ಧರ್ಮವು ಹಿತಚಿಂತನೆಯಾಗಿದೆ

ಧರ್ಮವು ಹಿತಚಿಂತನೆಯಾಗಿದೆ

ತಮೀಮ್ ಅದ್ದಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಧರ್ಮವು ಹಿತಚಿಂತನೆಯಾಗಿದೆ." ನಾವು ಕೇಳಿದೆವು: "ಯಾರ ಹಿತಚಿಂತನೆ?" ಅವರು ಉತ್ತರಿಸಿದರು: "ಅಲ್ಲಾಹನ, ಅವನ ಗ್ರಂಥದ, ಅವನ ಸಂದೇಶವಾಹಕರ, ಮುಸ್ಲಿಂ ಆಡಳಿತಗಾರರ ಮತ್ತು ಮುಸ್ಲಿಂ ಜನಸಾಮಾನ್ಯರ ಹಿತಚಿಂತನೆ."

[Sahih/Authentic.] [Muslim]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಧರ್ಮವು ನಿಷ್ಕಳಂಕ ಮತ್ತು ಪ್ರಾಮಾಣಿಕತೆಯೆಂಬ ಹಿತಚಿಂತನೆಯ ಮೇಲೆ ನಿಂತಿದ್ದು, ಅದನ್ನು ಅಲ್ಲಾಹು ಕಡ್ಡಾಯಗೊಳಿಸಿದಂತೆ ಪೂರ್ಣರೂಪದಲ್ಲಿ ಯಾವುದೇ ಕೊರತೆ ಅಥವಾ ವಂಚನೆ ಮಾಡದೆ ನಿರ್ವಹಿಸಬೇಕಾಗಿದೆ. ಆಗ ಸಂಗಡಿಗರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಯಾರ ಕುರಿತಾದ ಹಿತಚಿಂತನೆ?" ಅವರು ಹೇಳಿದರು: ಮೊದಲನೆಯದಾಗಿ, ಸರ್ವಶಕ್ತನಾದ ಅಲ್ಲಾಹನ ಕುರಿತಾದ ಹಿತಚಿಂತನೆ. ಅಂದರೆ ಅವನ ಸಂಪ್ರೀತಿಗಾಗಿ ಮಾತ್ರ ಕರ್ಮವೆಸಗುವುದು, ಅವನೊಡನೆ ಸಹಭಾಗಿತ್ವ (ಶಿರ್ಕ್) ಮಾಡದಿರುವುದು, ಅವನ ಪ್ರಭುತ್ವ, ದೈವಿಕತೆ ಹಾಗೂ ಅವನ ಹೆಸರು ಮತ್ತು ಗುಣಲಕ್ಷಣಗಳಲ್ಲಿ ವಿಶ್ವಾಸವಿಡುವುದು, ಅವನ ಆಜ್ಞೆಗೆ ತಲೆಬಾಗುವುದು ಮತ್ತು ಅವನಲ್ಲಿ ವಿಶ್ವಾಸವಿಡಲು ಜನರನ್ನು ಆಮಂತ್ರಿಸುವುದು. ಎರಡನೆಯದಾಗಿ, ಅವನ ಗ್ರಂಥದ ಕುರಿತಾದ ಹಿತಚಿಂತನೆ—ಪವಿತ್ರ ಕುರ್‌ಆನಿನ ಕುರಿತಾದ ಹಿತಚಿಂತನೆ. ಅಂದರೆ, ಪವಿತ್ರ ಕುರ್‌ಆನ್ ಅಲ್ಲಾಹನ ವಚನಗಳು, ಅವನ ಅಂತಿಮ ಗ್ರಂಥ ಮತ್ತು ಅದು ಅದರ ಹಿಂದಿನ ಧರ್ಮಸಂಹಿತೆಗಳನ್ನು ರದ್ದುಗೊಳಿಸಿದೆ ಎಂದು ವಿಶ್ವಾಸವಿಡುವುದು, ಅದನ್ನು ಗೌರವಿಸುವುದು, ಅದನ್ನು ಪಠಿಸಬೇಕಾದ ರೀತಿಯಲ್ಲೇ ಪಠಿಸುವುದು, ಅದರ ಸ್ಪಷ್ಟವಚನಗಳ ಆಧಾರದಲ್ಲಿ ಕರ್ಮವೆಸಗುವುದು, ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಹೊಂದಿರುವ ಹೋಲಿಕೆಯಿರುವ ವಚನಗಳನ್ನು (ಮುತಶಾಬಿಹಾತ್) ಅಂಗೀಕರಿಸುವುದು, ವಕ್ರ ಮನಸ್ಸಿನವರ ತಪ್ಪು ವಿವರಣೆಗಳಿಂದ ಅದನ್ನು ಕಾಪಾಡುವುದು, ಅದರಲ್ಲಿರುವ ಉಪದೇಶಗಳನ್ನು ಸ್ವೀಕರಿಸುವುದು, ಅದರ ಜ್ಞಾನವನ್ನು ಪ್ರಸರಿಸುವುದು ಮತ್ತು ಅದರ ಕಡೆಗೆ ಜನರನ್ನು ಆಮಂತ್ರಿಸುವುದು. ಮೂರನೆಯದಾಗಿ, ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುರಿತಾದ ಹಿತಚಿಂತನೆ. ಅಂದರೆ ಅವರು ಅಂತಿಮ ಪ್ರವಾದಿಯೆಂದು ವಿಶ್ವಾಸವಿಡುವುದು, ಅವರು ತಂದ ಸಂದೇಶವನ್ನು ಅಂಗೀಕರಿಸುವುದು, ಅವರ ಆಜ್ಞೆಗಳನ್ನು ಪಾಲಿಸುವುದು, ಅವರು ವಿರೋಧಿಸಿದ ವಿಷಯಗಳಿಂದ ದೂರವಿರುವುದು, ಅವರು ತೋರಿಸಿಕೊಟ್ಟ ರೀತಿಯಲ್ಲೇ ಅಲ್ಲಾಹನನ್ನು ಆರಾಧಿಸುವುದು, ಅವರನ್ನು ಗೌರವಿಸುವುದು, ಅವರ ಹಕ್ಕುಗಳನ್ನು ಸಂರಕ್ಷಿಸುವುದು, ಅವರ ಧರ್ಮವನ್ನು ಪ್ರಚಾರ ಮಾಡುವುದು ಮತ್ತು ಅವರ ಬಗ್ಗೆ ಎತ್ತಲಾಗುವ ಆರೋಪಗಳನ್ನು ನಿಷೇಧಿಸುವುದು. ನಾಲ್ಕನೆಯದಾಗಿ, ಮುಸ್ಲಿಮ್ ಮುಖಂಡರ ಕುರಿತಾದ ಹಿತಚಿಂತನೆ. ಅಂದರೆ, ಸತ್ಯದಲ್ಲಿ ಅವರಿಗೆ ಸಹಾಯ ಮಾಡುವುದು, ಅಧಿಕಾರಕ್ಕಾಗಿ ಅವರ ವಿರುದ್ಧ ಹೋರಾಡದಿರುವುದು, ಅಲ್ಲಾಹು ಆಜ್ಞಾಪಿಸಿದ ವಿಷಯಗಳಲ್ಲಿ ಅವರ ಮಾತುಗಳನ್ನು ಆಲಿಸುವುದು ಮತ್ತು ಅನುಸರಿಸುವುದು. ಐದನೆಯದಾಗಿ, ಮುಸ್ಲಿಮರ ಕುರಿತಾದ ಹಿತಚಿಂತನೆ. ಅಂದರೆ, ಅವರಿಗೆ ಒಳಿತು ಮಾಡುವುದು, ಅವರನ್ನು ಸನ್ಮಾರ್ಗಕ್ಕೆ ಆಮಂತ್ರಿಸುವುದು, ಅವರಿಗೆ ಸಂಭವಿಸಬಹುದಾದ ತೊಂದರೆಗಳನ್ನು ತಡೆಗಟ್ಟುವುದು, ಅವರಿಗೆ ಒಳಿತನ್ನು ಬಯಸುವುದು ಮತ್ತು ಒಳಿತು ಹಾಗೂ ದೇವಭಯದಲ್ಲಿ ಅವರಿಗೆ ಸಹಾಯ ಮಾಡುವುದು.

