ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಬಳಿಗೆ ಬಂದಾಗ ನಾವು ಹೇಳಿದೆವು: "ಓ…

ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಬಳಿಗೆ ಬಂದಾಗ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ನಿಮಗೆ ಹೇಗೆ ಸಲಾಂ ಹೇಳುವುದೆಂದು ನಮಗೆ ತಿಳಿದಿದೆ. ಆದರೆ ನಾವು ನಿಮ್ಮ ಮೇಲೆ ಸಲಾತ್ ಹೇಳುವುದು ಹೇಗೆ?

ಅಬ್ದುರ್‍ರಹ್ಮಾನ್ ಬಿನ್ ಅಬೂ ಲೈಲಾ ರಿಂದ ವರದಿ. ಅವರು ಹೇಳಿದರು: ಕಅಬ್ ಬಿನ್ ಉಜ್ರ ನನ್ನನ್ನು ಭೇಟಿಯಾಗಿ ಕೇಳಿದರು: "ನಾನು ನಿಮಗೆ ಒಂದು ಉಡುಗೊರೆಯನ್ನು ನೀಡಲೇ? ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಬಳಿಗೆ ಬಂದಾಗ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ನಿಮಗೆ ಹೇಗೆ ಸಲಾಂ ಹೇಳುವುದೆಂದು ನಮಗೆ ತಿಳಿದಿದೆ. ಆದರೆ ನಾವು ನಿಮ್ಮ ಮೇಲೆ ಸಲಾತ್ ಹೇಳುವುದು ಹೇಗೆ?" ಅವರು ಹೇಳಿದರು: "ಹೇಳಿರಿ: ಓ ಅಲ್ಲಾಹ್, ಮುಹಮ್ಮದ್‌ರಿಗೆ ಮತ್ತು ಮುಹಮ್ಮದ್‌ರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸು, ಇಬ್ರಾಹೀಮರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿರುವೆ. ಓ ಅಲ್ಲಾಹ್, ಮುಹಮ್ಮದ್‌ರಿಗೆ ಮತ್ತು ಮುಹಮ್ಮದ್‌ರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸು, ಇಬ್ರಾಹೀಮರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿರುವೆ."

[صحيح] [متفق عليه]

الشرح

ಸಹಾಬಿಗಳು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಮೇಲೆ ಸಲಾತ್ ಹೇಳುವುದು ಹೇಗೆಂದು ಕೇಳಿದರು. "ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ" ಎಂದು (ನಮಾಝಿನ) ಅತ್ತಹಿಯ್ಯಾತ್‌ನಲ್ಲಿ ಅವರಿಗೆ ಸಲಾಂ ಹೇಳುವ ವಿಧಾನವನ್ನು ಅವರು ತಿಳಿದಿದ್ದರು. ಆಗ ಪ್ರವಾದಿಯವರು ಅವರಿಗೆ ಸಲಾತ್ ಹೇಳುವ ರೂಪವನ್ನು ತಿಳಿಸಿದರು. ಅದರ ಅರ್ಥ ಹೀಗಿದೆ: "ಓ ಅಲ್ಲಾಹ್! ಮುಹಮ್ಮದ್‌ರಿಗೆ ಮತ್ತು ಮುಹಮ್ಮದ್‌ರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸು." ಅಂದರೆ: ಅವರನ್ನು, ಅವರ ಧರ್ಮದ ಅನುಯಾಯಿಗಳನ್ನು ಮತ್ತು ಅವರ ಕುಟುಂಬದಲ್ಲಿ ಸೇರಿದ ಸತ್ಯವಿಶ್ವಾಸಿಗಳನ್ನು ದೇವದೂತರ ಉನ್ನತ ಸಭೆಯಲ್ಲಿ ಸುಂದರ ಪ್ರಶಂಸೆಯೊಂದಿಗೆ ಪ್ರಶಂಸಿಸು. "ಇಬ್ರಾಹೀಮರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸಿದಂತೆ." ಇಬ್ರಾಹೀಮರ ಕುಟುಂಬಕ್ಕೆ, ಅಂದರೆ ಇಬ್ರಾಹೀಂ, ಇಸ್ಮಾಈಲ್, ಇಸ್‌ಹಾಕ್ ಮತ್ತು ಅವರ ಸತ್ಯವಿಶ್ವಾಸಿಗಳಾದ ಸಂತತಿಗಳು ಮತ್ತು ಅನುಯಾಯಿಗಳಿಗೆ ನೀನು ಅನುಗ್ರಹಿಸಿದಂತೆ, ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೂ ಅನುಗ್ರಹಿಸು. "ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿರುವೆ." ಅಂದರೆ: ನಿನ್ನ ಸಾರದಲ್ಲಿ, ಗುಣಲಕ್ಷಣಗಳಲ್ಲಿ ಮತ್ತು ಕ್ರಿಯೆಗಳಲ್ಲಿ ನೀನು ಸ್ತುತ್ಯರ್ಹನಾಗಿರುವೆ ಮತ್ತು ನಿನ್ನ ಮಹಾನತೆ, ಸಾರ್ವಭೌಮತೆ ಮತ್ತು ಉದಾರತೆಯಲ್ಲಿ ನೀನು ವಿಶಾಲನಾಗಿರುವೆ. "ಓ ಅಲ್ಲಾಹ್, ಮುಹಮ್ಮದ್‌ರಿಗೆ ಮತ್ತು ಮುಹಮ್ಮದ್‌ರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸು, ಇಬ್ರಾಹೀಮರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸಿದಂತೆ." ಅಂದರೆ, ಅವರಿಗೆ ಅತಿದೊಡ್ಡ ಒಳಿತು ಮತ್ತು ಗೌರವವನ್ನು ದಯಪಾಲಿಸು, ಅದನ್ನು ಹೆಚ್ಚಿಸು ಮತ್ತು ದೃಢಗೊಳಿಸು.

فوائد الحديث

ಸಲಫ್‌ಗಳು (ಪೂರ್ವಿಕ ಸಜ್ಜನರು) ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಉಡುಗೊರೆಯೆಂದು ಕರೆಯುತ್ತಿದ್ದರು.

ನಮಾಝ್‌ನ ಕೊನೆಯ ತಶಹ್ಹುದ್‌ನಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಪಠಿಸುವುದು ಕಡ್ಡಾಯವಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಮೇಲೆ ಸಲಾಂ ಮತ್ತು ಸಲಾತ್ ಹೇಳುವುದನ್ನು ಸಹಾಬಿಗಳಿಗೆ ಕಲಿಸಿದರು.

ಈ ರೂಪವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳುವ ಪೂರ್ಣ ರೂಪವಾಗಿದೆ.

التصنيفات

Dhikr (Invocation) during Prayer, Manners of Scholars and Learners