ಈ ಎರಡು ನಮಾಝ್‌ಗಳು ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಅವುಗಳಲ್ಲಿರುವ ಪ್ರತಿಫಲದ ಬಗ್ಗೆ ನಿಮಗೆ…

ಈ ಎರಡು ನಮಾಝ್‌ಗಳು ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಅವುಗಳಲ್ಲಿರುವ ಪ್ರತಿಫಲದ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಮೊಣಕಾಲಿನಲ್ಲಿ ತೆವಳಿಕೊಂಡಾದರೂ ಬರುತ್ತಿದ್ದಿರಿ

ಉಬೈ ಬಿನ್ ಕಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಂದಿನ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಸುಬಹ್ ನಮಾಝ್ ನಿರ್ವಹಿಸಿದರು. ನಂತರ ಹೇಳಿದರು: "ಇಂತಿಂತಹ ವ್ಯಕ್ತಿ ಇದ್ದಾರೆಯೇ?" ಅವರು ಉತ್ತರಿಸಿದರು: "ಇಲ್ಲ." ಅವರು ಕೇಳಿದರು: "ಇಂತಿಂತಹ ವ್ಯಕ್ತಿ ಇದ್ದಾರೆಯೇ?" ಅವರು ಉತ್ತರಿಸಿದರು: "ಇಲ್ಲ." ಅವರು ಹೇಳಿದರು: "ಈ ಎರಡು ನಮಾಝ್‌ಗಳು ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಅವುಗಳಲ್ಲಿರುವ ಪ್ರತಿಫಲದ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಮೊಣಕಾಲಿನಲ್ಲಿ ತೆವಳಿಕೊಂಡಾದರೂ ಬರುತ್ತಿದ್ದಿರಿ. ನಿಶ್ಚಯವಾಗಿಯೂ, ಮೊದಲನೇ ಸಾಲು ದೇವದೂತರುಗಳ ಸಾಲಿನಂತೆ. ಅದರ ಶ್ರೇಷ್ಠತೆಯ ಬಗ್ಗೆ ನೀವು ತಿಳಿದುಕೊಂಡಿದ್ದರೆ ನೀವು ಅದಕ್ಕಾಗಿ ತ್ವರೆ ಮಾಡುತ್ತಿದ್ದಿರಿ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿ ನಮಾಝ್ ಮಾಡುವುದು ಅವನು ಏಕಾಂಗಿಯಾಗಿ ನಮಾಝ್ ಮಾಡುವುದಕ್ಕಿಂತ ಪರಿಶುದ್ಧವಾಗಿದೆ. ಒಬ್ಬ ವ್ಯಕ್ತಿ ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ನಮಾಝ್ ಮಾಡುವುದು ಅವನು ಒಬ್ಬ ವ್ಯಕ್ತಿಯೊಂದಿಗೆ ನಮಾಝ್ ಮಾಡುವುದಕ್ಕಿಂತ ಪರಿಶುದ್ಧವಾಗಿದೆ. ಈ ಸಂಖ್ಯೆಯು ಹೆಚ್ಚಾಗುವುದು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿದೆ."

[صحيح]

الشرح

ಒಂದಿನ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಝ್ ಮಾಡಿದರು. ನಂತರ ಕೇಳಿದರು: "ಇಂತಿಂತಹ ವ್ಯಕ್ತಿ ನಮಾಝ್‌ನಲ್ಲಿ ಪಾಲ್ಗೊಂಡಿದ್ದಾನೆಯೇ?" ಸಹಾಬಿಗಳು ಹೇಳಿದರು: "ಇಲ್ಲ." ಅವರು ಪುನಃ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಕೇಳಿದರು: "ಇಂತಿಂತಹ ವ್ಯಕ್ತಿ ಪಾಲ್ಗೊಂಡಿದ್ದಾರೆಯೇ?" ಅವರು ಉತ್ತರಿಸಿದರು: "ಇಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಫಜ್ರ್ ನಮಾಝ್ ಮತ್ತು ಇಶಾ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ." ಏಕೆಂದರೆ, ಈ ಸಮಯಗಳಲ್ಲಿ ಅವರು ಆಲಸಿಗರಾಗುತ್ತಾರೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಅವರಿಗೆ ಜನರ ಪ್ರಶಂಸೆ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಕತ್ತಲೆಯಾದ್ದರಿಂದ ಅವರು ನಮಾಝ್‌ಗೆ ಹೋಗುವುದು ಯಾರಿಗೂ ಕಾಣಿಸುವುದಿಲ್ಲ. ಓ ಸತ್ಯವಿಶ್ವಾಸಿಗಳೇ, ಸುಬಹ್ ನಮಾಝ್ ಮತ್ತು ಇಶಾ ನಮಾಝ್‌ನಲ್ಲಿರುವ ಪ್ರತಿಫಲ ಮತ್ತು ಹೆಚ್ಚುವರಿ ಪುಣ್ಯದ ಬಗ್ಗೆ ನೀವೇನಾದರೂ ತಿಳಿದಿದ್ದರೆ—ಪ್ರತಿಫಲವು ಕೆಲಸದ ಕಠಿಣತೆಯ ಮೇಲೆ ಅವಲಂಬಿತವಾಗಿರುತ್ತದೆ—ನೀವು ತೆವಳಿಕೊಂಡು ಅಂಬೆಗಾಲಿನಲ್ಲಾದರೂ ಬರುತ್ತಿದ್ದಿರಿ. ಇಮಾಮರಿಗೆ ಹತ್ತಿರವಾಗಿರುವ ಮೊದಲನೆಯ ಸಾಲು ಅಲ್ಲಾಹನಿಗೆ ಹತ್ತಿರವಾಗಿರುವ ದೇವದೂತರುಗಳ ಸಾಲಿನಂತೆ. ಒಂದು ವೇಳೆ ಮೊದಲನೆಯ ಸಾಲಿಗಿರುವ ಶ್ರೇಷ್ಠತೆಯ ಬಗ್ಗೆ ಸತ್ಯವಿಶ್ವಾಸಿಗಳು ತಿಳಿದಿದ್ದರೆ ಅವರು ಅದಕ್ಕಾಗಿ ಸ್ಪರ್ಧಿಸುತ್ತಿದ್ದರು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿ ನಮಾಝ್ ಮಾಡುವುದಕ್ಕೆ ಅವನು ಏಕಾಂಗಿಯಾಗಿ ನಮಾಝ್ ಮಾಡುವುದಕ್ಕಿಂತ ಹೆಚ್ಚು ಪ್ರತಿಫಲ ಮತ್ತು ಪರಿಣಾಮವಿದೆ. ಅವನು ، ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ನಮಾಝ್ ಮಾಡುವುದು ಒಬ್ಬ ವ್ಯಕ್ತಿಯೊಂದಿಗೆ ನಮಾಝ್ ಮಾಡುವುದಕ್ಕಿಂತ ಶ್ರೇಷ್ಠವಾಗಿದೆ. ಹೆಚ್ಚು ಜನರು ಸೇರಿ ನಿರ್ವಹಿಸುವ ನಮಾಝ್ ಅಲ್ಲಾಹನಿಗೆ ಹೆಚ್ಚು ಇಷ್ಟವಾಗಿದೆ.

