“ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು

“ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು. ಆಡಳಿತಗಾರನು ಜನರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಪುರುಷನು ತನ್ನ ಮನೆಯವರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಮಹಿಳೆ ತನ್ನ ಗಂಡನ ಮನೆಗೆ ಮತ್ತು ಅವನ ಮಕ್ಕಳಿಗೆ ಕುರಿಗಾಹಿಯಾಗಿದ್ದಾಳೆ ಮತ್ತು ಅವರಿಗೆ ಅವಳೇ ಜವಾಬ್ದಾರಳಾಗಿದ್ದಾಳೆ. ಗುಲಾಮನು ತನ್ನ ಯಜಮಾನನ ಆಸ್ತಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅದಕ್ಕೆ ಅವನೇ ಜವಾಬ್ದಾರನಾಗಿದ್ದಾನೆ. ತಿಳಿಯಿರಿ! ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಸಮಾಜದಲ್ಲಿ ಪ್ರತಿಯೊಬ್ಬ ಮುಸಲ್ಮಾನನಿಗೂ ಜವಾಬ್ದಾರಿಯಿದ್ದು ಅವನು ಅದನ್ನು ನಿರ್ವಹಿಸುತ್ತಲೂ ನಿಭಾಯಿಸುತ್ತಲೂ ಇರಬೇಕು. ಮುಖಂಡನು ಮತ್ತು ಆಡಳಿತಗಾರನು ಅಲ್ಲಾಹು ಅವನ ಅಧೀನದಲ್ಲಿರಿಸಿದವರಿಗೆ ಕುರಿಗಾಹಿಯಾಗಿದ್ದಾನೆ. ಆದ್ದರಿಂದ ಅವನು ಅವರ ಕಾನೂನು ಪಾಲನೆ ಮಾಡಬೇಕು, ಅವರ ಮೇಲೆ ದಾಳಿಯಾಗದಂತೆ ರಕ್ಷಣೆ ಒದಗಿಸಬೇಕು, ಅವರ ಶತ್ರುಗಳೊಡನೆ ಹೋರಾಡಬೇಕು ಮತ್ತು ಅವರ ಹಕ್ಕುಗಳು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಪುರುಷನು ತನ್ನ ಮನೆಯವರಿಗೆ ಕುರಿಗಾಹಿಯಾಗಿದ್ದಾನೆ. ಅವರಿಗೆ ಖರ್ಚು ಮಾಡುವುದು, ಅವರೊಡನೆ ಉತ್ತಮವಾಗಿ ವರ್ತಿಸುವುದು ಮತ್ತು ಅವರಿಗೆ ಶಿಕ್ಷಣ ಹಾಗೂ ಶಿಸ್ತು ಕಲಿಸುವುದು ಅವನ ಹೊಣೆಗಾರಿಕೆಯಾಗಿದೆ. ಮಹಿಳೆ ತನ್ನ ಗಂಡನ ಮನೆಗೆ ಕುರಿಗಾಹಿಯಾಗಿದ್ದಾಳೆ. ಅವನ ಮನೆಯನ್ನು ಸರಿಯಾಗಿ ನಿರ್ವಹಣೆ ಮಾಡುವುದು ಮತ್ತು ಅವನ ಮಕ್ಕಳನ್ನು ಸರಿಯಾಗಿ ಬೆಳೆಸುವುದು ಅವಳ ಹೊಣೆಗಾರಿಕೆಯಾಗಿದೆ. ಅದಕ್ಕೆ ಅವಳೇ ಜವಾಬ್ದಾರಳು. ಸೇವಕ, ಗುಲಾಮ ಮತ್ತು ಉದ್ಯೋಗಿ ಅವರ ಯಜಮಾನರ ಆಸ್ತಿಗೆ ಜವಾಬ್ದಾರರಾಗಿದ್ದಾರೆ. ಅದನ್ನು ಸರಿಯಾಗಿ ನಿರ್ವಹಿಸುವುದು, ಅವರಿಗೆ ವಹಿಸಿಕೊಡಲಾದುದನ್ನು ಸಂರಕ್ಷಿಸುವುದು ಮತ್ತು ಅವರ ಕೆಲಸವನ್ನು ನಿಯತ್ತಿನಿಂದ ಮಾಡುವುದು ಅವರ ಹೊಣೆಗಾರಿಕೆಯಾಗಿದೆ. ಅದಕ್ಕೆ ಅವರೇ ಜವಾಬ್ದಾರರು. ಆದ್ದರಿಂದ ಎಲ್ಲರೂ ಅಲ್ಲಾಹು ಅವರ ಅಧೀನದಲ್ಲಿರಿಸಿದವರಿಗೆ ಕುರಿಗಾಹಿಗಳಾಗಿದ್ದಾರೆ. ಪ್ರತಿಯೊಬ್ಬರೂ ಅವರವರ ಕುರಿ ಮಂದೆಗಳಿಗೆ ಜವಾಬ್ದಾರರಾಗಿದ್ದಾರೆ.

فوائد الحديث

ಮುಸ್ಲಿಂ ಸಮಾಜದಲ್ಲಿ ಜವಾಬ್ದಾರಿಯು ಎಲ್ಲರಿಗೂ ಇದೆ ಮತ್ತು ಎಲ್ಲರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ.

ಮಹಿಳೆಗೆ ಅವಳ ಗಂಡನ ಮನೆಯ ಹಕ್ಕುಗಳನ್ನು ನೆರವೇರಿಸುವ ಮತ್ತು ಅವನ ಮಕ್ಕಳಿಗೆ ಸಂಬಂಧಿಸಿದಂತೆ ತನ್ನ ಕರ್ತವ್ಯಗಳನ್ನು ನಿರ್ವಹಿಸುವ ಬಹಳ ದೊಡ್ಡ ಜವಾಬ್ದಾರಿಯಿದೆ.

التصنيفات

Duties of the Imam, Marital Relations, Raising Children