ಅಲ್ಲಾಹು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ

ಅಲ್ಲಾಹು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ

ನವ್ವಾಸ್ ಬಿನ್ ಸಮ್‌ಆನ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ. ಆ ನೇರ ಮಾರ್ಗದ ಎರಡು ಬದಿಗಳಲ್ಲೂ ಗೋಡೆಗಳಿವೆ. ಆ ಗೋಡೆಗಳಲ್ಲಿ ತೆರೆದುಕೊಂಡಿರುವ ಅನೇಕ ಬಾಗಿಲುಗಳಿವೆ. ಆ ಬಾಗಿಲುಗಳಲ್ಲಿ ಪರದೆಗಳನ್ನು ಹಾಕಲಾಗಿದೆ. ಆ ನೇರ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಕೂಗಿ ಹೇಳುತ್ತಿರುತ್ತಾನೆ: "ಓ ಜನರೇ! ನೀವೆಲ್ಲರೂ ನೇರ ಮಾರ್ಗವನ್ನು ಪ್ರವೇಶಿರಿ. ಅತ್ತಿತ್ತ ತಿರುಗದೆ ನೇರವಾಗಿ ನಡೆಯಿರಿ." ಆ ಮಾರ್ಗದ ಮೇಲ್ಭಾಗದಲ್ಲಿ ಒಬ್ಬ ವ್ಯಕ್ತಿಯಿದ್ದು, ಆ ಬಾಗಿಲುಗಳಲ್ಲಿ ಯಾವುದಾದರೂ ಬಾಗಿಲನ್ನು ತೆರೆಯಲು ಪ್ರಯತ್ನಿಸಿದರೆ, ಅವನು ಕೂಗಿ ಹೇಳುತ್ತಾನೆ: "ನಿನಗೆ ದುರದೃಷ್ಟ ಕಾದಿದೆ! ಆ ಬಾಗಿಲನ್ನು ತೆರೆಯಬೇಡ. ನೀನು ಅದನ್ನು ತೆರೆದರೆ ಅದರ ಒಳಗೆ ಪ್ರವೇಶಿಸಿ ಬಿಡುವೆ." ಆ ನೇರ ಮಾರ್ಗವು ಇಸ್ಲಾಂ ಧರ್ಮವಾಗಿದೆ. ಆ ಎರಡು ಗೋಡೆಗಳು ಅಲ್ಲಾಹನ ಎಲ್ಲೆಗಳಾಗಿವೆ. ತೆರೆದುಕೊಂಡಿರುವ ಬಾಗಿಲುಗಳು ಅಲ್ಲಾಹು ನಿಷೇಧಿತ ವಲಯಗಳಾಗಿವೆ. ಆ ನೇರ ಮಾರ್ಗದ ಪ್ರವೇಶದ್ವಾರದಲ್ಲಿ ಕೂಗಿ ಕರೆಯುವುದು ಅಲ್ಲಾಹನ ಗ್ರಂಥವಾಗಿದೆ. ಆ ಮಾರ್ಗದ ಮೇಲ್ಭಾಗದಿಂದ ಕೂಗಿ ಕರೆಯುವುದು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿರುವ ಅಲ್ಲಾಹನ ಉಪದೇಶಕವಾಗಿದೆ."

