ಖಂಡಿತವಾಗಿಯೂ ನನ್ನ ನಂತರ ನಾನು ನಿಮ್ಮ ಬಗ್ಗೆ ಭಯಪಡುವ ವಿಷಯಗಳಲ್ಲಿ ಒಂದು ಏನೆಂದರೆ, ನಿಮಗೆ ಜಗತ್ತಿನ ಹೊಳಪು ಮತ್ತು ಅದರ ಅಲಂಕಾರಗಳು…

ಖಂಡಿತವಾಗಿಯೂ ನನ್ನ ನಂತರ ನಾನು ನಿಮ್ಮ ಬಗ್ಗೆ ಭಯಪಡುವ ವಿಷಯಗಳಲ್ಲಿ ಒಂದು ಏನೆಂದರೆ, ನಿಮಗೆ ಜಗತ್ತಿನ ಹೊಳಪು ಮತ್ತು ಅದರ ಅಲಂಕಾರಗಳು ತೆರೆಯಲ್ಪಡುವುದು

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಂದಿನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್‌ನ (ಪ್ರವಚನ ಪೀಠದ) ಮೇಲೆ ಮೇಲೆ ಕುಳಿತರು ಮತ್ತು ನಾವು ಅವರ ಸುತ್ತಲೂ ಕುಳಿತೆವು. ಆಗ ಅವರು ಹೇಳಿದರು: "ಖಂಡಿತವಾಗಿಯೂ ನನ್ನ ನಂತರ ನಾನು ನಿಮ್ಮ ಬಗ್ಗೆ ಭಯಪಡುವ ವಿಷಯಗಳಲ್ಲಿ ಒಂದು ಏನೆಂದರೆ, ನಿಮಗೆ ಜಗತ್ತಿನ ಹೊಳಪು ಮತ್ತು ಅದರ ಅಲಂಕಾರಗಳು ತೆರೆಯಲ್ಪಡುವುದು." ಆಗ ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ! "ಒಳಿತು ಕೆಡುಕನ್ನು ತರುತ್ತದೆಯೇ?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೌನವಾದರು. ಆಗ ಜನರು ಆ ವ್ಯಕ್ತಿಯೊಂದಿಗೆ ಕೇಳಿದರು: "ನಿನಗೇನಾಗಿದೆ? ಪ್ರವಾದಿರವರೊಂದಿಗೆ ಮಾತನಾಡುತ್ತಿದ್ದೀಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರು ನಿನ್ನೊಂದಿಗೆ ಮಾತನಾಡುತ್ತಿಲ್ಲ?" ನಂತರ ಅವರಿಗೆ ವಹೀ (ದೇವವಾಣಿ) ಅವತೀರ್ಣವಾಗುತ್ತಿದೆಯೆಂದು ನಾವು ಭಾವಿಸಿದೆವು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಹುಬ್ಬಿನಿಂದ ಬೆವರನ್ನು ಒರೆಸಿಕೊಂಡು, "ಪ್ರಶ್ನಿಸಿದಾತ ಎಲ್ಲಿದ್ದಾನೆ?" ಎಂದು ಅವನನ್ನು ಪ್ರಶಂಸಿಸುವ ಧಾಟಿಯಲ್ಲಿ ಕೇಳಿದರು. ನಂತರ ಅವರು ಹೇಳಿದರು: "ಖಂಡಿತವಾಗಿಯೂ ಒಳಿತು ಕೆಡುಕನ್ನು ತರುವುದಿಲ್ಲ. ಖಂಡಿತವಾಗಿಯೂ ವಸಂತಕಾಲದಲ್ಲಿ ಬೆಳೆಯುವ ಸಸ್ಯವರ್ಗವು ಕೊಲ್ಲುತ್ತದೆ ಅಥವಾ ಮಾರಣಾಂತಿಕ ಸ್ಥಿತಿಯನ್ನು ತರುತ್ತದೆ. ಆದರೆ, ಸೊಪ್ಪು ತಿನ್ನುವ ಪ್ರಾಣಿ ಇದಕ್ಕೆ ಹೊರತಾಗಿದೆ. ಅದು ತನ್ನ ಪಕ್ಕೆಲುಬುಗಳು ಅಗಲವಾಗುವ ತನಕ ತಿಂದು, ಸೂರ್ಯನ ಕಡೆಗೆ ತಿರುಗುತ್ತದೆ. ನಂತರ ಸಗಣಿ ಮತ್ತು ಮೂತ್ರ ವಿಸರ್ಜನೆ ಮಾಡಿ, ನಂತರ ಪುನಃ ಮೇಯುತ್ತದೆ. ಖಂಡಿತವಾಗಿಯೂ ಈ ಸಂಪತ್ತು ಹಸಿರು ಮತ್ತು ಸಿಹಿಯಾಗಿದೆ. ತನ್ನ ಸಂಪತ್ತಿನಿಂದ ಅನಾಥರಿಗೆ ಮತ್ತು ದಾರಿಹೋಕರಿಗೆ ದಾನ ಮಾಡುವ ಮುಸಲ್ಮಾನನಿಗೆ ಈ ಸಂಪತ್ತು ಎಷ್ಟು ಒಳ್ಳೆಯ ಸಂಗಾತಿಯಾಗಿದೆ! - ಅಥವಾ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದಂತೆ - ಖಂಡಿತವಾಗಿಯೂ, ಯಾರು ಇದನ್ನು ಅನ್ಯಾಯವಾಗಿ ಪಡೆಯುತ್ತಾನೋ ಅವನ ಸ್ಥಿತಿಯು ತಿಂದರೂ ಹೊಟ್ಟೆ ತುಂಬದವನಂತಾಗಿದೆ. ಪುನರುತ್ಥಾನ ದಿನದಂದು ಅದು ಅವನ ವಿರುದ್ಧ ಸಾಕ್ಷಿ ನುಡಿಯುತ್ತದೆ."

