ಸ್ವರ್ಗವಾಸಿಗಳು ಸ್ವರ್ಗವನ್ನು ಪ್ರವೇಶಿಸಿದಾಗ ಸರ್ವಶಕ್ತನಾದ ಅಲ್ಲಾಹು ಕೇಳುವನು: "ನಾನು ನಿಮಗೆ ಇನ್ನೂ ಏನಾದರೂ ಹೆಚ್ಚಿಗೆ…

ಸ್ವರ್ಗವಾಸಿಗಳು ಸ್ವರ್ಗವನ್ನು ಪ್ರವೇಶಿಸಿದಾಗ ಸರ್ವಶಕ್ತನಾದ ಅಲ್ಲಾಹು ಕೇಳುವನು: "ನಾನು ನಿಮಗೆ ಇನ್ನೂ ಏನಾದರೂ ಹೆಚ್ಚಿಗೆ ಕೊಡಬೇಕೆಂದು ನೀವು ಬಯಸುತ್ತೀರಾ?

ಸುಹೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸ್ವರ್ಗವಾಸಿಗಳು ಸ್ವರ್ಗವನ್ನು ಪ್ರವೇಶಿಸಿದಾಗ ಸರ್ವಶಕ್ತನಾದ ಅಲ್ಲಾಹು ಕೇಳುವನು: "ನಾನು ನಿಮಗೆ ಇನ್ನೂ ಏನಾದರೂ ಹೆಚ್ಚಿಗೆ ಕೊಡಬೇಕೆಂದು ನೀವು ಬಯಸುತ್ತೀರಾ?" ಅವರು ಹೇಳುವರು: "ನೀನು ನಮ್ಮ ಮುಖಗಳನ್ನು ಬೆಳಗಿಸಲಿಲ್ಲವೇ? ನೀನು ನಮ್ಮನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಿಲ್ಲವೇ? ನೀನು ನಮ್ಮನ್ನು ನರಕದಿಂದ ಪಾರು ಮಾಡಲಿಲ್ಲವೇ?" ಆಗ ಅಲ್ಲಾಹು ಅವನ ಪರದೆಯನ್ನು ಸರಿಸುವನು. ಆಗ ಅವರಿಗೆ ನೀಡಲಾದ ಎಲ್ಲಾ ವಸ್ತುಗಳಲ್ಲಿ ಅವರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುವುದಕ್ಕಿಂತಲೂ ಹೆಚ್ಚು ಇಷ್ಟವಾದುದು ಅವರಿಗೆ ಬೇರೆ ಇರುವುದಿಲ್ಲ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಸ್ವರ್ಗವಾಸಿಗಳು ಸ್ವರ್ಗವನ್ನು ಪ್ರವೇಶಿಸಿದಾಗ ಸರ್ವಶಕ್ತನಾದ ಅಲ್ಲಾಹು ಅವರೊಡನೆ ಕೇಳುವನು: "ನಾನು ನಿಮಗೆ ಇನ್ನೇನಾದರೂ ಹೆಚ್ಚಿಗೆ ನೀಡಬೇಕೆಂದು ನೀವು ಬಯಸುತ್ತೀರಾ?" ಆಗ ಸ್ವರ್ಗವಾಸಿಗಳೆಲ್ಲರೂ ಹೇಳುವರು: "ನೀನು ನಮ್ಮ ಮುಖಗಳನ್ನು ಬೆಳಗಿಸಲಿಲ್ಲವೇ? ನೀನು ನಮ್ಮನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಿಲ್ಲವೇ? ನೀನು ನಮ್ಮನ್ನು ನರಕದಿಂದ ಪಾರು ಮಾಡಲಿಲ್ಲವೇ?" ಆಗ ಅಲ್ಲಾಹು ಅವನ ಪರದೆಯನ್ನು ಸರಿಸಿ ಮೇಲೆತ್ತುವನು. ಬೆಳಕು ಅವನ ಪರದೆಯಾಗಿದೆ. ಆಗ ಅವರಿಗೆ ನೀಡಲಾದ ಎಲ್ಲಾ ವಸ್ತುಗಳಲ್ಲಿ ಅವರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುವುದಕ್ಕಿಂತಲೂ ಹೆಚ್ಚು ಇಷ್ಟವಾದುದು ಅವರಿಗೆ ಬೇರೆ ಇರುವುದಿಲ್ಲ.

فوائد الحديث

ಸ್ವರ್ಗವಾಸಿಗಳಿಗಾಗಿ ಅಲ್ಲಾಹು ಪರದೆಯನ್ನು ಸರಿಸುವನು ಮತ್ತು ಅವರು ಅವರ ಪರಿಪಾಲಕನನ್ನು ನೋಡುವರು. ಆದರೆ ಸತ್ಯನಿಷೇಧಿಗಳು ಇದರಿಂದ ವಂಚಿತರಾಗುವರು.

ಸ್ವರ್ಗದ ಅತಿದೊಡ್ಡ ಅನುಗ್ರಹವೇನೆಂದರೆ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ನೇರವಾಗಿ ನೋಡುವುದು.

ಸ್ವರ್ಗದ ಪದವಿಗಳು ಭಿನ್ನವಾಗಿದ್ದರೂ ಕೂಡ ಸ್ವರ್ಗವಾಸಿಗಳೆಲ್ಲರೂ ಅಲ್ಲಾಹನನ್ನು ನೋಡುವರು.

ಸತ್ಯವಿಶ್ವಾಸಿಗಳನ್ನು ಸ್ವರ್ಗಕ್ಕೆ ಸೇರಿಸುವ ಮೂಲಕ ಅಲ್ಲಾಹು ಅವರಿಗೆ ತೋರಿದ ಔದಾರ್ಯವನ್ನು ತಿಳಿಸಲಾಗಿದೆ.

ಸತ್ಕರ್ಮಗಳನ್ನು ನಿರ್ವಹಿಸುವ ಮೂಲಕ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುವ ಮೂಲಕ ಸ್ವರ್ಗಕ್ಕಾಗಿ ಸ್ಪರ್ಧಿಸುವ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.

التصنيفات

Descriptions of Paradise and Hell