إعدادات العرض
ನೀವು ಪರಸ್ಪರ ಅಸೂಯೆ ಪಡಬೇಡಿರಿ, ಬೆಲೆ ಏರಿಸಬೇಡಿರಿ (ಖರೀದಿಸುವ ಉದ್ದೇಶವಿಲ್ಲದೆ), ಪರಸ್ಪರ ದ್ವೇಷಿಸಬೇಡಿರಿ, ಪರಸ್ಪರ ಬೆನ್ನು…
ನೀವು ಪರಸ್ಪರ ಅಸೂಯೆ ಪಡಬೇಡಿರಿ, ಬೆಲೆ ಏರಿಸಬೇಡಿರಿ (ಖರೀದಿಸುವ ಉದ್ದೇಶವಿಲ್ಲದೆ), ಪರಸ್ಪರ ದ್ವೇಷಿಸಬೇಡಿರಿ, ಪರಸ್ಪರ ಬೆನ್ನು ತಿರುಗಿಸಬೇಡಿರಿ, ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮಾರಾಟದ ಮೇಲೆ ಮಾರಾಟ ಮಾಡಬೇಡಿರಿ, ಮತ್ತು ಅಲ್ಲಾಹುವಿನ ದಾಸರಾಗಿರಿ, ಸಹೋದರರಾಗಿ ಬಾಳಿರಿ
ಅಬೂ ಹುರೈರ (ರ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಪರಸ್ಪರ ಅಸೂಯೆ ಪಡಬೇಡಿರಿ, ಬೆಲೆ ಏರಿಸಬೇಡಿರಿ (ಖರೀದಿಸುವ ಉದ್ದೇಶವಿಲ್ಲದೆ), ಪರಸ್ಪರ ದ್ವೇಷಿಸಬೇಡಿರಿ, ಪರಸ್ಪರ ಬೆನ್ನು ತಿರುಗಿಸಬೇಡಿರಿ, ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮಾರಾಟದ ಮೇಲೆ ಮಾರಾಟ ಮಾಡಬೇಡಿರಿ, ಮತ್ತು ಅಲ್ಲಾಹುವಿನ ದಾಸರಾಗಿರಿ, ಸಹೋದರರಾಗಿ ಬಾಳಿರಿ. ಒಬ್ಬ ಮುಸ್ಲಿಂ ಇನ್ನೊಬ್ಬ ಮುಸ್ಲಿಮನ ಸಹೋದರನಾಗಿದ್ದಾನೆ. ಅವನು ಅವನಿಗೆ ಅನ್ಯಾಯ ಮಾಡುವುದಿಲ್ಲ, ಅವನನ್ನು ಕೈಬಿಡುವುದಿಲ್ಲ ಮತ್ತು ಅವನನ್ನು ಕೀಳಾಗಿ ಕಾಣುವುದಿಲ್ಲ. ತಕ್ವಾ (ಅಲ್ಲಾಹುವಿನ ಭಯ) ಇಲ್ಲಿದೆ" - ಅವರು ತಮ್ಮ ಎದೆಯ ಕಡೆಗೆ ಮೂರು ಬಾರಿ ಸೂಚಿಸಿದರು - "ಒಬ್ಬ ವ್ಯಕ್ತಿ ತನ್ನ ಮುಸ್ಲಿಂ ಸಹೋದರನನ್ನು ಕೀಳಾಗಿ ಕಾಣುವುದೇ ಒಂದು ಕೆಡುಕಾಗಿ ಸಾಕು. ಪ್ರತಿಯೊಬ್ಬ ಮುಸ್ಲಿಮನ ರಕ್ತ, ಸಂಪತ್ತು ಮತ್ತು ಮಾನ ಇನ್ನೊಬ್ಬ ಮುಸ್ಲಿಮನ ಪಾಲಿಗೆ ನಿಷಿದ್ಧವಾಗಿವೆ."
