ಕುರ್‌ಆನ್ ಪಠಿಸುವ ಸತ್ಯವಿಶ್ವಾಸಿಯನ್ನು ಮಾದಳ ಹಣ್ಣಿಗೆ ಹೋಲಿಸಬಹುದು. ಅದರ ಸುವಾಸನೆ ಆಹ್ಲಾದಕರವಾಗಿದೆ ಮತ್ತು ರುಚಿ…

ಕುರ್‌ಆನ್ ಪಠಿಸುವ ಸತ್ಯವಿಶ್ವಾಸಿಯನ್ನು ಮಾದಳ ಹಣ್ಣಿಗೆ ಹೋಲಿಸಬಹುದು. ಅದರ ಸುವಾಸನೆ ಆಹ್ಲಾದಕರವಾಗಿದೆ ಮತ್ತು ರುಚಿ ಉತ್ತಮವಾಗಿದೆ. ಕುರ್‌ಆನ್ ಪಠಿಸದ ಸತ್ಯವಿಶ್ವಾಸಿಯನ್ನು ಖರ್ಜೂರಕ್ಕೆ ಹೋಲಿಸಬಹುದು. ಅದಕ್ಕೆ ಸುವಾಸನೆಯಿಲ್ಲ, ಆದರೆ ಅದರ ರುಚಿ ಸಿಹಿಯಾಗಿದೆ

ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್‌ಆನ್ ಪಠಿಸುವ ಸತ್ಯವಿಶ್ವಾಸಿಯನ್ನು ಮಾದಳ ಹಣ್ಣಿಗೆ ಹೋಲಿಸಬಹುದು. ಅದರ ಸುವಾಸನೆ ಆಹ್ಲಾದಕರವಾಗಿದೆ ಮತ್ತು ರುಚಿ ಉತ್ತಮವಾಗಿದೆ. ಕುರ್‌ಆನ್ ಪಠಿಸದ ಸತ್ಯವಿಶ್ವಾಸಿಯನ್ನು ಖರ್ಜೂರಕ್ಕೆ ಹೋಲಿಸಬಹುದು. ಅದಕ್ಕೆ ಸುವಾಸನೆಯಿಲ್ಲ, ಆದರೆ ಅದರ ರುಚಿ ಸಿಹಿಯಾಗಿದೆ. ಕುರ್‌ಆನ್ ಪಠಿಸುವ ಕಪಟವಿಶ್ವಾಸಿಯನ್ನು ತುಳಸಿಗೆ ಹೋಲಿಸಬಹುದು. ಅದರ ಸುವಾಸನೆ ಆಹ್ಲಾದಕರವಾಗಿದೆ, ಆದರೆ ರುಚಿ ಕಹಿಯಾಗಿದೆ. ಕುರ್‌ಆನ್ ಪಠಿಸದ ಕಪಟವಿಶ್ವಾಸಿಯನ್ನು ಹಾವುಮೆಕ್ಕೆ ಕಾಯಿಗೆ ಹೋಲಿಸಬಹುದು. ಅದಕ್ಕೆ ಸುವಾಸನೆಯಿಲ್ಲ ಮತ್ತು ರುಚಿ ಕೂಡ ಕಹಿಯಾಗಿದೆ."

[صحيح] [متفق عليه]

