ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಪ್ಪು ಮತ್ತು ಬಿಳಿ ಬಣ್ಣದ, ಕೊಂಬುಗಳಿರುವ ಎರಡು ಟಗರುಗಳನ್ನು ಬಲಿ…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಪ್ಪು ಮತ್ತು ಬಿಳಿ ಬಣ್ಣದ, ಕೊಂಬುಗಳಿರುವ ಎರಡು ಟಗರುಗಳನ್ನು ಬಲಿ ನೀಡಿದರು. ಅವರು ತಮ್ಮ ಕೈಯಿಂದಲೇ ಅವುಗಳನ್ನು ವಧಿಸಿದರು. ಅವರು "ಬಿಸ್ಮಿಲ್ಲಾಹಿ ವಲ್ಲಾಹು ಅಕ್ಬರ್" ಎಂದು ಹೇಳಿದರು ಮತ್ತು ಅವುಗಳ ಕೊರಳುಗಳ ಮೇಲೆ ತಮ್ಮ ಪಾದವನ್ನಿಟ್ಟರು

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಪ್ಪು ಮತ್ತು ಬಿಳಿ ಬಣ್ಣದ, ಕೊಂಬುಗಳಿರುವ ಎರಡು ಟಗರುಗಳನ್ನು ಬಲಿ ನೀಡಿದರು. ಅವರು ತಮ್ಮ ಕೈಯಿಂದಲೇ ಅವುಗಳನ್ನು ವಧಿಸಿದರು. ಅವರು "ಬಿಸ್ಮಿಲ್ಲಾಹಿ ವಲ್ಲಾಹು ಅಕ್ಬರ್" ಎಂದು ಹೇಳಿದರು ಮತ್ತು ಅವುಗಳ ಕೊರಳುಗಳ ಮೇಲೆ ತಮ್ಮ ಪಾದವನ್ನಿಟ್ಟರು.

[صحيح] [متفق عليه]

الشرح

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಕ್ರೀದ್ ಹಬ್ಬದಂದು ಕಪ್ಪು ಮತ್ತು ಬಳಿ ಮಿಶ್ರಿತ ಬಣ್ಣವನ್ನು ಹೊಂದಿರುವ ಕೊಂಬುಗಳಿರುವ ಎರಡು ಟಗರುಗಳನ್ನು ತಮ್ಮ ಕೈಯಿಂದಲೇ ಬಲಿ ನೀಡಿದರು. ಬಲಿ ನೀಡುವಾಗ "ಬಿಸ್ಮಿಲ್ಲಾಹಿ ವಲ್ಲಾಹು ಅಕ್ಬರ್" ಎಂದು ಹೇಳಿದರು ಮತ್ತು ತಮ್ಮ ಪಾದವನ್ನು ಅವುಗಳ ಕೊರಳುಗಳಲ್ಲಿಟ್ಟರು.

فوائد الحديث

ಉದ್‌ಹಿಯ (ಕುರ್ಬಾನಿ) ಮಾಡುವುದು ಧರ್ಮನಿಯಮವಾಗಿದೆ. ಈ ವಿಷಯದಲ್ಲಿ ಮುಸಲ್ಮಾನ ವಿದ್ವಾಂಸರ ನಡುವೆ ಒಮ್ಮತಾಭಿಪ್ರಾಯವಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಲಿ ನೀಡಿದ ಅದೇ ರೀತಿಯ ಮೃಗವನ್ನು ಕುರ್ಬಾನಿ ಮಾಡುವುದು ಶ್ರೇಷ್ಠವಾಗಿದೆ. ಏಕೆಂದರೆ ಅದು ನೋಡಲು ಸುಂದರವಾಗಿರುತ್ತದೆ ಮತ್ತು ಅದರ ಕೊಬ್ಬು ಮತ್ತು ಮಾಂಸವು ಉತ್ತಮವಾಗಿರುತ್ತದೆ.

ನವವಿ ಹೇಳಿದರು: "ಮನುಷ್ಯನು ತನ್ನ ಕುರ್ಬಾನಿಯನ್ನು ಸ್ವತಃ ತಾನೇ ಕೊಯ್ಯುವುದು ಅಪೇಕ್ಷಣೀಯವೆಂದು ಇದರಿಂದ ತಿಳಿಯಬಹುದು. ಸಕಾರಣವಿಲ್ಲದೆ ಕುರ್ಬಾನಿ ಮಾಡುವ ಹೊಣೆಯನ್ನು ಇತರರಿಗೆ ವಹಿಸಿಕೊಡಬಾರದು. ಅಂತಹ ಸಂದರ್ಭಗಳಲ್ಲಿ ಅಲ್ಲಿ ಸ್ವತಃ ಹಾಜರಿರಬೇಕು. ಆದರೆ, ಕುರ್ಬಾನಿ ಮಾಡುವ ಹೊಣೆಯನ್ನು ಇತರರಿಗೆ ವಹಿಸಿಕೊಟ್ಟರೆ ಕುರ್ಬಾನಿ ಸಿಂಧುವಾಗುತ್ತದೆ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ."

ಇಬ್ನ್ ಹಜರ್ ಹೇಳಿದರು: "ಕೊಯ್ಯುವಾಗ ಬಿಸ್ಮಿಲ್ಲಾಹ್ ಜೊತೆಗೆ ಅಲ್ಲಾಹು ಅಕ್ಬರ್ ಹೇಳುವುದು ಹಾಗೂ ಕುರ್ಬಾನಿ ಮೃಗದ ಕೊರಳಿನ ಮೇಲೆ ಬಲಗಾಲನ್ನಿಡುವುದು ಅಪೇಕ್ಷಣೀಯವೆಂದು ಇದರಿಂದ ತಿಳಿಯಬಹುದು. ಬಲಿಮೃಗವನ್ನು ಎಡಭಾಗಕ್ಕೆ ಮಲಗಿಸಿ, ಅದರ ಕೊರಳಿನ ಬಲಭಾಗದ ಮೇಲೆ ಕಾಲನ್ನಿಡುವುದರಿಂದ ಕೊಯ್ಯುವವನಿಗೆ ತನ್ನ ಬಲಗೈಯಲ್ಲಿ ಚಾಕು ಮತ್ತು ಎಡಗೈಯಲ್ಲಿ ಅದರ ತಲೆಯನ್ನು ಹಿಡಿದುಕೊಳ್ಳಲು ಸುಲಭವಾಗುತ್ತದೆ ಎಂದು ವಿದ್ವಾಂಸರು ಒಮ್ಮತಾಭಿಪ್ರಾಯದಿಂದ ಹೇಳಿದ್ದಾರೆ."

ಕೊಂಬುಗಳಿರುವ ಮೃಗವನ್ನು ಬಲಿ ನೀಡುವುದು ಅಪೇಕ್ಷಣೀಯವಾಗಿದೆ. ಕೊಂಬಿಲ್ಲದಿದ್ದರೂ ಕುರ್ಬಾನಿ ಸಿಂಧುವಾಗುತ್ತದೆ.

التصنيفات

Slaughtering, Sacrifice