فوائد الحديث

ಎಲ್ಲರ ಬಗ್ಗೆಯೂ ಹಿತಚಿಂತನೆ ಮಾಡಬೇಕೆಂದು ಈ ಹದೀಸ್ ತಿಳಿಸುತ್ತದೆ.

ಧರ್ಮದಲ್ಲಿ ಹಿತಚಿಂತನೆಗಿರುವ ಮಹಾ ಸ್ಥಾನಮಾನವನ್ನು ಈ ಹದೀಸ್ ತಿಳಿಸುತ್ತದೆ.

ಧರ್ಮದಲ್ಲಿ ನಂಬಿಕೆಗಳು, ಮಾತುಗಳು ಮತ್ತು ಕರ್ಮಗಳು ಒಳಗೊಂಡಿವೆಯೆಂದು ಈ ಹದೀಸ್ ತಿಳಿಸುತ್ತದೆ.

ಹಿತಚಿಂತನೆ ಮಾಡಲಾಗುವ ವ್ಯಕ್ತಿಯ ಬಗ್ಗೆ ಮನಸ್ಸಿನಲ್ಲಿರುವ ಕೆಟ್ಟ ವಿಚಾರಗಳನ್ನು ನಿವಾರಿಸಿ, ಅವರಿಗೆ ಒಳಿತನ್ನು ಮಾತ್ರ ಉದ್ದೇಶಿಸುವುದು ಹಿತಚಿಂತನೆಯ ಒಂದು ಭಾಗವಾಗಿದೆ.

ಮೊದಲು ವಿಷಯವನ್ನು ಮೊತ್ತವಾಗಿ ಪ್ರಸ್ತಾಪಿಸಿ ನಂತರ ಅವುಗಳನ್ನು ಒಂದೊಂದಾಗಿ ವಿವರಿಸುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಬೋಧನಾ ಶೈಲಿಯಾಗಿದೆ.

ವಿಷಯಗಳನ್ನು ವಿವರಿಸುವಾಗ ಅತಿಪ್ರಮುಖ ವಿಷಯಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಇಲ್ಲಿ ಅಲ್ಲಾಹನಿಂದ ಪ್ರಾರಂಭಿಸಿ, ನಂತರ ಅವನ ಗ್ರಂಥ, ಪ್ರವಾದಿ, ಮುಸ್ಲಿಂ ಮುಖಂಡರು ಮತ್ತು ಮುಸ್ಲಿಂ ಜನಸಾಮಾನ್ಯರ ಬಗ್ಗೆ ತಿಳಿಸಲಾಗಿದೆ.