ಒಬ್ಬ ವ್ಯಕ್ತಿ ಸಾಮೂಹಿಕವಾಗಿ (ಜಮಾಅತ್‌ನೊಂದಿಗೆ) ನಮಾಝ್ ನಿರ್ವಹಿಸುವುದು, ಆತ ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ…

ಒಬ್ಬ ವ್ಯಕ್ತಿ ಸಾಮೂಹಿಕವಾಗಿ (ಜಮಾಅತ್‌ನೊಂದಿಗೆ) ನಮಾಝ್ ನಿರ್ವಹಿಸುವುದು, ಆತ ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತಕ್ಕಿಂತಲೂ ಹೆಚ್ಚು ಪದವಿಗಳನ್ನು ಹೊಂದಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಸಾಮೂಹಿಕವಾಗಿ (ಜಮಾಅತ್‌ನೊಂದಿಗೆ) ನಮಾಝ್ ನಿರ್ವಹಿಸುವುದು, ಆತ ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತಕ್ಕಿಂತಲೂ ಹೆಚ್ಚು ಪದವಿಗಳನ್ನು ಹೊಂದಿದೆ. ಅದೇಕೆಂದರೆ, ಅವರಲ್ಲೊಬ್ಬನು ಅತ್ಯುತ್ತಮ ರೀತಿಯಲ್ಲಿ ವುದೂ (ಅಂಗಸ್ನಾನ) ನಿರ್ವಹಿಸಿ, ನಂತರ ಮಸೀದಿಗೆ ಹೊರಡುತ್ತಾನೆ. ನಮಾಝಿನ ಹೊರತು ಇನ್ನೇನೂ ಅವನನ್ನು (ಹೊರಡುವಂತೆ) ಪ್ರಚೋದಿಸುವುದಿಲ್ಲ. ಅವನು ನಮಾಝನ್ನಲ್ಲದೆ ಇನ್ನೇನನ್ನೂ ಉದ್ದೇಶಿಸುವುದೂ ಇಲ್ಲ. ಹಾಗಾದರೆ, ಅವನು ಮಸೀದಿಯನ್ನು ಪ್ರವೇಶಿಸುವ ತನಕ ಅವನ ಒಂದೊಂದು ಹೆಜ್ಜೆಗೂ ಅವನಿಗೆ ಒಂದೊಂದು ಪದವಿಯನ್ನು ಏರಿಸಲಾಗುತ್ತದೆ ಮತ್ತು ಅವನಿಂದ ಒಂದೊಂದು ಪಾಪವನ್ನು ಅಳಿಸಲಾಗುತ್ತದೆ. ಅವನು ಮಸೀದಿಯನ್ನು ಪ್ರವೇಶಿಸಿದ ನಂತರ, ಎಲ್ಲಿಯವರೆಗೆ ನಮಾಝ್ ಅವನನ್ನು ಅಲ್ಲಿ ತಡೆದಿರಿಸುತ್ತದೋ ಅಲ್ಲಿಯ ತನಕ ಅವನು ನಮಾಝ್ ಮಾಡುತ್ತಿದ್ದಾನೆಂದೇ ಪರಿಗಣಿಸಲಾಗುತ್ತದೆ. ನಿಮ್ಮಲ್ಲೊಬ್ಬನು ನಮಾಝ್ ಮಾಡಿದ ಸ್ಥಳದಲ್ಲೇ ಕುಳಿತಿರುವ ತನಕ ದೇವದೂತರುಗಳು, “ಓ ಅಲ್ಲಾಹ್! ಇವನಿಗೆ ದಯೆ ತೋರು! ಓ ಅಲ್ಲಾಹ್! ಇವನನ್ನು ಕ್ಷಮಿಸು! ಓ ಅಲ್ಲಾಹ್! ಇವನ ಪಶ್ಚಾತ್ತಾಪವನ್ನು ಸ್ವೀಕರಿಸು!” ಎಂದು ಅವನಿಗಾಗಿ ಪ್ರಾರ್ಥಿಸುತ್ತಲೇ ಇರುತ್ತಾರೆ. ಅವನು ಇತರರಿಗೆ ತೊಂದರೆ ಕೊಡದಿರುವ ತನಕ, ಅಥವಾ ಅವನ ವುದೂ (ಅಂಗಸ್ನಾನ) ಅಸಿಂಧುವಾಗದಿರುವ ತನಕ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ಮುಸಲ್ಮಾನನು ಸಾಮೂಹಿಕವಾಗಿ ನಮಾಝ್ ನಿರ್ವಹಿಸಿದರೆ, ಅವನ ಆ ನಮಾಝ್, ಅವನು ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತಕ್ಕಿಂತಲೂ ಹೆಚ್ಚು ಬಾರಿ ಶ್ರೇಷ್ಠವಾಗಿದೆ. ನಂತರ ಅವರು ಅದರ ಕಾರಣವನ್ನು ತಿಳಿಸುತ್ತಾರೆ: ಅದೇನೆಂದರೆ, ಒಬ್ಬ ವ್ಯಕ್ತಿ ಅತ್ಯುತ್ತಮವಾಗಿ ಮತ್ತು ಪೂರ್ಣವಾಗಿ ವುದೂ ನಿರ್ವಹಿಸಿ, ನಂತರ ನಮಾಝ್ ನಿರ್ವಹಿಸುವ ಉದ್ದೇಶದಿಂದ ಮಾತ್ರ ಮಸೀದಿಗೆ ಹೊರಟರೆ, ಅವನ ಪ್ರತಿಯೊಂದು ಹೆಜ್ಜೆಗೆ ಅನುಗುಣವಾಗಿ ಅವನಿಗೆ ಒಂದೊಂದು ಸ್ಥಾನ ಅಥವಾ ಪದವಿಯನ್ನು ಏರಿಸಲಾಗುತ್ತದೆ ಮತ್ತು ಒಂದೊಂದು ಪಾಪವನ್ನು ಅಳಿಸಲಾಗುತ್ತದೆ. ನಂತರ ಅವನು ಮಸೀದಿಯನ್ನು ಪ್ರವೇಶಿಸಿ ನಮಾಝಿಗಾಗಿ ಕಾಯುತ್ತಾ ಕುಳಿತಿರುವಾಗ, ಅವನು ಕಾಯುತ್ತಿರುವ ತನಕ ಅವನಿಗೆ ನಮಾಝ್ ನಿರ್ವಹಿಸಿದ ಪ್ರತಿಫಲವು ದೊರೆಯುತ್ತದೆ. ಅವನು ನಮಾಝ್ ಮಾಡಿದ ಸ್ಥಳದಲ್ಲೇ ಇರುವ ತನಕ ದೇವದೂತರುಗಳು ಅವನಿಗಾಗಿ ಹೀಗೆ ಪ್ರಾರ್ಥಿಸುತ್ತಲೇ ಇರುತ್ತಾರೆ: "ಓ ಅಲ್ಲಾಹ್! ಇವನಿಗೆ ದಯೆ ತೋರು! ಓ ಅಲ್ಲಾಹ್! ಇವನನ್ನು ಕ್ಷಮಿಸು! ಓ ಅಲ್ಲಾಹ್! ಇವನ ಪಶ್ಚಾತ್ತಾಪವನ್ನು ಸ್ವೀಕರಿಸು!" ಇದು ಅವನ ವುದೂ ಅಸಿಂಧುವಾಗದಿರುವ ತನಕ, ಅಥವಾ ಜನರಿಗೆ ಅಥವಾ ದೇವದೂತರಿಗೆ ತೊಂದರೆಯಾಗುವ ಕೆಲಸವನ್ನು ಅವನು ಮಾಡದಿರುವ ತನಕ ಮುಂದುವರಿಯುತ್ತದೆ.

