ಅಲ್ಲಾಹನನ್ನು ಭಯಪಡಿರಿ, ಕಿವಿಗೊಡಿರಿ ಮತ್ತು ಅನುಸರಿಸಿರಿ, ನಿಮ್ಮ ಆಡಳಿತಗಾರನು ಅಬಿಸೀನಿಯಾದ ಗುಲಾಮನಾಗಿದ್ದರೂ ಸಹ. ನನ್ನ…

ಅಲ್ಲಾಹನನ್ನು ಭಯಪಡಿರಿ, ಕಿವಿಗೊಡಿರಿ ಮತ್ತು ಅನುಸರಿಸಿರಿ, ನಿಮ್ಮ ಆಡಳಿತಗಾರನು ಅಬಿಸೀನಿಯಾದ ಗುಲಾಮನಾಗಿದ್ದರೂ ಸಹ. ನನ್ನ ಕಾಲಾನಂತರ ನಿಮ್ಮಲ್ಲಿ ಯಾರು ಬದುಕಿರುತ್ತಾರೋ ಅವರು ಬಹಳಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುವರು. ಆಗ ನೀವು ನನ್ನ ಚರ್ಯೆಗೆ ಮತ್ತು ಸರಿಯಾದ ಸನ್ಮಾರ್ಗದಲ್ಲಿರುವ ಖಲೀಫರ ಚರ್ಯೆಗೆ ಬದ್ಧರಾಗಿರಿ

ಇರ್ಬಾದ್ ಬಿನ್ ಸಾರಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ನಿಂತು, ಹೃದಯಗಳು ನಡುಗುವ ಮತ್ತು ಕಣ್ಣೀರು ಹರಿಯುವ ರೀತಿಯಲ್ಲಿ ಮನಮುಟ್ಟುವ ಪ್ರವಚನವನ್ನು ನೀಡಿದರು. ಆಗ ಅವರೊಡನೆ ಹೇಳಲಾಯಿತು: "ಓ ಅಲ್ಲಾಹನ ಸಂದೇಶವಾಹಕರೇ! ಇದು ವಿದಾಯದ ಪ್ರವಚನದಂತಿದೆ. ಆದ್ದರಿಂದ ನಮಗೆ ಉಪದೇಶ ನೀಡಿರಿ." ಆಗ ಅವರು ಹೇಳಿದರು: "ಅಲ್ಲಾಹನನ್ನು ಭಯಪಡಿರಿ, ಕಿವಿಗೊಡಿರಿ ಮತ್ತು ಅನುಸರಿಸಿರಿ, ನಿಮ್ಮ ಆಡಳಿತಗಾರನು ಅಬಿಸೀನಿಯಾದ ಗುಲಾಮನಾಗಿದ್ದರೂ ಸಹ. ನನ್ನ ಕಾಲಾನಂತರ ನಿಮ್ಮಲ್ಲಿ ಯಾರು ಬದುಕಿರುತ್ತಾರೋ ಅವರು ಬಹಳಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುವರು. ಆಗ ನೀವು ನನ್ನ ಚರ್ಯೆಗೆ ಮತ್ತು ಸರಿಯಾದ ಸನ್ಮಾರ್ಗದಲ್ಲಿರುವ ಖಲೀಫರ ಚರ್ಯೆಗೆ ಬದ್ಧರಾಗಿರಿ. ಅದನ್ನು ನಿಮ್ಮ ದವಡೆ ಹಲ್ಲುಗಳಿಂದ ಕಚ್ಚಿ ಹಿಡಿಯಿರಿ. ಹೊಸದಾಗಿ ಆವಿಷ್ಕರಿಸಲಾದ ವಿಷಯಗಳ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ ಪ್ರತಿಯೊಂದು ಹೊಸ ಆಚಾರವೂ ದಾರಿಗೇಡಾಗಿದೆ."