فوائد الحديث

ಇಮಾಮರು ನಮಾಝ್‌ಗೆ ಬರುವವರ ಸ್ಥಿತಿಗತಿಗಳ ಬಗ್ಗೆ ಮತ್ತು ಅವರಲ್ಲಿ ನಮಾಝ್‌ಗೆ ಹಾಜರಾಗದವರ ಬಗ್ಗೆ ವಿಚಾರಿಸುವುದು ಧರ್ಮನಿಯಮವಾಗಿದೆ.

ಸಾಮೂಹಿಕ ನಮಾಝ್‌ಗೆ ತಪ್ಪದೆ ಹಾಜರಾಗಬೇಕೆಂದು ತಿಳಿಸಲಾಗಿದೆ. ವಿಶೇಷವಾಗಿ ಇಶಾ ಮತ್ತು ಫಜ್ರ್ ನಮಾಝ್‌ಗಳು. ಅವು ಸತ್ಯವಿಶ್ವಾಸದ ಚಿಹ್ನೆಗಳಾಗಿವೆ.

ಇಶಾ ಮತ್ತು ಫಜ್ರ್ ನಮಾಝ್‌ಗಳಿಗಿರುವ ಮಹಾ ಪ್ರತಿಫಲವನ್ನು ತಿಳಿಸಲಾಗಿದೆ. ಏಕೆಂದರೆ, ಆ ಎರಡು ನಮಾಝ್‌ಗಳನ್ನು ನಿರ್ವಹಿಸಲು ಆತ್ಮಪರಿಶ್ರಮ ಪಡೆಬೇಕಾದ ಮತ್ತು ಆರಾಧನಾ ಕರ್ಮಗಳಲ್ಲಿ ಸ್ಥಿರವಾಗಿರಬೇಕಾದ ಅಗತ್ಯವಿದೆ. ಆದ್ದರಿಂದ ಅವುಗಳಿಗೆ ದೊರೆಯುವ ಪ್ರತಿಫಲವು ಇತರ ನಮಾಝ್‌ಗಳಿಗೆ ದೊರೆಯುವ ಪ್ರತಿಫಲಕ್ಕಿಂತ ಹೆಚ್ಚಾಗಿದೆ.

ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರಿ ಸಾಮೂಹಿಕ ನಮಾಝ್ ನಿರ್ವಹಿಸಬಹುದು.

ಮೊದಲನೆಯ ಸಾಲಿನ ಶ್ರೇಷ್ಠತೆಯನ್ನು ವಿವರಿಸಲಾಗಿದೆ ಮತ್ತು ಅದಕ್ಕಾಗಿ ತ್ವರೆ ಮಾಡಬೇಕೆಂದು ಪ್ರೋತ್ಸಾಹಿಸಲಾಗಿದೆ.

ಸಾಮೂಹಿಕ ನಮಾಝ್‌ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಅವರ ಸಂಖ್ಯೆ ಹೆಚ್ಚಾದಂತೆ ಪ್ರತಿಫಲವು ಹೆಚ್ಚಾಗುತ್ತದೆ.

ಸತ್ಕರ್ಮಗಳಿಗೆ ಧರ್ಮವು ನೀಡಿದ ಶ್ರೇಷ್ಠತೆಗಳಿಗೆ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಅವುಗಳ ಪ್ರತಿಫಲದಲ್ಲಿ ಹೆಚ್ಚು-ಕಡಿಮೆ ಉಂಟಾಗುತ್ತದೆ.

التصنيفات

Virtue and Rulings of Congregational Prayer