الشرح

ಕುರ್‌ಆನ್ ಪಠಿಸುವ ಮತ್ತು ಅದರಿಂದ ಪ್ರಯೋಜನ ಪಡೆಯುವ ವಿಷಯದಲ್ಲಿ ಜನರಲ್ಲಿರುವ ವಿಭಿನ್ನ ವರ್ಗಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸಿದ್ದಾರೆ: ಮೊದಲನೆಯ ವರ್ಗ: ಕುರ್‌ಆನ್ ಪಠಿಸುವ ಮತ್ತು ಅದರಿಂದ ಪ್ರಯೋಜನ ಪಡೆಯುವ ಸತ್ಯವಿಶ್ವಾಸಿ. ಅವನು ಮಾದಳ ಹಣ್ಣಿನಂತೆ. ಅದರ ರುಚಿ ಮತ್ತು ಸುವಾಸನೆ ಉತ್ತಮವಾಗಿದೆ ಮತ್ತು ಬಣ್ಣ ಸುಂದರವಾಗಿದೆ. ಅವನಿಂದ ಅನೇಕ ಪ್ರಯೋಜನಗಳಿವೆ. ಅವನು ತಾನು ಪಠಿಸಿದ್ದನ್ನು ಜೀವನದಲ್ಲಿ ಅಳವಡಿಸುತ್ತಾನೆ ಮತ್ತು ಅಲ್ಲಾಹನ ದಾಸರಿಗೆ ಪ್ರಯೋಜನ ನೀಡುತ್ತಾನೆ. ಎರಡನೆಯವನು: ಕುರ್‌ಆನ್ ಪಠಿಸದ ಸತ್ಯವಿಶ್ವಾಸಿ. ಅವನು ಖರ್ಜೂರದಂತೆ. ಅದರ ರುಚಿ ಸಿಹಿಯಾಗಿದೆ, ಆದರೆ ಅದಕ್ಕೆ ಸುವಾಸನೆಯಿಲ್ಲ. ಖರ್ಜೂರವು ರುಚಿಯಲ್ಲಿ ಮತ್ತು ಆಂತರ್ಯದಲ್ಲಿ ಸಿಹಿಯನ್ನು ಒಳಗೊಂಡಿರುವಂತೆ ಅವನ ಹೃದಯವು ಸತ್ಯವಿಶ್ವಾಸವನ್ನು ಒಳಗೊಂಡಿದೆ. ಆದರೆ ಜನರಿಗೆ ಪರಿಮಳ ಬೀರುವಂತಹ ಯಾವುದೇ ಸುವಾಸನೆ ಅವನಲ್ಲಿಲ್ಲ. ಏಕೆಂದರೆ, ಜನರು ಕಿವಿಗೊಟ್ಟು ಆನಂದಿಸುವಂತಹ ಯಾವುದೇ ಕುರ್‌ಆನ್ ಪಠಣವು ಅವನಲ್ಲಿಲ್ಲ. ಮೂರನೆಯವನು: ಕುರ್‌ಆನ್ ಪಠಿಸುವ ಕಪಟವಿಶ್ವಾಸಿ. ಇವನು ತುಳಸಿಯಂತೆ. ಅದಕ್ಕೆ ಉತ್ತಮ ಸುವಾಸನೆಯಿದೆ, ಆದರೆ ಅದರ ರುಚಿ ಕಹಿಯಾಗಿದೆ. ಏಕೆಂದರೆ, ಸತ್ಯವಿಶ್ವಾಸದ ಮೂಲಕ ಅವನ ಹೃದಯ ಸುಧಾರಣೆಯಾಗಿಲ್ಲ ಮತ್ತು ಅವನು ಕುರ್‌ಆನಿನ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿಲ್ಲ. ಅವನು ಜನರ ಮುಂದೆ ತಾನು ಸತ್ಯವಿಶ್ವಾಸಿಯೆಂದು ತೋರ್ಪಡಿಸುತ್ತಾನೆ. ಆದ್ದರಿಂದ ಅದರ ಉತ್ತಮ ಸುವಾಸನೆಯು ಅವನ ಪಠಣಕ್ಕೆ ಹೋಲಿಕೆಯಾಗಿದೆ ಮತ್ತು ಅದರ ಕಹಿ ರುಚಿಯು ಅವನ ಸತ್ಯನಿಷೇಧಕ್ಕೆ ಹೋಲಿಕೆಯಾಗಿದೆ. ನಾಲ್ಕನೆಯವನು: ಕುರ್‌ಆನ್ ಪಠಿಸದ ಕಪಟವಿಶ್ವಾಸಿ. ಅವನು ಹಾವುಮೆಕ್ಕೆ ಕಾಯಿಯಂತೆ. ಏಕೆಂದರೆ, ಅದಕ್ಕೆ ಯಾವುದೇ ಸುವಾಸನೆಯಿಲ್ಲ ಮತ್ತು ಅದರ ರುಚಿಯು ಕಹಿಯಾಗಿದೆ. ಅದರಲ್ಲಿ ಸುವಾಸನೆಯಿಲ್ಲದಿರುವುದು ಅವನು ಕುರ್‌ಆನ್ ಪಠಿಸದ ಕಾರಣ ಅವನಲ್ಲೂ ಸುವಾಸನೆಯಿಲ್ಲದಿರುವುದಕ್ಕೆ ಚೆನ್ನಾಗಿ ಹೋಲಿಕೆಯಾಗುತ್ತದೆ. ಅದರ ಕಹಿ ರುಚಿಯು ಅವನಲ್ಲಿರುವ ಸತ್ಯನಿಷೇಧದ ಕಹಿಗೆ ಹೋಲಿಕೆಯಾಗಿದೆ. ಅವನ ಆಂತರ್ಯವು ಸತ್ಯವಿಶ್ವಾಸವಿಲ್ಲದೆ ಬರಿದಾಗಿದೆ, ಮತ್ತು ಅವನ ಬಾಹ್ಯದಿಂದ ಹಾನಿಯಲ್ಲದೆ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ.

فوائد الحديث

ಕುರ್‌ಆನ್ ಪಠಿಸುವ ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವನ ಶ್ರೇಷ್ಠತೆಯನ್ನು ವಿವರಿಸಲಾಗಿದೆ.

ಬಹಳ ಚೆನ್ನಾಗಿ ಅರ್ಥಮಾಡಿಕೊಡಲು ಉದಾಹರಣೆಗಳನ್ನು ಹೇಳುವುದು ಬೋಧನೆಯ ಒಂದು ವಿಧಾನವಾಗಿದೆ.

ಮುಸಲ್ಮಾನನಿಗೆ ದಿನನಿತ್ಯ ಇಂತಿಷ್ಟು ಕುರ್‌ಆನ್ ಪಠಿಸಬೇಕೆಂಬ ಪರಿಪಾಠವಿರಬೇಕು.

التصنيفات

Merit of Taking Care of the Qur'an