ಕರ್ಮಗಳಲ್ಲಿ ಆರು ವಿಧಗಳಿವೆ. ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳಿವೆ. ತದ್ರೂಪವಾದ ಒಂದು ವಿಷಯವಿದೆ.…

ಕರ್ಮಗಳಲ್ಲಿ ಆರು ವಿಧಗಳಿವೆ. ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳಿವೆ. ತದ್ರೂಪವಾದ ಒಂದು ವಿಷಯವಿದೆ. ಹತ್ತು ಪಟ್ಟು ಪ್ರತಿಫಲವಿರುವ ಒಳಿತು ಮತ್ತು ಏಳು ನೂರು ಪಟ್ಟು ಪ್ರತಿಫಲವಿರುವ ಒಳಿತು ಇದೆ

ಖುರೈಮ್ ಬಿನ್ ಫಾತಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕರ್ಮಗಳಲ್ಲಿ ಆರು ವಿಧಗಳಿವೆ. ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳಿವೆ. ತದ್ರೂಪವಾದ ಒಂದು ವಿಷಯವಿದೆ. ಹತ್ತು ಪಟ್ಟು ಪ್ರತಿಫಲವಿರುವ ಒಳಿತು ಮತ್ತು ಏಳು ನೂರು ಪಟ್ಟು ಪ್ರತಿಫಲವಿರುವ ಒಳಿತು ಇದೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳು ಎಂದರೆ: ಯಾರು ಅಲ್ಲಾಹನಲ್ಲಿ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಯಾರು ಅಲ್ಲಾಹನಲ್ಲಿ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುತ್ತಾರೋ ಅವರು ನರಕವನ್ನು ಪ್ರವೇಶಿಸುತ್ತಾರೆ. ತದ್ರೂಪವಾದ ವಿಷಯವೇನೆಂದರೆ: ಒಬ್ಬ ವ್ಯಕ್ತಿ ಒಂದು ಉತ್ತಮ ಕಾರ್ಯವನ್ನು ಮಾಡಲು ಉದ್ದೇಶಿಸಿ, ಅವನ ಹೃದಯವು ಅದನ್ನು ಅನುಭವಿಸಿದರೆ ಮತ್ತು ಅಲ್ಲಾಹು ಅವನ ಉದ್ದೇಶವನ್ನು ತಿಳಿದರೆ (ಅವನು ಆ ಕಾರ್ಯವನ್ನು ಮಾಡದಿದ್ದರೂ) ಅಲ್ಲಾಹು ಅವನಿಗೆ ಒಂದು ಪ್ರತಿಫಲವನ್ನು ದಾಖಲಿಸುತ್ತಾನೆ. ಒಬ್ಬ ವ್ಯಕ್ತಿ ಒಂದು ದುಷ್ಕರ್ಮವನ್ನು ಮಾಡಿದರೆ ಅಲ್ಲಾಹು ಅವನಿಗೆ ಒಂದು ದುಷ್ಕರ್ಮ ಮಾಡಿದ ಪ್ರತಿಫಲವನ್ನು ದಾಖಲಿಸುತ್ತಾನೆ. ಒಬ್ಬ ವ್ಯಕ್ತಿ ಒಂದು ಸತ್ಕರ್ಮವನ್ನು ಮಾಡಿದರೆ ಅಲ್ಲಾಹು ಅವನಿಗೆ ಹತ್ತು ಪಟ್ಟು ಸತ್ಕರ್ಮಗಳನ್ನು ಮಾಡಿದ ಪುಣ್ಯವನ್ನು ದಾಖಲಿಸುತ್ತಾನೆ. ಒಬ್ಬ ವ್ಯಕ್ತಿ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿದರೆ ಅಲ್ಲಾಹು ಅವನಿಗೆ ಏಳು ನೂರು ಒಳಿತುಗಳನ್ನು ಮಾಡಿದ ಪುಣ್ಯವನ್ನು ದಾಖಲಿಸುತ್ತಾನೆ. ಮನುಷ್ಯರಲ್ಲಿರುವ ವರ್ಗಗಳು ಯಾವುದೆಂದರೆ: ಇಹಲೋಕದಲ್ಲಿ ವಿಶಾಲವಾದ ಜೀವನವನ್ನು ಮತ್ತು ಪರಲೋಕದಲ್ಲಿ ಇಕ್ಕಟ್ಟಾದ ಜೀವನವನ್ನು ಪಡೆಯುವವನು, ಇಹಲೋಕದಲ್ಲಿ ಇಕ್ಕಟ್ಟಾದ ಜೀವನವನ್ನು ಮತ್ತು ಪರಲೋಕದಲ್ಲಿ ವಿಶಾಲವಾದ ಜೀವನವನ್ನು ಪಡೆಯುವವನು, ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಇಕ್ಕಟ್ಟಾದ ಜೀವನವನ್ನು ಪಡೆಯುವವನು, ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ವಿಶಾಲವಾದ ಜೀವನವನ್ನು ಪಡೆಯುವವನು."

