إعدادات العرض
ನೀನು ನನ್ನೊಂದಿಗೆ ಬಹಳ ದೊಡ್ಡ ವಿಷಯವನ್ನೇ ಕೇಳಿರುವೆ. ಆದರೆ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು…
ನೀನು ನನ್ನೊಂದಿಗೆ ಬಹಳ ದೊಡ್ಡ ವಿಷಯವನ್ನೇ ಕೇಳಿರುವೆ. ಆದರೆ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ
ಮುಆದ್ ಬಿನ್ ಜಬಲ್(ರ) ರಿಂದ ವರದಿ. ಅವರು ಹೇಳಿದರು: ಒಮ್ಮೆ ನಾನು ಒಂದು ಯಾತ್ರೆಯಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಹೀಗಿರುವಾಗ, ಒಂದಿನ ಬೆಳಗ್ಗೆ ನಾನು ಅವರಿಗೆ ಸಮೀಪದಲ್ಲಿದ್ದು ಸವಾರಿ ಮಾಡುತ್ತಿದ್ದೆ. ಆಗ ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವ ಮತ್ತು ನನ್ನನ್ನು ನರಕದಿಂದ ದೂರವಿರಿಸುವ ಒಂದು ಕರ್ಮದ ಬಗ್ಗೆ ತಿಳಿಸಿಕೊಡಿ." ಅವರು ಹೇಳಿದರು: "ನೀನು ನನ್ನೊಂದಿಗೆ ಬಹಳ ದೊಡ್ಡ ವಿಷಯವನ್ನೇ ಕೇಳಿರುವೆ. ಆದರೆ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ. ನೀನು ಅಲ್ಲಾಹನನ್ನು ಆರಾಧಿಸು ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬೇಡ, ನಮಾಝ್ ಸಂಸ್ಥಾಪಿಸು, ಝಕಾತ್ ನೀಡು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸು ಮತ್ತು ಅಲ್ಲಾಹನ ಭವನಕ್ಕೆ ಹಜ್ಜ್ ನಿರ್ವಹಿಸು." ನಂತರ ಅವರು ಕೇಳಿದರು: "ನಾನು ನಿನಗೆ ಒಳಿತಿನ ಬಾಗಿಲುಗಳ ಬಗ್ಗೆ ತಿಳಿಸಿಕೊಡಲೇ? ಉಪವಾಸವು ಗುರಾಣಿಯಾಗಿದೆ, ನೀರು ಬೆಂಕಿಯನ್ನು ನಂದಿಸುವಂತೆ ದಾನಧರ್ಮವು ಪಾಪಗಳನ್ನು ನಂದಿಸುತ್ತದೆ ಮತ್ತು ಮನುಷ್ಯನು ರಾತ್ರಿಯ ಅಂತ್ಯ ಯಾಮದಲ್ಲಿ ನಿರ್ವಹಿಸುವ ನಮಾಝ್." ನಂತರ ಅವರು: "ಅವರ ಪಾರ್ಶ್ವಗಳು ಹಾಸಿಗೆಗಳಿಂದ ದೂರವಾಗುತ್ತವೆ" ಎಂಬಲ್ಲಿಂದ ಕೊನೆಯವರೆಗೆ ಕುರ್‌ಆನ್ ವಚನವನ್ನು ಪಠಿಸಿದರು. ನಂತರ ಅವರು ಕೇಳಿದರು: "ನಾನು ನಿನಗೆ ಈ ಸಂಪೂರ್ಣ ವಿಷಯದ (ಧರ್ಮದ) ಶಿರೋಭಾಗ, ಸ್ತಂಭಗಳು ಮತ್ತು ಶಿಖರಾಗ್ರಗಳ ಬಗ್ಗೆ ತಿಳಿಸಿಕೊಡಲೇ?" ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ವಿಷಯದ (ಧರ್ಮದ) ಶಿರೋಭಾಗವು ಇಸ್ಲಾಂ, ಅದರ ಸ್ತಂಭಗಳು ನಮಾಝ್ ಮತ್ತು ಅವರ ಶಿಖರಾಗ್ರವು ಜಿಹಾದ್ ಆಗಿದೆ." ನಂತರ ಅವರು ಕೇಳಿದರು: "ನಾನು ನಿನಗೆ ಇವೆಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುವ ಒಂದರ ಬಗ್ಗೆ ತಿಳಿಸಿಕೊಡಲೇ?" ನಾನು ಹೇಳಿದೆ: "ಓ ಪ್ರವಾದಿಯವರೇ! ತಿಳಿಸಿಕೊಡಿ." ಆಗ ಅವರು ತಮ್ಮ ನಾಲಿಗೆಯನ್ನು ಹಿಡಿದು ಹೇಳಿದರು: "ಇದನ್ನು ನಿಯಂತ್ರಣದಲ್ಲಿಡು." ನಾನು ಕೇಳಿದೆ: "ಓ ಅಲ್ಲಾಹನ ಪ್ರವಾದಿಯವರೇ! ನಾವು ಹೇಳಿದ ಮಾತುಗಳ ಕಾರಣದಿಂದ ನಮ್ಮನ್ನು ಶಿಕ್ಷಿಸಲಾಗುವುದೇ?" ಅವರು ಉತ್ತರಿಸಿದರು: "ಓ ಮುಆದ್! ನಿನ್ನ ತಾಯಿ ನಿನ್ನನ್ನು ಕಳೆದುಕೊಳ್ಳಲಿ! ಮನುಷ್ಯರನ್ನು ಅವರ ಮುಖದ ಮೇಲೆ ಅಥವಾ ಅವರ ಮೂಗುಗಳ ಮೇಲೆ ನರಕದಲ್ಲಿ ಬೀಳಿಸುವುದು ಅವರ ನಾಲಗೆಯ ಕೊಯ್ಲುಗಳೇ ಹೊರತು ಬೇರೇನಾದರೂ ಆಗಿವೆಯೇ?"
الترجمة
العربية Bosanski English Español فارسی Français Bahasa Indonesia Русский Türkçe اردو 中文 हिन्दी Hausa Kurdî Português සිංහල Nederlands অসমীয়া Oromoo Tiếng Việt Kiswahili አማርኛ ગુજરાતી پښتو ไทย Română മലയാളം नेपाली Malagasy Deutsch Кыргызча తెలుగు ქართული Moore Magyar Svenska Македонскиالشرح
ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಒಮ್ಮೆ ಒಂದು ಯಾತ್ರೆಯಲ್ಲಿ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಹೀಗಿರುವಾಗ, ಒಂದಿನ ಬೆಳಗ್ಗೆ ನಾನು ಅವರಿಗೆ ಸಮೀಪದಲ್ಲೇ ಸವಾರಿ ಮಾಡುತ್ತಾ ಸಾಗುತ್ತಿದ್ದೆ. ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವ ಮತ್ತು ನನ್ನನ್ನು ನರಕದಿಂದ ದೂರವಿರಿಸುವ ಒಂದು ಕರ್ಮದ ಬಗ್ಗೆ ತಿಳಿಸಿಕೊಡಿ." ಅವರು ಉತ್ತರಿಸಿದರು: "ಜನರಿಗೆ ಮಾಡಲು ಅತ್ಯಂತ ಕಷ್ಟವಿರುವ ವಿಷಯದ ಬಗ್ಗೆ ನೀನು ಕೇಳಿರುವೆ. ಆದರೆ, ಅಲ್ಲಾಹು ಯಾರಿಗೆ ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭ ಮತ್ತು ಸರಳವಾಗಿದೆ. ಇಸ್ಲಾಮಿನ ಈ ಕೆಳಗಿನ ಕಡ್ಡಾಯ ಕಾರ್ಯಗಳನ್ನು ನೆರವೇರಿಸು: ಒಂದು: ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡದಿರುವುದು. ಎರಡು: ದಿನ-ರಾತ್ರಿಗಳಲ್ಲಿ ನಿರ್ವಹಿಸಲಾಗುವ ಫಜ್ರ್, ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ ಎಂಬ ಐದು ಕಡ್ಡಾಯ ನಮಾಝ್‌ಗಳನ್ನು ಅವುಗಳ ಷರತ್ತುಗಳು, ಸ್ತಂಭಗಳು ಮತ್ತು ಕಡ್ಡಾಯಗಳನ್ನು ಪಾಲಿಸಿ ಸರಿಯಾಗಿ ಸಂಸ್ಥಾಪಿಸುವುದು. ಮೂರು: ಕಡ್ಡಾಯ ಝಕಾತನ್ನು ನೀಡುವುದು. ಇದೊಂದು ಆರ್ಥಿಕ ಆರಾಧನೆಯಾಗಿದ್ದು, ಧರ್ಮಶಾಸ್ತ್ರದಲ್ಲಿ ನಿರ್ದೇಶಿಸಿದಂತೆ ಒಂದು ನಿಗದಿತ ಪ್ರಮಾಣವನ್ನು ತಲುಪಿದ ಸಂಪತ್ತಿನ ಒಂದು ಭಾಗವನ್ನು ಕಡ್ಡಾಯವಾಗಿ ಅದರ ಅರ್ಹ ಫಲಾನುಭವಿಗಳಿಗೆ ನೀಡುವುದು. ನಾಲ್ಕು: ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು. ಅಂದರೆ, ಅಲ್ಲಾಹನಿಗೆ ಆರಾಧನೆ ಸಲ್ಲಿಸುವ ಸಂಕಲ್ಪದೊಂದಿಗೆ, ಪ್ರಭಾತದ ಉದಯದಿಂದ ಸೂರ್ಯಾಸ್ತದ ತನಕ ಆಹಾರ, ಪಾನೀಯ ಮುಂತಾದ ಉಪವಾಸವನ್ನು ಅಸಿಂಧುಗೊಳಿಸುವ ವಸ್ತುಗಳಿಂದ ದೂರವಿರುವುದು. ಐದು: ಅಲ್ಲಾಹನ ಆರಾಧನೆ ಸಲ್ಲಿಸುವುದಕ್ಕಾಗಿ ಹಜ್ಜ್ ಕರ್ಮಗಳನ್ನು ನಿರ್ವಹಿಸಲು ಮಕ್ಕಾಗೆ ತೀರ್ಥಯಾತ್ರೆ ಮಾಡುವುದು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಳಿತಿನ ಬಾಗಿಲುಗಳಿಗೆ ತಲುಪಿಸುವ ಒಂದು ಮಾರ್ಗದ ಬಗ್ಗೆ ನಾನು ನಿನಗೆ ತಿಳಿಸಿಕೊಡಲೇ? ಇದು ಆ ಕಡ್ಡಾಯ ಕರ್ಮಗಳನ್ನು ನಿರ್ವಹಿಸಿದ ಬಳಿಕ ಈ ಕೆಳಗಿನ ಐಚ್ಛಿಕ ಕರ್ಮಗಳನ್ನು ನಿರ್ವಹಿಸುವುದು: ಒಂದು: ಐಚ್ಛಿಕ ಉಪವಾಸ. ಅದು ಮೋಹಗಳನ್ನು ಕಡಿಯುವ ಮತ್ತು ಅದಕ್ಕಿರುವ ಶಕ್ತಿಯನ್ನು ಕುಂದಿಸುವ ಮೂಲಕ ಪಾಪಗಳಲ್ಲಿ ಬೀಳದಂತೆ ತಡೆಯುತ್ತದೆ. ಎರಡು: ಐಚ್ಛಿಕ ದಾನ. ಇದು ಮಾಡಿದ ಪಾಪವನ್ನು ನಂದಿಸುತ್ತದೆ, ನಿವಾರಿಸುತ್ತದೆ ಮತ್ತು ಅದರ ಕುರುಹನ್ನು ಅಳಿಸುತ್ತದೆ. ಮೂರು: ರಾತ್ರಿಯ ಕೊನೆಯ ಮೂರನೇ ಒಂದು ಭಾಗದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸುವುದು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಈ ವಚನವನ್ನು ಪಠಿಸಿದರು: "ಅವರ ಪಾರ್ಶ್ವಗಳು ಅಗಲುತ್ತವೆ" ಅಂದರೆ ದೂರವಾಗುತ್ತವೆ, "ಹಾಸಿಗೆಗಳಿಂದ" ಅಂದರೆ ನಿದ್ರೆಯಿಂದ, "ಅಲ್ಲಾಹನನ್ನು ಪ್ರಾರ್ಥಿಸುವ ಸ್ಥಿತಿಯಲ್ಲಿ" ಅಂದರೆ ನಮಾಝ್, ದೇವಸ್ಮರಣೆ, ಪ್ರಾರ್ಥನೆ ಮುಂತಾದವುಗಳನ್ನು ಮಾಡುತ್ತಿರುವ ಸ್ಥಿತಿಯಲ್ಲಿ, "ಭಯ ಮತ್ತು ನಿರೀಕ್ಷೆಯೊಂದಿಗೆ, ಮತ್ತು ಅವರಿಗೆ ನಾವು ಒದಗಿಸಿರುವುದರಿಂದ ಅವರು ಖರ್ಚು ಮಾಡುತ್ತಾರೆ. ನಾವು ಅವರಿಗಾಗಿ ಏನೆಲ್ಲಾ ತಣ್ತಂಪಾಗಿಸುವ ವಸ್ತುಗಳನ್ನು ಮರೆಯಾಗಿಟ್ಟಿದ್ದೇವೆಂದು ಯಾವುದೇ ವ್ಯಕ್ತಿಗೂ ತಿಳಿದಿಲ್ಲ" ಅಂದರೆ ಪುನರುತ್ಥಾನ ದಿನದಂದು ಸ್ವರ್ಗದಲ್ಲಿ ಅವರ ಕಣ್ಣುಗಳನ್ನು ತಂಪಾಗಿಸುವ ಏನೆಲ್ಲಾ ಅನುಗ್ರಹಗಳನ್ನು ನಾವು ಅವರಿಗೋಸ್ಕರ ಸಿದ್ಧಗೊಳಿಸಿದ್ದೇವೆಂದು ಅವರಿಗೆ ತಿಳಿದಿಲ್ಲ, "ಅವರು ಮಾಡುತ್ತಿರುವ ಕರ್ಮಗಳಿಗೆ ಪ್ರತಿಫಲವಾಗಿ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ನಿನಗೆ ಧರ್ಮದ ಅಡಿಪಾಯದ ಬಗ್ಗೆ, ಅದಕ್ಕೆ ಆಧಾರ ನೀಡುವ ಸ್ತಂಭಗಳ ಬಗ್ಗೆ, ಮತ್ತು ಅದರ ಅಗ್ರ ಶಿಖರದ ಬಗ್ಗೆ ತಿಳಿಸಿಕೊಡಲೇ?" ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ವಿಷಯದ, ಅಂದರೆ ಇಸ್ಲಾಂ ಧರ್ಮದ ಶಿರೋಭಾಗವು ಎರಡು ಸಾಕ್ಷ್ಯ ವಚನಗಳಾಗಿವೆ. ಇದನ್ನು ಉಚ್ಛರಿಸುವ ಮೂಲಕ ಒಬ್ಬ ವ್ಯಕ್ತಿ ತನ್ನ ಧರ್ಮಕ್ಕೆ ಅಡಿಪಾಯ ಹಾಕುತ್ತಾನೆ. ಅದರ ಸ್ತಂಭಗಳು ನಮಾಝ್. ಆಧಾರಸ್ತಂಭಗಳಿಲ್ಲದೆ ಕಟ್ಟಡ ಇರುವುದಿಲ್ಲ ಎಂಬಂತೆ ನಮಾಝ್ ಮಾಡದವನಲ್ಲಿ ಇಸ್ಲಾಂ ಇರುವುದಿಲ್ಲ. ನಮಾಝ್ ಮಾಡುವವನು ತನ್ನ ಧರ್ಮವನ್ನು ಬಲಪಡಿಸುತ್ತಾನೆ ಮತ್ತು ಎತ್ತರಿಸುತ್ತಾನೆ. ಅದರ ಶಿಖರಾಗ್ರ ಮತ್ತು ಉಚ್ಛಸ್ಥಿತಿಯು ಜಿಹಾದ್ ಹಾಗೂ ಅಲ್ಲಾಹನ ವಚನವು ಅತ್ಯುನ್ನತವಾಗುವುದಕ್ಕಾಗಿ ಧರ್ಮದ ಶತ್ರುಗಳೊಂದಿಗೆ ಹೋರಾಡುವುದಾಗಿದೆ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈಗಾಗಲೇ ತಿಳಿಸಿದ್ದನ್ನು ನಿಯಂತ್ರಿಸುವ ಮತ್ತು ನಿಖರಗೊಳಿಸುವ ಒಂದು ವಿಷಯದ ಬಗ್ಗೆ ನಾನು ನಿನಗೆ ತಿಳಿಸಿಕೊಡಲೇ?" ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಾಲಗೆಯನ್ನು ಹಿಡಿದು ಹೇಳಿದರು: "ಇದಕ್ಕೆ ತಡೆ ಹಾಕು ಮತ್ತು ನಿನಗೆ ಸಂಬಂಧವಿಲ್ಲದ ಯಾವುದರ ಬಗ್ಗೆಯೂ ಮಾತನಾಡಬೇಡ." ಮುಆದ್ ಕೇಳಿದರು: "ನಾವು ಮಾತನಾಡುವ ಎಲ್ಲಾ ವಿಷಯಗಳಿಗಾಗಿಯೂ ಅಲ್ಲಾಹು ನಮ್ಮನ್ನು ಹಿಡಿದು ವಿಚಾರಣೆ ಮಾಡಿ ಶಿಕ್ಷಿಸುತ್ತಾನೆಯೇ?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿನ್ನ ತಾಯಿ ನಿನ್ನನ್ನು ಕಳೆದುಕೊಳ್ಳಲಿ." ಇದು ಮುಆದ್ ರಿಗೆ ವಿರುದ್ಧವಾಗಿರುವ ಪ್ರಾರ್ಥನೆಯಲ್ಲ. ಬದಲಿಗೆ, ಇದು ಪ್ರಾಮುಖ್ಯತೆಯಿರುವ ಮತ್ತು ತಿಳಿದುಕೊಳ್ಳುವುದು ಅತ್ಯಗತ್ಯವಾಗಿರುವ ವಿಷಯಕ್ಕೆ ಗಮನವನ್ನು ಸೆಳೆಯುವುದಕ್ಕಾಗಿ ಅರಬ್ಬರು ಬಳಸುವ ಒಂದು ಪದಪ್ರಯೋಗವಾಗಿದೆ. ನಂತರ ಅವರು ಹೇಳಿದರು: "ಮನುಷ್ಯರನ್ನು ಅವರ ಮುಖದ ಮೇಲೆ ನರಕದಲ್ಲಿ ಬೀಳಿಸುವುದು ಅವರ ನಾಲಗೆಯ ಕೊಯ್ಲುಗಳಾದ ಸತ್ಯನಿಷೇಧ, ಸುಳ್ಳಾರೋಪ, ಬೈಗುಳ, ಪರದೂಷಣೆ, ಚಾಡಿಮಾತು, ಆಪಾದನೆ ಇತ್ಯಾದಿಗಳಲ್ಲದೆ ಬೇರೇನಾದರೂ ಆಗಿವೆಯೇ?"فوائد الحديث
ಜ್ಞಾನವನ್ನು ಗಳಿಸಲು ಸಹಾಬಿಗಳಿಗಿದ್ದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಉತ್ಸಾಹವನ್ನು ತಿಳಿಸಲಾಗಿದೆ. ಈ ಕಾರಣದಿಂದಲೇ ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚು ಹೆಚ್ಚಾಗಿ ಪ್ರಶ್ನೆ ಕೇಳುತ್ತಿದ್ದರು.
ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಏಕೆಂದರೆ, ಸ್ವರ್ಗವನ್ನು ಪ್ರವೇಶಿಸಲು ಕರ್ಮಗಳೇ ಕಾರಣವೆಂದು ಅವರು ತಿಳಿದಿದ್ದರು.
ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೇಳಿದ ಪ್ರಶ್ನೆ ಬಹಳ ಗಂಭೀರ ಪ್ರಶ್ನೆಯಾಗಿತ್ತು. ಏಕೆಂದರೆ, ವಾಸ್ತವವಾಗಿ ಅದು ಜೀವನ ಮತ್ತು ಅಸ್ತಿತ್ವದ ರಹಸ್ಯವಾಗಿದೆ. ಏಕೆಂದರೆ, ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಮನುಷ್ಯರು ಮತ್ತು ಜಿನ್ನ್‌ಗಳ ಪರಮೋಚ್ಛ ಗುರಿಯು ಸ್ವರ್ಗ ಅಥವಾ ನರಕವಾಗಿದೆ. ಆದ್ದರಿಂದ ಈ ಪ್ರಶ್ನೆಯು ಬಹಳ ಗಂಭೀರವಾಗಿದೆ.
