ಬಲಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮನು ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನಾಗಿದ್ದಾನೆ. ಎಲ್ಲರಲ್ಲೂ…

ಬಲಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮನು ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನಾಗಿದ್ದಾನೆ. ಎಲ್ಲರಲ್ಲೂ ಒಳಿತಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮನು ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನಾಗಿದ್ದಾನೆ. ಎಲ್ಲರಲ್ಲೂ ಒಳಿತಿದೆ. ನಿನಗೆ ಪ್ರಯೋಜನಕಾರಿಯಾದ ವಿಷಯದಲ್ಲಿ ಉತ್ಸುಕನಾಗು, ಅಲ್ಲಾಹನಲ್ಲಿ ಸಹಾಯ ಬೇಡು ಮತ್ತು ಅಸಹಾಯಕನಾಗಬೇಡ. ನಿನಗೇನಾದರೂ ಸಂಭವಿಸಿದರೆ, "ಒಂದು ವೇಳೆ ನಾನು ಹೀಗೆ ಮಾಡುತ್ತಿದ್ದರೆ ಹೀಗಾಗುತ್ತಿತ್ತು" ಎಂದು ಹೇಳಬೇಡ. ಬದಲಿಗೆ, "ಇದು ಅಲ್ಲಾಹು ವಿಧಿಸಿದ್ದು; ಅವನು ಇಚ್ಛಿಸುವುದನ್ನು ಅವನು ಮಾಡುತ್ತಾನೆ" ಎಂದು ಹೇಳು. ಏಕೆಂದರೆ ‘ಒಂದು ವೇಳೆ' ಎಂಬ ಮಾತು ಶೈತಾನನು ಕಾರ್ಯೋನ್ಮುಖನಾಗಲು ಬಾಗಿಲು ತೆರೆದುಕೊಡುತ್ತದೆ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸತ್ಯವಿಶ್ವಾಸಿಗಳಿಗೆ ಎಲ್ಲಾ ವಿಷಯಗಳಲ್ಲೂ ಒಳಿತಿದೆ. ಆದರೆ ಸತ್ಯವಿಶ್ವಾಸ, ದೃಢನಿರ್ಧಾರ, ಆರ್ಥಿಕ ಸ್ಥಿತಿ ಮುಂತಾದ ಪ್ರಾಬಲ್ಯವಿರುವ ವಿಷಯಗಳಲ್ಲಿ ಬಲಶಾಲಿಯಾಗಿರುವವನು ದುರ್ಬಲ ಸತ್ಯವಿಶ್ವಾಸಿಗಿಂತ ಅಲ್ಲಾಹನಿಗೆ ಹೆಚ್ಚು ಪ್ರಿಯನು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಮೇಲೆ ಸಂಪೂರ್ಣ ಅವಲಂಬಿತರಾಗಿ, ಅವನಲ್ಲಿ ಸಹಾಯ ಬೇಡುತ್ತಾ ಮತ್ತು ಅವನ ಮೇಲೆ ಭರವಸೆಯಿಡುತ್ತಾ, ಇಹಲೋಕ ಮತ್ತು ಪರಲೋಕದಲ್ಲಿ ತನಗೆ ಪ್ರಯೋಜನಕಾರಿಯಾಗಿರುವುದನ್ನು ಉಪಯೋಗಿಸುವಂತೆ ಸತ್ಯವಿಶ್ವಾಸಿಗೆ ಉಪದೇಶ ಮಾಡುತ್ತಾರೆ. ನಂತರ ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಭಯ ಲೋಕಗಳಲ್ಲಿ ಪ್ರಯೋಜನಕಾರಿಯಾದ ವಿಷಯಗಳನ್ನು ಮಾಡುವುದರಲ್ಲಿ ಅಸಹಾಯಕತೆ, ಆಲಸ್ಯ, ಮತ್ತು ಸೋಮಾರಿತನ ತೋರುವುದನ್ನು ನಿಷೇಧಿಸುತ್ತಾರೆ. ಸತ್ಯವಿಶ್ವಾಸಿಯು ಅಲ್ಲಾಹನಲ್ಲಿ ಸಹಾಯ ಮತ್ತು ಒಳಿತನ್ನು ಬೇಡುತ್ತಾ, ಲಭ್ಯವಿರುವ ಸಾಧನಗಳನ್ನು ಉಪಯೋಗಿಸಿ ಕಷ್ಟಪಟ್ಟು ಕೆಲಸ ಮಾಡಿದರೆ, ನಂತರ ಅವನು ತನ್ನ ಕಾರ್ಯವನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ವಹಿಸಿಕೊಡಬೇಕು ಮತ್ತು ಅಲ್ಲಾಹನ ಆಯ್ಕೆಯೇ ಅತ್ಯುತ್ತಮವೆಂದು ತಿಳಿಯಬೇಕು. ನಂತರ ಅವನಿಗೆ ಏನಾದರೂ ವಿಪತ್ತು ಸಂಭವಿಸಿದರೆ, ಅವನು ಹೀಗೆ ಹೇಳಬಾರದು: "ಒಂದು ವೇಳೆ ನಾನು ಹೀಗೆ ಮಾಡುತ್ತಿದ್ದರೆ ಹೀಗಾಗುತ್ತಿತ್ತು." ಏಕೆಂದರೆ, 'ಒಂದು ವೇಳೆ' ಎಂಬ ಮಾತು ದೈವಿಕ ವಿಧಿಯನ್ನು ಆಕ್ಷೇಪಿಸುವಂತೆ ಮತ್ತು ಕಳೆದುಹೋದ ವಿಷಯದ ಬಗ್ಗೆ ವ್ಯಥೆಪಡುವಂತೆ ಮಾಡುವುದರಲ್ಲಿ ಶೈತಾನನು ಕಾರ್ಯೋನ್ಮುಖನಾಗಲು ಬಾಗಿಲು ತೆರೆದು ಕೊಡುತ್ತದೆ. ಬದಲಿಗೆ, (ಅಲ್ಲಾಹನ ತೀರ್ಮಾನಕ್ಕೆ) ಸಂಪೂರ್ಣ ಶರಣಾಗಿ ಮತ್ತು ಸಂತೃಪ್ತಿಯಿಂದ, "ಇದು ಅಲ್ಲಾಹು ವಿಧಿಸಿದ್ದು; ಅವನು ಇಚ್ಛಿಸುವುದನ್ನು ಅವನು ಮಾಡುತ್ತಾನೆ" ಎಂದು ಹೇಳಬೇಕು. ಏನು ಸಂಭವಿಸಿದೆಯೋ ಅದು ಅಲ್ಲಾಹನ ಇರಾದೆಯಂತೆಯೇ ಸಂಭವಿಸಿದೆ. ಏಕೆಂದರೆ, ಅವನು ಏನು ಬಯಸುತ್ತಾನೋ ಅದನ್ನು ಮಾಡುತ್ತಾನೆ. ಅವನ ವಿಧಿಯನ್ನು ತಡೆಗಟ್ಟಲು ಅಥವಾ ಅವನ ತೀರ್ಪನ್ನು ರದ್ದುಗೊಳಿಸಲು ಯಾರಿಗೂ ಸಾಧ್ಯವಿಲ್ಲ.