الترجمة
العربية বাংলা Bosanski English Español Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Kurdî Português සිංහල Tiếng Việt অসমীয়া Kiswahili Nederlands ગુજરાતી Magyar ქართული Română ไทย తెలుగు मराठी ਪੰਜਾਬੀ دری አማርኛ Malagasy پښتو ភាសាខ្មែរ Lietuviųالشرح
ಒಬ್ಬ ಮುಸ್ಲಿಮನು ತನ್ನ ಸಹೋದರ ಮುಸ್ಲಿಮನಿಗೆ ಒಳಿತು ಮಾಡಲು ಪ್ರವಾದಿಯವರು(ಸ) ಉಪದೇಶಿಸಿದರು ಮತ್ತು ಅವನು ಇತರ ಮುಸ್ಲಿಮರಿಗೆ ನಿರ್ವಹಿಸಬೇಕಾದ ಕೆಲವು ಕರ್ತವ್ಯಗಳು ಮತ್ತು ಶಿಷ್ಟಾಚಾರಗಳನ್ನು ವಿವರಿಸಿದರು. ಅವುಗಳಲ್ಲಿ ಕೆಲವು ಹೀಗಿವೆ: ಮೊದಲನೆಯ ಉಪದೇಶ: ನೀವು ಪರಸ್ಪರ ಅಸೂಯೆ ಪಡಬೇಡಿರಿ. ಅಂದರೆ ನಿಮ್ಮಲ್ಲಿ ಒಬ್ಬರು ಇನ್ನೊಬ್ಬರಲ್ಲಿರುವ ಅನುಗ್ರಹವು ನಾಶವಾಗಬೇಕೆಂದು ಬಯಸುವುದಾಗಿದೆ. ಎರಡನೆಯದು: ನೀವು ಬೆಲೆ ಏರಿಸಬೇಡಿರಿ. ಅಂದರೆ ಖರೀದಿಸುವ ಉದ್ದೇಶವಿಲ್ಲದೆ ಒಂದು ವಸ್ತುವಿನ ಬೆಲೆಯನ್ನು ಹೆಚ್ಚಿಸಬೇಡಿರಿ. ಹೀಗೆ ಮಾಡುವ ಉದ್ದೇಶವು (ಆ ವಸ್ತುವನ್ನು ಖರೀದಿಸುವುದಲ್ಲ, ಬದಲಿಗೆ) ಮಾರಾಟಗಾರನಿಗೆ ಲಾಭ ಮಾಡಿಕೊಡುವುದು ಅಥವಾ ಖರೀದಿದಾರನಿಗೆ ಹಾನಿ ಮಾಡುವುದು ಆಗಿರುತ್ತದೆ. ಮೂರನೆಯದು: ನೀವು ಪರಸ್ಪರ ದ್ವೇಷಿಸಬೇಡಿರಿ. ಇಲ್ಲಿ ದ್ವೇಷ ಎಂದರೆ ಹಾನಿ ಮಾಡಲು ಬಯಸುವುದು. ಇದು ಪ್ರೀತಿಯ ವಿರುದ್ಧಪದ. ಆದರೆ ಅಲ್ಲಾಹುವಿಗಾಗಿ ದ್ವೇಷಿಸುವುದಾದರೆ ತೊಂದರೆಯಿಲ್ಲ. ಏಕೆಂದರೆ ಅದು ಕಡ್ಡಾಯವಾಗಿದೆ. ನಾಲ್ಕನೆಯದು: ನೀವು ಪರಸ್ಪರ ಬೆನ್ನು ತಿರುಗಿಸಬೇಡಿರಿ. ಅಂದರೆ ನಿಮ್ಮಲ್ಲಿ ಒಬ್ಬರು ತನ್ನ ಸಹೋದರನಿಗೆ ಬೆನ್ನು ಮತ್ತು ಹಿಂಭಾಗವನ್ನು ತೋರಿಸುತ್ತಾ ತಿರುಗಿ ನಡೆಯುವುದು, ಅವನಿಂದ ದೂರವಿರುವುದು ಮತ್ತು ಅವನನ್ನು ಬಹಿಷ್ಕರಿಸುವುದು. ಐದನೆಯದು: ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮಾರಾಟದ ಮೇಲೆ ಮಾರಾಟ ಮಾಡಬೇಡಿರಿ. ಅಂದರೆ, ಒಂದು ವಸ್ತುವನ್ನು ಖರೀದಿಸಿದವನೊಂದಿಗೆ: ನನ್ನ ಬಳಿ ಅದಕ್ಕಿಂತ ಕಡಿಮೆ ಬೆಲೆಗೆ ಇದೆ ಅಥವಾ ಇದೇ ಬೆಲೆಗೆ ಉತ್ತಮ ಗುಣಮಟ್ಟದ್ದು ಇದೆ ಎಂದು ಹೇಳುವುದು. ನಂತರ ಪ್ರವಾದಿಯವರು(ಸ) ಸಮಗ್ರವಾದ ಉಪದೇಶವನ್ನು ನೀಡಿದರು: ನಿಮಗೆ ನಿಷೇಧಿಸಲಾದ ಈ ಎಲ್ಲಾ ಕಾರ್ಯಗಳನ್ನು ಬಿಟ್ಟುಬಿಡುವ ಮೂಲಕ ಮತ್ತು ಹೃದಯಶುದ್ಧಿಯಿಂದ ಸ್ನೇಹ, ಸೌಮ್ಯಭಾವ, ಕರುಣೆ, ಸೌಜನ್ಯ ಮತ್ತು ಒಳಿತಿನ ವಿಷಯಗಳಲ್ಲಿ ಸಹಕಾರವನ್ನು ನೀಡುವ ಮೂಲಕ ಹಾಗೂ ಎಲ್ಲಾ ಸಂದರ್ಭಗಳಲ್ಲೂ ಉಪದೇಶ ಮಾಡುವ ಮೂಲಕ ಸಹೋದರರಂತೆ ಬಾಳಿರಿ. ಈ ಸಹೋದರತ್ವದ ಬೇಡಿಕೆಗಳು ಹೀಗಿವೆ: ತನ್ನ ಮುಸ್ಲಿಂ ಸಹೋದರನಿಗೆ ಅನ್ಯಾಯ ಮಾಡಬಾರದು ಮತ್ತು ಅವನ ಮೇಲೆ ಅತಿರೇಕವೆಸಗಬಾರದು. ತನ್ನ ಮುಸ್ಲಿಂ ಸಹೋದರನಿಗೆ ಅನ್ಯಾಯವಾಗುತ್ತಿದ್ದರೆ, ಅವನಿಗೆ ಸಹಾಯ ಮಾಡಲು ಸಾಧ್ಯವಿರುವಾಗ ಅವನನ್ನು ಕೈಬಿಡಬಾರದು. ಅವನಿಂದ ಅನ್ಯಾಯವನ್ನು ದೂರ ಮಾಡಬೇಕು. ಅವನನ್ನು ಕೀಳಾಗಿ ಕಾಣಬಾರದು, ಕೀಳಂದಾಜು ಮಾಡಬಾರದು ಮತ್ತು ಅವನನ್ನು ಕೀಳರಿಮೆ ಮತ್ತು ತಿರಸ್ಕಾರದಿಂದ ನೋಡಬಾರದು. ಇವೆಲ್ಲವೂ ಹೃದಯದಲ್ಲಿನ ಅಹಂಕಾರದಿಂದ ಉಂಟಾಗುತ್ತದೆ. ನಂತರ ತಕ್ವಾ (ಅಲ್ಲಾಹುವಿನ ಭಯ) ಹೃದಯದಲ್ಲಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಮೂರು ಬಾರಿ ವಿವರಿಸಿದರು. ಯಾರ ಹೃದಯದಲ್ಲಿ ಉತ್ತಮ ನಡತೆಗೆ ಪ್ರೇರಕವಾದ ಅಲ್ಲಾಹುವಿನ ಭಯ ಮತ್ತು ಅಲ್ಲಾಹು ನೋಡುತ್ತಿದ್ದಾನೆಂಬ ಪ್ರಜ್ಞೆ ಇರುತ್ತದೋ ಅವನು ಇನ್ನೊಬ್ಬ ಮುಸ್ಲಿಮನನ್ನು ಕೀಳಾಗಿ ಕಾಣಲಾರ. ತನ್ನ ಮುಸ್ಲಿಂ ಸಹೋದರನನ್ನು ಕೀಳಾಗಿ ಕಾಣುವುದು ಒಬ್ಬ ವ್ಯಕ್ತಿಗೆ ಕೆಡುಕಾಗಿ ಮತ್ತು ಕೆಟ್ಟ ಗುಣವಾಗಿ ಧಾರಾಳ ಸಾಕು. ಏಕೆಂದರೆ ಅದು ಅವನ ಹೃದಯದಲ್ಲಿನ ಅಹಂಕಾರದಿಂದ ಉಂಟಾಗುತ್ತದೆ. ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹಿಂದೆ ಹೇಳಿದ್ದನ್ನು ಒತ್ತಿ ಹೇಳಿದರು: ಪ್ರತಿಯೊಬ್ಬ ಮುಸ್ಲಿಮನ ರಕ್ತವು ಇನ್ನೊಬ್ಬ ಮುಸ್ಲಿಮನಿಗೆ ನಿಷಿದ್ಧವಾಗಿದೆ. ಅಂದರೆ ಕೊಲ್ಲುವ ಮೂಲಕ, ಗಾಯಗೊಳಿಸುವ ಮೂಲಕ ಅಥವಾ ಥಳಿಸುವ ಮೂಲಕ ಅವನ ಮೇಲೆ ಅತಿರೇಕವೆಸಗುವುದು. ಹಾಗೆಯೇ ಪ್ರತಿಯೊಬ್ಬ ಮುಸ್ಲಿಮನ ಸಂಪತ್ತು ಇನ್ನೊಬ್ಬ ಮುಸ್ಲಿಮನಿಗೆ ನಿಷಿದ್ಧವಾಗಿದೆ. ಅಂದರೆ ಯಾವುದೇ ಹಕ್ಕಿಲ್ಲದೆ ಅದನ್ನು ತೆಗೆದುಕೊಳ್ಳುವುದು. ಹಾಗೆಯೇ ಪ್ರತಿಯೊಬ್ಬ ಮುಸ್ಲಿಮನ ಮಾನವು ಇನ್ನೊಬ್ಬ ಮುಸ್ಲಿಮನಿಗೆ ನಿಷಿದ್ಧವಾಗಿದೆ. ಅಂದರೆ ಅವನ ಬಗ್ಗೆ ಅಥವಾ ಅವನ ವಂಶದ ಬಗ್ಗೆ ಅವಹೇಳನ ಮಾಡುವುದು.فوائد الحديث
ಸತ್ಯವಿಶ್ವಾಸದ ಸಹೋದರತ್ವಕ್ಕೆ ಅನಿವಾರ್ಯವಾದ ಎಲ್ಲವನ್ನೂ ಆದೇಶಿಸಲಾಗಿದೆ ಮತ್ತು ಅದನ್ನು ವಿರೋಧಿಸುವ ಮಾತುಗಳು ಮತ್ತು ಕ್ರಿಯೆಗಳನ್ನು ನಿಷೇಧಿಸಲಾಗಿದೆ.
ತಕ್ವಾದ ಮುಖ್ಯ ಆಧಾರವು ಹೃದಯದಲ್ಲಿರುವ ಅಲ್ಲಾಹುವಿನ ಜ್ಞಾನ, ಭಯ ಮತ್ತು ಅವನು ವೀಕ್ಷಿಸುತ್ತಿದ್ದಾನೆಂಬ ಪ್ರಜ್ಞೆಯಾಗಿದೆ. ಈ ತಕ್ವಾದಿಂದ ಸತ್ಕರ್ಮಗಳು ಜನ್ಮತಾಳುತ್ತವೆ.
ಬಾಹ್ಯ ವಿಚಲನವು ಹೃದಯದಲ್ಲಿರುವ ತಕ್ವಾದ ಬಲಹೀನತೆಯನ್ನು ಸೂಚಿಸುತ್ತದೆ.
ಯಾವುದೇ ರೀತಿಯಲ್ಲಿಯೂ ಮಾತಿನಿಂದಾಗಲಿ ಅಥವಾ ಕೃತ್ಯದಿಂದಾಗಲಿ ಮುಸ್ಲಿಮನಿಗೆ ತೊಂದರೆ ಕೊಡುವುದನ್ನು ನಿಷೇಧಿಸಲಾಗಿದೆ.
ಒಬ್ಬ ಮುಸ್ಲಿಮನು ಇನ್ನೊಬ್ಬರಲ್ಲಿರುವ ಅನುಗ್ರಹವು ನಿವಾರಣೆಯಾಗಬೇಕೆಂದು ಬಯಸದೆ, ತಾನು ಕೂಡ ಅವನಂತೆ ಇರಬೇಕೆಂದು ಬಯಸುವುದು ಅಸೂಯೆಯಲ್ಲ. ಇದನ್ನು ಗಿಬ್ತಾ ಎಂದು ಕರೆಯಲಾಗುತ್ತದೆ. ಇದು ಅನುಮತಿಸಲಾದ ವಿಷಯವಾಗಿದ್ದು ಇದು ಸತ್ಕರ್ಮಗಳಿಗಾಗಿ ಸ್ಪರ್ಧಿಸಲು ಸಹಾಯ ಮಾಡುತ್ತದೆ.
