ಅಲ್ಲಾಹು ನಿಮಗೆ ದಾನವಾಗಿ ನೀಡಲು ಸಾಧ್ಯವಾಗುವಂತಹದ್ದನ್ನು ಒದಗಿಸಿಲ್ಲವೇ? ಪ್ರತಿ ತಸ್ಬೀಹ್ (ಸುಬ್‌ಹಾನಲ್ಲಾಹ್ ಎಂದು ಹೇಳುವುದು)…

ಅಲ್ಲಾಹು ನಿಮಗೆ ದಾನವಾಗಿ ನೀಡಲು ಸಾಧ್ಯವಾಗುವಂತಹದ್ದನ್ನು ಒದಗಿಸಿಲ್ಲವೇ? ಪ್ರತಿ ತಸ್ಬೀಹ್ (ಸುಬ್‌ಹಾನಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಹ್ಮೀದ್ (ಅಲ್‌ಹಮ್ದುಲಿಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಮತ್ತು ಪ್ರತಿ ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುವುದು) ದಾನವಾಗಿದೆ. ಒಳಿತನ್ನು ಆದೇಶಿಸುವುದು ದಾನವಾಗಿದೆ, ಕೆಡುಕನ್ನು ತಡೆಯುವುದು ದಾನವಾಗಿದೆ, ಮತ್ತು ನಿಮ್ಮಲ್ಲಿ ಒಬ್ಬರು ಲೈಂಗಿಕ ಬಯಕೆಯನ್ನು ಪೂರೈಸುವುದರಲ್ಲಿ ಸಹ ದಾನವಿದೆ

ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಸಹಾಬಿಗಳು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ಸಂದೇಶವಾಹಕರೇ! ಶ್ರೀಮಂತರು ಎಲ್ಲಾ ಪುಣ್ಯಗಳನ್ನು ತೆಗೆದುಕೊಂಡು ಹೋದರು. ಅವರು ನಾವು ನಮಾಝ್ ಮಾಡಿದಂತೆ ನಮಾಝ್ ಮಾಡುತ್ತಾರೆ, ನಾವು ಉಪವಾಸ ಆಚರಿಸಿದಂತೆ ಉಪವಾಸ ಆಚರಿಸುತ್ತಾರೆ, ಮತ್ತು ಅವರು ತಮ್ಮ ಹೆಚ್ಚುವರಿ ಸಂಪತ್ತಿನಿಂದ ದಾನ ಮಾಡುತ್ತಾರೆ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮಗೆ ದಾನವಾಗಿ ನೀಡಲು ಸಾಧ್ಯವಾಗುವಂತಹದ್ದನ್ನು ಒದಗಿಸಿಲ್ಲವೇ? ಪ್ರತಿ ತಸ್ಬೀಹ್ (ಸುಬ್‌ಹಾನಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಹ್ಮೀದ್ (ಅಲ್‌ಹಮ್ದುಲಿಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಮತ್ತು ಪ್ರತಿ ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುವುದು) ದಾನವಾಗಿದೆ. ಒಳಿತನ್ನು ಆದೇಶಿಸುವುದು ದಾನವಾಗಿದೆ, ಕೆಡುಕನ್ನು ತಡೆಯುವುದು ದಾನವಾಗಿದೆ, ಮತ್ತು ನಿಮ್ಮಲ್ಲಿ ಒಬ್ಬರು ಲೈಂಗಿಕ ಬಯಕೆಯನ್ನು ಪೂರೈಸುವುದರಲ್ಲಿ ಸಹ ದಾನವಿದೆ." ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರೇ, ನಮ್ಮಲ್ಲಿ ಒಬ್ಬರು ತನ್ನ ಬಯಕೆಯನ್ನು ಪೂರೈಸಿದರೆ ಅದಕ್ಕಾಗಿ ಪ್ರತಿಫಲ ಸಿಗುತ್ತದೆಯೇ?" ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಅದನ್ನು ನಿಷಿದ್ಧ ವಿಧಾನದಲ್ಲಿ ಪೂರೈಸಿದರೆ, ಅದರಿಂದ ಅವನು ಪಾಪವನ್ನು ಹೊರುವುದಿಲ್ಲವೇ? ಹಾಗೆಯೇ, ಅವನು ಅದನ್ನು ಧರ್ಮಬದ್ಧವಾಗಿ ಪೂರೈಸಿದರೆ, ಅವನಿಗೆ ಪುಣ್ಯ ಸಿಗುತ್ತದೆ."