فوائد الحديث

ಜನರು ವಿಶ್ವಾಸದಲ್ಲಿ ಒಂದೇ ರೀತಿಯಲ್ಲಿಲ್ಲ.

ಶಕ್ತಿ ಉಪಯೋಗಿಸಿ ಕೆಲಸ ಮಾಡುವುದು ಅಪೇಕ್ಷಣೀಯವಾಗಿದೆ. ಏಕೆಂದರೆ ದೌರ್ಬಲ್ಯದಿಂದ ಪಡೆಯಲು ಸಾಧ್ಯವಾಗದ ಪ್ರಯೋಜನಗಳನ್ನು ಶಕ್ತಿಯಿಂದ ಪಡೆಯಬಹುದು.

ಮನುಷ್ಯನು ತನಗೆ ಪ್ರಯೋಜನಕಾರಿಯಾದ ವಿಷಯಗಳಲ್ಲಿ ಉತ್ಸುಕನಾಗಬೇಕು ಮತ್ತು ಪ್ರಯೋಜನಕಾರಿಯಲ್ಲದ ವಿಷಯಗಳನ್ನು ಬಿಟ್ಟುಬಿಡಬೇಕು.

ಸತ್ಯವಿಶ್ವಾಸಿ ಎಲ್ಲಾ ವಿಷಯಗಳಲ್ಲೂ ಅಲ್ಲಾಹನಿಂದ ಸಹಾಯ ಬೇಡುವುದು ಕಡ್ಡಾಯವಾಗಿದೆ. ಅವನು ಎಂದಿಗೂ ಸ್ವಯಂ ಅವಲಂಬಿತನಾಗಬಾರದು.

ದೈವಿಕ ವಿಧಿ ಮತ್ತು ಪೂರ್ವನಿರ್ಧಾರವನ್ನು ದೃಢೀಕರಿಸಲಾಗಿದೆ. ಆದರೆ ಇದು ಕಾರ್ಯಕಾರಣ ಸಂಬಂಧಗಳನ್ನು ಬಳಸುವುದನ್ನು ಮತ್ತು ಒಳಿತಿನ ವಿಷಯಗಳಿಗಾಗಿ ಪರಿಶ್ರಮಿಸುವುದನ್ನು ನಿಷೇಧಿಸುವುದಿಲ್ಲ.

ವಿಪತ್ತುಗಳು ಸಂಭವಿಸುವಾಗ ಸಿಟ್ಟಿನಿಂದ 'ಒಂದು ವೇಳೆ ' ಎಂಬ ಮಾತು ಹೇಳುವುದನ್ನು ನಿಷೇಧಿಸಲಾಗಿದೆ. ಅಲ್ಲಾಹನ ವಿಧಿಯನ್ನು ಮತ್ತು ಪೂರ್ವನಿರ್ಧಾರವನ್ನು ಆಕ್ಷೇಪಿಸುವುದನ್ನು ಕೂಡ ನಿಷೇಧಿಸಲಾಗಿದೆ.

التصنيفات

Issues of Divine Decree and Fate, Acts of Heart