ಓ ಅಲ್ಲಾಹ್! ನಾನು ನಿನ್ನಲ್ಲಿ ಸಾಲದ ಪ್ರಾಬಲ್ಯದಿಂದ, ಶತ್ರುಗಳ ಪ್ರಾಬಲ್ಯದಿಂದ ಮತ್ತು ಶತ್ರುಗಳು ಸಂಭ್ರಮಿಸುವುದರಿಂದ ರಕ್ಷೆ…

ಓ ಅಲ್ಲಾಹ್! ನಾನು ನಿನ್ನಲ್ಲಿ ಸಾಲದ ಪ್ರಾಬಲ್ಯದಿಂದ, ಶತ್ರುಗಳ ಪ್ರಾಬಲ್ಯದಿಂದ ಮತ್ತು ಶತ್ರುಗಳು ಸಂಭ್ರಮಿಸುವುದರಿಂದ ರಕ್ಷೆ ಬೇಡುತ್ತೇನೆ

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದ್ದರು: "ಓ ಅಲ್ಲಾಹ್! ನಾನು ನಿನ್ನಲ್ಲಿ ಸಾಲದ ಪ್ರಾಬಲ್ಯದಿಂದ, ಶತ್ರುಗಳ ಪ್ರಾಬಲ್ಯದಿಂದ ಮತ್ತು ಶತ್ರುಗಳು ಸಂಭ್ರಮಿಸುವುದರಿಂದ ರಕ್ಷೆ ಬೇಡುತ್ತೇನೆ."

[صحيح] [رواه النسائي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಕೆಳಗಿನ ವಿಷಯಗಳ ಬಗ್ಗೆ ರಕ್ಷೆ ಬೇಡುತ್ತಿದ್ದರು: ಒಂದು: "ಓ ಅಲ್ಲಾಹ್! ರಕ್ಷೆ ಬೇಡುತ್ತೇನೆ." ಅಂದರೆ ನಿನ್ನಲ್ಲಿ ಮಾತ್ರ ಆಶ್ರಯ ಮತ್ತು ಅಭಯ ಯಾಚಿಸುತ್ತೇನೆ. "ಸಾಲದ ಪ್ರಾಬಲ್ಯದಿಂದ" ಅಂದರೆ ಅದರ ಒತ್ತಡ, ವ್ಯಥೆ ಮತ್ತು ದುಃಖದಿಂದ ರಕ್ಷೆ ಬೇಡುತ್ತೇನೆ ಮತ್ತು ಅದನ್ನು ತೀರಿಸಲು ನನಗೆ ಸಹಾಯ ಮಾಡಬೇಕೆಂದು ಬೇಡುತ್ತೇನೆ. ಎರಡು: "ಶತ್ರುಗಳ ಪ್ರಾಬಲ್ಯದಿಂದ" ಅಂದರೆ, ಅವರು ನನ್ನ ಮೇಲೆ ನಿರಂಕುಶಾಧಿಕಾರ ಚಲಾಯಿಸುವುದರಿಂದ ನಾನು ರಕ್ಷೆ ಬೇಡುತ್ತೇನೆ. ಅವರ ಉಪಟಳಗಳನ್ನು ಕೊನೆಗೊಳಿಸುವಂತೆ ಮತ್ತು ಅವರ ಮೇಲೆ ವಿಜಯ ದಯಪಾಲಿಸುವಂತೆ ಬೇಡುತ್ತೇನೆ. ಮೂರು: "ಶತ್ರುಗಳು ಸಂಭ್ರಮಿಸುವುದರಿಂದ" ಅಂದರೆ, ಮುಸ್ಲಿಮರಿಗೆ ಸಂಕಷ್ಟ ಮತ್ತು ದುರಂತಗಳು ಬಾಧಿಸುವುದನ್ನು ಕಂಡು ಅವರು ಸಂಭ್ರಮ ಪಡುವುದರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.

فوائد الحديث

ಅಲ್ಲಾಹನಿಗೆ ವಿಧೇಯತೆ ತೋರುವ ವಿಷಯಗಳಿಂದ ಇತರ ವಿಷಯಗಳಿಗೆ ಹೊರಳಿ ಅದರಲ್ಲೇ ಮಗ್ನವಾಗುವಂತೆ ಮಾಡುವ ಮತ್ತು ವ್ಯಥೆ ಹಾಗೂ ದುಃಖಕ್ಕೆ ಕಾರಣವಾಗುವ ಸಾಲ ಮುಂತಾದ ವಿಷಯಗಳ ಬಗ್ಗೆ ರಕ್ಷೆ ಬೇಡಬೇಕೆಂದು ಉತ್ತೇಜಿಸಲಾಗಿದೆ.

ಸಾಮಾನ್ಯವಾಗಿ ಸಾಲದಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ಸಾಲವನ್ನು ತೀರಿಸಲಾಗದಂತಹ ಪರಿಸ್ಥಿತಿ ಉಂಟಾಗುವಾಗ ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನೇ ಪ್ರಾಬಲ್ಯವಿರುವ (ಅಧಿಕಾರವಿರುವ) ಸಾಲವೆಂದು ಕರೆಯಲಾಗಿದೆ.

ಒಬ್ಬ ವ್ಯಕ್ತಿ ತನ್ನ ಬಗ್ಗೆ ಇತರರು ಸಂಭ್ರಮಪಡುವ ಮತ್ತು ತನ್ನನ್ನು ಟೀಕಿಸುವ ವಿಷಯಗಳಿಂದ ದೂರವಿರಬೇಕಾದುದು ಅತ್ಯಾವಶ್ಯಕ.

ಸತ್ಯವಿಶ್ವಾಸಿಗಳ ಮೇಲೆ ಸತ್ಯನಿಷೇಧಿಗಳಿಗಿರುವ ದ್ವೇಷ ಹಾಗೂ ಮುಸ್ಲಿಮರಿಗೆ ದುರಂತ ಸಂಭವಿಸುವಾಗ ಅವರು ಸಂಭ್ರಮಪಡುವುದನ್ನು ವಿವರಿಸಲಾಗಿದೆ.

ಒಬ್ಬ ವ್ಯಕ್ತಿ ತನಗೆ ಬಾಧಿಸುವ ಸಂಕಷ್ಟಗಳಿಗಿಂತಲೂ ಹೆಚ್ಚು ತನ್ನ ಕಷ್ಟವನ್ನು ಕಂಡು ತನ್ನ ಶತ್ರುಗಳು ಸಂಭ್ರಮಿಸುವುದು ಅವನಿಗೆ ಸಹಿಸಲು ಸಾಧ್ಯವಾಗಿದ ವಿಷಯವಾಗಿದೆ .

التصنيفات

Reported Supplications