[صحيح] [رواه مسلم]

الشرح

ಸಹಾಬಿಗಳಲ್ಲಿ ಬಡವರಾದ ಕೆಲವರು ತಮ್ಮ ಬಡತನದ ಬಗ್ಗೆ ಮತ್ತು ಹೇರಳವಾದ ಪುಣ್ಯವನ್ನು ಪಡೆಯುವುದಕ್ಕಾಗಿ ತಮ್ಮ ಶ್ರೀಮಂತ ಸಹೋದರರು ದಾನ ಮಾಡುವಂತೆ ದಾನ ಮಾಡಲು ತಮಗಿರುವ ಅಸಮರ್ಥತೆಯ ಬಗ್ಗೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೂರು ಸಲ್ಲಿಸುತ್ತಾರೆ. ಏಕೆಂದರೆ ಆ ಶ್ರೀಮಂತ ಸಹೋದರರು ನಾವು ನಮಾಝ್ ಮಾಡಿದಂತೆ ನಮಾಝ್ ಮಾಡುತ್ತಾರೆ, ನಾವು ಉಪವಾಸ ಆಚರಿಸಿದಂತೆ ಉಪವಾಸ ಆಚರಿಸುತ್ತಾರೆ, ಮತ್ತು ತಮ್ಮ ಹೆಚ್ಚುವರಿ ಸಂಪತ್ತಿನಿಂದ ದಾನ ಮಾಡುತ್ತಾರೆ, ಆದರೆ ನಮಗೆ ಅದು ಸಾಧ್ಯವಾಗುವುದಿಲ್ಲ! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕೈಗೆಟುಕುವ ರೀತಿಯಲ್ಲಿ ದಾನ ಮಾಡುವುದರ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡುತ್ತಾ ಹೇಳುತ್ತಾರೆ: ನಿಮಗೆ ನೀವೇ ದಾನ ಮಾಡಲು ಸಾಧ್ಯವಾಗುವಂತಹದ್ದನ್ನು ಅಲ್ಲಾಹು ನಿಮಗೆ ಒದಗಿಸಿಲ್ಲವೇ?! ನೀವು "ಸುಬ್ಹಾನಲ್ಲಾಹ್" (ಅಲ್ಲಾಹು ಪವಿತ್ರನು) ಎಂದು ಹೇಳುವುದು ನಿಮಗೆ ದಾನ ಮಾಡಿದ ಪುಣ್ಯವನ್ನು ನೀಡುತ್ತದೆ; ಹಾಗೆಯೇ "ಅಲ್ಲಾಹು ಅಕ್ಬರ್" (ಅಲ್ಲಾಹ್ ಅತ್ಯಂತ ದೊಡ್ಡವನು) ಎಂದು ಹೇಳುವುದು ದಾನವಾಗಿದೆ; "ಅಲ್‌ಹಮ್ದುಲಿಲ್ಲಾಹ್" (ಅಲ್ಲಾಹನಿಗೆ ಸ್ತುತಿ) ಎಂದು ಹೇಳುವುದು ದಾನವಾಗಿದೆ; "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಬೇರೆ ದೇವರಿಲ್ಲ) ಎಂದು ಹೇಳುವುದು ದಾನವಾಗಿದೆ; "ಒಳಿತನ್ನು ಆದೇಶಿಸುವುದು" ದಾನವಾಗಿದೆ, "ಕೆಡುಕನ್ನು ತಡೆಯುವುದು" ದಾನವಾಗಿದೆ, ಮತ್ತು ನಿಮ್ಮಲ್ಲಿ ಒಬ್ಬರು ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಮಾಡುವುದು ಕೂಡ ದಾನವಾಗಿದೆ. ಆಗ ಸಹಾಬಿಗಳು ಆಶ್ಚರ್ಯಚಕಿತರಾಗಿ ಕೇಳಿದರು: "ಅಲ್ಲಾಹನ ಸಂದೇಶವಾಹಕರೇ, ನಮ್ಮಲ್ಲಿ ಒಬ್ಬನು ತನ್ನ ಲೈಂಗಿಕ ಬಯಕೆಯನ್ನು ಪೂರೈಸಿದರೆ ಅದಕ್ಕಾಗಿ ಪ್ರತಿಫಲವನ್ನು ಪಡೆಯುತ್ತಾನೆಯೇ?!" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವನು ಅದನ್ನು ನಿಷಿದ್ಧ ವಿಧಾನದಲ್ಲಿ ಪೂರೈಸಿದರೆ, ಅಂದರೆ ವ್ಯಭಿಚಾರ ಅಥವಾ ಇನ್ನಾವುದೇ ರೀತಿಯಲ್ಲಿ, ಅವನು ಪಾಪವನ್ನು ಹೊರುತ್ತಾನೆ ಎಂದು ನೀವು ತಿಳಿದಿಲ್ಲವೇ? ಅದೇ ರೀತಿ, ಅವನು ಅದನ್ನು ಧರ್ಮಬದ್ಧವಾಗಿ ಪೂರೈಸಿದರೆ ಅವನಿಗೆ ಪುಣ್ಯ ಸಿಗುತ್ತದೆ.