[صحيح] [متفق عليه]

الشرح

ಒಂದಿನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್‌ನ (ಪ್ರವಚನ ಪೀಠದ) ಮೇಲೆ ಕುಳಿತು ತಮ್ಮ ಸಂಗಡಿಗರೊಡನೆ ಮಾತನಾಡುತ್ತಾ ಹೇಳಿದರು: ಖಂಡಿತವಾಗಿಯೂ ನನ್ನ ನಂತರ ನಿಮ್ಮ ಬಗ್ಗೆ ನಾನು ಹೆಚ್ಚಾಗಿ ಭಯಪಡುವ ಮತ್ತು ಆತಂಕಪಡುವ ವಿಷಯವೇನೆಂದರೆ, ನಿಮಗೆ ತೆರೆದು ಕೊಡಲಾಗುವ ಭೂಮಿಯ ಸಮೃದ್ಧಿಗಳು, ಪ್ರಪಂಚದ ಹೊಳಪುಗಳು, ಅದರ ಅಲಂಕಾರ ಮತ್ತು ಸೌಂದರ್ಯಗಳು, ಹಾಗೂ ಅದರಲ್ಲಿರುವ ವಿವಿಧ ರೀತಿಯ ಭೋಗಗಳು, ಬಟ್ಟೆಗಳು, ಬೆಳೆಗಳು ಮುಂತಾದ ತಾತ್ಕಾಲಿಕವಾಗಿದ್ದರೂ ಸಹ ಜನರು ಅದರ ಸೌಂದರ್ಯವನ್ನು ಕಂಡು ಹೆಮ್ಮೆಪಡುವ ವಸ್ತುಗಳನ್ನಾಗಿದೆ. ಆಗ ಒಬ್ಬ ವ್ಯಕ್ತಿ ಕೇಳಿದರು: ಪ್ರಪಂಚದ ಹೊಳಪು ಅಲ್ಲಾಹನ ಅನುಗ್ರಹವಾಗಿದೆ. ಹಾಗಾದರೆ ಈ ಅನುಗ್ರಹವು ಮರಳಿ ಹೋಗಿ ಶಿಕ್ಷೆ ಮತ್ತು ಪ್ರತೀಕಾರವಾಗಿ ಮಾರ್ಪಡುತ್ತದೆಯೇ?! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೌನವಾಗಿದ್ದನ್ನು ನೋಡಿ ಜನರು ಪ್ರಶ್ನಿಸಿದ ವ್ಯಕ್ತಿಯನ್ನು ದೂಷಿಸಿದರು ಮತ್ತು ಇದರಿಂದ ಪ್ರವಾದಿಯವರು ಕೋಪಗೊಂಡಿರಬಹುದೆಂದು ಭಾವಿಸಿದರು. ನಂತರ, ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಹೀ (ದೇವವಾಣಿ) ಅವತೀರ್ಣವಾಗುತ್ತಿದೆ ಎಂದು ಅವರಿಗೆ ಸ್ಪಷ್ಟವಾಯಿತು. ನಂತರ ಪ್ರವಾದಿಯವರು ತಮ್ಮ ಹಣೆಯಿಂದ ಬೆವರನ್ನು ಒರೆಸುತ್ತಾ ಕೇಳಿದರು: ಪ್ರಶ್ನಿಸಿದ ವ್ಯಕ್ತಿ ಎಲ್ಲಿದ್ದಾನೆ? ಆ ವ್ಯಕ್ತಿ ಹೇಳಿದರು: ನಾನು ಇಲ್ಲಿದ್ದೇನೆ. ಆಗ ಅವರು ಅಲ್ಲಾಹನನ್ನು ಸ್ತುತಿಸಿದರು ಮತ್ತು ಪ್ರಶಂಸಿಸಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಜವಾದ ಒಳಿತು ಒಳಿತಿನೊಂದಿಗೆ ಮಾತ್ರ ಬರುತ್ತದೆ. ಆದರೆ ಈ ಹೊಳಪು ಶುದ್ಧರೂಪದಲ್ಲಿರುವ ಒಳಿತಲ್ಲ. ಏಕೆಂದರೆ ಅದು ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಪರಲೋಕದ ಕಡೆಗೆ ಸಂಪೂರ್ಣವಾಗಿ ತಿರುಗುವುದನ್ನು ತಪ್ಪಿಸುವ ಕಾರ್ಯಮಗ್ನತೆಗಳಿಗೆ ಕಾರಣವಾಗುತ್ತದೆ. ನಂತರ ಅವರು ಇದಕ್ಕೆ ಒಂದು ಉದಾಹರಣೆಯನ್ನು ನೀಡುತ್ತಾ ಹೇಳಿದರು: ಖಂಡಿತವಾಗಿಯೂ ವಸಂತಕಾಲದಲ್ಲಿ ಬೆಳೆಯುವ ಸಸ್ಯವರ್ಗ ಮತ್ತು ಹಸಿರುಗಳು ಜಾನುವಾರುಗಳನ್ನು ಆಕರ್ಷಿಸುತ್ತವೆಯಾದರೂ, ಅದನ್ನು ಅತಿಯಾಗಿ ತಿನ್ನುವುದರಿಂದ ಅದು ಅಜೀರ್ಣ ಮುಂತಾದ ರೋಗಗಳಿಂದ ಜಾನುವಾರುಗಳನ್ನು ಕೊಲ್ಲುತ್ತವೆ ಅಥವಾ ಸಾಯುವ ಹಂತಕ್ಕೆ ತಲುಪಿಸುತ್ತವೆ. ಆದರೆ ಹಸಿರು ಸೊಪ್ಪನ್ನು ತಿನ್ನುವ ಪ್ರಾಣಿಗಳು ಇದಕ್ಕೆ ಹೊರತಾಗಿವೆ. ಅವು ತಮ್ಮ ಹೊಟ್ಟೆಯ ಒಂದು ಭಾಗ ತುಂಬುವವರೆಗೆ ಮಾತ್ರ ತಿನ್ನುತ್ತವೆ. ನಂತರ ಅವು ಸೂರ್ಯನ ಕಡೆಗೆ ತಿರುಗಿ, ತಮ್ಮ ಹೊಟ್ಟೆಯಿಂದ ತ್ಯಾಜ್ಯವನ್ನು ತೆಳುವಾಗಿ ಅಥವಾ ಮೂತ್ರದ ರೂಪದಲ್ಲಿ ವಿಸರ್ಜಿಸುತ್ತವೆ. ನಂತರ ತಮ್ಮ ಜಠರದಲ್ಲಿರುವುದನ್ನು ಮೇಲಕ್ಕೆತ್ತಿ, ಅದನ್ನು ಅಗಿಯುತ್ತವೆ ನಂತರ ನುಂಗುತ್ತವೆ. ನಂತರ ಮರಳಿ ಹೋಗಿ ಸೊಪ್ಪುಗಳನ್ನು ತಿನ್ನುತ್ತವೆ. ಖಂಡಿತವಾಗಿಯೂ ಈ ಸಂಪತ್ತು ಸಿಹಿಯಾದ ಹಸಿರು ಸಸ್ಯದಂತಿದೆ. ಅದನ್ನು ಅತಿಯಾಗಿ ತಿಂದರೆ ಅದು ಕೊಲ್ಲುತ್ತದೆ ಅಥವಾ ಸಾಯುವ ಹಂತಕ್ಕೆ ತಲುಪಿಸುತ್ತದೆ. ಆದರೆ, ಧರ್ಮಸಮ್ಮತ ಮಾರ್ಗಗಳಿಂದ ಅಗತ್ಯವಿರುವಷ್ಟು ಮತ್ತು ಸಾಕಾಗುವಷ್ಟು ಮಾತ್ರ ತೆಗೆದುಕೊಂಡರೆ ಅದು ಹಾನಿ ಮಾಡುವುದಿಲ್ಲ. ತನ್ನ ಸಂಪತ್ತಿನಿಂದ ಬಡವರಿಗೆ, ಅನಾಥರಿಗೆ ಮತ್ತು ದಾರಿಹೋಕರಿಗೆ ದಾನ ಮಾಡುವ ಮುಸಲ್ಮಾನನಿಗೆ ಆ ಸಂಪತ್ತು ಎಷ್ಟು ಒಳ್ಳೆಯ ಸಂಗಾತಿಯಾಗಿದೆ! ಯಾರು ಅದನ್ನು ನ್ಯಾಯಸಮ್ಮತವಾಗಿ ತೆಗೆದುಕೊಳ್ಳುತ್ತಾನೋ ಅವನಿಗೆ ಅದರಲ್ಲಿ ಬರ್ಕತ್ (ಸಮೃದ್ದಿ) ದಯಪಾಲಿಸಲಾಗುತ್ತದೆ. ಆದರೆ, ಯಾರು ಅದನ್ನು ಅನ್ಯಾಯವಾಗಿ ತೆಗೆದುಕೊಳ್ಳುತ್ತಾನೋ, ಅವನ ಉದಾಹರಣೆಯು ತಿಂದರೂ ಹೊಟ್ಟೆ ತುಂಬದವನಂತೆ. ಪುನರುತ್ಥಾನ ದಿನದಂದು ಅದು ಅವನ ವಿರುದ್ಧ ಸಾಕ್ಷಿ ನುಡಿಯುತ್ತದೆ.

