ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್…

ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ

ಝೈನಬ್ ಬಿಂತ್ ಜಹ್ಶ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಾಬರಿಯಿಂದ ಅವರ ಬಳಿಗೆ ಬಂದು ಹೇಳತೊಡಗಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ." ಅವರು ತಮ್ಮ ತೋರುಬೆರಳು ಮತ್ತು ಹೆಬ್ಬೆರಳನ್ನು ವೃತ್ತಾಕಾರದಲ್ಲಿ ಹಿಡಿದು ತೋರಿಸಿದರು. ಝೈನಬ್ ಬಿಂತ್ ಜಹ್ಶ್ ಹೇಳಿದರು: "ನಾನು ಕೇಳಿದೆ: ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲಿ ನೀತಿವಂತರು ಇರುವಾಗ ನಾವು ನಾಶವಾಗುವೆವೇ?" ಅವರು ಉತ್ತರಿಸಿದರು: "ಹೌದು, ಕೆಡುಕು ಹೆಚ್ಚಾದಾಗ."

[صحيح] [متفق عليه]

الشرح

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬ್ ಬಿಂತ್ ಜಹ್ಶ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ ಗಾಬರಿ ಮತ್ತು ಭಯದಿಂದ ಬಂದು ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ." ಸರ್ವಶಕ್ತನಾದ ಅಲ್ಲಾಹನಲ್ಲಿ ಆಶ್ರಯ ಬೇಡುವ ಹೊರತು ಪಾರಾಗಲು ಸಾಧ್ಯವಿಲ್ಲದಂತಹ ಅಹಿತಕರವಾದ ಏನಾದರೂ ಸಂಭವಿಸುವ ನಿರೀಕ್ಷೆಯನ್ನು ಸೂಚಿಸುವುದಕ್ಕಾಗಿ ಹೀಗೆ ಘೋಷಿಸಲಾಗುತ್ತದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶೀಘ್ರದಲ್ಲೇ ಸಂಭವಿಸಲಿರುವ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ—ಇದು ದುಲ್-ಕರ್ನೈನ್ ನಿರ್ಮಿಸಿದ ಗೋಡೆ—ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ." ಅವರು ತಮ್ಮ ತೋರುಬೆರಳು ಮತ್ತು ಹೆಬ್ಬೆರಳನ್ನು ವೃತ್ತಾಕಾರದಲ್ಲಿ ಹಿಡಿದು ತೋರಿಸಿದರು. ಆಗ ಝೈನಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೇಳಿದರು: "ನಮ್ಮಲ್ಲಿ ಸತ್ಯವಿಶ್ವಾಸಿಗಳಾದ ಸಜ್ಜನರು ಇರುವಾಗ ಅಲ್ಲಾಹು ನಮ್ಮ ಮೇಲೆ ವಿನಾಶವನ್ನು ಹೇಗೆ ಹೊರಿಸುತ್ತಾನೆ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅನೈತಿಕತೆ, ದುರಾಚಾರ, ಪಾಪಗಳು, ವ್ಯಭಿಚಾರ, ಮದ್ಯಪಾನ ಮತ್ತು ಇತರ ವಿಷಯಗಳು ವ್ಯಾಪಕವಾಗಿ ಹರಡುವಾಗ ವಿನಾಶವು ಸಾರ್ವತ್ರಿಕವಾಗಿ ಸಂಭವಿಸುತ್ತದೆ."

فوائد الحديث

ಭಯವಾದಾಗ ಅಲ್ಲಾಹನನ್ನು ಸ್ಮರಿಸದಂತೆ ಸತ್ಯವಿಶ್ವಾಸಿಯ ಹೃದಯವನ್ನು ಗಾಬರಿಯು ವಿಚಲಿತಗೊಳಿಸಬಾರದು. ಏಕೆಂದರೆ, ಅಲ್ಲಾಹನನ್ನು ಸ್ಮರಿಸುವುದರಿಂದ ಹೃದಯಗಳು ಶಾಂತವಾಗುತ್ತವೆ.

ಪಾಪಗಳನ್ನು ನಿರಾಕರಿಸಲು ಮತ್ತು ಅವು ಸಂಭವಿಸದಂತೆ ತಡೆಯಲು ಪ್ರೋತ್ಸಾಹಿಸಲಾಗಿದೆ.

ಪಾಪಗಳು ಹೆಚ್ಚಾಗುವಾಗ ಮತ್ತು ವ್ಯಾಪಕವಾಗಿ ಹರಡುವಾಗ, ಹಾಗೂ ಅವುಗಳನ್ನು ತಡೆಯುವವರು ಯಾರೂ ಇಲ್ಲದಿರುವಾಗ ವಿನಾಶವು ಸಂಭವಿಸುತ್ತದೆ. ಆಗ ಸಜ್ಜನರು ದೊಡ್ಡ ಸಂಖ್ಯೆಯಲ್ಲಿದ್ದರೂ ಸಹ.

ಸತ್ಕರ್ಮಿಗಳು ಮತ್ತು ದುಷ್ಕರ್ಮಿಗಳು ಸೇರಿದಂತೆ ಎಲ್ಲಾ ಜನರನ್ನು ವಿಪತ್ತುಗಳು ಆವರಿಸಿಕೊಳ್ಳುತ್ತವೆ. ಆದರೆ, ಅವರನ್ನು ಅವರ ಸಂಕಲ್ಪಗಳ ಆಧಾರದಲ್ಲಿ ಪುನರುತ್ಥಾನಗೊಳಿಸಲಾಗುತ್ತದೆ.

"ಶೀಘ್ರದಲ್ಲೇ ಸಂಭವಿಸಲಿರುವ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ" ಎಂದು ವಿಶೇಷವಾಗಿ ಅರಬ್ಬರ ಬಗ್ಗೆ ಹೇಳಲಾಗಿರುವುದು ಏಕೆಂದರೆ, ಆಗ ಮುಸಲ್ಮಾನರಲ್ಲಿ ಹೆಚ್ಚಿನವರು ಅರಬ್ಬರಾಗಿದ್ದರು.

التصنيفات

Portents of the Hour, Prophet's Guidance on Marriage and Treating One's Wife