ಮಹಾಪಾಪಗಳಲ್ಲಿ ಅತಿದೊಡ್ಡ ಪಾಪದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?

ಮಹಾಪಾಪಗಳಲ್ಲಿ ಅತಿದೊಡ್ಡ ಪಾಪದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?

ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಹಾಪಾಪಗಳಲ್ಲಿ ಅತಿದೊಡ್ಡ ಪಾಪದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?" ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು. ಸಹಾಬಿಗಳು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನೊಡನೆ ಸಹಭಾಗಿತ್ವ ಮಾಡುವುದು ಮತ್ತು ತಂದೆ-ತಾಯಿಗೆ ಅವಿಧೇಯತೆ ತೋರುವುದು." ಒರಗಿ ಕುಳಿತಿದ್ದ ಅವರು ನೇರವಾಗಿ ಕುಳಿತು ಹೇಳಿದರು: "ಮತ್ತು ಸುಳ್ಳು ಹೇಳಿಕೆ ನೀಡುವುದು." "ಅವರು ಮೌನ ವಹಿಸಿದ್ದರೆ ಚೆನ್ನಾಗಿತ್ತು" ಎಂದು ನಾವು ಹೇಳುವ ತನಕ ಅವರು ಪುನರುಚ್ಛರಿಸುತ್ತಲೇ ಇದ್ದರು.

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರಿಗೆ ಅತ್ಯಂತ ಘೋರವಾದ ಮಹಾಪಾಪಗಳ ಬಗ್ಗೆ ತಿಳಿಸುತ್ತಾ ಈ ಮೂರು ಪಾಪಗಳನ್ನು ಪ್ರಸ್ತಾಪಿಸುತ್ತಾರೆ: 1. ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು: ಅಂದರೆ ಆರಾಧನೆಗಳಲ್ಲಿ ಸೇರಿದ ಯಾವುದಾದರೂ ಒಂದನ್ನು ಅಲ್ಲಾಹನ ಹೊರತಾದವರಿಗೆ ಅರ್ಪಿಸುವುದು, ಅಲ್ಲಾಹನ ಪ್ರಭುತ್ವದಲ್ಲಿ, ದೈವಿಕತೆಯಲ್ಲಿ ಮತ್ತು ಅವನ ಹೆಸರು ಹಾಗೂ ಗುಣಲಕ್ಷಣಗಳಲ್ಲಿ ಅವನ ಹೊರತಾದವರನ್ನು ಅವನೊಂದಿಗೆ ಸಮಾನಗೊಳಿಸುವುದು. 2. ಮಾತಾಪಿತರಿಗೆ ಅವಿಧೇಯತೆ ತೋರುವುದು: ಮಾತಾಪಿತರನ್ನು ನೋಯಿಸುವುದು, ಅದು ಮಾತಿನ ಮೂಲಕ ಅಥವಾ ವರ್ತನೆಯ ಮೂಲಕವಾದರೂ ಸಹ, ಮತ್ತು ಅವರೊಡನೆ ಉತ್ತಮ ರೀತಿಯಲ್ಲಿ ವರ್ತಿಸದಿರುವುದು ಅವಿಧೇಯತೆಗಳಾಗಿವೆ. 3. ಸುಳ್ಳು ಹೇಳಿಕೆ ನೀಡುವುದು (ಸುಳ್ಳು ಸಾಕ್ಷ್ಯ ಹೇಳುವುದು ಇದರಲ್ಲಿ ಒಳಪಡುತ್ತದೆ): ಒಬ್ಬ ವ್ಯಕ್ತಿಯ ಆಸ್ತಿಯನ್ನು ಕಬಳಿಸುವುದು, ಅಥವಾ ಅವನ ಮಾನವನ್ನು ಕೆಡಿಸುವುದು ಮುಂತಾದ ರೀತಿಯಲ್ಲಿ ಅವನ ಮೇಲೆ ಹಗೆ ತೀರಿಸಲು ನೀಡುವ ಸುಳ್ಳು ಮತ್ತು ಕಪೋಕಲ್ಪಿತ ಹೇಳಿಕೆಗಳೆಲ್ಲವೂ ಇದರಲ್ಲಿ ಒಳಪಡುತ್ತವೆ. ಸುಳ್ಳು ಸಾಕ್ಷ್ಯ ಹೇಳುವುದರ ಬಗ್ಗೆ ಎಚ್ಚರಿಕೆಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುನರುಚ್ಛರಿಸುತ್ತಲೇ ಇದ್ದರು. ಇದು ಅದರ ಅಸಹ್ಯತೆ ಮತ್ತು ಸಮಾಜದ ಮೇಲೆ ಅದು ಬೀರುವ ದುಷ್ಪರಿಣಾಮದ ಬಗ್ಗೆ ಸೂಚಿಸುವುದಕ್ಕಾಗಿತ್ತು. ಅವರು ಇದನ್ನು ಎಲ್ಲಿಯ ತನಕ ಪುನರುಚ್ಛರಿಸುತ್ತಿದ್ದರೆಂದರೆ, ಸಹಾಬಿಗಳು ಅವರ ಮೇಲಿದ್ದ ಸಹಾನುಭೂತಿಯಿಂದ ಮತ್ತು ಅವರಿಗೆ ತೊಂದರೆಯಾಗುವುದನ್ನು ನೋಡಲಾಗದೆ, "ಅವರು ಇದನ್ನು ನಿಲ್ಲಿಸಿದ್ದರೆ ಎಷ್ಟು ಚೆನ್ನಾಗಿತ್ತು!" ಎಂದು ಹೇಳುವವರೆಗೆ.

