ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು—ತಿಳಿಸಿದರು: ನಿಶ್ಚಯವಾಗಿಯೂ, ನಿಮ್ಮಲ್ಲಿ ಪ್ರತಿಯೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಉದರದಲ್ಲಿ ನಲ್ವತ್ತು ದಿನ-ರಾತ್ರಿಗಳ ಕಾಲ 'ನುತ್ಫ'ದ (ವೀರ್ಯದ) ರೂಪದಲ್ಲಿ ಜೋಡಿಸಿಡಲಾಗುತ್ತದೆ

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು—ತಿಳಿಸಿದರು: ನಿಶ್ಚಯವಾಗಿಯೂ, ನಿಮ್ಮಲ್ಲಿ ಪ್ರತಿಯೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಉದರದಲ್ಲಿ ನಲ್ವತ್ತು ದಿನ-ರಾತ್ರಿಗಳ ಕಾಲ 'ನುತ್ಫ'ದ (ವೀರ್ಯದ) ರೂಪದಲ್ಲಿ ಜೋಡಿಸಿಡಲಾಗುತ್ತದೆ. ನಂತರ ಅಷ್ಟೇ ಅವಧಿಯವರೆಗೆ ಅವನು 'ಅಲಕ'ದ (ಹೆಪ್ಪುಗಟ್ಟಿದ ರಕ್ತದ) ರೂಪದಲ್ಲಿರುತ್ತಾನೆ. ನಂತರ ಅಷ್ಟೇ ಅವಧಿಯವರೆಗೆ ಅವನು 'ಮುದ್ಗ'ದ (ಮಾಂಸ ಮುದ್ದೆಯ) ರೂಪದಲ್ಲಿರುತ್ತಾನೆ. ನಂತರ ಅವನ ಬಳಿಗೆ ಒಬ್ಬ ದೇವದೂತರನ್ನು ಕಳುಹಿಸಿ, ನಾಲ್ಕು ವಿಷಯಗಳನ್ನು ಬರೆಯುವಂತೆ ಆಜ್ಞಾಪಿಸಲಾಗುತ್ತದೆ. ದೇವದೂತರು ಅವನ ಜೀವನೋಪಾಯ, ಆಯುಷ್ಯ, ಕರ್ಮ ಮತ್ತು ಅವನು ನತದೃಷ್ಟನೋ ಅಥವಾ ಅದೃಷ್ಟವಂತನೋ ಎಂಬುದನ್ನು ಬರೆಯುತ್ತಾರೆ. ನಂತರ ಅವರು ಅವನಿಗೆ ಆತ್ಮವನ್ನು ಊದುತ್ತಾರೆ. ನಿಶ್ಚಯವಾಗಿಯೂ, ನಿಮ್ಮಲ್ಲೊಬ್ಬನು ಸ್ವರ್ಗವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಮತ್ತು ಸ್ವರ್ಗದ ಮಧ್ಯೆ ಒಂದು ಮೊಳದಷ್ಟು ಮಾತ್ರ ಅಂತರವಿರುವಾಗ ಅವನ ಗ್ರಂಥವು (ವಿಧಿ-ಬರಹ) ಅವನಿಗಿಂತ ಮುಂದೆ ಬಂದು ಅವನು ನರಕವಾಸಿಗಳ ಕರ್ಮವನ್ನು ಮಾಡುತ್ತಾನೆ. ನಂತರ ಅವನು ನರಕವನ್ನು ಪ್ರವೇಶಿಸುತ್ತಾನೆ. ಅದೇ ರೀತಿ, ನಿಶ್ಚಯವಾಗಿಯೂ, ನಿಮ್ಮಲ್ಲೊಬ್ಬನು ನರಕವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಮತ್ತು ನರಕದ ಮಧ್ಯೆ ಒಂದು ಮೊಳದಷ್ಟು ಮಾತ್ರ ಅಂತರವಿರುವಾಗ ಅವನ ಗ್ರಂಥವು (ವಿಧಿ-ಬರಹ) ಅವನಿಗಿಂತ ಮುಂದೆ ಬಂದು ಅವನು ಸ್ವರ್ಗವಾಸಿಗಳ ಕರ್ಮವನ್ನು ಮಾಡುತ್ತಾನೆ. ನಂತರ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ."