فوائد الحديث

ನವವಿ ಹೇಳಿದರು: "ಸಂಪತ್ತನ್ನು ನ್ಯಾಯಸಮ್ಮತವಾಗಿ ಗಳಿಸಿ ಒಳಿತಿನ ಮಾರ್ಗಗಳಲ್ಲಿ ಖರ್ಚು ಮಾಡುವವರಿಗೆ ಆ ಸಂಪತ್ತು ಶ್ರೇಷ್ಠವಾಗಿದೆ."

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಅವಸ್ಥೆಯ ಬಗ್ಗೆ ಮತ್ತು ಅವರಿಗೆ ತೆರೆದುಕೊಡಲಾಗುವ ಇಹಲೋಕ ಜೀವನದ ಅಲಂಕಾರ ಮತ್ತು ಅದರ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಷಯವನ್ನು ಮನದಟ್ಟು ಮಾಡಲು ಉದಾಹರಣೆಗಳನ್ನು ನೀಡುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾದರಿಯಾಗಿದೆ.

ದಾನ ಮಾಡಲು ಮತ್ತು ಸಂಪತ್ತನ್ನು ಒಳಿತಿನ ಮಾರ್ಗಗಳಲ್ಲಿ ಖರ್ಚು ಮಾಡಲು ಪ್ರೋತ್ಸಾಹಿಸಲಾಗಿದೆ ಮತ್ತು (ಜಿಪುಣತನದಿಂದ) ಸಂಪತ್ತನ್ನು ತಡೆಹಿಡಿಯುವುದರ ವಿರುದ್ಧ ಎಚ್ಚರಿಕೆ ನೀಡಲಾಗಿದೆ.

"ಖಂಡಿತವಾಗಿಯೂ ಒಳಿತು ಕೆಡುಕನ್ನು ತರುವುದಿಲ್ಲ" ಎಂಬ ಮಾತಿನಿಂದ ಅರ್ಥವಾಗುವುದೇನೆಂದರೆ, ಸಂಪತ್ತು ಎಷ್ಟೇ ಹೇರಳವಾಗಿದ್ದರೂ ಒಟ್ಟಾರೆಯಾಗಿ ಅದು ಒಳಿತಾಗಿದೆ. ಸಂಪತ್ತನ್ನು ಅರ್ಹರಿಗೆ ನೀಡದೆ ಜಿಪುಣತನ ತೋರುವಾಗ ಮತ್ತು ಅದನ್ನು ಧರ್ಮಸಮ್ಮತವಲ್ಲದ ಮಾರ್ಗಗಳಲ್ಲಿ ದುರ್ವ್ಯಯ ಮಾಡುವಾಗ ಅದಕ್ಕೆ ಕೇಡು ಸಂಭವಿಸುತ್ತದೆ. ಅಲ್ಲಾಹು ಒಳಿತೆಂದು ತೀರ್ಮಾನಿಸಿದ ಯಾವುದೇ ವಿಷಯವೂ ಕೆಡುಕಾಗುವುದಿಲ್ಲ ಮತ್ತು ಅಲ್ಲಾಹು ಕೆಡುಕೆಂದು ತೀರ್ಮಾನಿಸಿದ ಯಾವುದೇ ವಿಷಯವೂ ಒಳಿತಾಗುವುದಿಲ್ಲ. ಆದರೆ ಒಳಿತನ್ನು ದಯಪಾಲಿಸಲಾದವರು ಅದನ್ನು ಹೇಗೆ ವಿಲೇವಾರಿ ಮಾಡುತ್ತಾರೆ ಎಂಬುದರಲ್ಲಿ ಅದು ಕೆಡುಕಾಗಬಹುದಾದ ಭಯವಿರುತ್ತದೆ.

ಆಲೋಚಿಸಿ ಉತ್ತರ ನೀಡಬೇಕಾಗಿ ಬಂದರೆ, ಉತ್ತರ ನೀಡಲು ಆತುರಪಡಬಾರದೆಂದು ತಿಳಿಸಲಾಗಿದೆ.