ಸ್ವರ್ಗ ಪ್ರವೇಶವು ಇಸ್ಲಾಂ ಧರ್ಮದ ಐದು ಸ್ತಂಭಗಳ ಪೂರ್ತೀಕರಣವನ್ನು ಅವಲಂಬಿಸಿಕೊಂಡಿದೆ. ಅವು: ಎರಡು ಸಾಕ್ಷ್ಯವಚನಗಳು, ನಮಾಝ್, ಝಕಾತ್, ಉಪವಾಸ ಮತ್ತು ಹಜ್ಜ್.
ಧರ್ಮದ ಶಿರೋಭಾಗವು, ಕಾರ್ಯಗಳಲ್ಲಿ ಅತ್ಯಮೂಲ್ಯವಾದುದು ಮತ್ತು ಕರ್ತವ್ಯಗಳಲ್ಲಿ ಅತ್ಯುನ್ನತವಾದುದು ಅಲ್ಲಾಹನನ್ನು ಮಾತ್ರ ಆರಾಧಿಸುವ ಮೂಲಕ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡದಿರುವ ಮೂಲಕ ಆರಾಧನೆಯಲ್ಲಿ ಅಲ್ಲಾಹನನ್ನು ಏಕೈಕಗೊಳಿಸುವುದಾಗಿದೆ (ತೌಹೀದ್).
ಸತ್ಕರ್ಮಗಳನ್ನು ಹೆಚ್ಚಿಸಲು ಮತ್ತು ಪಾಪಗಳಿಗೆ ಕ್ಷಮೆ ದೊರೆಯಲು ಅಲ್ಲಾಹು ತನ್ನ ದಾಸರಿಗೆ ಒಳಿತಿನ ಬಾಗಿಲುಗಳನ್ನು ತೆರೆದುಕೊಟ್ಟಿರುವುದು ಅವನ ಕರುಣೆಯನ್ನು ಸೂಚಿಸುತ್ತದೆ.
ಕಡ್ಡಾಯ ಕಾರ್ಯಗಳನ್ನು ನಿರ್ವಹಿಸಿದ ಬಳಿಕ ಐಚ್ಛಿಕ ಕಾರ್ಯಗಳ ಮೂಲಕ ಅಲ್ಲಾಹನಿಗೆ ಸಮೀಪವಾಗುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
ಇಸ್ಲಾಂ ಧರ್ಮದಲ್ಲಿ ನಮಾಝ್ ಡೇರೆಯನ್ನು ನಿಲ್ಲಿಸಲು ಬಳಸುವ ಸ್ತಂಭದ ಸ್ಥಾನವನ್ನು ಹೊಂದಿದೆ. ಸ್ತಂಭ ಬಿದ್ದರೆ ಡೇರೆ ಕೂಡ ಬೀಳುವಂತೆ ನಮಾಝ್ ಇಲ್ಲದಿದ್ದರೆ ಇಸ್ಲಾಂ ಕೂಡ ಇರುವುದಿಲ್ಲ.
ಮನುಷ್ಯನಿಗೆ ಧಾರ್ಮಿಕವಾಗಿ ತೊಂದರೆ ನೀಡುವ ವಿಷಯಗಳಿಂದ ನಾಲಗೆಯನ್ನು ಹದ್ದುಬಸ್ತಿನಲ್ಲಿಡುವುದು ಕಡ್ಡಾಯವಾಗಿದೆ.
ನಾಲಿಗೆಯನ್ನು ನಿಯಂತ್ರಣದಲ್ಲಿ ಮತ್ತು ಹದ್ದುಬಸ್ತಿನಲ್ಲಿಡುವುದು ಎಲ್ಲಾ ಒಳಿತುಗಳ ಮೂಲವಾಗಿದೆ.
التصنيفات
ಇಸ್ಲಾಮ್