ನಿಮ್ಮ ಮುಟ್ಟಿನ ಅವಧಿಯು ಸಾಮಾನ್ಯವಾಗಿ ನಿಮ್ಮನ್ನು ತಡೆಹಿಡಿಯುವ ತನಕ ಕಾಯಿರಿ, ತದನಂತರ ಸ್ನಾನ ಮಾಡಿರಿ

ನಿಮ್ಮ ಮುಟ್ಟಿನ ಅವಧಿಯು ಸಾಮಾನ್ಯವಾಗಿ ನಿಮ್ಮನ್ನು ತಡೆಹಿಡಿಯುವ ತನಕ ಕಾಯಿರಿ, ತದನಂತರ ಸ್ನಾನ ಮಾಡಿರಿ

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಬ್ದುರ್‍ರಹ್ಮಾನ್ ಬಿನ್ ಔಫ್ ರ ಪತ್ನಿಯಾಗಿದ್ದ ಉಮ್ಮು ಹಬೀಬ ಬಿಂತ್ ಜಹ್ಶ್ ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಕ್ತದ ಬಗ್ಗೆ ದೂರು ನೀಡಿದರು. ಅವರು ಆಕೆಗೆ ಹೇಳಿದರು: "ನಿಮ್ಮ ಮುಟ್ಟಿನ ಅವಧಿಯು ಸಾಮಾನ್ಯವಾಗಿ ನಿಮ್ಮನ್ನು ತಡೆಹಿಡಿಯುವ ತನಕ ಕಾಯಿರಿ, ತದನಂತರ ಸ್ನಾನ ಮಾಡಿರಿ." ಆದ್ದರಿಂದ ಅವರು ಪ್ರತಿ ನಮಾಝಿಗೂ ಸ್ನಾನ ಮಾಡುತ್ತಿದ್ದರು.

[صحيح] [رواه مسلم]

الشرح

ಸಹಾಬಿ ವನಿತೆಯರಲ್ಲಿ ಒಬ್ಬರು ತನಗೆ ನಿರಂತರ ರಕ್ತಸ್ರಾವವಾಗುವುದರ ಬಗ್ಗೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೂರು ನೀಡಿದರು. ಆಕೆಯಲ್ಲಿ ಹೊಸದಾಗಿ ಆರಂಭವಾದ ಈ ಸಂಗತಿಗೆ ಮೊದಲು ಆಕೆಯ ಮುಟ್ಟಿನ ಅವಧಿಯು ಸಾಮಾನ್ಯವಾಗಿ ಎಷ್ಟು ದಿನ ಇರುತ್ತಿತ್ತೋ ಅಷ್ಟು ದಿನ ನಮಾಝನ್ನು ನಿಲ್ಲಿಸುವಂತೆ ಮತ್ತು ನಂತರ ಸ್ನಾನ ಮಾಡಿ ನಮಾಝ್ ನಿರ್ವಹಿಸುವಂತೆ ಅವರು ಆಕೆಗೆ ಆದೇಶಿಸಿದರು. ಆದ್ದರಿಂದ ಆಕೆ ಪ್ರತಿ ನಮಾಝಿಗೂ ಸ್ವಯಂಪ್ರೇರಿತವಾಗಿ ಸ್ನಾನ ಮಾಡುತ್ತಿದ್ದರು.

فوائد الحديث

ರಕ್ತಸ್ರಾವ ಎಂದರೆ, ಮಹಿಳೆಗೆ ಸಾಮಾನ್ಯವಾಗಿ ಮುಟ್ಟಾಗುವ ದಿನಗಳ ನಂತರವೂ ರಕ್ತ ಹೊರಬರುತ್ತಿರುವುದು.

ರಕ್ತಸ್ರಾವವಿರುವ ಮಹಿಳೆ ಅವಳಿಗೆ ರಕ್ತಸ್ರಾವ ಪ್ರಾರಂಭವಾಗುವ ಮೊದಲು ಸಾಮಾನ್ಯವಾಗಿ ಮುಟ್ಟಾಗುತ್ತಿದ್ದ ದಿನಗಳಷ್ಟು ಕಾಲ ತನ್ನನ್ನು ಮುಟ್ಟಿನಲ್ಲಿರುವವಳೆಂದು ಪರಿಗಣಿಸಬೇಕು.

ರೂಢಿಯಲ್ಲಿದ್ದ ಮುಟ್ಟಿನ ಅವಧಿಯು ಕಳೆದ ನಂತರ, ಅವಳಿಗೆ ರಕ್ತಸ್ರಾವವಾಗುತ್ತಿದ್ದರೂ ಸಹ, ಅವಳನ್ನು ಶುದ್ಧಿಯಾಗಿರುವವಳೆಂದೇ ಪರಿಗಣಿಸಲಾಗುತ್ತದೆ. ಆದ್ದರಿಂದ, ಅವಳು ಮುಟ್ಟಿನಿಂದ ಶುದ್ಧಿಯಾಗಲು ಸ್ನಾನ ಮಾಡಬೇಕು.

ರಕ್ತಸ್ರಾವವಿರುವ ಮಹಿಳೆ ಎಲ್ಲಾ ನಮಾಝ್‌ಗಳಿಗೂ ಸ್ನಾನ ಮಾಡುವುದು ಕಡ್ಡಾಯವಲ್ಲ. ಏಕೆಂದರೆ, ಸಹಾಬಿ ವನಿತೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಸ್ನಾನ ಮಾಡುತ್ತಿದ್ದುದು ಅವರ ಸ್ವ ಸಂಶೋಧನೆಯಿಂದಾಗಿತ್ತು. ಅದು ಕಡ್ಡಾಯವಾಗಿದ್ದರೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ವಿವರಿಸುತ್ತಿದ್ದರು.

ಆದರೆ ರಕ್ತಸ್ರಾವವಿರುವ ಮಹಿಳೆ ಎಲ್ಲಾ ನಮಾಝ್‌ಗಳಿಗೂ ವುದೂ (ಅಂಗಸ್ನಾನ) ಮಾಡುವುದು ಕಡ್ಡಾಯವಾಗಿದೆ. ಏಕೆಂದರೆ, ಅವಳ ಅಶುದ್ಧಿಯು ನಿರಂತರವಾದ ಅಶುದ್ಧಿಯಾಗಿದೆ. ಅನಿಯಂತ್ರಿತ ಮೂತ್ರ ಅಥವಾ ಅನಿಯಂತ್ರಿತ ಗುದವಾಯುವಿನ ಕಾಯಿಲೆಯಿರುವ ನಿರಂತರ ಅಶುದ್ಧಿಯವರು ಕೂಡ ಇವಳದೇ ನಿಯಮವನ್ನು ಹೊಂದಿದ್ದಾರೆ.

ಧಾರ್ಮಿಕ ವಿಷಯಗಳಲ್ಲಿ ಏನಾದರೂ ಸಂಶಯವುಂಟಾದರೆ ವಿದ್ವಾಂಸರಲ್ಲಿ ಕೇಳಿ ತಿಳಿಯಬೇಕಾಗಿದೆ. ಏಕೆಂದರೆ ಈ ಮಹಿಳೆ ತನಗೆ ಉಂಟಾದ ಅನಿಯಂತ್ರಿತ ರಕ್ತಸ್ರಾವದ ಬಗ್ಗೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೂರು ನೀಡಿ ಅದರ ಬಗ್ಗೆ ವಿಚಾರಿಸಿದ್ದರು.

التصنيفات

Menses, Postpartum Bleeding, Extra-Menses Bleeding