ಯಾರು ಮೂರು ಬಾರಿ, 'ಯಾರ ಹೆಸರಿನೊಂದಿಗೆ ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಅಲ್ಲಾಹನ…

ಯಾರು ಮೂರು ಬಾರಿ, 'ಯಾರ ಹೆಸರಿನೊಂದಿಗೆ ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಅಲ್ಲಾಹನ ಹೆಸರಿನಲ್ಲಿ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ' ಎಂದು ಹೇಳುತ್ತಾನೋ, ಅವನಿಗೆ ಬೆಳಗ್ಗಿನ ತನಕ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ

ಅಬಾನ್ ಬಿನ್ ಉಸ್ಮಾನ್ ರಿಂದ ವರದಿ. ಅವರು ಹೇಳಿದರು: ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಅವರು ಹೇಳುತ್ತಾರೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಮೂರು ಬಾರಿ, 'ಯಾರ ಹೆಸರಿನೊಂದಿಗೆ ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಅಲ್ಲಾಹನ ಹೆಸರಿನಲ್ಲಿ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ' ಎಂದು ಹೇಳುತ್ತಾನೋ, ಅವನಿಗೆ ಬೆಳಗ್ಗಿನ ತನಕ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ. ಯಾರು ಇದನ್ನು ಬೆಳಗ್ಗೆ ಹೇಳುತ್ತಾನೋ, ಅವನಿಗೆ ಸಂಜೆಯ ತನಕ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ." ಅಬಾನ್ ಬಿನ್ ಉಸ್ಮಾನ್ ರಿಗೆ ಪಕ್ಷಪಾತ ಸಂಭವಿಸಿತ್ತು. ಅವರಿಂದ ಈ ಹದೀಸನ್ನು ಕೇಳಿದ ವ್ಯಕ್ತಿ ಅವರ ಕಡೆಗೆ ನೋಡತೊಡಗಿದನು. ಅವರು ಕೇಳಿದರು: "ನೀನೇಕೆ ನನ್ನನ್ನು ನೋಡುತ್ತಿರುವೆ? ಅಲ್ಲಾಹನಾಣೆ! ನಾನು ಉಸ್ಮಾನರ ಮೇಲೆ ಸುಳ್ಳು ಹೇಳಿಲ್ಲ. ಉಸ್ಮಾನ್ ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೂ ಸುಳ್ಳು ಹೇಳಿಲ್ಲ. ಆದರೆ ನಿಜಸಂಗತಿ ಏನೆಂದರೆ ನನಗೆ ಪಾರ್ಶ್ವವಾಯು ಬಾಧಿಸಿದ ದಿನ ನಾನು ಕೋಪದಲ್ಲಿದ್ದೆ ಮತ್ತು ಈ ಪ್ರಾರ್ಥನೆಯನ್ನು ಪಠಿಸಲು ಮರೆತಿದ್ದೆ."