ತೀಬಿ ಹೇಳಿದರು: "ಇದರಿಂದ ನಾಲ್ಕು ವರ್ಗದ ಜನರನ್ನು ಅರ್ಥಮಾಡಿಕೊಳ್ಳಬಹುದು: ಅದನ್ನು ತಿನ್ನುವವರು ಅದರ ರುಚಿಗೆ ಮಾರುಹೋಗಿ, ಅದನ್ನು ಅತಿಯಾಗಿ ಮತ್ತು ಅವರ ಪಕ್ಕೆಲುಬುಗಳು ಊದಿಕೊಳ್ಳುವವರೆಗೆ ಕಂಠಪೂರ್ತಿ ತಿನ್ನುತ್ತಾರೆ ಮತ್ತು ಅವರು ಅದನ್ನು ನಿಲ್ಲಿಸುವುದಿಲ್ಲ. ಆದ್ದರಿಂದ ವಿನಾಶವು ಅವರನ್ನು ಬೇಗನೇ ತಲುಪುತ್ತದೆ. ಇನ್ನು ಕೆಲವರು ಅದನ್ನು ಇದೇ ರೀತಿ ತಿನ್ನುತ್ತಾರೆ. ಆದರೆ ರೋಗವು ಗಂಭೀರ ಸ್ಥಿತಿಗೆ ತಲುಪಿದಾಗ ಅದನ್ನು ನಿವಾರಿಸುವುದಕ್ಕಾಗಿ ಅವರು ಮಾರ್ಗೋಪಾಯಗಳನ್ನು ಸ್ವೀಕರಿಸುತ್ತಾರೆ. ಆದರೆ ಅದು ಅವರನ್ನು ಜಯಿಸಿ ಅವರನ್ನು ನಾಶಪಡಿಸುತ್ತದೆ. ಇನ್ನು ಕೆಲವರು ಅದನ್ನು ಇದೇ ರೀತಿ ತಿನ್ನುತ್ತಾರೆ. ಆದರೆ ತಮಗೆ ಹಾನಿ ಮಾಡುವ ಅಂಶವನ್ನು ತೆಗೆದುಹಾಕಲು ಮತ್ತು ಅದನ್ನು ಜೀರ್ಣಗೊಳಿಸಲು ಪ್ರಯತ್ನಿಸುವುದರಿಂದ ಅವರು ಸುರಕ್ಷಿತವಾಗಿರುತ್ತಾರೆ. ಇನ್ನು ಕೆಲವರು ಅತಿಯಾಗಿ ಅಥವಾ ಕಂಠಪೂರ್ತಿ ತಿನ್ನದೆ, ತಮ್ಮ ಹಸಿವನ್ನು ನಿವಾರಿಸುವಷ್ಟು ಮತ್ತು ತಮ್ಮ ಜೀವವನ್ನು ಉಳಿಸಿಕೊಳ್ಳುವಷ್ಟು ಮಾತ್ರ ತಿನ್ನುತ್ತಾರೆ. ಮೊದಲನೆಯದು, ಸತ್ಯನಿಷೇಧಿಯ ಉದಾಹರಣೆ. ಎರಡನೆಯದು, ಪಾಪಿಯ ಉದಾಹರಣೆ. ಅವನು ಪಾಪದಿಂದ ಹಿಂದೆ ಸರಿಯಲು ಮತ್ತು ಪಶ್ಚಾತ್ತಾಪ ಪಡಲು ಅದರ ಸಮಯ ಮುಗಿಯುವ ತನಕ ಗಮನ ನೀಡುವುದಿಲ್ಲ. ಮೂರನೆಯದು, ಗಲಿಬಿಲಿಯಲ್ಲಿರುವ ವ್ಯಕ್ತಿಯ ಉದಾಹರಣೆ. ಅವನು ಪಶ್ಚಾತ್ತಾಪವು ಸ್ವೀಕಾರವಾಗುವ ಸಮಯದಲ್ಲೇ ಪಶ್ಚಾತ್ತಾಪಪಡಲು ಆತುರಪಡುತ್ತಾನೆ. ನಾಲ್ಕನೆಯದು, ಇಹಲೋಕದ ಬಗ್ಗೆ ವಿರಕ್ತನಾಗಿರುವ ಮತ್ತು ಪರಲೋಕದ ಬಗ್ಗೆ ಆಸಕ್ತನಾಗಿರುವ ವ್ಯಕ್ತಿಯ ಉದಾಹರಣೆ."

