ನನ್ನ ಸಮುದಾಯದ ಎಲ್ಲರನ್ನೂ ಕ್ಷಮಿಸಲಾಗುವುದು, ಬಹಿರಂಗವಾಗಿ ಪಾಪ ಮಾಡುವವರ ಹೊರತು

ನನ್ನ ಸಮುದಾಯದ ಎಲ್ಲರನ್ನೂ ಕ್ಷಮಿಸಲಾಗುವುದು, ಬಹಿರಂಗವಾಗಿ ಪಾಪ ಮಾಡುವವರ ಹೊರತು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನನ್ನ ಸಮುದಾಯದ ಎಲ್ಲರನ್ನೂ ಕ್ಷಮಿಸಲಾಗುವುದು, ಬಹಿರಂಗವಾಗಿ ಪಾಪ ಮಾಡುವವರ ಹೊರತು. ಬಹಿರಂಗವಾಗಿ ಪಾಪ ಮಾಡುವ ಒಂದು ರೂಪ ಹೇಗೆಂದರೆ, ಒಬ್ಬ ವ್ಯಕ್ತಿ ರಾತ್ರಿಯಲ್ಲಿ ಒಂದು ಪಾಪವನ್ನು ಮಾಡುತ್ತಾನೆ. ನಂತರ ಅಲ್ಲಾಹು ಅದನ್ನು ಅವನಿಗಾಗಿ ಮುಚ್ಚಿಟ್ಟರೂ, ಮರುದಿನ ಬೆಳಗ್ಗೆ ಅವನು ಹೇಳುತ್ತಾನೆ: "ಓ ಇಂತಿಂತಹವರೇ! ನಾನು ನಿನ್ನೆ ರಾತ್ರಿ ಇಂತಿಂತಹ ಪಾಪ ಮಾಡಿದ್ದೇನೆ. ಅವನ ಪರಿಪಾಲಕನು (ಅಲ್ಲಾಹು) ಅವನ ಪಾಪವನ್ನು ಮುಚ್ಚಿಟ್ಟ ಸ್ಥಿತಿಯಲ್ಲಿ ಅವನು ರಾತ್ರಿಯನ್ನು ಕಳೆದಿದ್ದನು. ಆದರೆ ಬೆಳಗಾದಾಗ ಅವನು ಆ ಮುಚ್ಚಿಗೆಯನ್ನು ತೆರೆದು ಬಿಡುತ್ತಾನೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪಾಪ ಮಾಡಿದ ಒಬ್ಬ ವ್ಯಕ್ತಿಗೆ ಅಲ್ಲಾಹನ ಕ್ಷಮೆ ಮತ್ತು ಪಾಪವಿಮೋಚನೆ ದೊರೆಯುವ ನಿರೀಕ್ಷೆಯಿದೆ. ಆದರೆ ಗರ್ವದಿಂದ ಮತ್ತು ನಾಚಿಕೆಯಿಲ್ಲದೆ ತಮ್ಮ ಪಾಪಗಳನ್ನು ಬಹಿರಂಗವಾಗಿ ಹೇಳುವವರು ಇದಕ್ಕೆ ಹೊರತಾಗಿದ್ದಾರೆ. ಅವರು ಕ್ಷಮೆಗೆ ಅರ್ಹರಲ್ಲ. ಅವರು ರಾತ್ರಿಯಲ್ಲಿ ಒಂದು ಪಾಪವನ್ನು ಮಾಡುತ್ತಾರೆ, ನಂತರ ಅಲ್ಲಾಹು ಅದನ್ನು ಅವರಿಗಾಗಿ ಮುಚ್ಚಿಟ್ಟರೂ ಬೆಳಗಾದಾಗ ಅವರು ಇತರರಿಗೆ, ನಾನು ನಿನ್ನೆ ರಾತ್ರಿ ಇಂತಿಂತಹ ಪಾಪ ಮಾಡಿದ್ದೇನೆ ಎಂದು ಹೇಳುತ್ತಾರೆ. ಅವರ ಪರಿಪಾಲಕನು (ಅಲ್ಲಾಹು) ಅದನ್ನು ಮುಚ್ಚಿಟ್ಟ ಸ್ಥಿತಿಯಲ್ಲಿ ಅವರು ರಾತ್ರಿಯನ್ನು ಕಳೆದಿದ್ದರು. ಬೆಳಗಾದಾಗ ಅವರು ಆ ಮುಚ್ಚಿಗೆಯನ್ನು ತೆರೆದು ಬಿಡುತ್ತಾರೆ!!

فوائد الحديث

ಅಲ್ಲಾಹು ಪಾಪವನ್ನು ಮುಚ್ಚಿಟ್ಟ ನಂತರವೂ ಅದನ್ನು ಬಹಿರಂಗಪಡಿಸುವುದು ಹೇಯ ಪ್ರವೃತ್ತಿಯಾಗಿದೆ.

ಪಾಪವನ್ನು ಬಹಿರಂಗವಾಗಿ ಹೇಳುವುದು ಸತ್ಯವಿಶ್ವಾಸಿಗಳ ನಡುವೆ ನೀಚಕೃತ್ಯಗಳು ಹರಡಲು ಕಾರಣವಾಗುತ್ತದೆ.

ಅಲ್ಲಾಹು ಯಾರ ಪಾಪಗಳನ್ನು ಇಹಲೋಕದಲ್ಲಿ ಮುಚ್ಚಿಡುತ್ತಾನೋ ಅದನ್ನು ಪರಲೋಕದಲ್ಲೂ ಮುಚ್ಚಿಡುತ್ತಾನೆ. ಇದು ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ಕರುಣೆಯ ವ್ಯಾಪ್ತಿಯನ್ನು ತೋರಿಸುತ್ತದೆ.

ಪಾಪದ ಮೂಲಕ ಪರೀಕ್ಷಿಸಲಾದವರು ಅದನ್ನು ಸ್ವಯಂ ಮುಚ್ಚಿಡಬೇಕು ಮತ್ತು ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಡಬೇಕು.

ತಮ್ಮ ಪಾಪಗಳನ್ನು ಉದ್ದೇಶಪೂರ್ವಕ ಬಹಿರಂಗಪಡಿಸಿ ಕ್ಷಮೆ ದೊರೆಯುವ ಅವಕಾಶವನ್ನು ಕಳೆದುಕೊಳ್ಳುವ ಗಂಭೀರ ತಪ್ಪಿನ ಬಗ್ಗೆ ಎಚ್ಚರಿಸಲಾಗಿದೆ.

التصنيفات

Condemning Sins