[صحيح]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರು ಪ್ರತಿದಿನ ಬೆಳಗ್ಗೆ ಮುಂಜಾನೆಯ ಉದಯದ ನಂತರ ಮತ್ತು ಪ್ರತಿದಿನ ಸಂಜೆ ಸೂರ್ಯಾಸ್ತದ ನಂತರ ಹೀಗೆ ಹೇಳುತ್ತಾರೋ: "ಅಲ್ಲಾಹನ ಹೆಸರಿನಲ್ಲಿ" ಅಂದರೆ ನಾನು ಅಲ್ಲಾಹನ ಹೆಸರಿನಲ್ಲಿ ಸಹಾಯ ಯಾಚಿಸುತ್ತೇನೆ ಮತ್ತು ಎಲ್ಲಾ ತೊಂದರೆಗಳಿಗೆ ರಕ್ಷಣೆ ಬೇಡುತ್ತೇನೆ. "ಯಾರ ಹೆಸರಿನೊಂದಿಗೆ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಹೆಸರಿನಿಂದ" ಅಂದರೆ ಆ ಹೆಸರನ್ನು ಉಚ್ಛರಿಸುವುದರಿಂದ. "ಯಾವುದೇ ವಸ್ತು" ಎಂದರೆ ಆ ವಸ್ತು ಎಷ್ಟೇ ದೊಡ್ಡದಾಗಿದ್ದರೂ ಸಹ. "ಭೂಮಿಯಲ್ಲಿ" ಅಂದರೆ ಭೂಮಿಯಿಂದ ಹೊರಬರುವ ವಿಪತ್ತುಗಳು. "ಆಕಾಶದಲ್ಲಿ" ಅಂದರೆ ಆಕಾಶದಿಂದ ಇಳಿಯುವ ವಿಪತ್ತುಗಳು. "ಅವನು ಕೇಳುವವನು" ಅಂದರೆ ನಮ್ಮ ಮಾತುಗಳನ್ನು ಕೇಳುವವನು. "ಮತ್ತು ತಿಳಿದವನು" ಅಂದರೆ ನಮ್ಮ ಅವಸ್ಥೆಗಳನ್ನು ತಿಳಿದವನು. . ಇದನ್ನು ಬೆಳಗ್ಗೆ ಹೇಳಿದವನಿಗೆ ಸಂಜೆಯ ತನಕ ಯಾವುದೇ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ. ಇದನ್ನು ಸಂಜೆ ಹೇಳಿದವನಿಗೆ ಬೆಳಗ್ಗಿನ ತನಕ ಯಾವುದೇ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ. ಈ ಹದೀಸನ್ನು ವರದಿ ಮಾಡಿದ ಅಬಾನ್ ಬಿನ್ ಉಸ್ಮಾನ್ ರಿಗೆ ಪಾರ್ಶ್ವವಾಯು ಬಾಧಿಸಿತ್ತು. ಪಾರ್ಶ್ವವಾಯು ಎಂದರೆ ದೇಹದ ಒಂದು ಭಾಗವು ನಿಷ್ಕ್ರಿಯವಾಗುವುದು. ಆಗ ಅವರಿಂದ ಈ ಹದೀಸನ್ನು ಕೇಳಿದ ವ್ಯಕ್ತಿ ಅವರ ಕಡೆಗೆ ಆಶ್ಚರ್ಯದಿಂದ ನೋಡತೊಡಗಿದನು. ಅವರು ಆ ವ್ಯಕ್ತಿಯೊಡನೆ ಕೇಳಿದರು: "ನೀನೇಕೆ ನನ್ನನ್ನು ನೋಡುತ್ತಿರುವೆ? ಅಲ್ಲಾಹನಾಣೆ! ನಾನು ಉಸ್ಮಾನರ ಮೇಲೆ ಸುಳ್ಳು ಹೇಳಿಲ್ಲ. ಉಸ್ಮಾನ್ ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೂ ಸುಳ್ಳು ಹೇಳಿಲ್ಲ. ಆದರೆ ನಿಜಸಂಗತಿ ಏನೆಂದರೆ ನನಗೆ ಪಾರ್ಶ್ವವಾಯು ಬಾಧಿಸಿದ ದಿನ ನಾನು ಈ ಪ್ರಾರ್ಥನೆಯನ್ನು ಪಠಿಸದಂತೆ ಅಲ್ಲಾಹು ನಿರ್ಣಯಿಸಿದ್ದನು. ಅಂದು ನಾನು ಕೋಪದಿಂದ ಈ ಪ್ರಾರ್ಥನೆಯನ್ನು ಪಠಿಸಲು ಮರೆತುಬಿಟ್ಟಿದ್ದೆ."

فوائد الحديث

ಅಲ್ಲಾಹನ ಅಪ್ಪಣೆಯಿಂದ ಮನುಷ್ಯನಿಗೆ ಆಕಸ್ಮಿಕವಾಗಿ ವಿಪತ್ತು ಬಾಧಿಸದಂತೆ ಅವನನ್ನು ಸುರಕ್ಷಿತವಾಗಿಡಲು ಬೆಳಗ್ಗೆ ಮತ್ತು ಸಂಜೆ ಈ ಪ್ರಾರ್ಥನೆಯನ್ನು ಪಠಿಸುವುದು ಅಪೇಕ್ಷಣೀಯವಾಗಿದೆ.

ಆದ್ಯ ಕಾಲದ ಪೂರ್ವಿಕರಿಗೆ ಇದ್ದಂತಹ ದೃಢನಂಬಿಕೆಯ ಶಕ್ತಿ ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿಕೊಟ್ಟ ವಿಷಯಗಳಲ್ಲಿ ಅವರಿಗಿದ್ದ ವಿಶ್ವಾಸವನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.

ಪ್ರಾರ್ಥನೆಗಳನ್ನು ನಿರ್ದಿಷ್ಟವಾಗಿ ಬೆಳಗ್ಗೆ ಮತ್ತು ಸಂಜೆ ಪಠಿಸಬೇಕೆಂದು ವಿಭಾಗಿಸಿದ್ದರ ಒಂದು ಪ್ರಯೋಜನವು ಏನೆಂದರೆ ಅದು ಮುಸಲ್ಮಾನನ ಅಲಕ್ಷ್ಯವನ್ನು ನಿವಾರಿಸುತ್ತದೆ ಮತ್ತು ಅವನು ಅಲ್ಲಾಹನ ದಾಸನೆಂದು ಅವನಿಗೆ ಸದಾ ನೆನಪಿಸಿಕೊಡುತ್ತದೆ.

ಪ್ರಾರ್ಥನೆಯನ್ನು ಪಠಿಸುವವನ ವಿಶ್ವಾಸದ ಶಕ್ತಿ, ಅವನ ವಿನಮ್ರತೆ, ನಿಷ್ಕಳಂಕತೆ ಹಾಗೂ ದೃಢವಿಶ್ವಾಸದಿಂದ ಕೂಡಿರುವ ಅವನ ಹೃದಯ ಸಾನಿಧ್ಯತೆ ಮುಂತಾದವುಗಳ ಪ್ರಮಾಣಕ್ಕೆ ಅನುಗುಣವಾಗಿ ಪ್ರಾರ್ಥನೆಯು ಅವನ ಮೇಲೆ ಪರಿಣಾಮ ಬೀರುತ್ತದೆ.

التصنيفات

Morning and Evening Dhikr