ಸತ್ಯಕ್ಕೆ ನಿಷ್ಠರಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸತ್ಯವು ಒಳಿತಿಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ

ಸತ್ಯಕ್ಕೆ ನಿಷ್ಠರಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸತ್ಯವು ಒಳಿತಿಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯಕ್ಕೆ ನಿಷ್ಠರಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸತ್ಯವು ಒಳಿತಿಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ. ಒಬ್ಬ ಮನುಷ್ಯನು ಅಲ್ಲಾಹನ ಬಳಿ ಅತ್ಯಂತ ಸತ್ಯವಂತನೆಂದು ದಾಖಲಿಸಲ್ಪಡುವವರೆಗೂ ಸತ್ಯವನ್ನು ಹೇಳುತ್ತಲೇ ಇರುತ್ತಾನೆ ಮತ್ತು ಸತ್ಯಕ್ಕಾಗಿ ಪರಿಶ್ರಮಿಸುತ್ತಲೇ ಇರುತ್ತಾನೆ. ಸುಳ್ಳಿನ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸುಳ್ಳು ಕೆಡುಕಿಗೆ ಒಯ್ಯುತ್ತದೆ ಮತ್ತು ಕೆಡುಕು ನರಕಕ್ಕೆ ಒಯ್ಯುತ್ತದೆ. ಒಬ್ಬ ಮನುಷ್ಯನು ಅಲ್ಲಾಹನ ಬಳಿ ಅತ್ಯಂತ ಸುಳ್ಳು ಹೇಳುವವನೆಂದು ದಾಖಲಿಸಲ್ಪಡುವವರೆಗೂ ಸುಳ್ಳು ಹೇಳುತ್ತಲೇ ಇರುತ್ತಾನೆ ಮತ್ತು ಸುಳ್ಳಿಗಾಗಿ ಪರಿಶ್ರಮಿಸುತ್ತಲೇ ಇರುತ್ತಾನೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯ ಹೇಳಲು ಆದೇಶಿಸಿದ್ದಾರೆ ಮತ್ತು ಸತ್ಯದೊಂದಿಗೆ ಇರುವ ನಿಷ್ಠೆಯು ನಿರಂತರವಾದ ಸತ್ಕರ್ಮಗಳಿಗೆ ತಲುಪಿಸುತ್ತದೆ ಮತ್ತು ನಿರಂತರವಾಗಿ ಸತ್ಕರ್ಮಗಳನ್ನು ಮಾಡುವುದರಿಂದ ಮನುಷ್ಯನು ಸ್ವರ್ಗಕ್ಕೆ ತಲುಪುತ್ತಾನೆ ಎಂದು ತಿಳಿಸಿದ್ದಾರೆ. ಅವನು ಏಕಾಂತದಲ್ಲೂ ಬಹಿರಂಗದಲ್ಲೂ ಪದೇ ಪದೇ ಸತ್ಯವನ್ನೇ ಹೇಳುತ್ತಿದ್ದರೆ ಅತ್ಯಂತ ಸತ್ಯವಂತ ಎಂಬ ಪದವಿಗೆ ಅರ್ಹನಾಗುತ್ತಾನೆ. ಅದು ಸತ್ಯವಂತಿಕೆಯ ಪರಮೋಚ್ಛ ಸ್ಥಿತಿಯಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಸುಳ್ಳು ಹಾಗೂ ನಿಷ್ಫಲ ಮಾತುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ, ಅದು ನೇರ ಮಾರ್ಗದಿಂದ ತಪ್ಪಿ ಹೋಗಲು ಮತ್ತು ಕೆಡುಕು ಹಾಗೂ ಪಾಪ ಕೃತ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಂತರ ಅದು ಅವನನ್ನು ನರಕಕ್ಕೆ ತಲುಪಿಸುತ್ತದೆ. ಅವನು ಅಲ್ಲಾಹನ ಬಳಿ ಸುಳ್ಳುಗಾರನೆಂದು ದಾಖಲಿಸಲ್ಪಡುವವರೆಗೂ ಸುಳ್ಳು ಹೇಳುವುದನ್ನು ಹೆಚ್ಚಿಸುತ್ತಲೇ ಇರುತ್ತಾನೆ.

