ಅಲ್ಲಾಹು ಮೊದಲಿನಿಂದ ಕೊನೆಯವರೆಗಿನ ಎಲ್ಲಾ ಜನರನ್ನು ಒಂದೇ ಮೈದಾನದಲ್ಲಿ ಒಟ್ಟುಗೂಡಿಸುವನು. ಕರೆಯುವವನ ಧ್ವನಿ ಅವರೆಲ್ಲರಿಗೂ…

ಅಲ್ಲಾಹು ಮೊದಲಿನಿಂದ ಕೊನೆಯವರೆಗಿನ ಎಲ್ಲಾ ಜನರನ್ನು ಒಂದೇ ಮೈದಾನದಲ್ಲಿ ಒಟ್ಟುಗೂಡಿಸುವನು. ಕರೆಯುವವನ ಧ್ವನಿ ಅವರೆಲ್ಲರಿಗೂ ಕೇಳಿಸುವುದು ಮತ್ತು ದೃಷ್ಟಿಯು ಎಲ್ಲರನ್ನೂ ವ್ಯಾಪಿಸುವುದು. ಸೂರ್ಯನು ಸಮೀಪಕ್ಕೆ ಬರುವನು. ಜನರು ತಾಳಲಾರದಷ್ಟು ಮತ್ತು ಸಹಿಸಲಾಗದಷ್ಟು ದುಃಖ ಮತ್ತು ಸಂಕಟವನ್ನು ಅನುಭವಿಸುವರು

