ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು

ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝಿಗಾಗಿ ತಕ್ಬೀರ್ ಹೇಳಿದರೆ, ಕುರ್‌ಆನ್ ಪಠಿಸುವುದಕ್ಕೆ ಮೊದಲು ಸ್ವಲ್ಪ ಹೊತ್ತು ಮೌನವಾಗಿರುತ್ತಿದ್ದರು. ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನ ತಂದೆ-ತಾಯಿಗಳನ್ನು ನಿಮಗೆ ಅರ್ಪಿಸುತ್ತಿದ್ದೇನೆ. ತಕ್ಬೀರ್ ಮತ್ತು ಕುರ್‌ಆನ್ ಪಠಣದ ನಡುವೆ ನೀವು ಮೌನವಾಗಿರುತ್ತೀರಿ. ಆಗ ನೀವು ಏನು ಪಠಿಸುತ್ತೀರಿ? ಅವರು ಉತ್ತರಿಸಿದರು: "ನಾನು ಹೀಗೆ ಹೇಳುತ್ತೇನೆ: ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು. ಓ ಅಲ್ಲಾಹ್! ಬಿಳಿಬಟ್ಟೆಯನ್ನು ಕೊಳೆಯಿಂದ ಶುಚಿಗೊಳಿಸುವಂತೆ ನನ್ನ ಪಾಪಗಳಿಂದ ನನ್ನನ್ನು ಶುಚಿಗೊಳಿಸು. ಓ ಅಲ್ಲಾಹ್! ಮಂಜು, ನೀರು ಮತ್ತು ಹಿಮದ ಮೂಲಕ ನನ್ನ ಪಾಪಗಳಿಂದ ನನ್ನನ್ನು ತೊಳೆದುಬಿಡು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝಿಗಾಗಿ ತಕ್ಬೀರ್ ಹೇಳಿದರೆ, ಸೂರ ಫಾತಿಹ ಪಠಿಸುವುದಕ್ಕೆ ಮೊದಲು ಸ್ವಲ್ಪ ಹೊತ್ತು ಮೌನವಾಗಿರುತ್ತಿದ್ದರು. ಅವರು ಕೆಲವು ಪ್ರಾರ್ಥನೆಗಳನ್ನು ಪಠಿಸುವ ಮೂಲಕ ತಮ್ಮ ನಮಾಝನ್ನು ಆರಂಭಿಸುತ್ತಿದ್ದರು. ಈ ಪ್ರಾರ್ಥನೆಗಳಲ್ಲಿ ಒಂದು ಹೀಗಿದೆ: "ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು. ಓ ಅಲ್ಲಾಹ್! ಬಿಳಿಬಟ್ಟೆಯನ್ನು ಕೊಳೆಯಿಂದ ಶುಚಿಗೊಳಿಸುವಂತೆ ನನ್ನನ್ನು ನನ್ನ ಪಾಪಗಳಿಂದ ಶುಚಿಗೊಳಿಸು. ಓ ಅಲ್ಲಾಹ್! ಮಂಜು, ನೀರು ಮತ್ತು ಹಿಮದ ಮೂಲಕ ನನ್ನ ಪಾಪಗಳಿಂದ ನನ್ನನ್ನು ತೊಳೆದುಬಿಡು." ಅವರು ಅಲ್ಲಾಹನಲ್ಲಿ ಪ್ರಾರ್ಥಿಸುವುದೇನೆಂದರೆ, ಅವರ ಮತ್ತು ಪಾಪಗಳ ನಡುವೆ, ಅವರು ಅವುಗಳಲ್ಲಿ ಬಿದ್ದುಬಿಡದಂತೆ ಅಂತರವಿರಿಸಬೇಕು. ಅದು ಎಂತಹ ಅಂತರವಾಗಿರಬೇಕೆಂದರೆ, ಪೂರ್ವ ಮತ್ತು ಪಶ್ಚಿಮಗಳು ಹೇಗೆ ಎಂದೆಂದಿಗೂ ಸಂಧಿಸುವುದಿಲ್ಲವೋ ಹಾಗೆಯೇ ಇದು ಕೂಡ ಸಂಧಿಸಬಾರದು. ಇನ್ನು ಪಾಪದಲ್ಲಿ ಬಿದ್ದುಬಿಟ್ಟರೂ, ಬಿಳಿ ಬಟ್ಟೆಯಿಂದ ಕೊಳೆಯನ್ನು ನಿವಾರಿಸುವಂತೆ ಅವರನ್ನು ಅದರಿಂದ ಶುಚೀಕರಿಸಬೇಕು ಮತ್ತು ಅದನ್ನು ತೊಲಗಿಸಬೇಕು. ಅದೇ ರೀತಿ, ಅವರನ್ನು ಅವರ ಪಾಪಗಳಿಂದ ತೊಳೆಯಬೇಕು ಮತ್ತು ನೀರು, ಮಂಜು ಮತ್ತು ಹಿಮದಂತಹ ಶೈತ್ಯ ಶುದ್ಧೀಕರಣಗಳಿಂದ ಅದರ ಉಷ್ಣ ಮತ್ತು ತಾಪವನ್ನು ತಣ್ಣಗಾಗಿಸಬೇಕು.

فوائد الحديث

ಗಟ್ಟಿಯಾಗಿ ಪಠಿಸುವ ನಮಾಝ್ ಆಗಿದ್ದರೂ ಸಹ, ಪ್ರಾರಂಭದ ಪ್ರಾರ್ಥನೆಯನ್ನು ಮೌನವಾಗಿ ಪಠಿಸಬೇಕಾಗಿದೆ.

ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚಲ ಮತ್ತು ನಿಶ್ಚಲವಾದ ಎಲ್ಲಾ ಅವಸ್ಥೆಗಳನ್ನು ಅರಿಯಲು ಸಹಾಬಿಗಳಿಗಿದ್ದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಉತ್ಸಾಹವನ್ನು ತಿಳಿಸಲಾಗಿದೆ.

ಪ್ರಾರಂಭದ ಪ್ರಾರ್ಥನೆಯ ಇತರ ರೂಪಗಳು ಕೂಡ ವರದಿಯಾಗಿವೆ. ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಧಿಕೃತವಾಗಿ ವರದಿಯಾದ ಪ್ರಾರಂಭದ ಪ್ರಾರ್ಥನೆಗಳ ಎಲ್ಲಾ ರೂಪಗಳನ್ನು ಅನುಸರಿಸುವುದು ಮತ್ತು ಒಂದೊಂದು ಸಲ ಒಂದೊಂದು ರೂಪವನ್ನು ಪಠಿಸುವುದು ಶ್ರೇಷ್ಠವಾಗಿದೆ.

التصنيفات

Dhikr (Invocation) during Prayer