ಬಾರಿ ನಡೆಯಿತು. ಆ ವ್ಯಕ್ತಿ ಹೇಳಿದರು: "ನಿಮ್ಮನ್ನು ಸತ್ಯದೊಂದಿಗೆ ಕಳುಹಿಸಿದವನ ಮೇಲೆ ಆಣೆಯಿಟ್ಟು ಹೇಳುತ್ತೇನೆ, ನನಗೆ ಇದಕ್ಕಿಂತ ಉತ್ತಮವಾಗಿ ಮಾಡಲು ಬರುವುದಿಲ್ಲ. ಆದ್ದರಿಂದ ನನಗೆ ಕಲಿಸಿಕೊಡಿರಿ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು: "ನೀವು ನಮಾಝ್‌ಗೆ ನಿಂತಾಗ ತಕ್ಬೀರತುಲ್ ಇಹ್ರಾಮ್ (ಅಲ್ಲಾಹು ಅಕ್ಬರ್) ಹೇಳಿರಿ. ನಂತರ ಉಮ್ಮುಲ್ ಕುರ್‌ಆನ್ (ಸೂರ ಫಾತಿಹಾ) ಮತ್ತು ಅಲ್ಲಾಹು ಬಯಸಿದಷ್ಟನ್ನು ಪಠಿಸಿರಿ. ನಂತರ ನಿಮ್ಮ ಕೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ, ನಿಮ್ಮ ಬೆನ್ನನ್ನು ನೇರವಾಗಿಟ್ಟು ನೀವು ರುಕೂಅ್‌ನಲ್ಲಿ ಸಂಪೂರ್ಣವಾಗಿ ಶಾಂತವಾಗುವವರೆಗೆ ರುಕೂಅ್ ಮಾಡಿರಿ. ನಂತರ ನಿಮ್ಮ ಬೆನ್ನು ನೇರವಾಗಿರುವವರೆಗೆ ಎದ್ದು ನಿಲ್ಲಿರಿ. ನಂತರ ನಿಮ್ಮ ಹಣೆ-ಮೂಗು, ಕೈಗಳು, ಮೊಣಕಾಲುಗಳು ಮತ್ತು ಪಾದಗಳ ಬೆರಳುಗಳ ತುದಿಗಳನ್ನು ನೆಲದ ಮೇಲೆ ಇರಿಸಿ ಸುಜೂದ್ ಮಾಡಿರಿ. ನಂತರ ಎರಡು ಸುಜೂದ್‌ಗಳ ನಡುವೆ ಕುಳಿತುಕೊಳ್ಳುವಾಗ ಸಂಪೂರ್ಣವಾಗಿ ಶಾಂತವಾಗುವವರೆಗೆ ಕುಳಿತುಕೊಳ್ಳಿರಿ. ನಿಮ್ಮ ನಮಾಝಿನ ಪ್ರತಿಯೊಂದು ರಕ್ಅತ್‌ನಲ್ಲೂ ಹೀಗೆಯೇ ಮಾಡಿರಿ."

فوائد الحديث

ಇವು ನಮಾಝಿನ ಅರ್ಕಾನ್ (ಸ್ತಂಭ) ಗಳಾಗಿವೆ. ಮರೆವಿನಿಂದ ಅಥವಾ ಅಜ್ಞಾನದಿಂದ ಸಹ ಇವುಗಳನ್ನು ಬಿಟ್ಟುಬಿಡಬಾರದು. ಏಕೆಂದರೆ, ಇವುಗಳನ್ನು ಸರಿಯಾಗಿ ನಿರ್ವಹಿಸದ ವ್ಯಕ್ತಿಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇವಲ ಕಲಿಸಿಕೊಡುವುದಕ್ಕೆ ಮಾತ್ರ ತೃಪ್ತರಾಗದೆ ಆ ನಮಾಝನ್ನು ಪುನರಾವರ್ತಿಸಲು ಆದೇಶಿಸಿದರು.

ಅತ್ತುಮಅ್ ನೀನಾ (ಶಾಂತವಾಗಿರುವುದು ಅಥವಾ ತಟಸ್ಥವಾಗಿರುವುದು) ನಮಾಝಿನ ಸ್ತಂಭಗಳಲ್ಲಿ ಒಂದಾಗಿದೆ.

ನವವಿ ಹೇಳುತ್ತಾರೆ: "ನಮಾಝಿನ ಕೆಲವು ಕಡ್ಡಾಯ ಕಾರ್ಯಗಳನ್ನು ನಿರ್ವಹಿಸದವನ ನಮಾಝ್ ಸಿಂಧುವಾಗುವುದಿಲ್ಲ ಎಂದು ಈ ಹದೀಸಿನಿಂದ ತಿಳಿದುಬರುತ್ತದೆ."