ಇಬ್ನುಲ್ ಮುನೀರ್ ಹೇಳಿದರು: "ಈ ಹದೀಸ್‌ನಲ್ಲಿ ಅನೇಕ ಅಭೂತಪೂರ್ವ ಉಪಮೆಗಳಿವೆ. ಮೊದಲನೆಯದು: ಸಂಪತ್ತು ಮತ್ತು ಅದರ ವೃದ್ಧಿಯನ್ನು ಸಸ್ಯ ಮತ್ತು ಅದರ ಬೆಳವಣಿಗೆಗೆ ಹೋಲಿಸಲಾಗಿದೆ. ಎರಡನೆಯದು: ಹಣ ಸಂಪಾದಿಸುವುದರಲ್ಲಿ ಮುಳುಗಿರುವವನನ್ನು ಸಸ್ಯಗಳನ್ನು ಮೇಯುವುದರಲ್ಲಿ ಮುಳುಗಿರುವ ಜಾನುವಾರುಗಳಿಗೆ ಹೋಲಿಸಲಾಗಿದೆ. ಮೂರನೆಯದು: ಸಂಪತ್ತನ್ನು ಹೆಚ್ಚಿಸುವುದನ್ನು ಮತ್ತು ಶೇಖರಿಸುವುದನ್ನು ಅತಿಯಾಗಿ ತಿಂದು ಹೊಟ್ಟೆ ತುಂಬಿಸುವ ವ್ಯಕ್ತಿಗೆ ಹೋಲಿಸಲಾಗಿದೆ. ನಾಲ್ಕನೆಯದು: ಜಿಪುಣತನದ ಮೇಲ್ಮಟ್ಟಕ್ಕೆ ತಲುಪುವ ತನಕ ಸಂಪತ್ತಿನ ಬಗ್ಗೆ ಮನಸ್ಸಿನಲ್ಲಿ ಅಭಿಮಾನವಿಟ್ಟುಕೊಂಡು ಅದನ್ನು ಖರ್ಚು ಮಾಡುವವನನ್ನು ಪ್ರಾಣಿಯು ವಿಸರ್ಜಿಸುವ ಸಗಣಿಗೆ ಹೋಲಿಸಲಾಗಿದೆ. ಧರ್ಮವು ಇದನ್ನು ಹೊಲಸಾಗಿ ಪರಿಗಣಿಸುತ್ತದೆ ಎಂಬುದಕ್ಕೆ ಇದರಲ್ಲಿ ಅಭೂತಪೂರ್ವ ಸೂಚನೆಯಿದೆ. ಐದನೆಯದು: ಅದನ್ನು ಶೇಖರಿಸುವುದರಿಂದ ಮತ್ತು ಒಟ್ಟುಗೂಡಿಸುವುದರಿಂದ ದೂರವಿರುವವನನ್ನು ಕುರಿಗೆ ಹೋಲಿಸಲಾಗದೆ. ಅದು ತನ್ನ ಪಾರ್ಶ್ವವನ್ನು ಸೂರ್ಯನ ಕಡೆಗೆ ತಿರುಗಿಸಿ ವಿಶ್ರಾಂತಿ ಪಡೆಯುತ್ತದೆ. ಏಕೆಂದರೆ ಇದು ನೆಮ್ಮದಿ ಮತ್ತು ಶಾಂತಿಯ ಅತ್ಯುತ್ತಮ ಸ್ಥಿತಿಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರಯೋಜನವಿರುವುದರಿಂದ ಇದನ್ನು ಪಡೆದುಕೊಳ್ಳಬೇಕೆಂಬ ಸೂಚನೆಯೂ ಇದರಲ್ಲಿದೆ. ಆರನೆಯದು: ಸಂಪತ್ತನ್ನು ಯಾರಿಗೂ ನೀಡದೆ ಶೇಖರಿಸಿಡುವವನ ಸಾವನ್ನು ತನಗೆ ಹಾನಿ ಮಾಡುವುದನ್ನು ತಡೆಯಲು ನಿರ್ಲಕ್ಷ್ಯ ತೋರುವ ಪ್ರಾಣಿಯ ಸಾವಿಗೆ ಹೋಲಿಸಲಾಗಿದೆ. ಏಳನೆಯದು: ಸಂಪತ್ತನ್ನು ಶತ್ರುವಾಗಿ ಮಾರ್ಪಡಲಾರನು ಎಂದು ನಂಬಲಾಗದ ಗೆಳೆಯನಿಗೆ ಹೋಲಿಸಲಾಗಿದೆ. ಏಕೆಂದರೆ ಸಂಪತ್ತನ್ನು ಪ್ರೀತಿಸಿದರೆ, ಅದನ್ನು ಕಾಪಾಡಬೇಕಾದುದು ಮತ್ತು ಅದನ್ನು ಭದ್ರಪಡಿಸಬೇಕಾದುದು ಅದರ ಸ್ವಭಾವವಾಗಿದೆ. ಇದು ಅದನ್ನು ಅರ್ಹರಿಗೆ ನೀಡುವುದಕ್ಕೆ ಅಡ್ಡಿಪಡಿಸುತ್ತದೆ ಮತ್ತು ಅದರ ಮಾಲೀಕನಿಗೆ ಶಿಕ್ಷೆಯಾಗಲು ಕಾರಣವಾಗುತ್ತದೆ. ಎಂಟನೆಯದು: ಅದನ್ನು ಅನ್ಯಾಯವಾಗಿ ಪಡೆದುಕೊಳ್ಳುವವನನ್ನು ತಿಂದರೂ ಹೊಟ್ಟೆ ತುಂಬದವನಿಗೆ ಹೋಲಿಸಲಾಗಿದೆ.