فوائد الحديث

ಸತ್ಕರ್ಮಗಳನ್ನು ಮಾಡುವುದರಲ್ಲಿ ಸಹಾಬಿಗಳು ಪರಸ್ಪರ ಸ್ಪರ್ಧಿಸುತ್ತಿದ್ದರು ಮತ್ತು ಅಲ್ಲಾಹನಿಂದ ಹೇರಳ ಪುಣ್ಯ ಮತ್ತು ಅನುಗ್ರಹವನ್ನು ಪಡೆಯಲು ಉತ್ಸಾಹ ತೋರುತ್ತಿದ್ದರು.

ಒಳಿತು ಮಾಡಲು ಹಲವಾರು ಮಾರ್ಗಗಳಿವೆ. ಒಬ್ಬ ಮುಸಲ್ಮಾನನು ಉತ್ತಮ ನಿಯ್ಯತ್ತಿದಿಂದ ಮತ್ತು ಒಳ್ಳೆಯ ಉದ್ದೇಶದಿಂದ ಮಾಡುವ ಪ್ರತಿಯೊಂದು ಕಾರ್ಯವು ಇದರಲ್ಲಿ ಒಳಪಡುತ್ತದೆ.

ಇಸ್ಲಾಮ್ ಸುಲಭ ಮತ್ತು ಸರಳವಾಗಿದೆ. ಏಕೆಂದರೆ ಪ್ರತಿ ಮುಸಲ್ಮಾನನಿಗೂ ಅಲ್ಲಾಹನ ಅನುಸರಣೆಗಾಗಿ ಮಾಡಲು ಸಾಧ್ಯವಾಗುವ ಏನಾದರೂ ಒಂದು ಕರ್ಮವಿದೆ.

ನವವಿ ಹೇಳಿದರು: "ಪ್ರಾಮಾಣಿಕ ಉದ್ದೇಶವನ್ನು ಹೊಂದಿದ್ದರೆ ಅನುಮತಿಸಲಾದ ಕಾರ್ಯಗಳು ಕೂಡ ವಿಧೇಯತೆಯ (ಪ್ರತಿಫಲಾರ್ಹ) ಕಾರ್ಯಗಳಾಗಬಹುದು ಎಂಬುದಕ್ಕೆ ಈ ಹದೀಸಿನಲ್ಲಿ ಪುರಾವೆಯಿದೆ. ಒಬ್ಬ ವ್ಯಕ್ತಿ ತನ್ನ ಪತ್ನಿಯ ಹಕ್ಕುಗಳನ್ನು ಪೂರೈಸಲು, ಅಲ್ಲಾಹು ಆದೇಶಿಸಿದಂತೆ ಅವಳನ್ನು ಉತ್ತಮವಾಗಿ ನಡೆಸಿಕೊಳ್ಳಲು, ಅಥವಾ ನೀತಿವಂತ ಸಂತಾನವನ್ನು ಪಡೆಯಲು, ಅಥವಾ ತನ್ನ ಹಾಗೂ ತನ್ನ ಪತ್ನಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಹಾಗೂ ಇಬ್ಬರೂ ನಿಷಿದ್ಧವನ್ನು ನೋಡುವುದರಿಂದ, ಯೋಚಿಸುವುದರಿಂದ, ಬಯಸುವುದರಿಂದ ಸುರಕ್ಷಿತರಾಗಲು ಅಥವಾ ಇತರ ಯಾವುದೇ ಉತ್ತಮ ಉದ್ದೇಶಕ್ಕಾಗಿ ಅವಳೊಡನೆ ಲೈಂಗಿಕ ಸಂಭೋಗ ಮಾಡಿದರೆ ಅದು ಆರಾಧನಾ ಕರ್ಮವಾಗಿ ಮಾರ್ಪಡುತ್ತದೆ."

ವಿಷಯವನ್ನು ಸ್ಪಷ್ಟಪಡಿಸಲು ಮತ್ತು ಕೇಳುಗರ ಮೇಲೆ ಬಲವಾದ ಪರಿಣಾಮ ಬೀರುವಂತೆ ಮಾಡಲು ಉದಾಹರಣೆಗಳನ್ನು ನೀಡಲಾಗಿದೆ ಮತ್ತು ಹೋಲಿಕೆಗಳನ್ನು ಮಾಡಲಾಗಿದೆ.

التصنيفات

Voluntary Charity, Merits of Remembering Allah