ಓ ಅಬ್ಬಾಸ್‌ರವರೇ! ಓ ಅಲ್ಲಾಹನ ಸಂದೇಶವಾಹಕರ ಚಿಕ್ಕಪ್ಪನವರೇ! ಇಹಲೋಕ ಮತ್ತು ಪರಲೋಕದ ಸುರಕ್ಷತೆಗಾಗಿ ಅಲ್ಲಾಹನಲ್ಲಿ ಬೇಡಿರಿ

ಓ ಅಬ್ಬಾಸ್‌ರವರೇ! ಓ ಅಲ್ಲಾಹನ ಸಂದೇಶವಾಹಕರ ಚಿಕ್ಕಪ್ಪನವರೇ! ಇಹಲೋಕ ಮತ್ತು ಪರಲೋಕದ ಸುರಕ್ಷತೆಗಾಗಿ ಅಲ್ಲಾಹನಲ್ಲಿ ಬೇಡಿರಿ

ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಅಲ್ಲಾಹನಲ್ಲಿ ಬೇಡಬಹುದಾದ ಏನನ್ನಾದರೂ ನನಗೆ ಕಲಿಸಿಕೊಡಿ." ಅವರು ಹೇಳಿದರು: "ಅಲ್ಲಾಹನಲ್ಲಿ ಸುರಕ್ಷತೆಯನ್ನು ಬೇಡಿರಿ." ಕೆಲವು ದಿನಗಳ ನಂತರ, ನಾನು ಅವರ ಬಳಿಗೆ ಹೋಗಿ ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಅಲ್ಲಾಹನಲ್ಲಿ ಬೇಡಬಹುದಾದ ಏನನ್ನಾದರೂ ನನಗೆ ಕಲಿಸಿಕೊಡಿ." ಅವರು ನನಗೆ ಹೇಳಿದರು: "ಓ ಅಬ್ಬಾಸ್‌ರವರೇ! ಓ ಅಲ್ಲಾಹನ ಸಂದೇಶವಾಹಕರ ಚಿಕ್ಕಪ್ಪನವರೇ! ಇಹಲೋಕ ಮತ್ತು ಪರಲೋಕದ ಸುರಕ್ಷತೆಗಾಗಿ ಅಲ್ಲಾಹನಲ್ಲಿ ಬೇಡಿರಿ."

[صحيح لغيره] [رواه الترمذي وأحمد]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚಿಕ್ಕಪ್ಪ ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಾಹನಲ್ಲಿ ಬೇಡಬಹುದಾದ ಒಂದು ಪ್ರಾರ್ಥನೆಯನ್ನು ಕಲಿಸಿಕೊಡುವಂತೆ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಂತಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧರ್ಮದಲ್ಲಿ, ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಎಲ್ಲಾ ರೀತಿಯ ಆಪತ್ತು ಮತ್ತು ತೊಂದರೆಗಳಿಂದ ಸುರಕ್ಷಿತವಾಗಿರಿಸುವಂತೆ ಅಲ್ಲಾಹನಲ್ಲಿ ಬೇಡಿಕೊಳ್ಳಲು ಕಲಿಸಿದರು. ಅಬ್ಬಾಸ್ ಹೇಳುತ್ತಾರೆ: "ಕೆಲವು ದಿನಗಳ ನಂತರ ನಾನು ಪುನಃ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಅಲ್ಲಾಹನಲ್ಲಿ ಬೇಡಿಕೊಳ್ಳಬಹುದಾದ ಪ್ರಾರ್ಥನೆಯನ್ನು ಕಲಿಸಿಕೊಡುವಂತೆ ವಿಚಾರಿಸಿದೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಹಳ ಪ್ರೀತಿಯಿಂದಲೇ ಹೇಳಿದರು: "ಓ ಅಬ್ಬಾಸ್‌ರವರೇ! ಓ ಅಲ್ಲಾಹನ ಸಂದೇಶವಾಹಕರ ಚಿಕ್ಕಪ್ಪನವರೇ! ಇಹಲೋಕ ಮತ್ತು ಪರಲೋಕದಲ್ಲಿ ಎಲ್ಲಾ ಕೆಡುಕುಗಳನ್ನು ದೂರಗೊಳಿಸಲು ಮತ್ತು ಎಲ್ಲಾ ಒಳಿತುಗಳನ್ನು ಪಡೆದುಕೊಳ್ಳಲು ಅಲ್ಲಾಹನಲ್ಲಿ ಸುರಕ್ಷತೆಯನ್ನು ಬೇಡಿಕೊಳ್ಳಿರಿ."

فوائد الحديث

ಅಬ್ಬಾಸ್ ರವರು ಎರಡನೇ ಬಾರಿ ಕೇಳಿದಾಗಲೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದೇ ಉತ್ತರ ನೀಡಿರುವುದರಿಂದ, ಮನುಷ್ಯನು ಅಲ್ಲಾಹನಲ್ಲಿ ಬೇಡಬಹುದಾದ ಅತ್ಯುತ್ತಮ ವಿಷಯವು ಸುರಕ್ಷತೆಯೆಂದು ತಿಳಿದುಬರುತ್ತದೆ.

ಸುರಕ್ಷತೆಯ ಶ್ರೇಷ್ಠತೆಯನ್ನು ಮತ್ತು ಅದು ಇಹಲೋಕ ಹಾಗೂ ಪರಲೋಕದಲ್ಲಿನ ಎಲ್ಲಾ ಒಳಿತುಗಳನ್ನು ಒಳಗೊಂಡಿದೆಯೆಂದು ವಿವರಿಸಲಾಗಿದೆ.

ಜ್ಞಾನ ಹಾಗೂ ಒಳಿತನ್ನು ಹೆಚ್ಚಿಸುವುದರ ಬಗ್ಗೆ ಸಹಾಬಿಗಳಲ್ಲಿರುವ (ಅವರೆಲ್ಲರ ಮೇಲೂ ಅಲ್ಲಾಹನ ಸಂತೃಪ್ತಿಯಿರಲಿ) ಆಸಕ್ತಿಯನ್ನು ತಿಳಿಸಲಾಗಿದೆ.

التصنيفات

Reported Supplications