[صحيح] [رواه أبو داود والترمذي وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರಿಗೆ ಮನಮುಟ್ಟುವ ರೀತಿಯಲ್ಲಿ ಪ್ರವಚನ ನೀಡಿದರು. ಅದು ಅವರ ಮೇಲೆ ಆಳವಾಗಿ ಪ್ರಭಾವ ಬೀರಿ, ಅವರ ಹೃದಯಗಳು ನಡುಗುವಂತೆ ಮತ್ತು ಕಣ್ಣುಗಳಲ್ಲಿ ನೀರು ಹರಿಯುವಂತೆ ಮಾಡಿತು. ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಇದು ವಿದಾಯದ ಪ್ರವಚನದಂತೆ ತೋರುತ್ತದೆ." ಅವರ ಪ್ರವಚನವು ಆಳ ಪ್ರಭಾವ ಹೊಂದಿರುವುದನ್ನು ಕಂಡಾಗ, ಅವರ ಕಾಲಾನಂತರ ಅನುಸರಿಸಬಹುದಾದ ಒಂದು ಸಮಗ್ರ ಉಪದೇಶವನ್ನು ನೀಡಲು ಅವರು ಕೇಳಿಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸರ್ವಶಕ್ತನಾದ ಅಲ್ಲಾಹನನ್ನು ಭಯಪಡಬೇಕೆಂದು ನಾನು ನಿಮಗೆ ಉಪದೇಶ ನೀಡುತ್ತೇನೆ." ಅಂದರೆ, ಅವನು ಕಡ್ಡಾಯಗೊಳಿಸಿದ ಕಾರ್ಯಗಳನ್ನು ಮಾಡುವ ಮೂಲಕ ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವ ಮೂಲಕ ಅವನನ್ನು ಭಯಪಡಿರಿ. "ಕಿವಿಗೊಡಿರಿ ಮತ್ತು ಅನುಸರಿಸಿರಿ." ಅಂದರೆ, ಆಡಳಿತಗಾರರ ಮಾತುಗಳಿಗೆ ಕಿವಿಗೊಡಿರಿ ಮತ್ತು ಅನುಸರಿಸಿರಿ. "ನಿಮ್ಮ ಮುಖಂಡನು ಅಥವಾ ನಿಮ್ಮ ಮೇಲೆ ಆಡಳಿತ ನಡೆಸುವವನು ಗುಲಾಮನಾಗಿದ್ದರೂ ಸಹ." ಅಂದರೆ, ಅತ್ಯಂತ ಕೆಳವರ್ಗದ ವ್ಯಕ್ತಿ ನಿಮ್ಮ ಮುಖಂಡನಾದರೂ ಸಹ ಅದರ ಬಗ್ಗೆ ಕೀಳರಿಮೆ ಮಾಡಿಕೊಳ್ಳದೆ ಅವನನ್ನು ಅನುಸರಿಸಿರಿ. ಇದರಿಂದ ನಿಮ್ಮ ನಡುವೆ ಒಡಕುಂಟಾಗುವುದನ್ನು ತಪ್ಪಿಸಬಹುದು. "ನಿಶ್ಚಯವಾಗಿಯೂ ನನ್ನ ಕಾಲಾನಂತರ ನಿಮ್ಮಲ್ಲಿ ಬದುಕಿರುವವರು ಬಹಳಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುವರು." ನಂತರ ಈ ಭಿನ್ನಾಭಿಪ್ರಾಯಗಳಿಂದ ಪಾರಾಗುವ ಮಾರ್ಗವನ್ನು ಅವರು ವಿವರಿಸಿದರು. ಅದು ಅವರ ಚರ್ಯೆಗೆ ಮತ್ತು ಅವರ ನಂತರ ಸರಿಯಾದ ಸನ್ಮಾರ್ಗದಲ್ಲಿ ಮುನ್ನಡೆದ ಖಲೀಫರಾದ ಅಬೂಬಕರ್ ಸಿದ್ದೀಕ್, ಉಮರ್ ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ಫಾನ್ ಮತ್ತು ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ರವರ ಚರ್ಯೆಗೆ ಬದ್ಧರಾಗಿ ಅದನ್ನು ದವಡೆ ಹಲ್ಲುಗಳಿಂದ ಬಿಗಿಯಾಗಿ ಕಚ್ಚಿ ಹಿಡಿಯುವುದು. ಅಂದರೆ, ಅವರ ಚರ್ಯೆಗೆ ಬಲವಾಗಿ ಅಂಟಿಕೊಂಡು ಅದಕ್ಕೆ ಬದ್ಧರಾಗುವುದು ಎಂದರ್ಥ. ಧರ್ಮದಲ್ಲಿರುವ ಎಲ್ಲಾ ಹೊಸ ಆವಿಷ್ಕಾರಗಳು ಮತ್ತು ನೂತನಾಚಾರಗಳ ಬಗ್ಗೆ ಅವರು ಎಚ್ಚರಿಕೆ ನೀಡಿದರು. ಏಕೆಂದರೆ ಪ್ರತಿಯೊಂದು ಹೊಸ ಆಚಾರವೂ ದಾರಿಗೇಡಾಗಿದೆ.