ಅಬು ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಮಾಂಸವನ್ನು ತರಲಾಯಿತು. ಅವರಿಗೆ ತೋಳಿನ ಭಾಗವನ್ನು ನೀಡಲಾಯಿತು. ಅದು ಅವರಿಗೆ ಇಷ್ಟವಾಗಿತ್ತು. ಅವರು ಅದರಿಂದ ಒಂದು ತುಂಡು ಕಚ್ಚಿದರು. ನಂತರ ಹೇಳಿದರು: "ನಾನು ಪುನರುತ್ಥಾನ ದಿನದಂದು ಮನುಷ್ಯರ ಸರದಾರನಾಗಿರುವೆನು. ಅದು ಏಕೆ ಎಂದು ನಿಮಗೆ ತಿಳಿದಿದೆಯೇ? ಅಲ್ಲಾಹು ಮೊದಲಿನಿಂದ ಕೊನೆಯವರೆಗಿನ ಎಲ್ಲಾ ಜನರನ್ನು ಒಂದೇ ಮೈದಾನದಲ್ಲಿ ಒಟ್ಟುಗೂಡಿಸುವನು. ಕರೆಯುವವನ ಧ್ವನಿ ಅವರೆಲ್ಲರಿಗೂ ಕೇಳಿಸುವುದು ಮತ್ತು ದೃಷ್ಟಿಯು ಎಲ್ಲರನ್ನೂ ವ್ಯಾಪಿಸುವುದು. ಸೂರ್ಯನು ಸಮೀಪಕ್ಕೆ ಬರುವನು. ಜನರು ತಾಳಲಾರದಷ್ಟು ಮತ್ತು ಸಹಿಸಲಾಗದಷ್ಟು ದುಃಖ ಮತ್ತು ಸಂಕಟವನ್ನು ಅನುಭವಿಸುವರು. ಆಗ ಜನರು ಹೇಳುವರು: 'ನಿಮಗೆ ಏನಾಗಿದೆ, ನಿಮಗೆ ಕಾಣುತ್ತಿಲ್ಲವೇ? ನಿಮ್ಮ ಪರವಾಗಿ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಶಿಫಾರಸು ಮಾಡುವವರನ್ನು ನೀವು ಹುಡುಕುವುದಿಲ್ಲವೇ?' ಆಗ ಕೆಲವರು ಇತರರಿಗೆ ಹೇಳುವರು: 'ಆದಮ್‌ರ ಬಳಿಗೆ ಹೋಗಿರಿ.' ಆಗ ಅವರು ಆದಮ್ (ಅವರ ಮೇಲೆ ಶಾಂತಿಯಿರಲಿ) ರವರ ಬಳಿಗೆ ಬಂದು ಹೇಳುವರು: 'ನೀವು ಮನುಷ್ಯರ ತಂದೆಯಾಗಿದ್ದೀರಿ, ಅಲ್ಲಾಹು ನಿಮ್ಮನ್ನು ಅವನ ಕೈಯಿಂದ ಸೃಷ್ಟಿಸಿದನು, ಅವನ ಆತ್ಮದಿಂದ ನಿಮ್ಮಲ್ಲಿ ಊದಿದನು ಮತ್ತು ನಿಮಗೆ ಸಾಷ್ಟಾಂಗ ಮಾಡಲು ದೇವದೂತರಿಗೆ ಆದೇಶಿಸಿದನು. ಆದ್ದರಿಂದ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ? ನಾವು ಇರುವ ಸ್ಥಿತಿಯನ್ನು ನೀವು ನೋಡುತ್ತಿಲ್ಲವೇ?' ಆಗ ಆದಮ್ ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ಅವನು ನನ್ನನ್ನು ಒಂದು ಮರದಿಂದ ತಡೆದಿದ್ದನು. ಆದರೆ ನಾನು ಅವನಿಗೆ ಅವಿಧೇಯತೆ ತೋರಿದೆ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ನೂಹ್‌ರ ಬಳಿಗೆ ಹೋಗಿ.' ಆಗ ಅವರು ನೂಹ್‌ರ ಬಳಿಗೆ ಬಂದು ಹೇಳುವರು: 'ಓ ನೂಹ್, ನೀವು ಭೂಮಿಯ ನಿವಾಸಿಗಳಿಗೆ ಕಳುಹಿಸಲ್ಪಟ್ಟ ಮೊದಲ ಸಂದೇಶವಾಹಕರಾಗಿದ್ದೀರಿ. ಅಲ್ಲಾಹು ನಿಮ್ಮನ್ನು ಕೃತಜ್ಞ ದಾಸ ಎಂದು ಕರೆದಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನನಗೆ ಒಂದು ಪ್ರಾರ್ಥನೆ ಇತ್ತು, ಅದನ್ನು ನಾನು ನನ್ನ ಜನರ ವಿರುದ್ಧ ಬಳಸಿದೆ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಇಬ್ರಾಹೀಮ್‌ರ ಬಳಿಗೆ ಹೋಗಿ.' ಆಗ ಅವರು ಇಬ್ರಾಹೀಮ್‌ರ ಬಳಿಗೆ ಬಂದು ಹೇಳುವರು: 'ಓ ಇಬ್ರಾಹೀಮ್, ನೀವು ಅಲ್ಲಾಹನ ಪ್ರವಾದಿ ಮತ್ತು ಭೂಮಿಯ ನಿವಾಸಿಗಳಲ್ಲಿ ಅವನ ಆತ್ಮೀಯ ಸ್ನೇಹಿತರಾಗಿದ್ದೀರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನಾನು ಮೂರು ಸುಳ್ಳುಗಳನ್ನು ಹೇಳಿದ್ದೆನು. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮೂಸಾರ ಬಳಿಗೆ ಹೋಗಿ.' ಆಗ ಅವರು ಮೂಸಾರ ಬಳಿಗೆ ಬಂದು ಹೇಳುವರು: 'ಓ ಮೂಸಾ, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ. ಅಲ್ಲಾಹು ತನ್ನ ಸಂದೇಶದಿಂದ ಮತ್ತು ತನ್ನ ಮಾತಿನಿಂದ ನಿಮ್ಮನ್ನು ಜನರಿಗಿಂತ ಶ್ರೇಷ್ಠರನ್ನಾಗಿ ಮಾಡಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಅವರು ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನಾನು ಒಬ್ಬ ವ್ಯಕ್ತಿಯನ್ನು ಕೊಂದಿದ್ದೆ. ಅವನನ್ನು ಕೊಲ್ಲಲು ನನಗೆ ಆದೇಶಿಸಲಾಗಿರಲಿಲ್ಲ. ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮರ್ಯಮ್‌ರ ಮಗ ಈಸಾರ ಬಳಿಗೆ ಹೋಗಿ.' ಆಗ ಅವರು ಈಸಾರ ಬಳಿಗೆ ಬಂದು ಹೇಳುವರು: 'ಓ ಈಸಾ, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ. ಅವನು ಮರ್ಯಮ್‌ಗೆ ಹಾಕಿಕೊಟ್ಟ ಅವನ ವಚನ ಮತ್ತು ಅವನ ಕಡೆಯ ಆತ್ಮವಾಗಿದ್ದೀರಿ. ನೀವು ತೊಟ್ಟಿಲಲ್ಲಿ ಮಗುವಾಗಿದ್ದಾಗ ಜನರೊಂದಿಗೆ ಮಾತನಾಡಿದ್ದೀರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ಈಸಾ ಹೇಳುವರು: 'ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ.' ಆದರೆ, ಅವರು ಯಾವುದೇ ಪಾಪವನ್ನು ಹೇಳಲಿಲ್ಲ. 'ಓ ನನ್ನ ಪ್ರಾಣ, ಓ ನನ್ನ ಪ್ರಾಣ, ಓ ನನ್ನ ಪ್ರಾಣ! ನೀವು ಬೇರೆಯವರ ಬಳಿಗೆ ಹೋಗಿ, ಮುಹಮ್ಮದ್‌ರ ಬಳಿಗೆ ಹೋಗಿ.' ಆಗ ಅವರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಬಳಿಗೆ ಬಂದು ಹೇಳುವರು: 'ಓ ಮುಹಮ್ಮದ್, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ ಮತ್ತು ಪ್ರವಾದಿಗಳ ಮುದ್ರೆಯಾಗಿದ್ದೀರಿ. ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?' ಆಗ ನಾನು ಹೊರಟು ಅರ್ಶ್‌ನ ಕೆಳಗೆ ಬಂದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಷ್ಟಾಂಗ ಮಾಡುವೆನು. ನಂತರ ಅಲ್ಲಾಹು ತನ್ನ ಸ್ತುತಿಗಳು ಮತ್ತು ಉತ್ತಮ ಪ್ರಶಂಸೆಗಳಲ್ಲಿ ಕೆಲವನ್ನು ನನಗೆ ತೆರೆದುಕೊಡುವನು. ಅದನ್ನು ನನ್ನ ಮೊದಲು ಯಾರಿಗೂ ತೆರೆದುಕೊಡಲಾಗಿರಲಿಲ್ಲ. ನಂತರ ಹೀಗೆ ಹೇಳಲಾಗುವುದು: 'ಓ ಮುಹಮ್ಮದ್, ನಿಮ್ಮ ತಲೆಯನ್ನು ಎತ್ತಿರಿ, ಕೇಳಿರಿ, ನಿಮಗೆ ನೀಡಲಾಗುವುದು, ಶಿಫಾರಸ್ಸು ಮಾಡಿರಿ, ನಿಮ್ಮ ಶಿಫಾರಸ್ಸನ್ನು ಸ್ವೀಕರಿಸಲಾಗುವುದು.' ಆಗ ನಾನು ನನ್ನ ತಲೆಯನ್ನು ಎತ್ತಿ ಹೇಳುವೆನು: 'ಓ ನನ್ನ ಪರಿಪಾಲಕನೇ, ನನ್ನ ಸಮುದಾಯ, ನನ್ನ ಸಮುದಾಯ, ನನ್ನ ಸಮುದಾಯ.' ಆಗ ಹೇಳಲಾಗುವುದು: 'ಓ ಮುಹಮ್ಮದ್, ನಿಮ್ಮ ಸಮುದಾಯದಲ್ಲಿ ಯಾರಿಗೆ ವಿಚಾರಣೆಯಿಲ್ಲವೋ ಅವರನ್ನು ಸ್ವರ್ಗದ ಬಲ ಬಾಗಿಲಿನಿಂದ ಒಳಗೆ ಸೇರಿಸಿರಿ. ಇತರ ಬಾಗಿಲುಗಳಲ್ಲಿ ಅವರು ಇತರ ಜನರೊಂದಿಗೆ ಭಾಗಿಗಳಾಗುವರು.' ನಂತರ ಪ್ರವಾದಿಯವರು ಹೇಳಿದರು: 'ನನ್ನ ಆತ್ಮವು ಯಾರ ಕೈಯಲ್ಲಿದೆಯೋ ಅವನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಸ್ವರ್ಗದ ಬಾಗಿಲುಗಳ ಎರಡು ಕಡೆಗಳ ನಡುವಿನ ಅಂತರವು ಮಕ್ಕಾ ಮತ್ತು ಹಿಮ್ಯರ್‌ನ ನಡುವಿನ ಅಂತರದಷ್ಟಿದೆ ಅಥವಾ ಮಕ್ಕಾ ಮತ್ತು ಬುಸ್ರಾದ ನಡುವಿನ ಅಂತರದಷ್ಟಿದೆ.'"