[صحيح] [رواه الترمذي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ: ಅಲ್ಲಾಹು ಇಸ್ಲಾಂ ಧರ್ಮವನ್ನು ವಿವರಿಸಲು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ. ಅದು ಉದ್ದಕ್ಕೆ ಚಾಚಿಕೊಂಡಿರುವ ಒಂದು ಮಾರ್ಗವಾಗಿದ್ದು ಅದರಲ್ಲಿ ಯಾವುದೇ ವಕ್ರತೆಗಳಿಲ್ಲ. ಆ ಮಾರ್ಗದ ಇಕ್ಕೆಲಗಳಲ್ಲಿ ಎರಡು ಗೋಡೆಗಳಿವೆ. ಆ ಗೋಡೆಗಳು ಆ ಮಾರ್ಗವನ್ನು ಎರಡು ಬದಿಗಳಿಂದಲೂ ಸುತ್ತುವರಿಯುತ್ತವೆ. ಈ ಗೋಡೆಗಳು ಅಲ್ಲಾಹನ ಗಡಿಗಳಾಗಿವೆ. ಈ ಎರಡೂ ಗೋಡೆಗಳಲ್ಲಿ ಅನೇಕ ಬಾಗಿಲುಗಳಿವೆ. ಇವು ಅಲ್ಲಾಹು ನಿಷೇಧಿಸಿದ ಕಾರ್ಯಗಳಾಗಿವೆ. ಆ ಬಾಗಿಲುಗಳಿಗೆ ಪರದೆಗಳನ್ನು ಹಾಕಲಾಗಿದ್ದು ಅದರೊಳಗಿರುವುದು ಹೊರಗಿನವರಿಗೆ ಕಾಣುವುದಿಲ್ಲ. ಆ ಮಾರ್ಗದ ಪ್ರವೇಶದ್ವಾರದಲ್ಲಿ ಒಬ್ಬ ವ್ಯಕ್ತಿಯಿದ್ದು ಆತ ಜನರಿಗೆ ಆದೇಶ ನಿರ್ದೇಶನಗಳನ್ನು ನೀಡುತ್ತಾ ಹೇಳುತ್ತಾನೆ: "ನೀವು ನೇರವಾಗಿ ನಡೆಯಿರಿ. ಅತ್ತಿತ್ತ ತಿರುಗಬೇಡಿ." ಇದು ಅಲ್ಲಾಹನ ಗ್ರಂಥ (ಕುರ್‌ಆನ್). ಆ ಮಾರ್ಗದ ಮೇಲ್ಭಾಗದಲ್ಲಿ ಇನ್ನೊಬ್ಬ ವ್ಯಕ್ತಿಯಿದ್ದಾನೆ. ನೇರಮಾರ್ಗದಲ್ಲಿ ನಡೆಯುವವರು ಆ ಬಾಗಿಲುಗಳಿಗೆ ಹಾಕಲಾದ ಪರದೆಗಳನ್ನು ಸ್ವಲ್ಪ ಸರಿಸಲು ಪ್ರಯತ್ನಿಸುವಾಗ ಆತ ಅವರನ್ನು ಗದರಿಸುತ್ತಾ ಹೇಳುತ್ತಾನೆ: "ನಿನಗೆ ದುರದೃಷ್ಟ ಕಾದಿದೆ! ಅದನ್ನು ತೆರೆಯಬೇಡ. ನೀನು ಅದನ್ನು ತೆರೆದು ಬಿಟ್ಟರೆ ಅದರೊಳಗೆ ಪ್ರವೇಶ ಮಾಡುವೆ. ಅದನ್ನು ಪ್ರವೇಶ ಮಾಡದಂತೆ ನಿನ್ನ ಮನಸ್ಸನ್ನು ನಿಯಂತ್ರಿಸಲು ನಿನಗೆ ಸಾಧ್ಯವಿಲ್ಲ." ಇದು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿರುವ ಅಲ್ಲಾಹನ ಕಡೆಯ ಆತ್ಮಸಾಕ್ಷಿಯಾಗಿದೆ.

فوائد الحديث

ಇಸ್ಲಾಂ ಸತ್ಯ ಧರ್ಮವಾಗಿದೆ ಮತ್ತು ಅದು ನಮ್ಮನ್ನು ಸ್ವರ್ಗಕ್ಕೆ ಸೇರಿಸುವ ನೇರ ಮಾರ್ಗವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.

ಅಲ್ಲಾಹನ ಎಲ್ಲೆಗಳನ್ನು ಅಂದರೆ ಅವನು ಅನುಮತಿಸಿದ್ದು ಮತ್ತು ನಿಷೇಧಿಸಿದ್ದನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ. ಈ ವಿಷಯದಲ್ಲಿ ಅಸಡ್ಡೆ ಮಾಡಿದರೆ ಅದು ವಿನಾಶಕ್ಕೆ ಕೊಂಡೊಯ್ಯುತ್ತದೆ.

ಪವಿತ್ರ ಕುರ್‌ಆನಿನ ಶ್ರೇಷ್ಠತೆಯನ್ನು ಮತ್ತು ಅದರಂತೆ ಜೀವನ ನಡೆಸುವುದನ್ನು ಈ ಹದೀಸ್ ಉತ್ತೇಜಿಸುತ್ತದೆ. ಏಕೆಂದರೆ ಅದರಲ್ಲಿ ಮಾರ್ಗದರ್ಶನ, ಬೆಳಕು ಮತ್ತು ಯಶಸ್ಸು ಇದೆ.

ಅಲ್ಲಾಹನಿಗೆ ದಾಸರ ಮೇಲಿರುವ ದಯೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅವನು ಸತ್ಯವಿಶ್ವಾಸಿಗಳ ಹೃದಯದಲ್ಲಿ ಅವರು ವಿನಾಶಗಳಲ್ಲಿ ಒಳಪಡದಂತೆ ತಡೆಯುವ ಆತ್ಮಸಾಕ್ಷಿಯನ್ನು ಸ್ಥಾಪಿಸಿದ್ದಾನೆ.

ಅಲ್ಲಾಹು ಅವನ ದಯೆಯಿಂದ, ದಾಸರಿಗೆ ಅವರು ಪಾಪಗಳಲ್ಲಿ ಒಳಪಡದಂತೆ ತಡೆಯುವ ತಡೆಗಳನ್ನು ನಿರ್ಮಿಸಿದ್ದಾನೆ.

ವಿಷಯಗಳನ್ನು ಕಲಿಸುವಾಗ ಜನರು ಅದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಸರಿಯಾಗಿ ವಿವರಿಸಿಕೊಡಲು ಉದಾಹರಣೆಗಳನ್ನು ಬಳಸಬೇಕೆಂದು ಈ ಹದೀಸ್ ತಿಳಿಸುತ್ತದೆ.

التصنيفات

Merits of the Noble Qur'an, Acts of Heart, Condemning Whims and Desires