ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಉದಾರಿಯಾಗಿದ್ದರು. ರಮದಾನ್ ತಿಂಗಳಲ್ಲಿ…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಉದಾರಿಯಾಗಿದ್ದರು. ರಮದಾನ್ ತಿಂಗಳಲ್ಲಿ ಜಿಬ್ರೀಲ್ ಅವರನ್ನು ಭೇಟಿಯಾಗುವಾಗ ಅವರು ಹಿಂದೆಂದಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಉದಾರಿಯಾಗಿದ್ದರು. ರಮದಾನ್ ತಿಂಗಳಲ್ಲಿ ಜಿಬ್ರೀಲ್ ಅವರನ್ನು ಭೇಟಿಯಾಗುವಾಗ ಅವರು ಹಿಂದೆಂದಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು. ಅವರು (ಜಿಬ್ರೀಲ್) ರಮದಾನ್ ತಿಂಗಳ ಎಲ್ಲಾ ರಾತ್ರಿಗಳಲ್ಲೂ ಅವರನ್ನು ಭೇಟಿಯಾಗಿ ಕುರ್‌ಆನ್ ಅನ್ನು ಪುನರಾವಲೋಕನ ಮಾಡಿಕೊಳ್ಳುತ್ತಿದ್ದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೀಸುವ ಗಾಳಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತಿದೊಡ್ಡ ಉದಾರಿಯಾಗಿದ್ದರು. ರಮದಾನ್ ತಿಂಗಳಲ್ಲಿ ಅವರ ಉದಾರತನವು ಹೆಚ್ಚಾಗಿ ಅವರು ಅರ್ಹರಿಗೆ ಅವರಿಗೆ ಬೇಕಾದುದನ್ನು ನೀಡುತ್ತಿದ್ದರು. ಅವರ ಉದಾರತನವು ಹೆಚ್ಚಾಗಲು ಎರಡು ಕಾರಣಗಳಿದ್ದವು: ಒಂದು: ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರವರ ಭೇಟಿ. ಎರಡು: ಕುರ್‌ಆನ್‌ನ ಪುನರಾವಲೋಕನ. ಅಂದರೆ, ಕುರ್‌ಆನ್‌ನ ಕಂಠಪಾಠವನ್ನು ಪರಿಶೀಲಿಸುವುದು. ಪವಿತ್ರ ಕುರ್‌ಆನ್‌ನಿಂದ ಆ ತನಕ ಅವತೀರ್ಣವಾದ ಎಲ್ಲಾ ವಚನಗಳನ್ನು ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವರೊಡನೆ ಕುಳಿತು ಪುನರಾವಲೋಕನ ಮಾಡಿಕೊಳ್ಳುತ್ತಿದ್ದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಅಲ್ಲಾಹು ಮಳೆ ಮತ್ತು ಕಾರುಣ್ಯದ ಸಹಿತ ಕಳುಹಿಸುವ ಉತ್ತಮ ಗಾಳಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು, ಅತಿಯಾಗಿ ದಾನ ಮಾಡುತ್ತಿದ್ದರು, ಸತ್ಕರ್ಮಗಳನ್ನು ನಿರ್ವಹಿಸುತ್ತಿದ್ದರು ಮತ್ತು ಜನರಿಗೆ ಉಪಕಾರ ಮಾಡಲು ತುದಿಗಾಲಲ್ಲಿ ನಿಲ್ಲುತ್ತಿದ್ದರು.

فوائد الحديث

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶೇಷವಾಗಿ ರಮದಾನ್ ತಿಂಗಳಲ್ಲಿ ತೋರುತ್ತಿದ್ದ ಉದಾರತನ, ವಿಶಾಲ ಮನೋಭಾವ ಮತ್ತು ದಯಾಪರತೆಯನ್ನು ವಿವರಿಸಲಾಗಿದೆ. ಏಕೆಂದರೆ, ಅದು ಸತ್ಕರ್ಮಗಳ ತಿಂಗಳು ಮತ್ತು ಒಳಿತುಗಳ ಋತುವಾಗಿದೆ.

ಎಲ್ಲಾ ಸಮಯಗಳಲ್ಲೂ ಉದಾರತನ ತೋರಲು ಪ್ರೋತ್ಸಾಹಿಸಲಾಗಿದೆ. ರಮದಾನ್ ತಿಂಗಳಲ್ಲಿ ಇದನ್ನು ಹೆಚ್ಚಿಸುವುದು ಅಪೇಕ್ಷಣೀಯವಾಗಿದೆ.

ರಮದಾನ್ ತಿಂಗಳಲ್ಲಿ ದಾನ-ಧರ್ಮ, ಉಪಕಾರ ಮತ್ತು ಕುರ್‌ಆನ್ ಪಠಣ ಮಾಡುವುದನ್ನು ಹೆಚ್ಚಿಸಬೇಕಾಗಿದೆ.

ವಿದ್ಯಾರ್ಥಿಗಳು ಮತ್ತು ವಿದ್ವಾಂಸರೊಡನೆ ಕುಳಿತು ಜ್ಞಾನವನ್ನು ಪುನರಾವಲೋಕನ ಮಾಡಿಕೊಳ್ಳುವುದು ಜ್ಞಾನವನ್ನು ಕಂಠಪಾಠ ಮಾಡುವ ವಿಧಾನಗಳಲ್ಲಿ ಒಂದಾಗಿದೆ.

التصنيفات

Ramadan, Prophet's Generosity