فوائد الحديث

ಸುನ್ನತ್‌ಗೆ ಅಂಟಿಕೊಳ್ಳುವುದು ಮತ್ತು ಅದನ್ನು ಅನುಸರಿಸುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.

ಮನಮುಟ್ಟುವ ಪ್ರವಚನಗಳ ಮಹತ್ವ ಮತ್ತು ಹೃದಯಗಳನ್ನು ಮೃದುಗೊಳಿಸುವುದರ ಮಹತ್ವವನ್ನು ತಿಳಿಸಲಾಗಿದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಂತರ ಸರಿಯಾದ ಸನ್ಮಾರ್ಗದಲ್ಲಿ ಮುನ್ನಡೆದ ನಾಲ್ಕು ಖಲೀಫರಾದ ಅಬೂಬಕರ್, ಉಮರ್, ಉಸ್ಮಾನ್ ಮತ್ತು ಅಲಿ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ರನ್ನು ಅನುಸರಿಸಬೇಕೆಂದು ಆಜ್ಞಾಪಿಸಲಾಗಿದೆ.

ಧರ್ಮದಲ್ಲಿ ಹೊಸ ಆವಿಷ್ಕಾರಗಳನ್ನು ನಿಷೇಧಿಸಲಾಗಿದೆ ಮತ್ತು ಪ್ರತಿಯೊಂದು ಹೊಸ ಆಚಾರವೂ ದಾರಿಗೇಡಾಗಿದೆಯೆಂದು ತಿಳಿಸಲಾಗಿದೆ.

ಅಲ್ಲಾಹನ ಆಜ್ಞೆಗಳಿಗೆ ವಿರುದ್ಧವಾಗದ ವಿಷಯಗಳಲ್ಲಿ ಆಡಳಿತಗಾರರ ಮಾತನ್ನು ಕೇಳಬೇಕು ಮತ್ತು ಅನುಸರಿಸಬೇಕೆಂದು ತಿಳಿಸಲಾಗಿದೆ.

ಎಲ್ಲಾ ಸಂದರ್ಭಗಳಲ್ಲೂ ಎಲ್ಲಾ ಸಮಯದಲ್ಲೂ ಅಲ್ಲಾಹನನ್ನು ಭಯಪಡುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.

ಮುಸ್ಲಿಮ್ ಸಮುದಾಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದೆಂದು ಒಪ್ಪಿಕೊಳ್ಳಲಾಗಿದೆ. ಭಿನ್ನಾಭಿಪ್ರಾಯಗಳು ಉಂಟಾಗುವಾಗ ಅದಕ್ಕೆ ಪರಿಹಾರವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಗೆ ಮತ್ತು ಸನ್ಮಾರ್ಗಿಗಳಾದ ಖಲೀಫರುಗಳ ಚರ್ಯೆಗೆ ಮರಳುವುದೆಂದು ತಿಳಿಸಲಾಗಿದೆ.

التصنيفات

Significance and Status of the Sunnah, Merit of the Companions, Imam's Rights over the Subjects, Merits of the Rightly Guided Caliphs