فوائد الحديث

ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು ಅತಿದೊಡ್ಡ ಪಾಪವಾಗಿದೆ. ಏಕೆಂದರೆ ಇದನ್ನು ಮಹಾಪಾಪಗಳ ಆರಂಭದಲ್ಲಿ ಮತ್ತು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅಲ್ಲಾಹನ ಈ ವಚನವು ಇದನ್ನು ದೃಢೀಕರಿಸುತ್ತದೆ: "ತನ್ನೊಡನೆ ಸಹಭಾಗಿತ್ವ ಮಾಡುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾದ ಪಾಪಗಳನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ."

ಮಾತಾಪಿತರ ಹಕ್ಕುಗಳನ್ನು ಅಲ್ಲಾಹನ ಹಕ್ಕುಗಳೊಂದಿಗೆ ಸೇರಿಸಿ ಹೇಳುವ ಮೂಲಕ ಅವರ ಹಕ್ಕುಗಳ ಮಹತ್ವವನ್ನು ತಿಳಿಸಲಾಗಿದೆ.

ಪಾಪಗಳಲ್ಲಿ ಮಹಾಪಾಪಗಳು ಮತ್ತು ಸಣ್ಣ ಪಾಪಗಳಿವೆ. ಮಹಾಪಾಪ ಎಂದರೆ ಇಹಲೋಕದಲ್ಲೇ ಶಿಕ್ಷೆಯನ್ನು ನಿಶ್ಚಯಿಸಲಾದ ಪಾಪಗಳು. ಉದಾಹರಣೆಗೆ, ಕಾನೂನಿನಲ್ಲಿ ನಿಗದಿಪಡಿಸಲಾದ ಶಿಕ್ಷೆಗಳಿರುವ, ಅಥವಾ ಶಾಪವಿದೆಯೆಂದು ಹೇಳಲಾದ ಇಹಲೋಕದಲ್ಲೇ ಶಿಕ್ಷೆ ನೀಡಲಾಗುವ ಪಾಪಗಳು. ಅಥವಾ ಪರಲೋಕದಲ್ಲಿ ನರಕ ಶಿಕ್ಷೆಯಿದೆಯೆಂದು ಎಚ್ಚರಿಕೆ ನೀಡಲಾದ ಪಾಪಗಳು. ಮಹಾಪಾಪಗಳಲ್ಲಿ ವಿಭಿನ್ನ ದರ್ಜೆಗಳಿವೆ. ನಿಷೇಧದಲ್ಲಿ ಕೆಲವು ಪಾಪಗಳು ಇತರ ಪಾಪಗಳಿಗಿಂತಲೂ ಕಠೋರವಾಗಿದೆ. ಮಹಾಪಾಪಗಳಿಗೆ ಹೊರತಾದ ಪಾಪಗಳೆಲ್ಲವೂ ಸಣ್ಣ ಪಾಪಗಳಾಗಿವೆ.

التصنيفات

Blameworthy Morals, Condemning Sins