[حسن] [رواه أحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕರ್ಮಗಳಲ್ಲಿ ಆರು ವಿಧಗಳಿವೆ ಮತ್ತು ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ ಎಂದು ತಿಳಿಸುತ್ತಾರೆ. ಕರ್ಮಗಳಲ್ಲಿರುವ ಆರು ವಿಧಗಳು ಯಾವುದೆಂದರೆ: ಒಂದು: ಒಬ್ಬ ವ್ಯಕ್ತಿ ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದೆ ಮರಣ ಹೊಂದಿದರೆ ಅವನಿಗೆ ಸ್ವರ್ಗ ಕಡ್ಡಾಯವಾಗಿದೆ. ಎರಡು: ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಮರಣ ಹೊಂದುವವನಿಗೆ ನರಕ ಕಡ್ಡಾಯವಾಗಿದೆ. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾನೆ. ಇವೆರಡು ಕಡ್ಡಾಯಗೊಳಿಸುವ ಕಾರ್ಯಗಳಾಗಿವೆ. ಮೂರು: ಒಳಿತು ಮಾಡುವ ಉದ್ದೇಶವನ್ನು ಹೊಂದಿರುವುದು. ಒಬ್ಬನು ಒಳಿತು ಮಾಡುವ ಉದ್ದೇಶವನ್ನು ಹೊಂದಿದ್ದು, ತನ್ನ ಉದ್ದೇಶದಲ್ಲಿ ಸತ್ಯವಂತನಾಗಿದ್ದರೆ, ಮತ್ತು ಅವನ ಹೃದಯದ ಮೂಲಕ ಅವನು ಅದನ್ನು ಅನುಭವಿಸಿದರೆ, ಮತ್ತು ಅವನ ಉದ್ದೇಶವು ಸತ್ಯವೆಂದು ಅಲ್ಲಾಹು ತಿಳಿದರೆ, ಯಾವುದೋ ಅಡ್ಡಿಯಿಂದಾಗಿ ಅವನಿಗೆ ಆ ಒಳಿತನ್ನು ಮಾಡಲು ಸಾಧ್ಯವಾಗದಿದ್ದರೂ ಸಹ, ಅಲ್ಲಾಹು ಅವನಿಗೆ ಒಂದು ಪೂರ್ಣ ಒಳಿತನ್ನು ಮಾಡಿದ ಪ್ರತಿಫಲವನ್ನು ದಾಖಲಿಸುತ್ತಾನೆ. ನಾಲ್ಕು: ಕೆಡುಕು ಮಾಡುವ ಉದ್ದೇಶವನ್ನು ಹೊಂದಿರುವುದು. ಒಂದು ಕೆಡುಕು ಮಾಡಿದವನಿಗೆ ಒಂದೇ ಒಂದು ಕೆಡುಕು ಮಾಡಿದ ಪ್ರತಿಫಲವನ್ನು ಮಾತ್ರ ದಾಖಲಿಸಲಾಗುತ್ತದೆ. ಇವು ತದ್ರೂಪ ಪ್ರತಿಫಲವಿರುವ ವಿಷಯಗಳಾಗಿದ್ದು ಇವುಗಳಿಗೆ ಹೆಚ್ಚುವರಿ ಪುಣ್ಯವಿಲ್ಲ. ಐದು: ಒಂದು ಒಳಿತು ಮಾಡಿದರೆ ಹತ್ತು ಒಳಿತು ಮಾಡಿದ ಪ್ರತಿಫಲವನ್ನು ದಾಖಲಿಸಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಒಂದು ಒಳಿತು ಮಾಡುವ ಉದ್ದೇಶವನ್ನು ಹೊಂದಿದ್ದು ಅವನು ಅದನ್ನು ಮಾಡಿದರೆ ಅವನಿಗೆ ಹತ್ತು ಒಳಿತುಗಳನ್ನು ಮಾಡಿದ ಪುಣ್ಯವನ್ನು ದಾಖಲಿಸಲಾಗುತ್ತದೆ. ಆರು: ಏಳುನೂರು ಪಟ್ಟು ಪ್ರತಿಫಲವಿರುವ ಒಳಿತು. ಅಂದರೆ ಒಬ್ಬ ವ್ಯಕ್ತಿ ಅಲ್ಲಾಹನ ಮಾರ್ಗದಲ್ಲಿ ಒಂದು ರೂಪಾಯಿ ಖರ್ಚು ಮಾಡಿದರೆ ಅವನಿಗೆ ಏಳು ನೂರು ರೂಪಾಯಿ ಖರ್ಚು ಮಾಡಿದ ಪುಣ್ಯವನ್ನು ದಾಖಲಿಸಲಾಗುತ್ತದೆ. ಇದು ಸರ್ವಶಕ್ತನಾದ ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ಅನುಗ್ರಹ ಮತ್ತು ಉದಾರತೆಯಾಗಿದೆ. ಮನುಷ್ಯರಲ್ಲಿರುವ ನಾಲ್ಕು ವರ್ಗಗಳು ಹೀಗಿವೆ: ಒಂದು: ಇಹಲೋಕದಲ್ಲಿ ವಿಶಾಲವಾದ ಜೀವನೋಪಾಯವನ್ನು ಹೊಂದಿರುವವನು, ತನಗೆ ಬೇಕಾದ ಎಲ್ಲವನ್ನೂ ಪಡೆದಿರುವವನು. ಆದರೆ ಪರಲೋಕದಲ್ಲಿ ಅವನ ಸ್ಥಿತಿಯು ಬಹಳ ಇಕ್ಕಟ್ಟಾಗಿರುತ್ತದೆ ಮತ್ತು ಅವನು ನರಕಕ್ಕೆ ಹೋಗಿ ತಲುಪುತ್ತಾನೆ. ಉದಾಹರಣೆಗೆ ಶ್ರೀಮಂತ ಸತ್ಯನಿಷೇಧಿ. ಎರಡು: ಇಹಲೋಕದಲ್ಲಿ ಬಹಳ ಇಕ್ಕಟ್ಟಾದ ಜೀವನೋಪಾಯವನ್ನು ಹೊಂದಿರುವವನು. ಆದರೆ ಪರಲೋಕದಲ್ಲಿ ಅವನ ಸ್ಥಿತಿಯು ಬಹಳ ವಿಶಾಲವಾಗಿದೆ ಮತ್ತು ಅವನು ಸ್ವರ್ಗಕ್ಕೆ ತಲುಪುತ್ತಾನೆ. ಉದಾಹರಣೆಗೆ ಬಡ ಸತ್ಯವಿಶ್ವಾಸಿ. ಮೂರು: ಇಹಲೋಕದಲ್ಲೂ ಪರಲೋಕದಲ್ಲೂ ಬಹಳ ಇಕ್ಕಟ್ಟನ್ನು ಅನುಭವಿಸುವವನು. ಉದಾಹರಣೆಗೆ ಬಡ ಸತ್ಯನಿಷೇಧಿ. ನಾಲ್ಕು:ಇಹಲೋಕದಲ್ಲೂ ಪರಲೋಕದಲ್ಲೂ ಬಹಳ ವಿಶಾಲತೆಯನ್ನು ಅನುಭವಿಸುವವನು.ಉದಾಹರಣೆಗೆ ಶ್ರೀಮಂತ ಸತ್ಯವಿಶ್ವಾಸಿ.

