ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ…

ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಮುಆದ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಾಗ ಅವರು ಕರೆದರು: "ಓ ಮುಆದ್ ಬಿನ್ ಜಬಲ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಅವರು ಕರೆದರು: "ಓ ಮುಆದ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಹೀಗೆ ಅವರು ಮೂರು ಬಾರಿ ಕರೆದರು. ನಂತರ ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ." ಮುಆದ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಜನರಿಗೆ ಸಂತೋಷವಾಗುವ ಈ ಸುದ್ದಿಯನ್ನು ನಾನು ಅವರಿಗೆ ತಿಳಿಸಲೇ?" ಅವರು ಹೇಳಿದರು: "ಬೇಡ, ಅವರು ಅದರ ಮೇಲೆ ಅವಲಂಬಿತರಾಗುವರು." (ಜ್ಞಾನವನ್ನು ಬಚ್ಚಿಟ್ಟ) ಪಾಪಕ್ಕೆ ಗುರಿಯಾಗದಿರಲು ಮುಆದ್ ಮರಣದ ಸಮಯದಲ್ಲಿ ಇದನ್ನು ಜನರಿಗೆ ತಿಳಿಸಿದರು.

[صحيح] [متفق عليه]

الشرح

ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಬಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ಅವರು "ಓ ಮುಆದ್" ಎಂದು ಕರೆದರು. ತಾನು ಹೇಳಲು ಹೋಗುವ ವಿಷಯದ ಪ್ರಾಮುಖ್ಯತೆಗೆ ಒತ್ತು ಕೊಡುವುದಕ್ಕಾಗಿ ಅವರು ಹೀಗೆ ಮೂರು ಬಾರಿ ಕರೆದರು. ಅವರು ಪ್ರತಿ ಬಾರಿ ಕರೆದಾಗಲೂ ಮುಆದ್, "ಲಬ್ಬೈಕ ಯಾ ರಸೂಲಲ್ಲಾಹ್ ವ ಸಅದೈಕ" ಎಂದು ಉತ್ತರಿಸುತ್ತಿದ್ದರು. ಅಂದರೆ ಓ ಪ್ರವಾದಿಯವರೇ ನಾನು ಪದೇ ಪದೇ ನಿಮ್ಮ ಕರೆಗೆ ಉತ್ತರಿಸುತ್ತೇನೆ. ನಿಮ್ಮ ಕರೆಗೆ ಉತ್ತರಿಸುವುದೇ ನನ್ನ ಸೌಭಾಗ್ಯವಾಗಿದೆ ಎಂದರ್ಥ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು: "ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ) ಮತ್ತು ಮುಹಮ್ಮದ್ ರಸೂಲುಲ್ಲಾಹ್ (ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ) ಎಂದು ತನ್ನ ಹೃದಯದಿಂದ ಪ್ರಾಮಾಣಿಕವಾಗಿ, ಯಾವುದೇ ಕಾಪಟ್ಯವಿಲ್ಲದೆ ಸಾಕ್ಷಿ ವಹಿಸಿ, ನಂತರ ಅದೇ ಸ್ಥಿತಿಯಲ್ಲಿ ಮರಣಹೊಂದುವವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸುತ್ತಾನೆ." "ಜನರು ಈ ಸುದ್ದಿಯನ್ನು ಕೇಳಿ ಸಂತೋಷಪಡುವುದಕ್ಕಾಗಿ ನಾನು ಅವರಿಗೆ ಇದನ್ನು ತಿಳಿಸಲೇ ಎಂದು ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು. ಆಗ ಜನರು ಇದರ ಮೇಲೆ ಅವಲಂಬಿತರಾಗಿ ಕರ್ಮವೆಸಗುವುದನ್ನು ಕಡಿಮೆ ಮಾಡುವರೋ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಯಪಟ್ಟರು. ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಿಧನರಾಗುವ ತನಕ ಈ ಹದೀಸನ್ನು ಯಾರಿಗೂ ತಿಳಿಸಲಿಲ್ಲ. ಆದರೆ ಜ್ಞಾನವನ್ನು ಬಚ್ಚಿಟ್ಟ ಪಾಪಕ್ಕೆ ಗುರಿಯಾಗುವೆನೋ ಎಂಬ ಭಯದಿಂದ ಮರಣದ ಸಮಯದಲ್ಲಿ ತಿಳಿಸಿಕೊಟ್ಟರು.

فوائد الحديث

ಪ್ರಯಾಣ ಮಾಡುವಾಗ ಸವಾರಿಯ ಹಿಂಬಾಗದಲ್ಲಿ ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಕೂರಿಸಿದ್ದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಯವನ್ನು ಸೂಚಿಸುತ್ತದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೋಧನಾ ಶೈಲಿಯನ್ನು ಈ ಹದೀಸ್ ತಿಳಿಸುತ್ತದೆ. ತಾನು ಹೇಳುವ ವಿಷಯಕ್ಕೆ ಮುಆದ್‌ರ ಗಮನವನ್ನು ಪೂರ್ತಿಯಾಗಿ ಸೆಳೆಯುವುದಕ್ಕಾಗಿ ಅವರು ಪದೇ ಪದೇ ಕರೆಯುತ್ತಾರೆ.

"ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದ್ ರಸೂಲುಲ್ಲಾಹ್" ಎಂದು ಉಚ್ಛರಿಸುವವನು ಪ್ರಾಮಾಣಿಕವಾಗಿ ಮತ್ತು ಪೂರ್ಣ ಖಾತ್ರಿಯಿಂದ, ಯಾವುದೇ ಕಾಪಟ್ಯ ಅಥವಾ ಸಂಶಯವಿಲ್ಲದೆ ಉಚ್ಛರಿಸುವುದು ಅದರ ನಿಬಂಧನೆಯಾಗಿದೆ.

ತೌಹೀದ್‌ನ ಜನರು ನರಕದಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಅವರು ಮಾಡಿದ ಕೆಲವು ಪಾಪಗಳಿಗಾಗಿ ನರಕವನ್ನು ಪ್ರವೇಶಿಸಬೇಕಾಗಿ ಬಂದರೂ ಪಾಪಗಳಿಂದ ಶುದ್ಧರಾದ ನಂತರ ಅವರು ಅಲ್ಲಿಂದ ಹೊರ ಬರುತ್ತಾರೆ.

ಎರಡು ಸಾಕ್ಷಿವಚನಗಳನ್ನು ಪ್ರಾಮಾಣಿಕವಾಗಿ ಉಚ್ಛರಿಸುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.

ಹಾನಿ ಉಂಟಾಗಬಹುದೆಂಬ ಭಯವಿದ್ದರೆ ಕೆಲವು ಸಂದರ್ಭಗಳಲ್ಲಿ ಒಂದು ಹದೀಸನ್ನು ಹೇಳುವುದನ್ನು ಬಿಟ್ಟುಬಿಡಬಹುದೆಂದು ಈ ಹದೀಸ್ ತಿಳಿಸುತ್ತದೆ.

التصنيفات

Oneness of Allah's Lordship, Excellence of Monotheism