فوائد الحديث

ಸತ್ಯವಂತಿಕೆಯು ಒಂದು ಉದಾರ ಗುಣವಾಗಿದ್ದು ಸತತ ಪರಿಶ್ರಮದಿಂದ ಅದನ್ನು ಪಡೆಯಲು ಸಾಧ್ಯವಿದೆ. ಒಬ್ಬ ಮನುಷ್ಯನು ಸತ್ಯ ಹೇಳುತ್ತಲೇ ಇದ್ದರೆ ಮತ್ತು ಅದಕ್ಕಾಗಿ ಪರಿಶ್ರಮಿಸುತ್ತಲೇ ಇದ್ದರೆ ಸತ್ಯವು ಅವನ ನಡವಳಿಕೆ ಮತ್ತು ಸ್ವಭಾವದ ಒಂದು ಭಾಗವಾಗಿ ಮಾರ್ಪಡುತ್ತದೆ. ಆಗ ಅವನನ್ನು ಅಲ್ಲಾಹನ ಬಳಿ ಸತ್ಯವಂತರಲ್ಲಿ ಮತ್ತು ನೀತಿವಂತರಲ್ಲಿ ದಾಖಲಿಸಲಾಗುತ್ತದೆ.

ಸುಳ್ಳು ಒಂದು ಖಂಡನೀಯ ಗುಣವಾಗಿದ್ದು ಮನುಷ್ಯನು ದೀರ್ಘ ಅಭ್ಯಾಸದಿಂದ ಅದನ್ನು ಪಡೆಯುತ್ತಾನೆ ಮತ್ತು ಅದು ಅವನ ನಡವಳಿಕೆ ಹಾಗೂ ಸ್ವಭಾವದ ಒಂದು ಭಾಗವಾಗುವ ತನಕ ಮಾತಿನಲ್ಲೂ, ಕ್ರಿಯೆಯಲ್ಲೂ ಅದಕ್ಕಾಗಿ ಪರಿಶ್ರಮಿಸುತ್ತಾನೆ. ನಂತರ ಅವನನ್ನು ಅಲ್ಲಾಹನ ಬಳಿ ಸುಳ್ಳುಗಾರರಲ್ಲಿ ದಾಖಲಿಸಲಾಗುತ್ತದೆ.

ಸತ್ಯವಂತಿಕೆ ಎಂಬ ಪದವನ್ನು ನಾಲಿಗೆಯ ಸತ್ಯವಂತಿಕೆಯನ್ನು ಸೂಚಿಸಲು ಬಳಸಲಾಗುತ್ತದೆ. ಇದು ಸುಳ್ಳಿನ ವಿರುದ್ಧ ಪದವಾಗಿದೆ. ಉದ್ದೇಶದಲ್ಲಿರುವ ಸತ್ಯವಂತಿಕೆಯನ್ನು ಅಂದರೆ ನಿಷ್ಕಳಂಕತೆಯನ್ನು ಸೂಚಿಸಲು ಕೂಡ ಅದನ್ನು ಬಳಸಲಾಗುತ್ತದೆ. ಉದ್ದೇಶಿತ ಒಳಿತನ್ನು ಸಾಧಿಸಲು ದೃಢ ನಿರ್ಧಾರ ತಳೆಯುವುದರಲ್ಲಿರುವ ಸತ್ಯವಂತಿಕೆಯನ್ನು ಸೂಚಿಸಲು ಕೂಡ ಇದನ್ನು ಬಳಸಲಾಗುತ್ತದೆ. ಹಾಗೆಯೇ ಕರ್ಮಗಳಲ್ಲಿರುವ ಸತ್ಯವಂತಿಕೆಯನ್ನು ಸೂಚಿಸಲು ಕೂಡ ಇದನ್ನು ಬಳಸಲಾಗುತ್ತದೆ. ವೈಯಕ್ತಿಕ ಮತ್ತು ಸಾರ್ವಜನಿಕ ಜೀವನವು ಒಂದೇ ರೀತಿಯಲ್ಲಿರುವುದು ಇದರ ಕನಿಷ್ಠ ರೂಪವಾಗಿದೆ. ಭಯ, ನಿರೀಕ್ಷೆ ಮುಂತಾದ ವಿಭಿನ್ನ ಪರಿಸ್ಥಿತಿಗಳಲ್ಲಿರುವ ಸತ್ಯವಂತಿಕೆಯನ್ನು ಸೂಚಿಸಲು ಕೂಡ ಇದನ್ನು ಬಳಸಲಾಗುತ್ತದೆ. ಇವುಗಳನ್ನು ಪೂರ್ಣವಾಗಿ ಅಳವಡಿಸಿಕೊಳ್ಳುವವರು ಅತ್ಯಂತ ಸತ್ಯವಂತರು (ಸಿದ್ದೀಕ್) ಮತ್ತು ಇವುಗಳಲ್ಲಿ ಕೆಲವನ್ನು ಅಳವಡಿಸಿಕೊಳ್ಳುವವರು ಸತ್ಯವಂತರು (ಸಾದಿಕ್) ಎಂದು ಕರೆಸಿಕೊಳ್ಳುತ್ತಾರೆ.

التصنيفات

Praiseworthy Morals