[صحيح] [متفق عليه]

الشرح

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರೊಂದಿಗೆ ಔತಣಕೂಟದಲ್ಲಿದ್ದರು. ಆಗ ಅವರಿಗೆ ಕುರಿಯ ಭುಜದ ಮಾಂಸವನ್ನು ನೀಡಲಾಯಿತು. ಅದು ಅವರಿಗೆ ಅತ್ಯಂತ ಇಷ್ಟವಾದ ಮಾಂಸದ ಭಾಗವಾಗಿತ್ತು. ಅವರು ತಮ್ಮ ಹಲ್ಲುಗಳ ತುದಿಯಿಂದ ಒಂದು ತುಂಡು ಕಚ್ಚಿ ನಂತರ ಅವರೊಂದಿಗೆ ಮಾತನಾಡುತ್ತಾ ಹೇಳಿದರು: ನಾನು ಪುನರುತ್ಥಾನ ದಿನದಂದು ಆದಮರ ಮಕ್ಕಳ (ಮನುಷ್ಯರ) ಸರದಾರನಾಗಿರುವೆನು. ಇದು ಅಲ್ಲಾಹನ ಅನುಗ್ರಹದ ಬಗ್ಗೆ ಹೇಳಿಕೊಳ್ಳುವುದಾಗಿದೆ. ನಂತರ ಅವರು ಹೇಳಿದರು: "ಅದು ಏಕೆ ಎಂದು ನಿಮಗೆ ತಿಳಿದಿದೆಯೇ?" ಅವರು ಹೇಳಿದರು: "ಏಕೆಂದರೆ ಪುನರುತ್ಥಾನ ದಿನದಂದು ಜನರನ್ನು ಒಂದು ವಿಶಾಲವಾದ ಮತ್ತು ಸಮತಟ್ಟಾದ ಭೂಮಿಯಲ್ಲಿ ಒಟ್ಟುಗೂಡಿಸಲಾಗುವುದು. ಕರೆಯುವವನ ಧ್ವನಿ ಅಲ್ಲಿ ಎಲ್ಲರಿಗೂ ಕೇಳಿಸುವುದು ಮತ್ತು ನೋಡುವವನ ದೃಷ್ಟಿಯು ಅವರೆಲ್ಲರನ್ನೂ ಒಳಗೊಳ್ಳುವುದು. ಯಾರೂ ಯಾರಿಂದಲೂ ಮರೆಯಾಗುವುದಿಲ್ಲ. ಏಕೆಂದರೆ ಭೂಮಿಯು ಸಮತಟ್ಟಾಗಿರುತ್ತದೆ ಮತ್ತು ಅಲ್ಲಿ ಮರೆಮಾಡಲು ಏನೂ ಇರುವುದಿಲ್ಲ. ದೃಷ್ಟಿಯು ಎಲ್ಲರನ್ನೂ ವ್ಯಾಪಿಸುತ್ತದೆ. ಅಂದರೆ ಒಬ್ಬ ವ್ಯಕ್ತಿ ಮಾತನಾಡಿದರೆ ಕೊನೆಯ ವ್ಯಕ್ತಿಗೂ ಅದು ಕೇಳಿಸುತ್ತದೆ ಮತ್ತು ದೃಷ್ಟಿಯು ಅವರನ್ನು ನೋಡುತ್ತದೆ. ಸೂರ್ಯನು ಸೃಷ್ಟಿಗಳಿಗೆ ಒಂದು ಮೈಲಿಯಷ್ಟು ಸಮೀಪವಾಗುತ್ತಾನೆ. ಜನರಿಗೆ ದುಃಖ ಮತ್ತು ಸಂಕಟವು ತಾಳಲಾರದ ಮತ್ತು ಸಹಿಸಲಾಗದ ಮಟ್ಟಕ್ಕೆ ತಲುಪುತ್ತದೆ. ಆಗ ಅವರು ಶಿಫಾರಸ್ಸಿನ ಮೂಲಕ ಪಾರಾಗಲು ಬಯಸುವರು. ಆಗ ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಮನುಷ್ಯರ ತಂದೆಯಾದ ಆದಮ್‌ರ ಬಳಿಗೆ ಹೋಗಲು ಪ್ರೇರೇಪಿಸುವನು. ಆಗ ಅವರು ಆದಮ್‌ರ ಬಳಿಗೆ ಬಂದು ಅವರ ಶ್ರೇಷ್ಠತೆಯನ್ನು ನೆನಪಿಸುವರು. ಬಹುಶಃ ಅವರು ಅಲ್ಲಾಹನ ಬಳಿ ಅವರಿಗಾಗಿ ಶಿಫಾರಸ್ಸು ಮಾಡಬಹುದು ಎಂಬ ನಿರೀಕ್ಷೆಯಿಂದ. ಅವರು ಹೇಳುವರು: "ನೀವು ಆದಮ್, ಮನುಷ್ಯರ ತಂದೆಯಾಗಿದ್ದೀರಿ. ಅಲ್ಲಾಹನು ತನ್ನ ಕೈಯಿಂದ ನಿಮ್ಮನ್ನು ಸೃಷ್ಟಿಸಿದನು. ನಿಮಗೆ ಸಾಷ್ಟಾಂಗ ಮಾಡಲು ದೇವದೂತರಿಗೆ ಆದೇಶಿಸಿದನು. ಎಲ್ಲದರ ಹೆಸರುಗಳನ್ನು ನಿಮಗೆ ಕಲಿಸಿದನು. ತನ್ನ ಆತ್ಮದಿಂದ ನಿಮಗೆ ಊದಿದನು." ಆದರೆ ಆದಮ್ ತಪ್ಪಿಸಿಕೊಳ್ಳುತ್ತಾ ಹೇಳುವರು: "ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ." ನಂತರ ಅವರು ತಮ್ಮ ತಪ್ಪನ್ನು ನೆನಪಿಸಿಕೊಳ್ಳುವರು. ಅದೇನೆಂದರೆ ಅಲ್ಲಾಹು ಒಂದು ಮರದಿಂದ ತಿನ್ನದಂತೆ ತಡೆದಿದ್ದರೂ ಅವರು ಅದರಿಂದ ತಿಂದಿದ್ದರು. ಅವರು ಹೇಳುವರು: "ನನ್ನ ಪ್ರಾಣಕ್ಕೆ ಶಿಫಾರಸು ಬೇಕಾಗಿದೆ. ನೀವು ಬೇರೆಯವರ ಬಳಿಗೆ ಹೋಗಿ, ನೂಹ್‌ರ ಬಳಿಗೆ ಹೋಗಿ." ಆಗ ಅವರು ನೂಹ್‌ರ ಬಳಿಗೆ ಬಂದು ಹೇಳುವರು: "ನೀವು ಭೂಮಿಯ ನಿವಾಸಿಗಳಿಗೆ ಅಲ್ಲಾಹನು ಕಳುಹಿಸಿದ ಮೊದಲ ಸಂದೇಶವಾಹಕರಾಗಿದ್ದೀರಿ. ಅಲ್ಲಾಹು ನಿಮ್ಮನ್ನು ಕೃತಜ್ಞ ದಾಸ ಎಂದು ಕರೆದಿದ್ದಾನೆ," ಆದರೆ ಅವರು ತಪ್ಪಿಸಿಕೊಳ್ಳುತ್ತಾ ಹೇಳುವರು: "ಅಲ್ಲಾಹನು ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನನಗೆ ಒಂದು ಪ್ರಾರ್ಥನೆ ಇತ್ತು. ಅದನ್ನು ನಾನು ನನ್ನ ಜನರ ವಿರುದ್ಧ ಬಳಸಿದೆ. ನನ್ನ ಪ್ರಾಣಕ್ಕೆ ಶಿಫಾರಸು ಬೇಕಾಗಿದೆ. ನೀವು ಬೇರೆಯವರ ಬಳಿಗೆ ಹೋಗಿ, ಇಬ್ರಾಹೀಮ್‌ರ ಬಳಿಗೆ ಹೋಗಿ." ಆಗ ಅವರು ಇಬ್ರಾಹೀಮ್‌ರ ಬಳಿಗೆ ಬಂದು ಹೇಳುವರು: "ನೀವು ಭೂಮಿಯಲ್ಲಿ ಅಲ್ಲಾಹನ ಆತ್ಮೀಯ ಸ್ನೇಹಿತರಾಗಿದ್ದೀರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?!" ಆಗ ಅವರು ಹೇಳುವರು: "ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನಾನು ಮೂರು ಸುಳ್ಳುಗಳನ್ನು ಹೇಳಿದ್ದೆನು." ಆ ಸುಳ್ಳುಗಳು ಯಾವುದೆಂದರೆ: "ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ," "ಇದನ್ನು ಅವರಲ್ಲಿನ ದೊಡ್ಡವನಾದ ಇವನು ಮಾಡಿದ್ದಾನೆ," ಮತ್ತು "ತನ್ನ ಪತ್ನಿ ಸಾರಾಳಿಗೆ ನಾನು ನಿನ್ನ ಸಹೋದರ ಎಂದು ಹೇಳು, ಇದರಿಂದ ಅವಳು ಅವನ (ಅರಸನ) ಕ್ರೌರ್ಯದಿಂದ ಪಾರಾಗಬಹುದು." ಎಂದು ಹೇಳಿದ್ದು. ಸತ್ಯವೇನೆಂದರೆ, ಆ ಮೂರು ಮಾತುಗಳು ವಾಕ್ಚಾತುರ್ಯದ ಮಾತುಗಳಾಗಿದ್ದವು. ಆದರೆ ಅವು ಸುಳ್ಳಿನಂತೆ ಕಾಣುತ್ತಿದ್ದ ಕಾರಣ, ಅವರು ತಮ್ಮನ್ನು ತಾವೇ ಶಿಫಾರಸ್ಸು ಮಾಡಲು ಚಿಕ್ಕವನೆಂದು ಭಾವಿಸಿ ಭಯಪಟ್ಟರು. ಏಕೆಂದರೆ ಅಲ್ಲಾಹನನ್ನು ಹೆಚ್ಚು ತಿಳಿದಿರುವವನು ಮತ್ತು (ಅವನ ಬಳಿ) ಹೆಚ್ಚು ಉನ್ನತ ಸ್ಥಾನವನ್ನು ಹೊಂದಿರುವವನು ಅವನನ್ನು ಹೆಚ್ಚು ಭಯಪಡುತ್ತಾನೆ. ಅವರು ಹೇಳುವರು: "ನನ್ನ ಪ್ರಾಣಕ್ಕೆ ಶಿಫಾರಸು ಬೇಕಾಗಿದೆ. ನೀವು ಬೇರೆಯವರ ಬಳಿಗೆ ಹೋಗಿ, ಮೂಸಾರ ಬಳಿಗೆ ಹೋಗಿ." ಆಗ ಅವರು ಮೂಸಾರ ಬಳಿಗೆ ಬಂದು ಹೇಳುವರು: "ಓ ಮೂಸಾ, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ. ಅಲ್ಲಾಹನು ತನ್ನ ಸಂದೇಶ ಮತ್ತು ತನ್ನ ಮಾತಿನಿಂದ ನಿಮ್ಮನ್ನು ಇತರ ಜನರಿಗಿಂತ ಶ್ರೇಷ್ಠಗೊಳಿಸಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?!" ಆಗ ಅವರು ಹೇಳುವರು: "ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ. ನಾನು ಒಬ್ಬ ವ್ಯಕ್ತಿಯನ್ನು ಕೊಂದಿದ್ದೆ. ಅವನನ್ನು ಕೊಲ್ಲಲು ನನಗೆ ಆದೇಶವಿರಲಿಲ್ಲ. ನನ್ನ ಪ್ರಾಣಕ್ಕೆ ಶಿಫಾರಸು ಬೇಕಾಗಿದೆ. ನೀವು ಬೇರೆಯವರ ಬಳಿಗೆ ಹೋಗಿ, ಮರ್ಯಮ್‌ರ ಮಗ ಈಸಾರ ಬಳಿಗೆ ಹೋಗಿ." ಆಗ ಅವರು ಈಸಾರ ಬಳಿಗೆ ಬಂದು ಹೇಳುವರು: "ಓ ಈಸಾ, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ. ಅವನು ಮರ್ಯಮ್‌ಗೆ ಹಾಕಿಕೊಟ್ಟ ಅವನ ವಚನ ಮತ್ತು ಅವನ ಕಡೆಯ ಆತ್ಮವಾಗಿದ್ದೀರಿ. ನೀವು ತೊಟ್ಟಿಲಲ್ಲಿ ಮಗುವಾಗಿದ್ದಾಗ ಜನರೊಂದಿಗೆ ಮಾತನಾಡಿದ್ದೀರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?!" ಆಗ ಈಸಾ ಹೇಳುವರು: "ನನ್ನ ಪರಿಪಾಲಕನು (ಅಲ್ಲಾಹು) ಇಂದು ಹಿಂದೆಂದೂ ಕೋಪಗೊಳ್ಳದಷ್ಟು ಮತ್ತು ಮುಂದೆಂದೂ ಕೋಪಗೊಳ್ಳದಷ್ಟು ಕೋಪಗೊಂಡಿದ್ದಾನೆ." ಆದರೆ, ಅವರು ಯಾವುದೇ ಪಾಪವನ್ನು ಹೇಳಲಿಲ್ಲ. "ನನ್ನ ಪ್ರಾಣಕ್ಕೆ ಶಿಫಾರಸು ಬೇಕಾಗಿದೆ. ನೀವು ಬೇರೆಯವರ ಬಳಿಗೆ ಹೋಗಿ, ಮುಹಮ್ಮದ್‌ರ ಬಳಿಗೆ ಹೋಗಿ." ಆಗ ಅವರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಬಳಿಗೆ ಬಂದು ಹೇಳುವರು: "ಓ ಮುಹಮ್ಮದ್, ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ ಮತ್ತು ಪ್ರವಾದಿಗಳ ಮುದ್ರೆಯಾಗಿದ್ದೀರಿ. ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಮಗಾಗಿ ಶಿಫಾರಸ್ಸು ಮಾಡಿ. ನಾವು ಅನುಭವಿಸುತ್ತಿರುವ ಕಷ್ಟ ನಿಮಗೆ ಕಾಣುತ್ತಿಲ್ಲವೇ?!" ಆಗ ನಾನು ಹೊರಟು ಅರ್ಶ್‌ನ ಕೆಳಗೆ ಬಂದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಷ್ಟಾಂಗ ಮಾಡುವೆನು. ನಂತರ ಅಲ್ಲಾಹು ತನ್ನ ಸ್ತುತಿಗಳು ಮತ್ತು ಉತ್ತಮ ಪ್ರಶಂಸೆಗಳಲ್ಲಿ ಕೆಲವನ್ನು ನನಗೆ ತೆರೆದುಕೊಡುವನು. ಅದನ್ನು ನನ್ನ ಮೊದಲು ಯಾರಿಗೂ ತೆರೆದುಕೊಡಲಾಗಿರಲಿಲ್ಲ. ನಂತರ ಹೀಗೆ ಹೇಳಲಾಗುವುದು: "ಓ ಮುಹಮ್ಮದ್, ನಿಮ್ಮ ತಲೆಯನ್ನು ಎತ್ತಿರಿ, ಕೇಳಿರಿ, ನಿಮಗೆ ನೀಡಲಾಗುವುದು, ಶಿಫಾರಸ್ಸು ಮಾಡಿರಿ, ನಿಮ್ಮ ಶಿಫಾರಸ್ಸನ್ನು ಸ್ವೀಕರಿಸಲಾಗುವುದು." ಆಗ ನಾನು ನನ್ನ ತಲೆಯನ್ನು ಎತ್ತಿ ಹೇಳುವೆನು: "ಓ ನನ್ನ ಪರಿಪಾಲಕನೇ, ನನ್ನ ಸಮುದಾಯ, ನನ್ನ ಸಮುದಾಯ, ನನ್ನ ಸಮುದಾಯ." ಆಗ ಅವರ ಶಿಫಾರಸ್ಸನ್ನು ಸ್ವೀಕರಿಸಲಾಗುವುದು. ಆಗ ಅವರೊಡನೆ ಹೇಳಲಾಗುವುದು: "ಓ ಮುಹಮ್ಮದ್, ನಿಮ್ಮ ಸಮುದಾಯದಲ್ಲಿ ಯಾರಿಗೆ ವಿಚಾರಣೆಯಿಲ್ಲವೋ ಅವರನ್ನು ಸ್ವರ್ಗದ ಬಲ ಬಾಗಿಲಿನಿಂದ ಒಳಗೆ ಸೇರಿಸಿರಿ. ಇತರ ಬಾಗಿಲುಗಳಲ್ಲಿ ಅವರು ಇತರ ಜನರೊಂದಿಗೆ ಭಾಗಿಗಳಾಗುವರು." ನಂತರ ಪ್ರವಾದಿಯವರು ಹೇಳಿದರು: 'ನನ್ನ ಆತ್ಮವು ಯಾರ ಕೈಯಲ್ಲಿದೆಯೋ ಅವನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಸ್ವರ್ಗದ ಬಾಗಿಲುಗಳ ಎರಡು ಕಡೆಗಳ ನಡುವಿನ ಅಂತರವು ಮಕ್ಕಾ ಮತ್ತು ಯಮನ್‌ನ ಸನ್'ಆ ನಡುವಿನ ಅಂತರದಷ್ಟಿದೆ, ಅಥವಾ ಮಕ್ಕಾ ಮತ್ತು ಶಾಮ್‌ನ ಬುಸ್ರಾ ನಗರದ ನಡುವಿನ ಅಂತರದಷ್ಟಿದೆ. ಅದು ಹೌರಾನ್‌ನ ಒಂದು ನಗರವಾಗಿದೆ."