فوائد الحديث

ಅಲ್ಲಾಹನಿಗೆ ದಾಸರ ಮೇಲಿರುವ ಮಹಾ ಔದಾರ್ಯವನ್ನು ಮತ್ತು ಒಳಿತುಗಳಿಗೆ ಅವನು ನೀಡುವ ಇಮ್ಮಡಿ ಪ್ರತಿಫಲವನ್ನು ಈ ಹದೀಸ್ ತಿಳಿಸುತ್ತದೆ.

ಅಲ್ಲಾಹನ ನ್ಯಾಯ ಮತ್ತು ಉದಾರತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ನಾವು ಒಂದು ಕೆಡುಕು ಮಾಡಿದರೆ ಅವನು ಅದಕ್ಕೆ ಒಂದು ಕೆಡುಕು ಮಾಡಿದ ಶಿಕ್ಷೆಯನ್ನು ಮಾತ್ರ ದಾಖಲಿಸುತ್ತಾನೆ.

ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದರ ಭಯಾನಕತೆಯನ್ನು ಮತ್ತು ಸಹಭಾಗಿತ್ವ ಮಾಡಿದವನಿಗೆ ಸ್ವರ್ಗವು ನಿಷೇಧಿಸಲಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.

ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.

ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದರ ಪ್ರತಿಫಲವು ಏಳು ನೂರರಿಂದ ಆರಂಭವಾಗುತ್ತದೆ. ಏಕೆಂದರೆ ಅದು ಅಲ್ಲಾಹನ ವಚನವನ್ನು ಉನ್ನತವಾಗಿಡಲು ಸಹಾಯ ಮಾಡುತ್ತದೆ.

ಜನರ ವಿಭಿನ್ನ ವರ್ಗಗಳನ್ನು ಮತ್ತು ವ್ಯತ್ಯಾಸವನ್ನು ಈ ಹದೀಸ್ ವಿವರಿಸುತ್ತದೆ.

ಇಹಲೋಕದಲ್ಲಿ ಸತ್ಯವಿಶ್ವಾಸಿಗಳಿಗೂ ಸತ್ಯನಿಷೇಧಿಗಳಿಗೂ ವಿಶಾಲವಾದ ಜೀವನೋಪಾಯ ದೊರಕಬಹುದು. ಆದರೆ ಪರಲೋಕದಲ್ಲಿ ಸತ್ಯವಿಶ್ವಾಸಿಗಳಿಗೆ ಮಾತ್ರ ವಿಶಾಲತೆ ದೊರಕುತ್ತದೆ.

التصنيفات

Excellence of Monotheism, Merits of Heart Acts, Merits of Organs' Acts, Voluntary Charity