ಸನದಿ ಹೇಳಿದರು: "ಈ ವರದಿಯಲ್ಲಿ ಎರಡು ವಿಷಯಗಳು ಅನಿವಾರ್ಯವಾಗಿದೆ. ಒಂದು: ಸಂಪತ್ತನ್ನು ಸರಿಯಾದ ರೀತಿಯಲ್ಲಿ ಸಂಪಾದಿಸುವುದು. ಎರಡನೆಯದು: ಅದನ್ನು ಅದರ [ನಿಯೋಜಿತ] ಮಾರ್ಗಗಳಲ್ಲಿ ಖರ್ಚು ಮಾಡುವುದು. ಅವುಗಳಲ್ಲಿ ಒಂದರ ಅಭಾವ ಉಂಟಾದರೆ ಆ ಸಂಪತ್ತು ಹಾನಿಕಾರಕವಾಗುತ್ತದೆ... ಕೆಲವರು ಹೀಗೆ ಹೇಳಬಹುದು: ಇದರಲ್ಲಿ ಎರಡು ಷರತ್ತುಗಳಿಗೆ ಬದ್ಧವಾಗಿರಬೇಕೆಂಬ ಸೂಚನೆಯಿದೆ. ಒಬ್ಬ ವ್ಯಕ್ತಿ ಸಂಪತ್ತನ್ನು ಸರಿಯಾದ ಮಾರ್ಗದಲ್ಲಿ ಸಂಪಾದಿಸಿದರೆ ಮಾತ್ರ [ನಿಯೋಜಿತ] ಮಾರ್ಗಗಳಲ್ಲಿ ಅದನ್ನು ಖರ್ಚು ಮಾಡಲು ಅವನಿಗೆ ತೌಫೀಕ್ ದೊರೆಯುತ್ತದೆ."

التصنيفات

Condemning Love of the World