فوائد الحديث

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಮ್ರತೆಯನ್ನು, ಅವರು ಕರೆಯೋಲೆಯನ್ನು ಸ್ವೀಕರಿಸುವುದನ್ನು ಹಾಗೂ ತಮ್ಮ ಸಾಮಾನ್ಯ ಸಹಚರರೊಂದಿಗೆ ಆಹಾರ ಸೇವಿಸುವುದನ್ನು ತಿಳಿಸಲಾಗಿದೆ.

ನಮ್ಮ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇತರೆಲ್ಲಾ ಜನರಿಗಿಂತ ಶ್ರೇಷ್ಠರಾಗಿದ್ದಾರೆ.

ಖಾದಿ ಇಯಾದ್ ಹೇಳುತ್ತಾರೆ: "ಹೀಗೆ ಹೇಳಲಾಗಿದೆ: ಸರದಾರ ಎಂದರೆ ತನ್ನ ಜನರಿಗಿಂತ ಮೇಲಿರುವವನು ಮತ್ತು ಕಷ್ಟದ ಸಮಯದಲ್ಲಿ ಮೊರೆ ಹೋಗಲಾಗುವವನು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಹಲೋಕ ಮತ್ತು ಪರಲೋಕದಲ್ಲಿ ಮನುಷ್ಯರ ಸರದಾರರಾಗಿದ್ದಾರೆ. ಇಲ್ಲಿ ಪುನರುತ್ಥಾನ ದಿನವನ್ನು ವಿಶೇಷವಾಗಿ ಉಲ್ಲೇಖಿಸಿದ್ದು ಏಕೆಂದರೆ ಆ ದಿನದಲ್ಲಿ ಈ ಶ್ರೇಷ್ಠತೆಯು ಎದ್ದು ಕಾಣುತ್ತದೆ ಮತ್ತು ಎಲ್ಲರೂ ಅವರಿಗೆ ಶರಣಾಗುತ್ತಾರೆ. ಆದಮ್ ಮತ್ತು ಅವರ ಎಲ್ಲಾ ಮಕ್ಕಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧ್ವಜದ ಕೆಳಗಿರುತ್ತಾರೆ."

ಅಲ್ಲಾಹು ಮೊದಲಿಗೆ ಆದಮ್‌ರನ್ನು ಕೇಳಲು, ಆಮೇಲೆ ಅವರ ನಂತರದ ಪ್ರವಾದಿಗಳನ್ನು ಕೇಳಲು ಪ್ರೇರೇಪಿಸಿದನು, ಮತ್ತು ನಮ್ಮ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಕೇಳಲು ಪ್ರೇರೇಪಿಸಲಿಲ್ಲ. ಇದಕ್ಕೆ ಕಾರಣ ಅವರ ಶ್ರೇಷ್ಠತೆಯನ್ನು ತೋರಿಸುವುದಾಗಿದೆ. ಏಕೆಂದರೆ ಅವರು (ಅಲ್ಲಾಹನ ಬಳಿ) ಶ್ರೇಷ್ಠತೆಯ ಪರಾಕಾಷ್ಠೆಯಲ್ಲಿದ್ದಾರೆ ಮತ್ತು ಪರಿಪೂರ್ಣ ಸಾಮೀಪ್ಯವನ್ನು ಹೊಂದಿದ್ದಾರೆ.