ನವವಿ ಹೇಳುತ್ತಾರೆ: "ಈ ಹದೀಸಿನಲ್ಲಿ ತಿಳಿದುಬರುವುದೇನೆಂದರೆ, ಕಲಿಯುವವನೊಂದಿಗೆ ಮತ್ತು ತಿಳುವಳಿಕೆಯಿಲ್ಲದವನೊಂದಿಗೆ ಸೌಮ್ಯವಾಗಿ ವರ್ತಿಸಬೇಕು, ಸೌಜನ್ಯದಿಂದ ನಡೆದುಕೊಳ್ಳಬೇಕು, ವಿಷಯವನ್ನು ಸ್ಪಷ್ಟಪಡಿಸಿಕೊಡಬೇಕು, ಅಗತ್ಯವಿರುವುದನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡಬೇಕು ಮತ್ತು ಪ್ರಮುಖವಾದ ವಿಷಯಗಳನ್ನು ಮಾತ್ರ ತಿಳಿಸಿಕೊಡುವುದಕ್ಕೆ ಸೀಮಿತಗೊಳಿಸಬೇಕು. ಏಕೆಂದರೆ, ಎಲ್ಲಾ ವಿಷಯಗಳನ್ನು ಒಮ್ಮೆಲೇ ತಿಳಿಸಿಕೊಟ್ಟರೆ ಅವುಗಳನ್ನು ನೆನಪಿಟ್ಟುಕೊಳ್ಳಲು ಮತ್ತು ನಿರ್ವಹಿಸಲು ಅವನಿಗೆ ಸಾಧ್ಯವಾಗದೇ ಹೋಗಬಹುದು."

ನವವಿ ಹೇಳುತ್ತಾರೆ: "ಯಾರಾದರೂ ಮುಫ್ತಿ (ಧಾರ್ಮಿಕ ತೀರ್ಪು ನೀಡುವವನು) ಯೊಂದಿಗೆ ಏನನ್ನಾದರೂ ಕೇಳಿದರೆ ಮತ್ತು ಕೇಳಿದವನು ಅಗತ್ಯವಾಗಿ ತಿಳಿದಿರಬೇಕಾದ ಬೇರೆ ವಿಷಯವಿದ್ದು ಅವನು ಅದರ ಬಗ್ಗೆ ಕೇಳದಿದ್ದರೆ, ಅದನ್ನು ಅವನಿಗೆ ತಿಳಿಸುವುದು ಅಪೇಕ್ಷಣೀಯವಾಗಿದೆ. ಇದು ಉಪದೇಶ ನೀಡುವುದರ ಒಂದು ಭಾಗವೆಂದು ಪರಿಗಣಿಸಲಾಗುತ್ತದೆಯೇ ಹೊರತು ಅಗತ್ಯವಿಲ್ಲದ ಮಾತೆಂದು ಪರಿಗಣಿಸಲಾಗುವುದಿಲ್ಲ."

"ನನಗೆ ಇದಕ್ಕಿಂತ ಉತ್ತಮವಾಗಿ ಮಾಡಲು ಬರುವುದಿಲ್ಲ, ಆದ್ದರಿಂದ ನನಗೆ ಕಲಿಸಿಕೊಡಿರಿ" ಎಂಬ ಆ ವ್ಯಕ್ತಿಯ ಮಾತಿನಿಂದ ತಪ್ಪನ್ನು ಒಪ್ಪಿಕೊಳ್ಳುವುದರ ಶ್ರೇಷ್ಠತೆಯು ಕಂಡುಬರುತ್ತದೆ.

ಇಬ್ನ್ ಹಜರ್ ಹೇಳುತ್ತಾರೆ: "ಇದರಲ್ಲಿ ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ತಡೆಯುವುದರ ಬಗ್ಗೆ ಹಾಗೂ ಕಲಿಯುವ ಆಸಕ್ತಿಯಿರುವವನು ವಿದ್ವಾಂಸನೊಂದಿಗೆ ಕಲಿಸಿಕೊಡಬೇಕೆಂದು ಕೇಳುವುದರ ಬಗ್ಗೆ ಉಲ್ಲೇಖವಿದೆ."

ಭೇಟಿಯಾದಾಗ ಸಲಾಮ್ ಹೇಳುವುದು ಅಪೇಕ್ಷಣೀಯವಾಗಿದೆ ಮತ್ತು ಅದಕ್ಕೆ ಉತ್ತರಿಸುವುದು ಕಡ್ಡಾಯವಾಗಿದೆ. ಪುನಃ ಭೇಟಿಯಾಗುವಾಗ ಪುನಃ ಸಲಾಂ ಹೇಳುವುದು ಅಪೇಕ್ಷಣೀಯವಾಗಿದೆ. ಅದು ಕೆಲವೇ ಕ್ಷಣಗಳ ಒಳಗಾಗಿದ್ದರೂ ಸಹ. ಪ್ರತಿ ಬಾರಿಯೂ ಅದಕ್ಕೆ ಉತ್ತರಿಸುವುದು ಕಡ್ಡಾಯವಾಗಿದೆ.

التصنيفات

Method of Prayer