ಯಾವುದೇ ವಿಷಯದಲ್ಲಾದರೂ ಇನ್ನೊಬ್ಬರು ತನಗಿಂತ ಶ್ರೇಷ್ಠರಾಗಿರುವುದನ್ನು ಮನುಷ್ಯನು ಸ್ವಭಾವತಃ ಇಷ್ಟಪಡುವುದಿಲ್ಲ. ಅವನು ಇನ್ನೊಬ್ಬರಿಂದ ಆ ಶ್ರೇಷ್ಠತೆಯು ನಿವಾರಣೆಯಾಗಬೇಕೆಂದು ಬಯಸಿದರೆ ಅದು ಆಕ್ಷೇಪಾರ್ಹ ಅಸೂಯೆಯಾಗಿದೆ. ಆದರೆ (ಆ ಅನುಗ್ರಹವನ್ನು ಪಡೆಯಲು) ಅವನು ಸ್ಪರ್ಧಿಸಲು ಬಯಸಿದರೆ ಅದು ಅನುಮತಿಸಲಾದ ಗಿಬ್ತಾ ಆಗಿದೆ.
ಒಬ್ಬ ಖರೀದಿದಾರನೊಂದಿಗೆ ನಿನಗೆ ಆ ಮಾರಾಟಗಾರನು ದೊಡ್ಡ ಮಟ್ಟದ ಮೋಸ ಮಾಡಿದ್ದಾನೆ ಎಂದು ಹೇಳುವುದು ಆ ಮಾರಾಟಗಾರನ ವ್ಯಾಪಾರಕ್ಕೆ ಅಡ್ಡ ಬರುವುದಲ್ಲ. ಬದಲಿಗೆ, ಅದು ಉಪದೇಶದ ಬೇಡಿಕೆಗಳಲ್ಲಿ ಒಂದಾಗಿದೆ. ಆದರೆ ಹಾಗೆ ಹೇಳುವ ಉದ್ದೇಶವು ಖರೀದಿದಾರನಿಗೆ ಉಪದೇಶ ನೀಡುವುದಾಗಿರಬೇಕೇ ಹೊರತು ಮಾರಾಟಗಾರನಿಗೆ ಹಾನಿ ಮಾಡುವುದಾಗಿರಬಾರದು. ಕರ್ಮಗಳೆಲ್ಲವೂ ಉದ್ದೇಶಗಳ ಮೇಲೆ ಅವಲಂಬಿತವಾಗಿವೆ.
ಮಾರಾಟಗಾರ ಮತ್ತು ಖರೀದಿದಾರ ಪರಸ್ಪರ ತೃಪ್ತಿಯಿಂದ ಒಂದು ವಸ್ತುವಿನ ಬೆಲೆಯನ್ನು ಒಪ್ಪಿಕೊಳ್ಳದಿದ್ದರೆ, ಇನ್ನೊಬ್ಬನು ಅದನ್ನು ಮಾರಾಟ ಮಾಡುವುದು ಮಾರಾಟದ ಮೇಲೆ ಮಾರಾಟ ಮಾಡುವುದೆಂದು ಪರಿಗಣಿಸಲಾಗುವುದಿಲ್ಲ.
ಈ ಹದೀಸ್‌ನಲ್ಲಿ ನಿಷೇಧಿಸಲಾದ ದ್ವೇಷದಲ್ಲಿ ಅಲ್ಲಾಹುವಿಗಾಗಿ ದ್ವೇಷಿಸುವುದು ಒಳಪಡುವುದಿಲ್ಲ. ಏಕೆಂದರೆ, ಅದು ಕಡ್ಡಾಯವಾಗಿದೆ ಮತ್ತು ಅದು ಸತ್ಯವಿಶ್ವಾಸದ ಅತ್ಯಂತ ಬಲವಾದ ಹಿಡಿತಗಳಲ್ಲಿ ಒಂದಾಗಿದೆ.