[صحيح] [متفق عليه]

الشرح

ಇಬ್ನ್ ಮಸ್‌ಊದ್ ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ತಿಳಿಸಿದರು. ಅವರು ಮಾತಿನಲ್ಲಿ ಸತ್ಯವಂತರಾಗಿದ್ದಾರೆ ಮತ್ತು ಅಂಗೀಕರಿಸಲ್ಪಟ್ಟವರಾಗಿದ್ದಾರೆ—ಅಂದರೆ ಅಲ್ಲಾಹು ಅವರನ್ನು ಸತ್ಯವಂತರೆಂದು ಅಂಗೀಕರಿಸಿದ್ದಾನೆ. ಅವರು ಹೇಳಿದರು: ನಿಮ್ಮಲ್ಲಿ ಪ್ರತಿಯೊಬ್ಬರನ್ನು ಜೋಡಿಸಲಾಗುವುದು. ಅಂದರೆ ಒಬ್ಬ ವ್ಯಕ್ತಿ ತನ್ನ ಪತ್ನಿಯೊಡನೆ ಸಂಭೋಗಿಸಿದರೆ ಆತನ ವೀರ್ಯವು ಮಹಿಳೆಯ ಗರ್ಭಾಶಯದಲ್ಲಿ ನಲ್ವತ್ತು ದಿನಗಳ ಕಾಲ ನುತ್ಫದ (ಮಿಶ್ರಿತ ವೀರ್ಯದ) ರೂಪದಲ್ಲಿ ಜೋಡಣೆಯಾಗುತ್ತದೆ. ನಂತರ ಮುಂದಿನ ನಲ್ವತ್ತು ದಿನಗಳ ಕಾಲ ಅದು ಅಲಕದ ರೂಪದಲ್ಲಿ, ಅಂದರೆ ಹೆಪ್ಪುಗಟ್ಟಿದ ರಕ್ತದ ರೂಪದಲ್ಲಿರುತ್ತದೆ. ನಂತರ ಮುಂದಿನ ನಲ್ವತ್ತು ದಿನಗಳ ಕಾಲ ಅದು ಮುದ್ಗದ ರೂಪದಲ್ಲಿ, ಅಂದರೆ ಮಾಂಸದ ಮುದ್ದೆಯ ರೂಪದಲ್ಲಿರುತ್ತದೆ. ನಲ್ವತ್ತು ದಿನಗಳ ಮೂರನೆಯ ಅವಧಿಯು ಮುಗಿದಾಗ ಅಲ್ಲಿಗೆ ಒಬ್ಬ ದೇವದೂತರನ್ನು ಕಳುಹಿಸಲಾಗುತ್ತದೆ. ಅವರು ಅದಕ್ಕೆ ಆತ್ಮವನ್ನು ಊದುತ್ತಾರೆ. ನಾಲ್ಕು ವಿಷಯಗಳನ್ನು ಬರೆಯುವಂತೆ ಆ ದೇವದೂತರಿಗೆ ಆಜ್ಞಾಪಿಸಲಾಗುತ್ತದೆ: ಅವನ ಜೀವನೋಪಾಯ. ಅಂದರೆ ಅವನು ತನ್ನ ಆಯುಷ್ಯದಲ್ಲಿ ಪಡೆಯುವ ಅನುಗ್ರಹಗಳ ಪ್ರಮಾಣ. ಅವರ ಆಯುಷ್ಯ. ಅಂದರೆ ಅವನು ಇಹಲೋಕದಲ್ಲಿ ಎಷ್ಟು ವರ್ಷ ಬದುಕುತ್ತಾನೆ. ಅವನ ಕರ್ಮ. ಅಂದರೆ ಅವನು ಏನು ಕರ್ಮ ಮಾಡುತ್ತಾನೆ? ಅವನು ನತದೃಷ್ಟನೋ ಅಥವಾ ಅದೃಷ್ಟವಂತನೋ? ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಣೆ ಮಾಡಿ ಹೇಳುವುದೇನೆಂದರೆ, ಒಬ್ಬ ವ್ಯಕ್ತಿ ಸ್ವರ್ಗವಾಸಿಗಳು ಮಾಡುವ ಕರ್ಮಗಳನ್ನು ಮಾಡುತ್ತಾನೆ. ಅಂದರೆ ಜನರ ದೃಷ್ಟಿಯಲ್ಲಿ ಅವನ ಕರ್ಮಗಳು ಉತ್ತಮವಾಗಿರುತ್ತವೆ. ಹೀಗೆ ಅವನ ಮತ್ತು ಸ್ವರ್ಗದ ಮಧ್ಯೆ ಒಂದು ಮೊಳ ಅಂತರವಿರುವ ತನಕ ಅವನು ಹೀಗೆಯೇ ಇರುತ್ತಾನೆ. ಅಂದರೆ, ಅವನು ಸ್ವರ್ಗವನ್ನು ಪ್ರವೇಶ ಮಾಡಲು ಒಂದು ಮೊಳದಷ್ಟು ದೂರ ಮಾತ್ರ ಬಾಕಿ ಇರುತ್ತದೆ. ಆಗ ಅವನ ವಿಧಿಯು ಅವನ ಮುಂಭಾಗಕ್ಕೆ ಬಂದು ಅವನು ನರಕವಾಸಿಗಳ ಕರ್ಮಗಳನ್ನು ಮಾಡುತ್ತಾನೆ. ಹೀಗೆ ಅವನ ಕೊನೆಯ ಕರ್ಮವು ನರಕವಾಸಿಗಳ ಕರ್ಮವಾಗಿದ್ದು ಅವನು ನರಕವನ್ನು ಪ್ರವೇಶಿಸುತ್ತಾನೆ. ಏಕೆಂದರೆ ನಿರಂತರ ಸತ್ಕರ್ಮ ಮಾಡುವುದು ಮತ್ತು ನಿಲುವಿನಲ್ಲಿ ಬದಲಾವಣೆ ಮಾಡದಿರುವುದು ಕರ್ಮಗಳ ಸ್ವೀಕಾರಕ್ಕೆ ಷರತ್ತಾಗಿದೆ. ಇನ್ನೊಬ್ಬ ವ್ಯಕ್ತಿ ನರಕವಾಸಿಗಳ ಕರ್ಮಗಳನ್ನು ಮಾಡುತ್ತಾ ಇರುತ್ತಾನೆ. ಹೀಗೆ ಅವನು ನರಕವನ್ನು ಸಮೀಪಿಸುವಷ್ಟರಲ್ಲಿ, ಅಂದರೆ ಅವನ ಮತ್ತು ನರಕದ ನಡುವೆ ಒಂದು ಮೊಳ ಮಾತ್ರ ದೂರವಿರುವಾಗ, ಅವನ ವಿಧಿಯು ಅವನ ಮುಂಭಾಗಕ್ಕೆ ಬಂದು ಅವನು ಸ್ವರ್ಗವಾಸಿಗಳ ಕರ್ಮಗಳನ್ನು ಮಾಡುತ್ತಾನೆ. ಹೀಗೆ ಅವನ ಕೊನೆಯ ಕರ್ಮವು ಸ್ವರ್ಗವಾಸಿಗಳ ಕರ್ಮವಾಗಿದ್ದು ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ.

فوائد الحديث

ಅಂತಿಮವಾಗಿ ವಿಧಿಯಲ್ಲಿ ಏನು ಬರೆದಿದೆಯೋ ಅದೇ ಸಂಭವಿಸುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.

ಕರ್ಮಗಳನ್ನು ಕಂಡು ಪುಳಕಿತನಾಗಬಾರದೆಂದು ಈ ಹದೀಸ್ ಎಚ್ಚರಿಸುತ್ತದೆ. ಏಕೆಂದರೆ ಕರ್ಮಗಳಲ್ಲಿ ಪರಿಗಣಿಸಲ್ಪಡುವುದು ಕೊನೆಯ ಕರ್ಮಗಳನ್ನಾಗಿವೆ.

التصنيفات

ಅಂತ್ಯದಿನದಲ್ಲಿ ವಿಶ್ವಾಸವಿಡುವುದು, The Angels, Levels of Divine Decree and Fate, ಇಸ್ಲಾಮ್