فوائد الحديث

ಮನೆಯಲ್ಲಿ ಅಥವಾ ಮಾರುಕಟ್ಟೆಯಲ್ಲಿ ಏಕಾಂಗಿಯಾಗಿ ನಮಾಝ್ ನಿರ್ವಹಿಸಿದರೆ ಸಿಂಧುವಾಗುತ್ತದೆ. ಆದರೆ ಸರಿಯಾದ ಕಾರಣವಿಲ್ಲದೆ ಜಮಾಅತ್ (ಸಾಮೂಹಿಕ) ನಮಾಝ್ ತಪ್ಪಿಸುವುದು ಪಾಪವಾಗಿದೆ.

ಏಕಾಂಗಿಯಾಗಿ ನಿರ್ವಹಿಸುವ ನಮಾಝ್‌ಗಿಂತ ಸಾಮೂಹಿಕವಾಗಿ ನಿರ್ವಹಿಸುವ ನಮಾಝ್ ಇಪ್ಪತ್ತೈದು, ಇಪ್ಪತ್ತಾರು ಅಥವಾ ಇಪ್ಪತ್ತೇಳು ದರ್ಜೆಯಷ್ಟು ಶ್ರೇಷ್ಠವಾಗಿದೆ.

ಸತ್ಯವಿಶ್ವಾಸಿಗಳಿಗಾಗಿ ಪ್ರಾರ್ಥಿಸುವುದು ದೇವದೂತರುಗಳ ಒಂದು ಕೆಲಸವಾಗಿದೆ.

ವುದೂ ನಿರ್ವಹಿಸಿದ ಸ್ಥಿತಿಯಲ್ಲಿ ಮಸೀದಿಗೆ ತೆರಳುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.

التصنيفات

Virtue and Rulings of Congregational Prayer