ಒಬ್ಬ ವ್ಯಕ್ತಿಯೊಡನೆ ತನ್ನ ಅಗತ್ಯವನ್ನು ಕೇಳಲು ಬಯಸಿದರೆ, ಕೇಳಲಾಗುವ ವ್ಯಕ್ತಿಯ ಉತ್ತಮ ಗುಣಗಳನ್ನು ಉಲ್ಲೇಖಿಸುವುದು ನಿಯಮವಾಗಿದೆ. ಏಕೆಂದರೆ ಇದರಿಂದ ಉತ್ತರ ಸಿಗುವ ಸಾಧ್ಯತೆ ಹೆಚ್ಚಾಗಲು ಕಾರಣವಾಗುತ್ತದೆ.

ತನ್ನಿಂದ ಸಾಧ್ಯವಿಲ್ಲದ ವಿಷಯದ ಬಗ್ಗೆ ತನ್ನಲ್ಲಿ ಕೇಳಲಾದರೆ, ಸಕಾರಣವನ್ನು ನೀಡಿ ತಪ್ಪಿಸಿಕೊಳ್ಳಬಹುದು. ಹಾಗೆಯೇ ಅದನ್ನು ಮಾಡಲು ಹೆಚ್ಚು ಸಮರ್ಥನೆಂದು ತಾನು ಭಾವಿಸುವ ವ್ಯಕ್ತಿಯನ್ನು ತೋರಿಸುವುದು ಅಪೇಕ್ಷಣೀಯವಾಗಿದೆ.

ಪುನರುತ್ಥಾನ ದಿನದಂದು ಅಲ್ಲಿ ನಿಲ್ಲುವ ಭಯಾನಕತೆಯನ್ನು ಮತ್ತು ಆ ಮೈದಾನವು ಮನುಷ್ಯರಿಗೆ ಎಷ್ಟು ಕಠಿಣವಾಗಿದೆಯೆಂದು ವಿವರಿಸಲಾಗಿದೆ.

ಪ್ರವಾದಿಗಳ ವಿನಯವನ್ನು ತಿಳಿಸಲಾಗಿದೆ. ಏಕೆಂದರೆ ತಾವು ಆ ಸ್ಥಾನಕ್ಕೆ ಅರ್ಹರಲ್ಲ ಎಂದು ತಿಳಿಯುವಂತೆ ಮಾಡಲು ಅವರು ತಮ್ಮ ಹಿಂದಿನ ತಪ್ಪುಗಳನ್ನು ನೆನಪಿಸಿಕೊಳ್ಳುತ್ತಾರೆ.

ಪುನರುತ್ಥಾನ ದಿನದಂದು ಮಹಾ ಶಿಫಾರಸ್ಸು ಇದೆಯೆಂದು ದೃಢೀಕರಿಸಲಾಗಿದೆ. ಅದು ಸೃಷ್ಟಿಗಳ ನಡುವೆ ತೀರ್ಪು ನೀಡಲು ಮಾಡುವ ಶಿಫಾರಸ್ಸು ಆಗಿದೆ.

ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಸೀಲಾ ಮತ್ತು ಮಕಾಮೆ ಮಹ್ಮೂದ್ ಎಂಬ ಸ್ಥಾನಗಳಿರುವುದನ್ನು ದೃಢೀಕರಿಸಲಾಗಿದೆ.

ಅಲ್ಲಾಹನ ಗುಣಗಾನಗಳಿಗೆ ಅಂತ್ಯವಿಲ್ಲ. ಈ ಕಾರಣದಿಂದಲೇ ಅಲ್ಲಾಹು ಈ ಸ್ಥಾನದಲ್ಲಿ ತನ್ನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು ಸ್ತುತಿಸುವ ಉತ್ತಮ ಪ್ರಶಂಸೆಗಳನ್ನು ತೆರೆದುಕೊಡುತ್ತಾನೆ. ಅದನ್ನು ಅವನು ಅವರ ಮೊದಲು ಯಾರಿಗೂ ತೆರೆದುಕೊಟ್ಟಿರಲಿಲ್ಲ.

ಮುಹಮ್ಮದ್‌ರ ಸಮುದಾಯವು ಅತ್ಯುತ್ತಮ ಸಮುದಾಯವೆಂದು ವಿವರಿಸಲಾಗಿದೆ. ಸ್ವರ್ಗವನ್ನು ಪ್ರವೇಶಿಸುವ ವಿಷಯದಲ್ಲಿ ಅವರಿಗೆ ಕೆಲವು ವಿಶೇಷತೆಗಳಿವೆ. ವಿಚಾರಣೆಯಿಲ್ಲದವರು ಅವರಿಗಾಗಿಯೇ ಮೀಸಲಾದ ವಿಶೇಷ ಬಾಗಿಲಿನಿಂದ ಪ್ರವೇಶಿಸುತ್ತಾರೆ. ಉಳಿದ ಬಾಗಿಲುಗಳಲ್ಲಿ ಅವರು ಇತರ ಜನರೊಂದಿಗೆ ಭಾಗಿಗಳಾಗುತ್ತಾರೆ.

التصنيفات

The Hereafter Life